
ಹಾವೇರಿ: ‘ಇಂದಿನ ಯುಗದಲ್ಲಿ ಪ್ರತಿಯೊಬ್ಬರು ಶಿಕ್ಷಣವಂತರಾಗಬೇಕು. ಶಿಕ್ಷಣವಿಲ್ಲದಿದ್ದರೆ, ಮನುಷ್ಯನ ಜೀವನ ಶೂನ್ಯವಿದ್ದಂತೆ’ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಶೋಕ ಶಾಸ್ತ್ರಿ ಹೇಳಿದರು.
ನಗರದ ಎಂಆರ್‌ಎಂ ಪಿಯು ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ‘ವಾರ್ಷಿಕ ಸ್ನೇಹ ಸಮ್ಮೇಳನ’ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ಅಧ್ಯಯನವು ಮನುಷ್ಯನ ಬೌದ್ಧಿಕ ಪ್ರಗತಿಗೆ ಅತ್ಯಂತ ಅವಶ್ಯಕ. ಇಂದಿನ ಮಕ್ಕಳು ಅಧ್ಯಯಶೀಲರಾಗಬೇಕು. ತಂದೆ–ತಾಯಿ ಮಕ್ಕಳ ಭವಿಷ್ಯ ಉತ್ತಮವಾಗಿಸಲು ಹಗಲಿರುಳು ದುಡಿಯುತ್ತಿದ್ದಾರೆ. ಅಂಥ ತಂದೆ–ತಾಯಿ ಆಸೆಯನ್ನು ಮಕ್ಕಳು ಈಡೇರಿಸಬೇಕು. ಸಮಾಜದಲ್ಲಿ ಉನ್ನತ ಸ್ಥಾನ ಪಡೆದು ಪೋಷಕರಿಗೆ ಹಾಗೂ ಕಲಿತ ಶಾಲೆಗೆ ಕೀರ್ತಿ ತರಬೇಕು’ ಎಂದರು.
ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಪದವಿಪೂರ್ವ ಶಿಕ್ಷಣ ಇಲಾಖೆಯ ಬೆಂಗಳೂರಿನ ಸಹಾಯಕ ನಿರ್ದೇಶಕ (ಶೈಕ್ಷಣಿಕ) ಪಿ. ಆನಂದ್ ಮಾತನಾಡಿ, ‘ಎಂಆರ್‌ಎಂ ಸಂಸ್ಥೆಯು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಅತ್ಯುತ್ತಮ ಕಾರ್ಯ ಮಾಡುತ್ತಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ರಾಮ ಮೋಹನ ರಾವ್, ‘ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾದದ್ದು. ಜೀವನದಲ್ಲಿ ಇಟ್ಟುಕೊಂಡಿರುವ ಗುರಿ ಸಾಧನೆಗಾಗಿ ನಿರಂತರವಾಗಿ ಶ್ರಮಪಡಬೇಕು’ ಎಂದು ತಿಳಿಸಿದರು.
ಪ್ರಜಾಪ್ರಗತಿ ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸಲು, ನಿರ್ದೇಶಕರಾದ ಎಂ.ಎಸ್.ಗಾಂಧಿ, ರಾಜೀವ್ ಸಾಯಿ ಇದ್ದರು.
ಕಾಲೇಜಿನ ವಿದ್ಯಾರ್ಥಿಗಳು ನೃತ್ಯ, ನಾಟಕ ಹಾಗೂ ಇತರೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.