ಹಾವೇರಿ: ‘ನಗರದಲ್ಲಿ 10–15 ದಿನಕ್ಕೊಮ್ಮೆ ಕುಡಿಯುವ ನೀರು ನೀಡುತ್ತಿದ್ದು, ಜನರು ರೋಸಿ ಹೋಗಿದ್ದಾರೆ. ನಿರಂತರ ನೀರು ಯೋಜನೆಯಿಂದಲೂ ಸಮರ್ಪಕವಾಗಿ ನೀರು ಸಿಗುತ್ತಿಲ್ಲ. ಅಧಿಕಾರಿಗಳು ಸುಳ್ಳು ಹೇಳಿ ಎಲ್ಲರ ಹಾದಿ ತಪ್ಪಿಸುತ್ತಿದ್ದಾರೆ’ ಎಂದು ನಗರಸಭೆಯ ಸದಸ್ಯರು ಆಕ್ರೋಶ ಹೊರಹಾಕಿದರು.
ಇಲ್ಲಿಯ ನಗರಸಭೆಯ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸದಸ್ಯರು, ‘ಕುಡಿಯುವ ನೀರಿಗಾಗಿ ಲಕ್ಷ ಲಕ್ಷ ಖರ್ಚು ತೋರಿಸುತ್ತೀರಾ. ಆದರೆ, ನೀರು ಕೊಡುತ್ತಿಲ್ಲವೇಕೆ ? ಕನಿಷ್ಠ 4–5 ದಿನಕ್ಕೊಮ್ಮೆಯಾದರೂ ನೀರು ಕೊಡಿ. ನಿಮ್ಮನ್ನು ಸನ್ಮಾನ ಮಾಡುತ್ತೇನೆ’ ಎಂದು ಮಾರ್ಮಿಕವಾಗಿ ತಾಕೀತು ಮಾಡಿದರು.
ವಿಷಯ ಪ್ರಸ್ತಾಪಿಸಿದ ಸದಸ್ಯ ಸಂಜೀವಕುಮಾರ ನೀರಲಗಿ, ‘ಇಳಕಲ್ ಹಾಗೂ ಪುಣೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಿದ್ದಾರೆ. ಅದನ್ನೊಮ್ಮೆ ನೋಡಿಕೊಂಡು ಬರೋಣ. ಹಾವೇರಿ ನಗರದ ಜನರಿಗೂ ನಿರಂತರವಾಗಿ ನೀರು ನೀಡಲು ಮೊದಲ ಆದ್ಯತೆ ನೀಡಬೇಕಾಗಿದೆ’ ಎಂದರು.
ನಿರಂತರ ನೀರು ಯೋಜನೆ ಬಗ್ಗೆ ಮಾಹಿತಿ ನೀಡಿದ ಕೆಯುಐಡಿಎಫ್‌ಸಿ ಎಂಜಿನಿಯರ್ ಪ್ರವೀಣ, ‘ಯೋಜನೆ ಬಗ್ಗೆ ಗುತ್ತಿಗೆದಾರರು ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ. ಜುಲೈ 31ಕ್ಕೆ ವಿಚಾರಣೆಯಿದೆ. ಕಾಮಗಾರಿ ತಡಮಾಡಿದ್ದಕ್ಕಾಗಿ ಗುತ್ತಿಗೆದಾರನಿಗೆ ₹ 45 ಕೋಟಿ ದಂಡ ವಿಧಿಸಲು ತಯಾರಿ ನಡೆದಿದೆ. ನಗರದ ಹಲವು ವಾರ್ಡ್‌ಗಳಲ್ಲಿ ನಿರಂತರ ನೀರು ನೀಡಲಾಗುತ್ತಿದೆ’ ಎಂದರು.
ಅದಕ್ಕೆ ಗರಂ ಆದ ಸದಸ್ಯರು, ‘ಯಾವುದೇ ವಾರ್ಡ್‌ನಲ್ಲೂ ನೀರು ಬರುತ್ತಿಲ್ಲ. ಸಭೆಗೆ ಸುಳ್ಳು ಮಾಹಿತಿ ನೀಡಬೇಡಿ. ಇದೊಂದು ಅವೈಜ್ಞಾನಿಕ ಕಾಮಗಾರಿ. ಒಂದು ಕಡೆ ನೀರು ಬಂದರೆ, ಇನ್ನೊಂದು ಕಡೆ ಬರುವುದಿಲ್ಲ. ಯೋಜನೆ ಇದ್ದರೂ ನಗರದಲ್ಲಿ 10–15 ದಿನಕ್ಕೊಮ್ಮೆ ನೀರು ಬರುತ್ತಿದೆ’ ಎಂದು ದೂರಿದರು.
ಶಾಸಕ ರುದ್ರಪ್ಪ ಲಮಾಣಿ ಮಾತನಾಡಿ, ‘ವರದಾ, ತುಂಗಭದ್ರಾ ನದಿಗಳು ಹರಿಯುವ ಈ ಜಿಲ್ಲೆಯಲ್ಲಿ ಜನರಿಗೆ ನೀರು ನೀಡಲಾಗುತ್ತಿಲ್ಲ ಎನ್ನುವುದಕ್ಕೆ ನಮಗೆ ನಾಚಿಕೆಯಾಗಬೇಕು. ನಿರಂತರ ನೀರು ಯೋಜನೆಯಲ್ಲಿ ಯಾವ ಜನಪ್ರತಿನಿಧಿಯೂ ಹಸ್ತಕ್ಷೇಪ ಮಾಡುವುದಿಲ್ಲ. ಅಧಿಕಾರಿಗಳೇ ಕಾಳಜಿಯಿಂದ ಕೆಲಸ ಮಾಡಿ ಜನರಿಗೆ ನೀರು ಕೊಡಬೇಕು. ಯೋಜನೆ ಸಮಸ್ಯೆ ಬಗ್ಗೆ ಸದ್ಯದಲ್ಲೇ ಎಲ್ಲ ಅಧಿಕಾರಿಗಳ ಸಭೆ ನಡೆಸುವೆ’ ಎಂದು ಹೇಳಿದರು.
ಗದಗ ಮಾದರಿಯ ಶೌಚಾಲಯ: ಶೌಚಾಲಯ ಅವ್ಯವಸ್ಥೆ ಬಗ್ಗೆ ಮಾತನಾಡಿದ ಸದಸ್ಯ ನೀರಲಗಿ, ‘ನಗರದಲ್ಲಿ ಶೌಚಾಲಯಗಳು ಸರಿ ಇಲ್ಲವೆಂದು ದೂರುತ್ತಾರೆ. ಶೌಚಾಲಯ ನಿರ್ಮಿಸಲು ಹೋದರೆ, ನಮ್ಮ ಮನೆ–ಅಂಗಡಿ ಬಳಿ ಬೇಡವೆಂದು ಹೇಳುತ್ತಾರೆ. ಶೌಚಾಲಯವಿದ್ದರೂ ನಿರ್ವಹಣೆ ಸಮರ್ಪಕವಾಗಿಲ್ಲ. ನಗರಸಭೆಯಿಂದಲೇ ತಿಂಗಳಿಗೆ ಇಂತಿಷ್ಟು ಹಣ ನೀಡಿ, ಶೌಚಾಲಯ ನಿರ್ವಹಣೆ ಮಾಡಿ. ಗದಗನಲ್ಲಿ ವಿಶ್ರಾಂತಿಗೃಹ ಹೆಸರಿನಲ್ಲಿ ಸುಸಜ್ಜಿತ ಶೌಚಾಲಯ ಕಟ್ಟಿದ್ದು, ಅದೇ ಮಾದರಿಯಲ್ಲಿ ಸುಭಾಷ್ ವೃತ್ತದಲ್ಲಿ ಶೌಚಾಲಯ ನಿರ್ಮಿಸಿ. ಅಲ್ಲಿಗೆ ಬರುವ ಕಾರ್ಮಿಕರಿಗೆ ಅನುಕೂಲವಾಗುತ್ತದೆ’ ಎಂದು ಕೋರಿದರು.
ಶಾಸಕ ರುದ್ರಪ್ಪ ಲಮಾಣಿ, ‘ಸುಭಾಷ್ ವೃತ್ತದಲ್ಲಿ ನಗರಸಭೆಯ ಜಾಗದಲ್ಲಿ ಶೌಚಾಲಯ ನಿರ್ಮಿಸಿ. ಯಾರಾದರೂ ಅಡ್ಡಿಪಡಿಸಿದರೆ, ಪೊಲೀಸರ ಭದ್ರತೆ ತೆಗೆದುಕೊಳ್ಳಿ’ ಎಂದರು.
ಸದಸ್ಯ ಐ.ಯು. ಪಠಾಣ, ‘ಜನರಿಗೆ ವೈಯಕ್ತಿಕ ಶೌಚಾಲಯ ನಿರ್ಮಿಸಲು ಮಂಜೂರಾತಿ ಕೊಡುತ್ತಿಲ್ಲವೇಕೆ’ ಎಂದು ಪ್ರಶ್ನಿಸಿದರು.
ಅಧಿಕಾರಿ, ‘201 ಶೌಚಾಲಯ ಬಂದಿದ್ದವು. 61 ಅರ್ಜಿ ಸಲ್ಲಿಕೆಯಾಗಿದ್ದವು. ಅದರಲ್ಲಿ 24 ಮಂಜೂರಾತಿ ಆಗಿದೆ’ ಎಂದರು. ‘ಹೆಚ್ಚು ಪ್ರಚಾರ ಮಾಡಿ, ಜನರು ಅರ್ಜಿ ಹಾಕುತ್ತಾರೆ’ ಎಂದು ಹೇಳಿದರು.
ವೆಂಡಿಂಗ್ ಜೋನ್: ಜೆ.ಪಿ.ವೃತ್ತದಿಂದ ಪಿ.ಬಿ.ರಸ್ತೆಯವರೆಗೆ, ಹೈಟೆಕ್ ರಂಗಮಂದಿರ ಆವರಣ, ಅಕ್ಕಮಹಾದೇವಿ ಹೊಂಡದ ಆವರಣ, ಎಲ್‌ಬಿಎಸ್ ಮಾರುಕಟ್ಟೆ, ಬಸವೇಶ್ವರನಗರ ಹಾಗೂ ನಾಗೇಂದ್ರನಮಟ್ಟಿಯ ರೈತರ ಸಂತೆಯಲ್ಲಿ ಬೀದಿಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ವೆಂಡಿಂಗ್ ಜೋನ್ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಯಿತು.
ನಗರದ ಪ್ರಮುಖ ವೃತ್ತದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆ, ಹೊಸಮಠ ವೃತ್ತದಲ್ಲಿ ಅಶ್ವಾರೂಢರ ಪ್ರತಿಮೆ, ಹಾನಗಲ್ ರಸ್ತೆಯಲ್ಲಿ ರಾಷ್ಟ್ರವೀರ ರಾಣಾ ಪ್ರತಾಪಸಿಂಗ ಸ್ಮಾರಕ ನಿರ್ಮಿಸಲು ಒಪ್ಪಿಗೆ ನೀಡಲಾಯಿತು.
ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಪೌರಾಯುಕ್ತ (ಪ್ರಭಾವಿ) ಕಂಬಳಿ ಇದ್ದರು.
ಸಭೆ ಪ್ರಮುಖ ಅಂಶಗಳು
* 2024ರ ಅಕ್ಟೋಬರ್ 17ರಂದು ಮಳೆ ಸುರಿಯುತ್ತಿದ್ದ ಸಂದರ್ಭದಲ್ಲಿ ಹಳೇ ಪಿ.ಬಿ.ರಸ್ತೆ ಬದಿಯ ಕಾಲುವೆಯಲ್ಲಿ ಬಿದ್ದು ಮೃತಪಟ್ಟ ಬಾಲಕ ನಿವೇದಿತ ಗುಡಗೇರಿ ಕುಟುಂಬದವರಿಗೆ ₹ 5 ಲಕ್ಷ ಪರಿಹಾರಕ್ಕೆ ಠರಾವು
* ರಸ್ತೆ ಅತಿಕ್ರಮಣ ಮಾಡಿಕೊಂಡು ಅಂಗಡಿ ಇಟ್ಟುಕೊಂಡಿರುವವರನ್ನು ತೆರವು ಮಾಡಿ ಜನರ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಪೊಲೀಸರಿಗೆ ಸೂಚನೆ. ಬೀದಿಬದಿ ವ್ಯಾಪಾರಿಗಳ ಸಭೆ ನಡೆಸಲು ಅಧಿಕಾರಿಗಳಿಗೆ ನಿರ್ದೇಶನ
* ಲಾಲ್‌ಬಹದ್ದೂರ ಶಾಸ್ತ್ರಿ ಮಾರುಕಟ್ಟೆಯಲ್ಲಿ ನಿರ್ಮಿಸಿರುವ ಹೊಸ ಮಳಿಗೆಗಳನ್ನು ವ್ಯಾಪಾರಿಗಳನ್ನು ನೀಡುವ ಸಂಬಂಧ ವಿಶೆಷ ಸಭೆ ನಡೆಸಲು ಕ್ರಮ
* ₹ 400 ಲಕ್ಷ ವೆಚ್ಚದಲ್ಲಿ ಇಜಾರಿ ಲಕಮಾಪುರ ಅಥವಾ ಸದಾಶಿವನಗರದಲ್ಲಿ ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ಠರಾವು * ಪಾಳು ಬಿದ್ದಿರುವ ಹೈಟೆಕ್ ರಂಗಮಂದಿರ ನಿರ್ವಹಣೆಯನ್ನು ಗುತ್ತಿಗೆ ನೀಡಲು ಕ್ರಮ. ಒಬ್ಬರೇ ಗುತ್ತಿಗೆದಾರರಿಂದ ಅವರಿಂದ ಹಂತ ಹಂತವಾಗಿ ಹಣ ಪಡೆದು ನಿರ್ವಹಣೆಗೆ ನೀಡುವ ಬಗ್ಗೆ ಚಿಂತನೆ
* ಹಳೇ ಪಿ.ಬಿ.ರಸ್ತೆಯ ಮೋರ್ ಶಾಪಿಂಗ್ ಮಾಲ್ ಬಳಿಯ ವೃತ್ತದಲ್ಲಿ ಶಿವಶರಣ ಅಂಬಿಗರ ಚೌಡಯ್ಯನವರ ವೃತ್ತ ನಿರ್ಮಾಣಕ್ಕೆ ಒಪ್ಪಿಗೆ
* ನಗರದ ರಸ್ತೆಗಳಲ್ಲಿ ಗುಂಡಿಗಳು ಹೆಚ್ಚಾಗಿದ್ದು ಆದ್ಯತೆ ಮೇರೆಗೆ ಮುಚ್ಚುವಂತೆ ಸದಸ್ಯರ ಆಗ್ರಹ
* ಮುನ್ಸಿಪಲ್ ಹೈಸ್ಕೂಲ್ 133 ವರ್ಷ ಪೂರೈಸಿದ್ದು ಶತಮಾನೋತ್ಸವ ಸಮಾರಂಭ ಆಯೋಜಿಸಲು ಸದಸ್ಯರು ಒಮ್ಮತ ವ್ಯಕ್ತಪಡಿಸಿದರು
‘ಹಾವೇರಿ ಜನರಿಗೆ ಸುರಕ್ಷತೆ ಜಾಗೃತಿ ಕಡಿಮೆಯಿದೆ. ಹೆಲ್ಮೆಟ್ ಧರಿಸುವುದಿಲ್ಲ. ಮದ್ಯ ಕುಡಿದು ಚಾಲನೆ ಮಾಡುವ ಸಂದರ್ಭದಲ್ಲಿ ವಾಹನ ಜಪ್ತಿ ಮಾಡಿದರೆ ಅವರಿವರ ಕಡೆ ಕರೆ ಮಾಡಿಸುತ್ತಾರೆ. ನಮಗೂ ದಿನಕ್ಕೆ 25 ಪ್ರಕರಣ ದಾಖಲಿಸುವಂತೆ ಗುರಿಯಿದೆ. ಅದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು’ ಎಂದು ಶಹರ ಠಾಣೆ ಇನ್‌ಸ್ಪೆಕ್ಟರ್ ಮೋತಿಲಾಲ್ ಪವಾರ್ ಹೇಳಿದರು. ಸಭೆಯಲ್ಲಿ ಕ್ಯಾಮೆರಾ ಅಳವಡಿಕೆ ವಿಷಯ ಪ್ರಸ್ತಾಪಿಸಿದ ಅವರು ‘ನಗರದಲ್ಲಿ ನಗರಸಭೆಯಿಂದ 24 ಸಿ.ಸಿ.ಟಿ.ವಿ. ಕ್ಯಾಮೆರಾ ಹಾಕಿಸಲಾಗಿದೆ. ಒಂದೂ ಕೆಲಸ ಮಾಡುತ್ತಿಲ್ಲ. ದುರಸ್ತಿ ಮಾಡಲು ಗುತ್ತಿಗೆದಾರರು ಹಿಂದೇಟು ಹಾಕುತ್ತಿದ್ದಾರೆ. ಕ್ಯಾಮೆರಾ ಹಾಕಿದವರಿಗೆ ಬಿಲ್ ನೀಡಿಲ್ಲ. ಈ ಕುರಿತ ಕಡತವೇ ಕಳೆದಿರುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ’ ಎಂದರು. ಶಾಸಕ ರುದ್ರಪ್ಪ ‘ಕಡತ ಎಲ್ಲಿಗೆ ಹೋಯಿತು’ ಎಂದು ಪ್ರಶ್ನಿಸಿದರು. ಅಧಿಕಾರಿಗಳು ಒಬ್ಬರ ಮೇಲೊಬ್ಬರು ಆರೋಪ ಹೂರಿಸಿದರು. ಸಿಟ್ಟಾದ ಶಾಸಕ ‘ಬಿಲ್ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಿ. ಕ್ಯಾಮೆರಾ ದುರಸ್ತಿ ಮಾಡಿಸಿ. ಅದರಿಂದ ಜನರ ಸುರಕ್ಷತೆಗೆ ಅನುಕೂಲವಾಗುತ್ತದೆ. ಅಪರಾಧಗಳ ಪತ್ತೆಯೂ ಸುಲಭವಾಗುತ್ತದೆ’ ಎಂದು ತಾಕೀತು ಮಾಡಿದರು.
ಹಾವೇರಿ ಜನ ಒಳ್ಳೆಯವರು. ಯಾರೂ ಏನೂ ಕೇಳುವುದಿಲ್ಲ. ಕುಡಿಯುವ ನೀರು ಕೊಡದಿದ್ದರೂ ಸುಮ್ಮನಿದ್ದಾರೆ. ಅವರು ಬೀದಿಗೆ ಇಳಿದು ಹೋರಾಟ ಮಾಡಿದ್ದರೆ ನಮಗೆ ಗೊತ್ತಾಗುತ್ತಿತ್ತು.-ರುದ್ರಪ್ಪ ಲಮಾಣಿ, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.