
ಹಾವೇರಿ: ‘ಕಂದಾಯ ದಾಖಲೆಗಳ (ಆರ್.ಆರ್.ಟಿ) ತಿದ್ದುಪಡಿ ವಿಚಾರದಲ್ಲಿ ಯಾವುದೇ ಸಮಸ್ಯೆಯಿಲ್ಲವೆಂದು ವರದಿ ಬಂದಿದೆ. ಹೀಗಾಗಿ, ಜಿಲ್ಲೆಯಲ್ಲಿ ಆರ್.ಆರ್.ಟಿ. ತಿದ್ದುಪಡಿಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕು’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಹೊರವಲಯದಲ್ಲಿರುವ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಕಂದಾಯ ಇಲಾಖೆ ಪ್ರಗತಿ ಪರಿಶೀಲನೆ ಸಭೆ’ಯಲ್ಲಿ ಅವರು ಮಾತನಾಡಿದರು.
‘ಜಿಲ್ಲೆಯ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿರುವ 58 ಆರ್.ಆರ್.ಟಿ ಪ್ರಕರಣಗಳು ದಾಖಲಾಗಿ, ಬಾಕಿ ಉಳಿದಿವೆ. ಇವುಗಳ ಇತ್ಯರ್ಥಕ್ಕೆ ಕ್ರಮ ವಹಿಸಬೇಕು. ಪೌತಿ ಖಾತೆ ಅಭಿಯಾನದಲ್ಲಿ ಏನೇ ಸಮಸ್ಯೆ ಇದ್ದಲ್ಲಿ ನನ್ನ ಗಮನಕ್ಕೆ ತರಬೇಕು. ಸರ್ಕಾರದ ಸೂಚನೆ ಮೇರೆಗೆ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು’ ಎಂದು ಹೇಳಿದರು.
‘ಸಾರ್ವಜನಿಕರು ಕಂದಾಯ ಇಲಾಖೆಯಿಂದ ದಾಖಲೆ ಪಡೆಯುವ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲಾಗಿದೆ. ಮೃತರ ವಾರಸಾ ಬದಲಾವಣೆ, ಕೃಷಿ ಭೂಮಿಗೆ ಆಧಾರ್ ಜೋಡಣೆ, ಭೂ ದಾಖಲೆ ಡಿಜಿಟಲೀಕರಣ, ಆರ್‌ಟಿಸಿ ತಿದ್ದುಪಡಿ, ದರಖಾಸ್ತ ಕೆಲಸ, ಪೋತಿ ಖಾತೆ ಸೇರಿದಂತೆ ವಿವಿಧ ಕೆಲಸಗಳು ವೇಗವಾಗಿ ನಡೆಯಬೇಕು. ಭೂ ದಾಖಲೆ ಡಿಜಿಟಲೀಕರಣಕ್ಕೆ ಅನಾವಶ್ಯಕ ದಾಖಲೆಗಳನ್ನು ಸ್ಕ್ಯಾನ್ ಮಾಡಬೇಡಿ. ಕೆಟಗರಿ ‘ಎ’ ಹಾಗೂ ‘ಬಿ’ನಲ್ಲಿ ಅಗತ್ಯ ದಾಖಲೆಗಳನ್ನು ಮಾತ್ರ ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಬೇಕು. ಮಾರ್ಚ್ ಅಂತ್ಯದೊಳಗೆ ಸ್ಕ್ಯಾನ್ ಹಾಗೂ ಅಪ್‌ಲೋಡ್ ಮಾಡುವ ಕಾರ್ಯ ಮುಗಿಸಬೇಕು’ ಎಂದು ಸೂಚನೆ ನೀಡಿದರು.
‘ಪೋಡಿಮುಕ್ತ ಅಭಿಯಾನ ಕಾರ್ಯವನ್ನು ವೇಗವಾಗಿ ಮಾಡಬೇಕು. ಕಾನೂನು ಬದ್ಧವಾಗಿ ಎಲ್ಲ ಇತ್ಯರ್ಥ ಮಾಡಬೇಕು. ದಾಖಲೆಗಳನ್ನು ನೋಡಿ ತಿದ್ದುಪಡಿ ಕೆಲಸಗಳನ್ನು ಮಾಡಬೇಕು. ಆರ್.ಟಿ.ಸಿ. ತಿದ್ದುಪಡಿಗೆ ಸಾರ್ವಜನಿಕರು ಅಲೆದಾಡುವಂತಾಗಬಾರದು’ ಎಂದರು.
ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಮಾತನಾಡಿ, ‘ಜಿಲ್ಲೆಯಲ್ಲಿ 1,66,916 ಆರ್.ಟಿ.ಸಿ.ಗೆ ಆಧಾರ್ ಜೋಡಣೆ ಮಾಡಲಾಗಿದೆ. ಕಂದಾಯ ಗ್ರಾಮ -ಉಪ ಗ್ರಾಮಗಳಾಗಿ 234 ಗ್ರಾಮಗಳನ್ನು ಗುರುತಿಸಿ, ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಈ ಪೈಕಿ ಅಂತಿಮವಾಗಿ 210 ಪ್ರಕರಣಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ’ ಎಂದರು.
ಶಾಸಕರಾದ ಬಸವರಾಜ ಶಿವಣ್ಣನವರ, ಯು.ಬಿ. ಬಣಕಾರ, ಶ್ರೀನಿವಾಸ ಮಾನೆ, ಯಾಸೀರ ಅಹ್ಮದ್ ಖಾನ ಪಠಾಣ, ಜಿ.ಪಂ. ಸಿಇಒ ರುಚಿ ಬಿಂದಲ್, ಜಿಲ್ಲಾ ಎಸ್.ಪಿ. ಯಶೋಧಾ ವಂಟಗೋಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.