ADVERTISEMENT

ಹಾವೇರಿ: ಮನೆ ಬಿದ್ದರೂ ನಯಾಪೈಸೆ ಪರಿಹಾರವಿಲ್ಲ!

ಆದೇಶ ಪತ್ರ ಕೊಟ್ಟು 5 ತಿಂಗಳಾದರೂ ಬಿಡುಗಡೆಯಾಗದ ಹಣ: ಸಂಕಷ್ಟದಲ್ಲಿ ಹಜರೇಸಾಬ್‌ ಕುಟುಂಬ

ಸಿದ್ದು ಆರ್.ಜಿ.ಹಳ್ಳಿ
Published 27 ಫೆಬ್ರುವರಿ 2020, 19:45 IST
Last Updated 27 ಫೆಬ್ರುವರಿ 2020, 19:45 IST
ನೆರೆ ಪರಿಹಾರ ಸಿಗದ ಕಾರಣ, ಬಿದ್ದ ಮನೆಯನ್ನು ಮತ್ತೆ ಕಟ್ಟಿಕೊಳ್ಳಲು ಪರದಾಡುತ್ತಿರುವ ಹಜರೇಸಾಬ್ ಮನ್ನಂಗಿ ಕುಟುಂಬ  –ಪ್ರಜಾವಾಣಿ ಚಿತ್ರ
ನೆರೆ ಪರಿಹಾರ ಸಿಗದ ಕಾರಣ, ಬಿದ್ದ ಮನೆಯನ್ನು ಮತ್ತೆ ಕಟ್ಟಿಕೊಳ್ಳಲು ಪರದಾಡುತ್ತಿರುವ ಹಜರೇಸಾಬ್ ಮನ್ನಂಗಿ ಕುಟುಂಬ  –ಪ್ರಜಾವಾಣಿ ಚಿತ್ರ   

ಹಾವೇರಿ: ನೆರೆ ಪರಿಹಾರ ವಿತರಣೆಯಲ್ಲಿ ನಡೆದಿರುವ ಅಕ್ರಮ ಮತ್ತು ಅವ್ಯವಹಾರದಿಂದ ಜಿಲ್ಲೆಯಲ್ಲಿ ನೂರಾರು ಅರ್ಹ ಫಲಾನುಭವಿಗಳು ಸಮರ್ಪಕ ಪರಿಹಾರ ಸಿಗದೆ ಕಣ್ಣೀರು ಸುರಿಸುತ್ತಿದ್ದಾರೆ.

ಹೌದು, ಜಿಲ್ಲಾಧಿಕಾರಿ ಕಚೇರಿಯಿಂದ ಕೂಗಳತೆ ದೂರದಲ್ಲಿರುವ ಹಾವೇರಿ ತಾಲ್ಲೂಕು ದೇವಗಿರಿ ಗ್ರಾಮಕ್ಕೆ ಕಾಲಿಟ್ಟರೆ, ಹೆಜ್ಜೆಗೊಂದರಂತೆ ಕಣ್ಣೀರ ಕಥನಗಳು ಎದುರಾಗುತ್ತವೆ. ಅವುಗಳಲ್ಲಿ ಹಜರೇಸಾಬ್‌ ಮನ್ನಂಗಿ ಕುಟುಂಬ ಕೂಡ ಒಂದು.

2019ರ ಆಗಸ್ಟ್‌ನಲ್ಲಿ ಸುರಿದ ಅತಿವೃಷ್ಟಿ ಮತ್ತು ನೆರೆಯಿಂದ ಮನೆಯ ಗೋಡೆಗಳು ಕುಸಿದು ಬಿದ್ದು, ಚಾವಣಿಯಲ್ಲಿ ಬಿರುಕು ಮೂಡಿದ್ದವು. ಇವರ ಮನೆಯನ್ನು ಪರಿಶೀಲಿಸಿದ ಗ್ರಾಮ ಪಂಚಾಯ್ತಿ ಸಿಬ್ಬಂದಿ, ಶೇ 15ರಿಂದ 25ರಷ್ಟು ಹಾನಿಯಾಗಿದೆ ಎಂದು ಸಮೀಕ್ಷೆ ಮಾಡಿದ್ದರು. ನಂತರ ನೆರೆ ಪರಿಹಾರಧನಕ್ಕೆ ಅರ್ಹರಾಗಿದ್ದೀರಿ ಎಂದು ಅಕ್ಟೋಬರ್‌ನಲ್ಲಿ ಕಾಮಗಾರಿ ಆದೇಶ ಪತ್ರ ಕೂಡ ನೀಡಿದ್ದರು. ಆದರೆ, ಇದುವರೆಗೂ ಒಂದೇ ಒಂದು ರೂಪಾಯಿ ಕೂಡ ಇವರ ಕುಟುಂಬಕ್ಕೆ ಸಿಕ್ಕಿಲ್ಲ.

ADVERTISEMENT

ಪತಿಗೆ ಕಿಡ್ನಿ ಸಮಸ್ಯೆ:‘ಪತಿ ಹಜರೇಸಾಬ್‌ ಅವರು ಎರಡು ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರ ಆಸ್ಪತ್ರೆ ಖರ್ಚಿಗೆ ಹಣವನ್ನು ಭರಿಸುವುದೇ ಕಷ್ಟವಾಗಿದೆ. ಈ ಮಧ್ಯೆ ನೆರೆ ಹಾವಳಿಗೆ ಇದ್ದ ಮನೆ ಕೂಡ ಬಿದ್ದು ಹೋಗಿದೆ. ಮೂವರು ಗಂಡು ಮಕ್ಕಳು ನಿತ್ಯ ಗೌಂಡಿ ಕೆಲಸಕ್ಕೆ ಹೋಗಿ ₹ 900 ದುಡಿಯುತ್ತಾರೆ. ಕಟ್ಟಡ ನಿರ್ಮಾಣವಿಲ್ಲದ ವೇಳೆ ಹೊಲದ ಕೆಲಸಕ್ಕೆ ಮಕ್ಕಳೊಂದಿಗೆ ನಾನೂ ಹೋಗುತ್ತೇನೆ. ನಾವು ದುಡಿಯುವ ಹಣ ಹೊಟ್ಟೆ–ಬಟ್ಟೆಗೆ ಸರಿಯೋಗುತ್ತದೆ. ಈಗ ಮನೆಯನ್ನು ಕಟ್ಟಲು ದುಡ್ಡನ್ನು ಎಲ್ಲಿಂದ ತರೋದು’ ಎಂದು ಜರೀನಾ ಬೇಗಂ ಕಣ್ಣೀರು ಹಾಕಿದರು.

‘ನಿತ್ಯ ಗ್ರಾ.ಪಂ.ಗೆ ಕಚೇರಿಗೆ ಅಲೆಯುವುದೇ ಕೆಲಸವಾಗಿದೆ. ‘ಹಣ ಜಮಾ ಆಗುತ್ತದೆ’ ಎಂದು ಸಿಬ್ಬಂದಿ ಉತ್ತರ ಹೇಳುವುದನ್ನು ಬಿಟ್ಟರೆ ಬಿಡಿಗಾಸು ಕೂಡ ಕೊಟ್ಟಿಲ್ಲ. ಬಡತನದ ಕಾರಣದಿಂದ ಮಕ್ಕಳನ್ನು ಹೆಚ್ಚು ಓದಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಮೂವರು ಮಕ್ಕಳು ಹೈಸ್ಕೂಲ್‌ ಕೂಡ ದಾಟಿಲ್ಲ. ನನಗೀಗ ದುಡಿಯುವ ಶಕ್ತಿ ಇಲ್ಲ. ಇರಲು ಮನೆ ಇಲ್ಲ. ನಮ್ಮ ಗೋಳು ಕೇಳೋರ್ಯಾರು’ ಎಂದು ಹಜರೇಸಾಬ್‌ ಅಸಹಾಯಕತೆ ವ್ಯಕ್ತಪಡಿಸಿದರು.

ಬಯಲಲ್ಲೇ ಸ್ನಾನ!
‘ನಮ್ಮ ಚಿಕ್ಕಪ್ಪನ ಮನೆಯ ಹಿಂಭಾಗ 7x7 ಜಾಗದಲ್ಲಿ ಚಾವಣಿಗೆ ತಗಡಿನ ಶೀಟು ಹೊದಿಸಿ, ಸುತ್ತಲೂ ಟಾರ್ಪಲ್‌ ಕಟ್ಟಿ ಅಡುಗೆ ಕೋಣೆ ಮಾಡಿಕೊಂಡಿದ್ದೇವೆ. ನಾವೆಲ್ಲ ಪುರುಷರು ಬಯಲಲ್ಲೇ ಸ್ನಾನ ಮಾಡುತ್ತೇವೆ. ಮನೆಯ ಹೊರಾಂಡ, ಕಟ್ಟೆ ಮೇಲೆ ಮಲಗುತ್ತೇವೆ. ಮನೆಯ ಮಣ್ಣನ್ನು ತೆರವುಗೊಳಿಸಲು ಮತ್ತು ಸಾಗಿಸಲು ₹ 20 ಸಾವಿರ ಸಾಲ ಮಾಡಿಕೊಂಡಿದ್ದೇವೆ. ಅಡಿಪಾಯ ಕೂಡ ಹಾಕಿಸಲು ಹಣವಿಲ್ಲ’ ಎಂದು ಹಜರೇಸಾಬ್‌ ಪುತ್ರ ಹಸನ್‌ಮಿಯಾ ದುಃಖ ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.