ADVERTISEMENT

ಹಾವೇರಿ: ಹಸುಗೂಸು ಸಾವು | ಅಧ್ಯಕ್ಷರಿಗೆ ವರದಿ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 7:09 IST
Last Updated 27 ನವೆಂಬರ್ 2025, 7:09 IST
ಶೇಖರಗೌಡ ರಾಮತ್ನಾಳ, ಸದಸ್ಯ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ
ಶೇಖರಗೌಡ ರಾಮತ್ನಾಳ, ಸದಸ್ಯ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ   

ಹಾವೇರಿ: ಇಲ್ಲಿಯ ಜಿಲ್ಲಾಸ್ಪತ್ರೆ ಅಧೀನದಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ಜಿ. ರಾಮತ್ನಾಳ, ಹಸುಗೂಸು ಮೃತಪಟ್ಟ ಪ್ರಕರಣದ ಬಗ್ಗೆ ಮಾಹಿತಿ ಕಲೆಹಾಕಿದರು.

ನ. 18ರಂದು ಬೆಳಿಗ್ಗೆ ಆಸ್ಪತ್ರೆಗೆ ಬಂದಿದ್ದ ರಾಣೆಬೆನ್ನೂರು ತಾಲ್ಲೂಕಿನ ಕಾಕೋಳ ಗ್ರಾಮದ ರೂಪಾ (30) ಅವರಿಗೆ ಬೆಡ್‌ ಸಿಕ್ಕಿರಲಿಲ್ಲ. ಆಸ್ಪತ್ರೆಯ ಶೌಚಾಲಯ ಹಾಗೂ ಕಾರಿಡಾರ್‌ ನಡುವಿನ ಜಾಗದಲ್ಲಿ ಅವರಿಗೆ ದಿಢೀರ್ ಹೆರಿಗೆಯಾಗಿ, ಅದೇ ಸ್ಥಳದಲ್ಲಿಯೇ ನೆಲಕ್ಕೆ ಬಿದ್ದು ಹಸುಗೂಸು ಮೃತಪಟ್ಟಿರುವ ಬಗ್ಗೆ ಆರೋಪ ವ್ಯಕ್ತವಾಗಿತ್ತು. ಈ ಬಗ್ಗೆ ವಿಚಾರಣೆಗಾಗಿ ಈಗಾಗಲೇ ತಜ್ಞರ ಸಮಿತಿ ರಚಿಸಲಾಗಿದೆ.

ಪ್ರಕರಣದ ಬಗ್ಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಆಯೋಗದ ಸದಸ್ಯ ಶೇಖರಗೌಡ ಅವರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ADVERTISEMENT

ಹೆರಿಗೆ ಘಟನೆಯ ಸಿ.ಸಿ.ಟಿ.ವಿ. ದೃಶ್ಯ ತೋರಿಸಲು ಆಸ್ಪತ್ರೆಯ ಸಿಬ್ಬಂದಿ ತಡವರಿಸಿದರು. ಸಿಬ್ಬಂದಿಗೆ ಬಿಸಿ ಮುಟ್ಟಿಸಿದ ಶೇಖರಗೌಡ, ‘ವಿಡಿಯೊ ತೋರಿಸಲು ಏಕೆ ತಡವರಿಸುತ್ತಿದ್ದೀರಾ? ಈ ಬಗ್ಗೆ ಸಮನ್ಸ್ ಕೊಡುತ್ತೇನೆ. ಬೆಂಗಳೂರಿಗೆ ಬಂದು ವಿಡಿಯೊ ತೋರಿಸಬೇಕಾಗುತ್ತದೆ’ ಎಂದರು. ಭಯಗೊಂಡ ಸಿಬ್ಬಂದಿ, ಲ್ಯಾಪ್‌ಟಾಪ್‌ನಲ್ಲಿ ವಿಡಿಯೊ ತೋರಿಸಿದರು.

ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಶೇಖರಗೌಡ, ‘ಆಸ್ಪತ್ರೆಯಲ್ಲಿರುವ ಸಿ.ಸಿ.ಟಿ.ವಿ. ಕ್ಯಾಮೆರಾ ದೃಶ್ಯಗಳನ್ನು ಗಮನಿಸಿದ್ದೇನೆ. ರೂಪಾ ಅವರು ಆಸ್ಪತ್ರೆಗೆ ಬಂದು 50 ನಿಮಿಷದಲ್ಲಿ ಎಲ್ಲ ಘಟನೆ ನಡೆದಿದೆ. ಬೆಳಿಗ್ಗೆ 10.17 ಗಂಟೆಗೆ ರೂಪಾ ಆಸ್ಪತ್ರೆಗೆ ಬಂದಿದ್ದರು. 11.07 ಗಂಟೆಗೆ ಹೆರಿಗೆಯಾಗಿದೆ’ ಎಂದರು.

‘ಡಿ. 25ರಂದು ವೈದ್ಯರು ಹೆರಿಗೆ ದಿನಾಂಕ ಕೊಟ್ಟಿದ್ದರು. ನ. 18ರಂದು ಹೊರ ರೋಗಿಗಳ ವಿಭಾಗದಲ್ಲಿ ವೈದ್ಯರು ತಪಾಸಣೆ ನಡೆಸಿದ್ದರು. ಈ ಬಗ್ಗೆ ಪುಸ್ತಕದಲ್ಲಿ ನಮೂದಾಗಿದೆ. ಶೌಚಕ್ಕೆ ಹೋದಾಗ ರೂಪಾಳಿಗೆ ಕಾರಿಡಾರ್‌ನಲ್ಲೇ ಹೆರಿಗೆಯಾಗಿದೆ. ಈ ಕುರಿತ ಸಮಗ್ರ ವರದಿಯನ್ನು ಮಕ್ಕಳ ಆಯೋಗದ ಅಧ್ಯಕ್ಷರಿಗೆ ಸಲ್ಲಿಸುತ್ತೇನೆ’ ಎಂದು ಶೇಖರಗೌಡ ಹೇಳಿದರು.

ದಾಖಲೆ ಪರಿಶೀಲನೆಗೆ ಸೂಚನೆ: ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಕೇಂದ್ರಕ್ಕೆ ಭೇಟಿ ನೀಡಿದ ಶೇಖರಗೌಡ, ‘ಗರ್ಭಿಣಿಯರ ವಯಸ್ಸಿನ ದಾಖಲೆಗಳನ್ನು ಪರಿಶೀಲಿಸಿದರು. ಸ್ಕ್ಯಾನಿಂಗ್‌ಗೆ ಬರುವ ಎಲ್ಲ ಗರ್ಭಿಣಿಯರ ದಾಖಲೆಯನ್ನು ಕೂಲಂಕುಷವಾಗಿ ಪರಿಶೀಲಿಸಬೇಕು. 18 ವರ್ಷದ ಒಳಗಿನ ಬಾಲಕಿಯರು ಗರ್ಭಿಣಿಯಾಗಿದ್ದರೆ ಕೂಡಲೇ ಪೊಲೀಸರಿಗೆ ತಿಳಿಸಿ ಎಫ್‌ಐಆರ್ ಮಾಡಿಸಬೇಕು’ ಎಂದು ಸೂಚಿಸಿದರು.

ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ (ಪ‍್ರಭಾರ) ಡಾ. ಎಲ್.ಎಲ್. ರಾಠೋಡ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜಯಶ್ರೀ ಪಾಟೀಲ, ಮಕ್ಕಳ ತಜ್ಞರಾದ ಡಾ. ಅಂಜನಕುಮಾರ, ಡಾ. ಸಂತೋಷ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.