ADVERTISEMENT

ಹಾವೇರಿ: ಶಾಲೆ, ಕಚೇರಿಗೆ ಹೋಗಲು ಜನರ ಪರದಾಟ

ಕೆಸರು ಗದ್ದೆಯಂತಾದ ಹಳೆಯ ಕೋರ್ಟ್ ಆವರಣ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 5:27 IST
Last Updated 13 ಜುಲೈ 2025, 5:27 IST
ಸವಣೂರು ಪಟ್ಟಣದ ಪದ್ಮಶ್ರೀ ಡಾ.ವಿ.ಕೃ.ಗೋಕಾಕ ಸಾಂಸ್ಕೃಕ ಭವನದ ಮುಂಭಾಗದ ರಸ್ತೆ ನಿರಂತರ ಸುರಿದ ಮಳೆಗೆ ಕೆಸರು ಗದ್ದೆಯಾಗಿ ದ್ವಿಚಕ್ರ ವಾಹನ ಸವಾರರು ಪರದಾಡುವಂತೆ ಆಗಿದೆ
ಸವಣೂರು ಪಟ್ಟಣದ ಪದ್ಮಶ್ರೀ ಡಾ.ವಿ.ಕೃ.ಗೋಕಾಕ ಸಾಂಸ್ಕೃಕ ಭವನದ ಮುಂಭಾಗದ ರಸ್ತೆ ನಿರಂತರ ಸುರಿದ ಮಳೆಗೆ ಕೆಸರು ಗದ್ದೆಯಾಗಿ ದ್ವಿಚಕ್ರ ವಾಹನ ಸವಾರರು ಪರದಾಡುವಂತೆ ಆಗಿದೆ   

ಸವಣೂರು: ಪಟ್ಟಣದ ಹಳೆಯ ಕೋರ್ಟ್ ಆವರಣದಿಂದ ಹಾದು ಹೋಗುವ ರಸ್ತೆಯು ನಿರಂತರ ಸುರಿದ ಮಳೆಗೆ ಸಂಪೂರ್ಣ ಕೆಸರು ಗದ್ದೆಯಂತಾಗಿದ್ದು, ಈ ಮಾರ್ಗವಾಗಿ ಶಾಲೆಗೆ ತೆರಳುವ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಸಂಕಟ ಎದುರಾಗಿದೆ.

ದಿನದ ಬೆಳಗ್ಗೆ ಶಾಲಾ ಉಡುಪಿನಲ್ಲಿ ತಯಾರಾಗಿ ಹೊರಡುವ ಪುಟಾಣಿ ಮಕ್ಕಳು ಹದಗೆಟ್ಟ ರಸ್ತೆಯಲ್ಲಿ ಶಾಲೆಗೆ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ. ಒಂದೆಡೆ ರಸ್ತೆ ಮೇಲೆ ಕೆಸರು, ಇನ್ನೊಂದೆಡೆ ಭಾರದ ಪಠ್ಯಚೀಲ ಹಿಡಿದು ಸಮತೋಲನದಿಂದ ಸಾಗಬೇಕು. ಒಂದು ವೇಳೆ ಬೈಕ್ ಸವಾರರು ಪಕ್ಕದಿಂದ ಹಾಯ್ದು ಹೋದರೆ ಬಟ್ಟೆಗಳೆಲ್ಲ ಕೆಸರುಮಯವಾಗಲಿದ್ದು, ಶಾಲಾ ಮಕ್ಕಳ ಗೋಳು ಕೇಳುವವರು ಯಾರು ಎಂಬ ಪ್ರಶ್ನೆ ಎದುರಾಗಿದೆ.

ಇನ್ನೂ ಕೆಲವು ಬೈಕ್ ಸವಾರರು ಈ ರಸ್ತೆಗೆ ಬಂದರೆ ಸರ್ಕಸ್ ಮಾಡುತ್ತಲೇ ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕೆ ನೆರವಾಗಬೇಕಾದ ಪುರಸಭೆ ಜನರ ಮೂಳೆ ಮುರಿಯಲು ಸಜ್ಜಾಗಿದೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.

ADVERTISEMENT

‘ಪ್ರತಿಯೊಂದು ಮಳೆ ಬಿದ್ದರೂ ರಸ್ತೆ ಈ ಸ್ಥಿತಿಗೆ ಬರುವುದು ನಿಯಮವಾಗಿಬಿಟ್ಟಿದೆ. ಆದರೆ, ಪುರಸಭೆ ಮಾತ್ರ ನಿರ್ಲಕ್ಷ್ಯ ತೋರುತ್ತಾ ಜಾಣ ಕುರುಡುತನ ಪ್ರದರ್ಶಿಸುತ್ತದೆ. ನಮ್ಮ ಮಕ್ಕಳು ದಿನವೂ ಬಾಧೆಪಟ್ಟು ಹೋಗಬೇಕಾದ್ದೇನು?’ ಎಂದು ಪಾಲಕರು ಆಕ್ರೋಶದಿಂದ ಹೇಳುತ್ತಾರೆ.

ಪಟ್ಟಣದ ಉಪ ವಿಭಾಗಾಧಿಕಾರಿಗಳ ಕಚೇರಿ ಆವರಣದಲ್ಲಿಯೇ ಹಲವಾರು ಶಾಲೆಗಳಿದ್ದು ನಿತ್ಯ ವಿದ್ಯಾರ್ಥಿಗಳು ಕಷ್ಟ ಪಡುತ್ತಿರುವುದು ಗಮನಕ್ಕೆ ಬರುತ್ತಿಲ್ಲವೇ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.