ಹಾವೇರಿ: ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಸಿಕ್ಕಿದ್ದಕ್ಕೆ ವಿಜಯೋತ್ಸವ ಆಚರಿಸಿದ ಏಳು ಆರೋಪಿಗಳನ್ನು ಹಾನಗಲ್ ಠಾಣೆ ಪೊಲೀಸರು ಬಂಧಿಸಿದ್ದು, ಎಲ್ಲರನ್ನೂ ನ್ಯಾಯಾಂಗ ಬಂಧನಕ್ಕೆ ವಹಿಸಿ ನ್ಯಾಯಾಲಯ ಶನಿವಾರ ಆದೇಶ ಹೊರಡಿಸಿದೆ.
ಜೈಲಿನಿಂದ ಗುರುವಾರ ರಾತ್ರಿ ಬಿಡುಗಡೆಯಾಗಿದ್ದ ಆರೋಪಿಗಳು, ಹಾವೇರಿಯಿಂದ ಅಕ್ಕಿಆಲೂರುವರೆಗೂ ಕಾರು ಹಾಗೂ ಬೈಕ್‌ನಲ್ಲಿ ವಿಜಯೋತ್ಸವ ಆಚರಿಸಿದ್ದರು. ೀ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು. ಹಾನಗಲ್ ಪಿಎಸ್‌ಐ ದೀಪಾಲಿ ಗುಡೋಡಗಿ ಅವರು ಆರೋಪಿಗಳ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದರು. ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿತ್ತು.
ಹಾನಗಲ್ ತಾಲ್ಲೂಕಿನ ಅಕ್ಕಿಆಲೂರ ಕಮಾಟಿಗೇರ ಓಣಿಯ ಸಮೀವುಲ್ಲಾ ಅಬ್ದುಲ್‌ವಾಹೀದ್ ಲಾಲಾನವರ (28), ಇಮಾಮನಗರದ ಮಹ್ಮದಸಾದಿಕ್ ಬಾಬುಸಾಬ ಅಗಸಿಮನಿ (30), ಹಳ್ಳೂರ ಓಣಿಯ ಶೋಹಿಬ ನಿಯಜಅಹ್ಮದ್ ಮುಲ್ಲಾ ಉರುಫ್ ಶೋಯಬ್ (20) ಹಾಗೂ ಇಸ್ಲಾಂಪುರ ಓಣಿಯ ರಿಯಾಜ್ ಅಬ್ದುಲ್‌ರಫೀಕ್ ಸಾವಿಕೇರಿ (32) ಅವರನ್ನು ಶುಕ್ರವಾರ ಬಂಧಿಸಲಾಗಿತ್ತು.
ತಲೆಮರೆಸಿಕೊಂಡಿದ್ದ ಆರೋಪಿಗಳಾದ ಅಪ್ತಾಬ ಮಖಬೂಲಅಹ್ಮದ್ ಚಂದನಕಟ್ಟಿ, ಮದರಸಾಬ್ ಮಹ್ಮದಸಾದಿಕ ಮಂಡಕ್ಕಿ ಹಾಗೂ ತೌಸೀಪ ಖಾಸಿಂಸಾಬ ಚೌಟಿಯನ್ನು ಶಿರಾಳಕೊಪ್ಪದಲ್ಲಿ ಬಂಧಿಸಲಾಗಿದೆ.
‘ಏಳು ಆರೋಪಿಗಳನ್ನು ನ್ಯಾಯಾಧೀಶರ ಎದುರು ಶನಿವಾರ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಜೂನ್ 2ರವರೆಗೆ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ’ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಲ್.ವೈ. ಶಿರಕೋಳ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.