ಹಾವೇರಿ: ಜಿಲ್ಲೆಯಲ್ಲಿ ಕೆಲ ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, 159 ಮನೆಗಳಿಗೆ ಹಾನಿ ಆಗಿದೆ. ವರದಾ, ಧರ್ಮಾ, ಕುಮದ್ವತಿ, ತುಂಗಭದ್ರಾ ನದಿಗಳಿಗೆ ನಿರ್ಮಿಸಿದ್ದ ಕೆಲ ಸೇತುವೆಗಳು ಮುಳುಗಡೆಯಾಗಿದ್ದು, ಹಲವು ಕಡೆಗಳಲ್ಲಿ ರಸ್ತೆ ಸಂಪರ್ಕವೂ ಕಡಿತಗೊಂಡಿದೆ.
ಜಿಲ್ಲೆಯಲ್ಲಿರುವ ನದಿಗಳಲ್ಲಿ ನೀರು ತುಂಬಿ ಹರಿಯುತ್ತಿದೆ. ನದಿ ಅಚ್ಚುಕಟ್ಟು ಪ್ರದೇಶದಲ್ಲಿರುವ ಕೆಲ ಗ್ರಾಮಗಳಲ್ಲಿ ಮುಳುಗಡೆ ಭೀತಿ ಇದ್ದು, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆಯೂ ಜಿಲ್ಲಾಡಳಿತ ಸೂಚನೆ ನೀಡಿದೆ.
ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಹಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಇದರ ಪರಿಣಾಮವಾಗಿ ಜಿಲ್ಲೆಯಲ್ಲಿರುವ ನದಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಹಾವೇರಿ ಜಿಲ್ಲೆಯಲ್ಲೂ ಉತ್ತಮ ಮಳೆ ಆಗುತ್ತಿದ್ದು, ಇದರಿಂದಾಗಿ ನೀರಿನ ಮಟ್ಟ ಮತ್ತಷ್ಟು ಹೆಚ್ಚಳವಾಗಿದೆ.
ಹಾವೇರಿ ತಾಲ್ಲೂಕಿನಲ್ಲಿ ವರದಾ ನದಿ ಹರಿದಿರುವ ನಾಗನೂರು–ಕೂಡಲ ಸೇತುವೆ ಹಾಗೂ ಕರ್ಜಗಿ–ಚಿಕ್ಕಮಗದೂರು ಸೇತುವೆ ಮುಳುಗಡೆಯಾಗಿದೆ. ನಾಗನೂರು ಗ್ರಾಮಕ್ಕೆ ನೀರು ಪೂರೈಸುವ ಪಂಪ್, ನದಿ ನೀರಿನಲ್ಲಿ ಮುಳುಗಿದೆ. ಇದರಿಂದಾಗಿ ಕೊಳವೆಬಾವಿ ಮೂಲಕ ಜನರಿಗೆ ನೀರು ಪೂರೈಸಲು ಗ್ರಾಮ ಪಂಚಾಯಿತಿ ಕ್ರಮ ಕೈಗೊಂಡಿದೆ.
ಸವಣೂರು ತಾಲ್ಲೂಕಿನ ಕಳಸೂರು–ಕೋಳುರು ಸೇತುವೆ ಮುಳುಗಡೆಯಾಗಿದೆ. ಚಿಕ್ಕಮುಗದೂರು–ಕರ್ಜಗಿ ರಸ್ತೆ, ಹಿರೇಮರಳಿಹಳ್ಳಿ–ಕೊಣತಂಬಗಿ ಸಂಪರ್ಕ ಕಡಿತಗೊಂಡಿದೆ. ಹಾನಗಲ್ ತಾಲ್ಲೂಕಿನ ಆಡೂರು–ತುಮರಿಕೊಪ್ಪ ಹಾಗೂ ಬಾಳಂಬೀಡ–ಲಕಮಾಪುರ ರಸ್ತೆಯಲ್ಲಿ ನೀರು ಹರಿಯುತ್ತಿದ್ದು, ಸಂಪರ್ಕ ಬಂದ್ ಆಗಿದೆ.
ರಾಣೆಬೆನ್ನೂರು ತಾಲ್ಲೂಕಿನ ಮುಷ್ಟೂರ– ಹೊಳೆ ಆನ್ವೇರಿ ಸೇತುವೆ, ಅಂತರವಳ್ಳಿ–ಲಿಂಗದಹಳ್ಳಿ ಸೇತುವೆ ಹಾಗೂ ಹಿರೇಮಾಗನೂರು–ಕೋಣನತಲಿ ಸೇತುವೆ ಮುಳುಗಡೆಯಾಗಿದೆ. ರಟ್ಟೀಹಳ್ಳಿ– ಯಲಿವಾಳ ರಸ್ತೆ ಸಂಪರ್ಕವೂ ಕಡಿತಗೊಂಡಿದೆ.
ಈ ಭಾಗದಲ್ಲಿ ನೂರಾರು ಎಕರೆ ಜಮೀನಿಗೆ ನೀರು ನುಗ್ಗಿದ್ದು, ಎಲ್ಲೆಲ್ಲೂ ನೀರು ಕಾಣಿಸುತ್ತಿದೆ. ಪ್ರವಾಹದಂತೆ ಭಾಸವಾಗುತ್ತಿದೆ. ನದಿ ಪಾತ್ರದಲ್ಲಿ ಹಲವು ಗ್ರಾಮಗಳಿದ್ದು, ಜನರು ಆತಂಕದಲ್ಲಿದ್ದಾರೆ.
1 ಮನೆ ಸಂಪೂರ್ಣ ಕುಸಿತ: ಜಿಲ್ಲೆಯಲ್ಲಿ ಒಂದು ಮನೆ ಸಂಪೂರ್ಣ ಕುಸಿದಿದೆ. 4 ಮನೆಗಳಿಗೆ ತೀವ್ರ ಹಾನಿಯಾಗಿದೆ. 154 ಮನೆಗಳಿಗೆ ಭಾಗಶಃ ಹಾನಿಯಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ವಿಪತ್ತು ನಿರ್ವಹಣೆಗೆ ಜಿಲ್ಲಾಡಳಿತ ಸಜ್ಜಾಗಿದ್ದು ಯಾವುದೇ ತುರ್ತು ಸಹಾಯ ಬೇಕಿದ್ದರೂ ಜನರು ಸಹಾಯವಾಣಿ ಸಂಪರ್ಕಿಸಬಹುದು. ಜಿಲ್ಲಾಧಿಕಾರಿ ಪಿ.ಡಿ. ಖಾತೆಯಲ್ಲಿ ₹ 16.43 ಕೋಟಿ ಹಾಗೂ ತಹಶೀಲ್ದಾರ್‌ಗಳ ಖಾತೆಯಲ್ಲಿ ₹ 5.75 ಕೋಟಿ ಅನುದಾನ ಲಭ್ಯವಿದೆ.ವಿಜಯ ಮಹಾಂತೇಶ ದಾನಮ್ಮನವರ, ಜಿಲ್ಲಾಧಿಕಾರಿ
ಸವಣೂರು ತಾಲ್ಲೂಕಿನ ಮಾದಾಪುರದಲ್ಲಿ ಮನೆ ಕುಸಿದು ಬಿದ್ದು ಅವಳಿ ಮಕ್ಕಳು ಸೇರಿ ಮೂವರು ಮೃತಪಟ್ಟಿದ್ದಾರೆ. ಇದೇ ಅವಘಡದಲ್ಲಿ ಮೂವರು ಗಾಯಗೊಂಡಿದ್ದಾರೆ.
ಅಧಿಕಾರಿಗಳಿಗೆ ಸೂಚನೆ: ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಗ್ರಾಮ ಪಂಚಾಯಿತಿ ಸಹಾಯಕರು, ಗ್ರಾಮ ಆಡಳಿತ ಅಧಿಕಾರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಗ್ರಾಮ ಹಾಗೂ ನಗರದಲ್ಲಿ ಶಿಥಿಲಾವಸ್ಥೆಯಲ್ಲಿರುವ ಮನೆಗಳನ್ನು ಗುರುತಿಸುವಂತೆ, ತೀರಾ ಶಿಥಿಲಗೊಂಡಿರುವ ಮನೆಗಳ ನಿವಾಸಿಗಳನ್ನು ಸಮೀಪದ ಸುರಕ್ಷಿತ ಸ್ಥಳದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ.
ಹಾವೇರಿ ತಾಲ್ಲೂಕಿನ ಕೂಡಲ–ನಾಗನೂರು ಮಾರ್ಗದಲ್ಲಿ ವರದಾ ನದಿ ನೀರು ಜಮೀನಿಗೆ ನುಗ್ಗಿರುವುದು
ಹೆಗ್ಗೇರಿ ಕೆರೆಗೆ ಶಾಸಕ ಭೇಟಿ
ತುಂಗಾ ಮೇಲ್ದಂಡೆ ಯೋಜನೆಯಡಿ ಹೆಗ್ಗೇರಿ ಕೆರೆಗೆ ನೀರು ಹರಿಸಲಾಗುತ್ತಿದ್ದು ಶಾಸಕ ರುದ್ರಪ್ಪ ಲಮಾಣಿ ಅವರು ಕೆರೆಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ‘ಎಲ್ಲೆಡೆಯೂ ಉತ್ತಮ ಮಳೆಯಾಗುತ್ತಿದೆ. ಕೆಲವೇ ದಿನಗಳಲ್ಲಿ ಹೆಗ್ಗೇರಿ ತುಂಬಲಿದೆ. ಅಂತರ್ಜಲ ಪ್ರಮಾಣ ಹೆಚ್ಚಳವಾಗಲಿದೆ. ಜನ ಹಾಗೂ ಜಾನುವಾರುಗಳಿಗೆ ಕುಡಿಯುವಲು ನೀರು ಲಭ್ಯವಾಗಲಿದೆ. 24 ಗಂಟೆ ನೀರು ಪೂರೈಕೆ ಕನಸು ನನಸಾಗಲಿದೆ’ ಎಂದು ಶಾಸಕ ರುದ್ರಪ್ಪ ತಿಳಿಸಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜೀಗೌಡ್ರ ನಗರಸಭೆ ಸದಸ್ಯ ಗಣೇಶ ಬಿಷ್ಟಣ್ಣನವರ ನೀರಾವರಿ ಇಲಾಖೆ ಸಹಾಯಕ ಇಂಜನೀಯರ ರಾಮಕೃಷ್ಣ ಇದ್ದರು.
ನಾಗನೂರು: ಮೇಲ್ಸೇತುವೆ ನಿರ್ಮಾಣಕ್ಕೆ ಆಕ್ಷೇಪ
ಕೂಡಲ–ನಾಗನೂರು ಮಾರ್ಗದ ವರದಾ ನದಿಗೆ ಮೇಲ್ಸೇತುವೆ ನಿರ್ಮಿಸಲಾಗುತ್ತಿದ್ದು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಕಾಮಗಾರಿ ಅರ್ಧಕ್ಕೆ ನಿಂತಿದೆ. ‘ಈ ಮಾರ್ಗದಲ್ಲಿ ಪ್ರತಿ ವರ್ಷವೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು ಜಮೀನಿಗೆ ನೀರು ನುಗ್ಗುತ್ತಿದೆ. ಹೊಸ ಮೇಲ್ಸೇತುವೆ ಅವೈಜ್ಞಾನಿಕವಾಗಿದೆ. ಸದ್ಯ ಎರಡು ಕಂಬಗಳಿದ್ದು ಇದರಿಂದ ನೀರು ನುಗ್ಗುವುದನ್ನು ತಡೆಯಲು ಸಾಧ್ಯವಿಲ್ಲ. ಹೆಚ್ಚುವರಿಯಾಗಿ ಎರಡು ಕಂಬಗಳು ಬೇಕು ಎಂಬುದಾಗಿ ಒತ್ತಾಯಿಸಿ ಕೆಲಸಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದೇವೆ’ ಎಂದು ನಾಗನೂರು ಗ್ರಾ.ಪಂ. ಉಪಾಧ್ಯಕ್ಷ ಹಿರೇಗೌಡ ಅವರು ’ಪ್ರಜಾವಾಣಿ’ಗೆ ತಿಳಿಸಿದರು.
ಗೋಡೆ ಕುಸಿತ: ಯುವತಿ ಗಾಯ
ಗುತ್ತಲ: ಇಲ್ಲಿಯ ಸಮೀಪದ ಭರಡಿ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಬಿದ್ದಿದ್ದರಿಂದ ಹೊನ್ನವ್ವ ಚನ್ನಪ್ಪ ತಳವಾರ (16) ಎಂಬುವವರು ತೀವ್ರ ಗಾಯಗೊಂಡಿದ್ದು ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಗಿದೆ. ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಶನಿವಾರ ಈ ಅವಘಡ ಸಂಭವಿಸಿದೆ. ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.