ADVERTISEMENT

ಹಾವೇರಿ | ಲಂಚ ಕೊಡದ ಚಾಲಕನಿಗೆ ಥಳಿಸಿದ ಪಿಎಸ್‌ಐ: ಎಸ್ಪಿಗೆ ದೂರು

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2024, 16:12 IST
Last Updated 16 ಮಾರ್ಚ್ 2024, 16:12 IST
<div class="paragraphs"><p>ಪಿಎಸ್‌ಐ ಶಂಕರಗೌಡ ಪಾಟೀಲ</p></div>

ಪಿಎಸ್‌ಐ ಶಂಕರಗೌಡ ಪಾಟೀಲ

   

ಹಾವೇರಿ: ‘ಮರಳು ಸಾಗಿಸುತ್ತಿದ್ದ ಲಾರಿಯವರು ಲಂಚ ಕೊಡಲಿಲ್ಲ ಎಂಬ ಕಾರಣಕ್ಕೆ ಚಾಲಕ ಹಾಗೂ ನನ್ನ (ಲಾರಿ ಮಾಲೀಕ) ಮೇಲೆ ಹಲ್ಲೆ ಮಾಡಿ, ಚಿನ್ನದ ಸರ ಕಿತ್ತುಕೊಂಡಿದ್ದಾರೆ’ ಎಂದು ಗುತ್ತಲ ಪಿಎಸ್‌ಐ ಶಂಕರಗೌಡ ಪಾಟೀಲ ಹಾಗೂ ಜೀಪ್ ಚಾಲಕ ಮಹೇಶಗೌಡ ವಿರುದ್ಧ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಲಾರಿ ಮಾಲೀಕ ಗುಡ್ಡಪ್ಪ ದೂರು ನೀಡಿದ್ದಾರೆ. 

ಲಾರಿ ಚಾಲಕ ದ್ಯಾಮಪ್ಪ ಕೋಟೆಪ್ಪ ಕುರಿ ಹಾಗೂ ಲಾರಿ ಮಾಲೀಕ ಗುಡ್ಡಪ್ಪ ಹಲ್ಲೆಗೀಡಾದವರು. ತೀವ್ರ ಗಾಯಗೊಂಡ ಗುಡ್ಡಪ್ಪ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ADVERTISEMENT

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಪಾಸ್ ತೆಗೆದುಕೊಂಡು ಜಿಪಿಎಸ್ ಅಳವಡಿಸಿದ್ದ ಲಾರಿಯಲ್ಲಿ ರಾಣೆಬೆನ್ನೂರು ತಾಲ್ಲೂಕಿನ ಬೇಲೂರು ಗ್ರಾಮದ ಮರಳಿನ ಪಾಯಿಂಟ್‌ನಿಂದ ಮರಳು ತುಂಬಿಸಿಕೊಂಡು ಚಿಕ್ಕೋಡಿ ತಾಲ್ಲೂಕಿನ ತೋರಣಹಳ್ಳಿಗೆ ಮರಳು ಸಾಗಿಸಲು ತೆರಳುತ್ತಿದ್ದ ಸಂದರ್ಭ ಹಲ್ಲೆ ನಡೆದಿದೆ ಎಂದು ದೂರಲಾಗಿದೆ.

‘ಗುತ್ತಲ ಬಳಿ ಹೊರಟಿದ್ದಾಗ ಪಿಎಸ್‌ಐ ಶಂಕರಗೌಡ ಪಾಟೀಲ ಹಾಗೂ ಜೀಪ್ ಚಾಲಕ ಮಹೇಶಗೌಡ ಲಾರಿ ತಡೆದು ₹80 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಪಾಸ್ ಇದ್ದರೂ ನಾವೇಕೆ ಹಣ ಕೊಡಬೇಕು ಎಂದೆವು. ಆಗ ಹಲ್ಲೆ ನಡೆಸಿ, ನಿಂದಿಸಿದ್ದಾರೆ. ಮಹೇಶಗೌಡ ಲಾರಿ ಚಾಲಕರ ಚಿನ್ನದ ಸರವನ್ನೂ ಕಿತ್ತುಕೊಂಡಿದ್ದಾರೆ’ ಎಂದು ದೂರಿನ ಪತ್ರದಲ್ಲಿ ಆರೋಪಿಸಲಾಗಿದೆ.

ಅಕ್ರಮವಾಗಿ ಬಂಧನ?

ಮಾ.12ರಂದು ನನ್ನ ಹಾಗೂ ವಾಹನವನ್ನು ಅಕ್ರಮವಾಗಿ ಬಂಧನದಲ್ಲಿಟ್ಟುಕೊಂಡಿದ್ದರು. ಮರುದಿನ ನಾನು ಆಸ್ಪತ್ರೆಗೆ ದಾಖಲಾದ ಸುದ್ದಿ ಕೇಳಿ ತಮ್ಮ ಮೇಲೆ ಆರೋಪ ಬರಬಾರದು ಎಂಬ ಕಾರಣಕ್ಕೆ ಗುತ್ತಲ ಠಾಣೆಯಲ್ಲಿ ನಮ್ಮ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದ್ದರಿಂದ ಆರೋಪಿತರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ದ್ಯಾಮಪ್ಪ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಹಿಂದೆ ಪಿಎಸ್‌ಯ ಶಂಕರಗೌಡ ಪಾಟೀಲ ವಿರುದ್ಧ ಲಾಕಪ್‌ ಡೆತ್‌ ಆರೋಪ ಕೇಳಿಬಂದಿತ್ತು. ಹೊಸರಿತ್ತಿ ಠಾಣೆಯಲ್ಲಿ ಕಳ್ಳತನದ ಆರೋಪಿಯನ್ನು ಥಳಿಸಿ, ಸಾಯಿಸಿದ್ದಾರೆ ಎಂದು ಮೃತನ ಕುಟುಂಬಸ್ಥರು ದೂರಿದ್ದರು. 

ಪಿಎಸ್‌ಐ ವರ್ಗಾವಣೆ, ಕಾನ್‌ಸ್ಟೆಬಲ್ ಅಮಾನತು

‘ಮರಳು ಲಾರಿ ಮಾಲೀಕ ಹಾಗೂ ಚಾಲಕನ ಮೇಲಿನ ಹಲ್ಲೆ ಆರೋಪ ಪ್ರಕರಣದ ಹಿನ್ನೆಲೆಯಲ್ಲಿ ಗುತ್ತಲ ಪಿಎಸ್‌ಐ ಶಂಕರಗೌಡ ಅವರನ್ನು ಹಾವೇರಿ ಕಂಟ್ರೋಲ್ ರೂಮ್‌ಗೆ ವರ್ಗಾವಣೆ ಮಾಡಲಾಗಿದ್ದು, ಕಾನ್‌ಸ್ಟೆಬಲ್ ಮಹೇಶಗೌಡನನ್ನು ಅಮಾನತುಗೊಳಿಸಲಾಗಿದೆ. ಈ ಕುರಿತು ಇಲಾಖಾ ತನಿಖೆಗೆ ಆದೇಶಿಸಿದ್ದು, ವರದಿ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಂಶುಕುಮಾರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.