ADVERTISEMENT

ಹಾವೇರಿ | ಓಬವ್ವ ಹೆಸರಿನಲ್ಲಿ ಉದ್ಯಾನ; ₹40 ಲಕ್ಷ ಮಂಜೂರು: ರುದ್ರಪ್ಪ ಲಮಾಣಿ

* ಒನಕೆ ಓಬವ್ವ ಜಯಂತಿ ಆಚರಣೆ * ಶಾಸಕ ರುದ್ರಪ್ಪ ಲಮಾಣಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2024, 15:35 IST
Last Updated 14 ಡಿಸೆಂಬರ್ 2024, 15:35 IST
ಹಾವೇರಿ ಜಿಲ್ಲಾ ಗುರುಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಒನಕೆ ಓಬವ್ವ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು
ಹಾವೇರಿ ಜಿಲ್ಲಾ ಗುರುಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಒನಕೆ ಓಬವ್ವ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು   

ಹಾವೇರಿ: ‘ವೀರ ವನಿತೆ ಒನಕೆ ಓಬವ್ವ ಅವರ ಹೆಸರಿನಲ್ಲಿ ಮಾದರಿ ಉದ್ಯಾನ ನಿರ್ಮಿಸಲಾಗುತ್ತಿದ್ದು, ಇದಕ್ಕೆ ₹ 40 ಲಕ್ಷ ಅನುದಾನ ಮಂಜೂರು ಮಾಡಲಾಗಿದೆ’ ಎಂದು ಶಾಸಕ ರುದ್ರಪ್ಪ ಲಮಾಣಿ ಹೇಳಿದರು.

ನಗರದ ಜಿಲ್ಲಾ ಗುರುಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಾವೇರಿ ಜಿಲ್ಲಾ ಛಲವಾದಿ ಮಹಾಸಭಾ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಒನಕೆ ಓಬವ್ವ ಜಯಂತಿ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಒನಕೆ ಓಬವ್ವ ಹೆಸರಿನಲ್ಲಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಬೇಕು. ವಿಶ್ವವಿದ್ಯಾಲಯಗಳಲ್ಲಿ ಒನಕೆ ಓಬವ್ವ ಸಂಶೋಧನಾ ಕೇಂದ್ರ ಆರಂಭಿಸಬೇಕು. ಓಬವ್ವ ಹೆಸರಿನಲ್ಲಿ ಶೌರ್ಯ ಪ್ರಶಸ್ತಿ ನೀಡಬೇಕು. ಓಬವ್ವ ಅವರ ಜೀವನಗಾಥೆಯನ್ನು ಪಠ್ಯದಲ್ಲಿ ಅಳವಡಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಮಹಾಸಭಾದವರು ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರ ಜೊತೆ ಚರ್ಚಿಸಲಾಗುವುದು’ ಎಂದು ಹೇಳಿದರು.

ADVERTISEMENT

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಸದಸ್ಯೆ ಆರ್. ಕಾವಲಮ್ಮ ಮಾತನಾಡಿ, ‘ಒನಕೆ ಓಬವ್ವ ಅವರ ಸ್ವಾಮಿ ನಿಷ್ಠೆ ಹಾಗೂ ಸಮಯಪ್ರಜ್ಞೆಯಿಂದ ಚಿರಪರಿಚಿತರಾಗಿದ್ದಾರೆ. ಸಾಲು ಮರದ ತಿಮ್ಮಕ್ಕ ಅವರನ್ನು ಪರಿಸರ ಪ್ರೇಮದಿಂದ ಗುರುತಿಸಲಾಗಿದೆ. ಸಮುದಾಯದಲ್ಲಿ ಸಾಧನೆ ಮಾಡಿದವರನ್ನು ಗುರುತಿಸುವ ಕೆಲಸವಾಗಬೇಕು. ಮಹಿಳೆಯರಿಗೆ ಪ್ರೋತ್ಸಾಹ ನೀಡಿ ಸಮಾಜದ ಮುಖ್ಯವಾಹಿನಿಗೆ ತರಬೇಕು. ಅಧಿಕಾರಿಗಳು ಸ್ವಾರ್ಥ ಬಿಟ್ಟು ಜನಾಂಗದ ಅಭಿವೃದ್ಧಿಗೆ ಒಗ್ಗೂಡಬೇಕು’ ಎಂದರು.

ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ನೆಲ್ಲಿಕಟ್ಟಿ ಸಿದ್ದೇಶ ಅವರು ಉಪನ್ಯಾಸ ನೀಡಿದರು.

ದಾವಣಗೆರೆಯ ಹೆಚ್ಚುವರಿ ಎಸ್ಪಿ ವಿಜಯಕುಮಾರ ಸಂತೋಷ್, ನಿವೃತ್ತ ಜಿಲ್ಲಾ ಅಬಕಾರಿ ಅಧಿಕಾರಿ ಬಿ.ಡಿ. ಸಾವಕ್ಕನವರ, ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಕುಲಸಚಿವ ಎಸ್.ಬಿ. ಕಮಲಾಕರ, ವೈದ್ಯ ಡಾ. ರಘುನಾಥ ಆಲದಕಟ್ಟಿ, ಒನಕೆ ಓಬವ್ವ ಮೂಲ ವಂಶಸ್ಥೆ ಸುವರ್ಣ ರಾಜಶೇಖರಯ್ಯ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಪ್ರೋತ್ಸಾಹಿಸಲಾಯಿತು.

ಮಾಜಿ ಶಾಸಕ ನೆಹರು ಓಲೇಕಾರ, ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್, ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ ಎಲ್., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ ಛಲವಾದಿ, ತಹಶೀಲ್ದಾರ ಶರಣಮ್ಮ, ಹಾವೇರಿ ಜಿಲ್ಲಾ ಛಲವಾದಿ ಮಹಾಸಭಾ ಅಧ್ಯಕ್ಷ ಮಲ್ಲೇಶಪ್ಪ ಮದ್ಲೇರ, ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಸನದಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ. ಚಿನ್ನಿಕಟ್ಟಿ ಇದ್ದರು.

ಒನಕೆ ಓಬವ್ವ ಅವರ ಶೌರ್ಯ ಸಾಹಸ ಹಾಗೂ ಧೈರ್ಯ ಎಲ್ಲರಿಗೂ ಮಾದರಿಯಾಗಿದೆ. ಹಾವೇರಿಯಲ್ಲಿ ಓಬವ್ವ ಅವರ ಹೆಸರಿನಲ್ಲಿ ಮಾದರಿ ಉದ್ಯಾನ ನಿರ್ಮಾಣ ಮಾಡಲಾಗುವುದು
ರುದ್ರಪ್ಪ ಲಮಾಣಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.