ADVERTISEMENT

ಬಯಲು ಸೀಮೆಯಲ್ಲಿ ಕುಬ್ಜ ಪುಂಗನೂರು: ಆಂಧ್ರಪ್ರದೇಶ ತಳಿ ಅಭಿವೃದ್ಧಿಗೆ ರೈತರ ಆಸಕ್ತಿ

ಜಿಲ್ಲೆಯಲ್ಲಿ ಐದು ಕರುಗಳ ಜನನ | ವಾಸ್ತುದೋಷಕ್ಕೂ ಪರಿಹಾರವೆಂಬ ನಂಬಿಕೆ

ಸಂತೋಷ ಜಿಗಳಿಕೊಪ್ಪ
Published 23 ಜನವರಿ 2026, 8:31 IST
Last Updated 23 ಜನವರಿ 2026, 8:31 IST
ಹಾವೇರಿ ಜಿಲ್ಲೆಯ ಸ್ಥಳೀಯ ಆಕಳಿನ ಮೂಲಕ ಜನಿಸಿರುವ ಪುಂಗನೂರು ತಳಿಯ ಕರು
ಹಾವೇರಿ ಜಿಲ್ಲೆಯ ಸ್ಥಳೀಯ ಆಕಳಿನ ಮೂಲಕ ಜನಿಸಿರುವ ಪುಂಗನೂರು ತಳಿಯ ಕರು   

ಹಾವೇರಿ: ‘ಜಗತ್ತಿನ ಅತೀ ಕುಬ್ಜ ತಳಿ’ ಎನಿಸಿಕೊಂಡಿರುವ ‘ಪುಂಗನೂರು’ ತಳಿಯ ಹಸುಗಳು ಹಾವೇರಿ ಜಿಲ್ಲೆಗೂ ಕಾಲಿಟ್ಟಿವೆ. ಆಂಧ್ರಪ್ರದೇಶದ ಚಿತ್ತೂರು ಮೂಲದ ತಳಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲು ಜಿಲ್ಲೆಯ ರೈತರು ಆಸಕ್ತಿ ತೋರುತ್ತಿದ್ದು, ಅದೇ ತಳಿಯನ್ನು ಹೋಲುವ ಐದು ಕರುಗಳು ಈಗಾಗಲೇ ಜನ್ಮತಾಳಿವೆ.

ಶೇ 8ರಷ್ಟು ಕೊಬ್ಬಿನ ಅಂಶ ಹೊಂದಿರುವ ಪೌಷ್ಠಿಕ ಹಾಲು ನೀಡುವ ಪುಂಗನೂರು ತಳಿಯು, ದಿನಕ್ಕೆ 3 ಲೀಟರ್‌ನಿಂದ 5 ಲೀಟರ್ ಹಿಡುತ್ತದೆ. ಇದರ ಹಾಲಿಗೆ ವಿಶೇಷ ಬೇಡಿಕೆಯಿದ್ದು, ದರವೂ ಉತ್ತಮವಾಗಿದೆ. ಇದೇ ಕಾರಣಕ್ಕೆ ಬಯಲು ಸೀಮೆ ಹಾವೇರಿಯ ರೈತರು, ಪುಂಗನೂರು ಹಸುಗಳನ್ನು ಸ್ಥಳೀಯವಾಗಿ ಬೆಳೆಸಲು ಮುಂದಾಗಿದ್ದಾರೆ.

ಪಶು ಇಲಾಖೆ ಮಾಹಿತಿ ಪ್ರಕಾರ, ಇಡೀ ಜಗತ್ತಿನಲ್ಲಿ ಪುಂಗನೂರು ತಳಿಯ (ಮೂಲ) ಸುಮಾರು 900 ಹಸುಗಳಿವೆ. ಇದೇ ಹಸುಗಳ ಹಾಲಿನಿಂದ ತಿರುಪತಿ ವೆಂಕಟೇಶ್ವರ ದೇವರಿಗೆ ನಿತ್ಯವೂ ಅಭಿಷೇಕ ಮಾಡಲಾಗುತ್ತದೆ. ಜೊತೆಗೆ, ಹಾಲಿನಲ್ಲಿ ಪೌಷ್ಠಿಕಾಂಶ ಪ್ರಮಾಣವೂ ಹೆಚ್ಚಿರುವುದರಿಂದ, ಈ ತಳಿಯ ಅಭಿವೃದ್ಧಿಗೆ ದೇಶಾದ ಹಲವು ರೈತರು ಪ್ರಯತ್ನ ನಡೆಸುತ್ತಿದ್ದಾರೆ.

ADVERTISEMENT

ಬಿಳಿ, ಬೂದು, ಲಘು ಕಂದುವಿನಿಂದ ಗಾಢ ಕಂದು ಬಣ್ಣದಲ್ಲಿ ಪುಂಗನೂರು ಹಸುಗಳಿರುತ್ತದೆ. ಕೆಂಪು ಮಿಶ್ರಿತ ಕಲೆಗಳನ್ನು ಈ ಹಸುಗಳು ಹೊಂದಿರುತ್ತವೆ. ಚಿಕ್ಕದಿಂದ ಮಧ್ಯಮ ಗಾತ್ರದ ಅರ್ಧ ಚಂದ್ರಾಕಾರದ ಕೊಂಬುಗಳು ಇದರ ವಿಶೇಷತೆಗಳಾಗಿವೆ. 70 ಸೆಂ.ಮೀ.ನಿಂದ 90 ಸೆಂ.ಮೀ. ಎತ್ತರ ಬೆಳೆಯುವ ಈ ಹಸು, 115 ಕೆ.ಜಿ.ಯಿಂದ 200 ಕೆ.ಜಿ.ಯಷ್ಟು ತೂಕ ಹೊಂದಿರುತ್ತದೆ.

‘ಮೂಲ ತಳಿಯ ವೀರ್ಯವನ್ನು ತಂದು, ದೇಶಿಯ ಆಕಳುಗಳ ಗರ್ಭದಲ್ಲಿ ಸೇರಿಸಲಾಗುತ್ತಿದೆ. ಇದಕ್ಕಾಗಿ ಕೆಲ ಖಾಸಗಿ ಕಂಪನಿಯವರು ವೀರ್ಯ ಅಭಿವೃದ್ಧಿಪಡಿಸಿದ್ದಾರೆ. ಅದೇ ವೀರ್ಯದಿಂದ ಗರ್ಭ ಧರಿಸಿದ್ದ ಜಿಲ್ಲೆಯ ಐದು ಹಸುಗಳು, ಐದು ಕರುಗಳಿಗೆ ಜನ್ಮ ನೀಡಿವೆ. ಅದರಲ್ಲಿ ಒಂದು ಗಂಡು ಕರು ಹಾಗೂ ನಾಲ್ಕು ಹೆಣ್ಣು ಕರುಗಳ ಜನನವಾಗಿದೆ’ ಎಂದು ರೈತರೊಬ್ಬರು ಹೇಳಿದರು.

‘ಪುಂಗನೂರು ತಳಿಯನ್ನು ಶೇ 80ರಷ್ಟು ಹೋಲುವ ರೀತಿಯಲ್ಲಿ ನಮ್ಮ ತಳಿಗಳು ಕಾಣಿಸುತ್ತಿವೆ. ಮೂರು ಮರಿಗಳ ನಂತರ, ನಾಲ್ಕನೇ ಮರಿಯು ಶೇ 100ರಷ್ಟು ಪುಂಗನೂರು ತಳಿಯನ್ನು ಹೋಲುವ ಸಾಧ್ಯತೆ ಇರುವುದಾಗಿ ಪಶು ವೈದ್ಯರು ಹೇಳಿದ್ದಾರೆ. ಅದೇ ಭರವಸೆಯಂತೆ ಪುಂಗನೂರು ತಳಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲು ಮುಂದಾಗಿದ್ದೇವೆ’ ಎಂದರು.

ಕರುವಿನ ಬೆಲೆ ದುಬಾರಿ: ‘ಪುಂಗನೂರು ಕರುಗಳಿಗೆ ₹ 1 ಲಕ್ಷದಿಂದ ₹ 10 ಲಕ್ಷದವರೆಗೂ ಬೆಲೆಯಿದೆ. ಅಷ್ಟು ಹಣ ಕೊಟ್ಟರೂ ಕರುಗಳು ಸಿಗುವುದಿಲ್ಲ. ಮೂಲ ಕರುಗಳನ್ನು ತಂದು ನಮ್ಮ ಬಯಲು ಸೀಮೆಯಲ್ಲಿ ಸಾಕಿದರೆ, ಅದರ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಅದೇ ಕಾರಣಕ್ಕೆ ಈಗ, ದೇಶೀಯ ಆಕಳುಗಳ ಮೂಲಕ ಕರುಗಳನ್ನು ಪಡೆದು ಸಾಕುತ್ತಿದ್ದೇವೆ’ ಎಂದು ರೈತರೊಬ್ಬರು ಹೇಳಿದರು.

‘ಪುಂಗನೂರು ಕರುಗಳನ್ನು ಬೆಳೆಸಬೇಕೆಂಬ ಆಸೆಯಿತ್ತು. ಸ್ಥಳೀಯ ಪಶು ವೈದ್ಯರು ಸಹಾಯ ಮಾಡಿ, ಪುಂಗನೂರು ಹೋಲುವ ಕರು ನೀಡಿದ್ದಾರೆ. ಸ್ಥಳೀಯವಾಗಿ ಈ ಹಸು ಎಷ್ಟು ಹಾಲು ಕೊಡುತ್ತದೆ ಎಂಬುದು ಇದುವರೆಗೂ ನಮಗೆ ಗೊತ್ತಾಗಿಲ್ಲ. ಈ ಕರು ಪೂರ್ಣ ಪ್ರಮಾಣದಲ್ಲಿ ಬೆಳೆದ ನಂತರವೇ, ಅದರ ಹಾಲಿನ ಇಳುವರಿ ಹಾಗೂ ತಾಕತ್ತು ಗೊತ್ತಾಗುತ್ತದೆ. ಅಲ್ಲಿಯವರೆಗೂ ಬೆಳೆಸುವುದಷ್ಟೇ ನಮ್ಮ ಗುರಿ’ ಎಂದು ತಿಳಿಸದರು.

ವಾಸ್ತುದೋಷಕ್ಕೆ ಪರಿಹಾರ: ‘10 ತಿಂಗಳ ಹಿಂದೆಯಷ್ಟೇ ಆಕಳಿಗೆ ಪುಂಗನೂರು ತಳಿಯ ವೀರ್ಯ ಹಾಕಲಾಗಿತ್ತು. ಈಗ ಪುಂಗನೂರು ತಳಿ ಹೋಲುವ ಕರು ಜನನವಾಗಿದೆ. ಈ ಕರು ಮಕ್ಕಳ ರೀತಿಯಲ್ಲಿ ಸಾಕಷ್ಟು ತುಂಟಾಟವಾಡುತ್ತದೆ. ಜೊತೆಗೆ, ಇದು ವಾಸ್ತುದೋಷ ನಿವಾರಣೆ ಮಾಡುವ ತಳಿಯೆಂಬ ನಂಬಿಕೆಯಿದೆ. ಇತ್ತೀಚೆಗೆ ಸಂಕ್ರಾಂತಿಯಂದು ಪ್ರಧಾನಿ ನರೇಂದ್ರ ಮೋದಿ ಸಹ ಪುಂಗನೂರು ಹಸುವಿಗೆ ಪೂಜೆ ಸಲ್ಲಿಸಿದ್ದರು. ಮಕ್ಕಳಿಗೆ ಈ ತಳಿಯ ಹಸುಗಳು ತುಂಬಾ ಇಷ್ಟವಾಗುತ್ತವೆ’ ಎಂದು ಕೇರಿಮತ್ತಿಹಳ್ಳಿಯ ರೈತ ಮಹಾದೇವಪ್ಪ ತಾವರಗೊಪ್ಪ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಂಧ್ರಪ್ರದೇಶದ ಚಿತ್ತೂರಿನ ವಾತಾವರಣಕ್ಕೂ ಹಾವೇರಿ ಜಿಲ್ಲೆಯ ವಾತಾವರಣಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಸ್ಥಳೀಯವಾಗಿ 1.50 ಲೀಟರ್‌ನಿಂದ 2 ಲೀಟರ್ ಹಾಲು ಕೊಡಬಹುದೆಂಬ ಲೆಕ್ಕಾಚಾರವಿದೆ’ ಎಂದರು.

ಪುಂಗನೂರು ತಳಿಯ ವೀರ್ಯವನ್ನು ಇಲಾಖೆಯಿಂದ ನೀಡುವುದಿಲ್ಲ. ಕೆಲ ಕಂಪನಿಯವರು ಈ ಕೆಲಸ ಮಾಡುತ್ತಿದ್ದಾರೆ. ಅವರ ಬಳಿಯೇ ರೈತರು ವೀರ್ಯ ಪಡೆದು ಕರುಗಳನ್ನು ಪಡೆಯುತ್ತಿದ್ದಾರೆ
ಶಿವಯೋಗಿ ಎಲಿ ಪಶುಪಾಲನಾ ಇಲಾಖೆಯ ಉಪನಿರ್ದೇಶಕ

ಪುಂಗನೂರು ತಳಿ ವಿಶೇಷತೆಗಳು

* ಆಂಧ್ರಪ್ರದೇಶದ ಚಿತ್ತೂರು ಮೂಲದ ತಳಿ

* ಗಾಡಾ ಎಳೆಯುವ ಕೆಲಸ ಸಾರಿಗೆ ಹಾಗೂ ಹಾಲು ಉತ್ಪಾದನೆಗೆ ಬಳಕೆ

* ಶೇ 8ರಷ್ಟು ಕೊಬ್ಬಿನ ಅಂಶ ಹೊಂದಿರುವ ಪೌಷ್ಠಿಕ ಹಾಲು

* ದಿನಕ್ಕೆ 3 ಲೀಟರ್‌ನಿಂದ 5 ಲೀಟರ್ ಹಾಲು

* ಚಿಕ್ಕರ ಎತ್ತರದ ದೇಹ ತುಂಬಾ ತೂಗು ಹೋಗಿರುವ ಡೆವ್ಲ್ಯಾಪ್

‘ಮೂಲ ತಳಿಗೆ ಧಕ್ಕೆ’

ಯಾವ ಪ್ರದೇಶದಲ್ಲಿ ಯಾವ ತಳಿಗಳನ್ನು ಅಭಿವೃದ್ಧಿಪಡಿಸಬೇಕೆಂಬ ಬಗ್ಗೆ ಸರ್ಕಾರದ ನಿಯಮಾವಳಿಯಿದೆ. ಜಿಲ್ಲೆಯಲ್ಲಿ ಪುಂಗನೂರು ತಳಿಯ ಅಭಿವೃದ್ಧಿಪಡಿಸಿದರೆ ಮೂಲ ತಳಿಗೆ ಧಕ್ಕೆಯಾಗುವ ಆತಂಕವೂ ಇದೆ’ ಎಂದು ಪಶುಪಾಲನಾ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು. ‘ವಾತಾವರಣ ಬದಲಾದರೆ ಜಾನುವಾರುಗಳ ಆರೋಗ್ಯದಲ್ಲಿ ವ್ಯತ್ಯಾಸವಾಗುತ್ತದೆ. ಇದನ್ನು ರೈತರು ಗಮನಿಸಬೇಕು. ತಮ್ಮ ಪ್ರದೇಶಕ್ಕೆ ಸೂಕ್ತವಾದ ತಳಿಯ ಕರುಗಳನ್ನು ಮಾತ್ರ ಪಡೆದುಕೊಳ್ಳುವುದು ಸೂಕ್ತ’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.