ಹಾವೇರಿ: ‘ಸ್ಥಳೀಯ ಸಂಸ್ಥೆಗಳ ನೌಕರರ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರ್ಕಾರ ಕಾನೂನು ಕಾರಣದ ಸಬೂಬು ಹೇಳಿ ಹಿಂಜರಿಯುತ್ತಿದ್ದು, ಇದರ ವಿರುದ್ಧ ರಾಜ್ಯದಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ. ಇದರ ಭಾಗವಾಗಿ, ಎಲ್ಲ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಭಾನುವಾರದಿಂದ (ಜೂನ್ 1) ಕುಡಿಯುವ ನೀರು ಪೂರೈಕೆ ಸ್ಥಗಿತಗೊಳಿಸಲಾಗುವುದು’ ಎಂದು ರಾಜ್ಯ ಪೌರಸೇವಾ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎನ್. ಪ್ರಸಾದ್ ಎಚ್ಚರಿಕೆ ನೀಡಿದರು.
ಇಲ್ಲಿನ ನಗರಸಭೆ ಎದುರು ರಾಜ್ಯ ಪೌರನೌಕರರ ಸಂಘ ಹಾಗೂ ರಾಜ್ಯ ಪೌರಸೇವಾ ನೌಕರರ ಸಂಘದ ನೇತೃತ್ವದಲ್ಲಿ ನಡೆದಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಶುಕ್ರವಾರ ಪಾಲ್ಗೊಂಡಿದ್ದ ಸಂದರ್ಭದಲ್ಲಿ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘ರಾಜ್ಯದಲ್ಲಿರುವ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಸೇರಿ 360 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಜೂನ್ 1ರಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ’ ಎಂದರು.
‘ಕಸ ಸಂಗ್ರಹ ಹಾಗೂ ವಿಲೇವಾರಿ ಕೆಲಸವನ್ನು ಶೇ 50ರಷ್ಟು ಸ್ಥಗಿತಗೊಳಿಸಿ, ಮೇ 28ರಿಂದ ರಾಜ್ಯದಾದ್ಯಂತ ಅನಿರ್ದಿಷ್ಟಾವಧಿ ಧರಣಿ ಆರಂಭವಾಗಿದೆ. ಮುಖ್ಯಮಂತ್ರಿ ಹಾಗೂ ಇಲಾಖೆ ಕಾರ್ಯದರ್ಶಿಯವರನ್ನು ಗುರುವಾರ ಭೇಟಿ ಮಾಡಲಾಯಿತು. ಆದರೆ, ಬೇಡಿಕೆ ಈಡೇರಿಕೆ ಬಗ್ಗೆ ಭರವಸೆ ನೀಡಿಲ್ಲ. ಧರಣಿ ಮುಂದುವರಿಸಿದ್ದೇವೆ. ಶುಕ್ರವಾರದಿಂದ ಶೇ 100ರಷ್ಟು ಕೆಲಸದಿಂದ ದೂರವುಳಿಯುತ್ತೇವೆ. ಇದರಿಂದ ಸ್ವಚ್ಛತೆ, ಕಸ ಸಂಗ್ರಹ–ವಿಲೇವಾರಿ ಹಾಗೂ ಕಚೇರಿ ಕೆಲಸಗಳು ಬಂದ್ ಆಗಿವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.