ADVERTISEMENT

ಅನೈತಿಕ ಪೊಲೀಸಗಿರಿ; ಸವಣೂರು ಬಂದ್‌: ಬಿಜೆಪಿ ಮುಖಂಡ ಪರಶುರಾಮ ಬಾಣದ

ಶಿಕ್ಷಕನಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ | ಸಿರಿಯಾ ಸಂಸ್ಕೃತಿಯ ಮನಸ್ಥಿತಿ ವಿರುದ್ಧ ಹೋರಾಟ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 3:07 IST
Last Updated 14 ಡಿಸೆಂಬರ್ 2025, 3:07 IST
ಪರಶುರಾಮ ಬಾಣದ‌
ಪರಶುರಾಮ ಬಾಣದ‌   

ಹಾವೇರಿ: ‘ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಡಿ ಸರ್ಕಾರಿ ಉರ್ದು ಶಾಲೆ ಶಿಕ್ಷಕ ಜಗದೀಶ್ ಅವರನ್ನು ಥಳಿಸಿ ಚಪ್ಪಲಿ ಹಾರ ಹಾಕಿ ರಸ್ತೆಗಳಲ್ಲಿ ಮೆರವಣಿಗೆ ಮಾಡಿರುವುದು ಸಮಾಜವೇ ತಲೆತಗ್ಗಿಸುವ ಸಂಗತಿ. ಕಾನೂನು ಕೈಗೆತ್ತಿಕೊಂಡು ಅನೈತಿಕ ಪೊಲೀಸಗಿರಿ ಪ್ರದರ್ಶಿಸಿದ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಡಿ. 15ರಂದು ಸವಣೂರು ಬಂದ್‌ಗೆ ಕರೆ ನೀಡಲಾಗಿದೆ’ ಎಂದು ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಪರಶುರಾಮ ಬಾಣದ ತಿಳಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಕ್ಷಾತೀತ ಹಾಗೂ ಜಾತ್ಯತೀತವಾಗಿ ಬಂದ್‌ಗೆ ಕರೆ ನೀಡಲಾಗಿದೆ. ಹಲವು ಸಂಘಟನೆಗಳ ಪದಾಧಿಕಾರಿಗಳು ಹಾಗೂ ಜನರು ಬೆಂಬಲ ವ್ಯಕ್ತಪಡಿಸಲಿದ್ದಾರೆ. ಅಂದು ಪಟ್ಟಣದ ಎಲ್ಲ ಕಡೆಯೂ ಅಂಗಡಿಗಳನ್ನು ಬಂದ್ ಮಾಡಲಾಗುವುದು. ಮೆರವಣಿಗೆ ಮೂಲಕ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು’ ಎಂದರು.

‘ಯಾವುದೇ ಧರ್ಮವಿದ್ದರೂ ಎಲ್ಲ ಮಕ್ಕಳು ದೇವರ ಸಮಾನ. ಅಂಥ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವರ ವಿರುದ್ಧ ಕಾನೂನು ಕ್ರಮವಾಗಬೇಕು. ಶಿಕ್ಷಕ ಜಗದೀಶ್ ತಪ್ಪು ಮಾಡಿದ್ದರೆ, ಅವರಿಗೆ ಕಠಿಣ ಶಿಕ್ಷೆಯಾಗುವಂತೆ ನಾವೂ ಒತ್ತಾಯಿಸುತ್ತೇವೆ. ಆದರೆ, ಗೌರವದ ಸ್ಥಾನದಲ್ಲಿರುವ ಒಬ್ಬ ಶಿಕ್ಷಕನನ್ನು ಶಾಲೆಯಲ್ಲಿ ಥಳಿಸಿ ಚಪ್ಪಲಿ ಹಾರ ಹಾಕಿ ಬೀದಿಗಳಲ್ಲಿ ಮೆರವಣಿಗೆ ಮಾಡಿ ಅನೈತಿಕ ಪೊಲೀಸಗಿರಿ ಪ್ರದರ್ಶಿಸುವುದು ಖಂಡನೀಯ. ಯಾವುದೇ ಒಂದು ಕೋಮಿನ ವಿರುದ್ಧ ನಾವು ಬಂದ್ ಮಾಡುತ್ತಿಲ್ಲ. ಶಿಕ್ಷಕನನ್ನು ಮೆರವಣಿಗೆ ಮಾಡಿರುವ ಕೃತ್ಯವನ್ನು ಖಂಡಿಸಿ ಬಂದ್ ಮಾಡುತ್ತಿದ್ದೇವೆ’ ಎಂದು ತಿಳಿಸಿದರು. 

ADVERTISEMENT

ಸಿರಿಯಾ ಸಂಸ್ಕೃತಿಯ ಮನಸ್ಥಿತಿ: ‘ಸವಣೂರು ಪಟ್ಟಣದಲ್ಲಿ ಇತ್ತೀಚಿನ ದಿನಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಹಾಗೂ ಅನೈತಿಕ ಪೊಲೀಸಗಿರಿಯಂಥ ಘಟನೆಗಳು ನಡೆಯುತ್ತಿವೆ. ಕೆಲವರು, ಸಿರಿಯಾ ಸಂಸ್ಕೃತಿಯ ಮನಸ್ಥಿತಿ ಹೊಂದಿದ್ದಾರೆ. ಯಾರ ಮೇಲಾದರೂ ಆರೋಪ ಬಂದರೆ, ಅವರನ್ನು ಥಳಿಸುವುದು ಹಾಗೂ ಮೆರವಣಿಗೆ ಮಾಡಿ ಅಪಮಾನ ಮಾಡುತ್ತಿದ್ದಾರೆ. ಇಂಥ ಮನಸ್ಥಿತಿಗಳ ವಿರುದ್ಧ ನಮ್ಮ ಹೋರಾಟ ನಿರಂತರ’ ಎಂದು ಪರಶುರಾಮ ಬಾಣದ ತಿಳಿಸಿದರು.

‘ಸವಣೂರಿನಲ್ಲಿ ಕೆಲಸ ಮಾಡುತ್ತಿರುವ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ಭಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲವರು ಏಕಾಏಕಿ ಕಚೇರಿಗಳಿಗೆ ಹಾಗೂ ಶಾಲೆಗಳಿಗೆ ನುಗ್ಗಿ ಗಲಾಟೆ ಮಾಡುತ್ತಿದ್ದಾರೆ. ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೂ ರಕ್ಷಣೆ ಇಲ್ಲದಂತಾಗಿದೆ’ ಎಂದು ದೂರಿದರು.

ಪೊಲೀಸರ ವೈಫಲ್ಯ: ‘ಸವಣೂರಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಪಟ್ಟಣ ಹಾಗೂ ತಾಲ್ಲೂಕಿನ ಹಲವು ಕಡೆಗಳಲ್ಲಿ ಜೂಜಾಟ, ಮದ್ಯ ಅಕ್ರಮ ಮಾರಾಟ, ಮಟ್ಕಾ ದಂಧೆಗಳು ರಾಜಾರೋಷವಾಗಿ ನಡೆಯುತ್ತಿವೆ. ಪೊಲೀಸರ ಕೆಲಸದ ವೈಫಲ್ಯವೇ ಇದಕ್ಕೆಲ್ಲ ಕಾರಣ’ ಎಂದು ಪರಶುರಾಮ ಬಾಣದ ದೂರಿದರು.

ಗಾಳೆಪ್ಪ ದೊಡ್ಡಪೂಜಾರ, ಮಹಾಂತೇಶ ಬಿಜ್ಜೂರ, ಮೈಲಾರಪ್ಪ ಕಳ್ಳಿಹಾಳ, ನಿಂಗಪ್ಪ ಬಂಕಾಪುರ, ಈಗಪ್ಪ ಜಲ್ಲಾಪುರ, ಬಿ.ಎಫ್‌. ಸಾಲಿ ಇದ್ದರು.

ಯಾಸೀರ್ ಅಹ್ಮದ್ ಖಾನ್ ಪಠಾಣ

‘ಪೊಲೀಸರ ಸಮ್ಮುಖದಲ್ಲೇ ಮೆರವಣಿಗೆ’

‘ಸವಣೂರಿನ ಸರ್ಕಾರಿ ಉರ್ದು ಶಾಲೆಗೆ ನುಗ್ಗಿದ್ದ ಕೆಲವರು ಶಿಕ್ಷಕನನ್ನು ಥಳಿಸಿ ಚಪ್ಪಲಿಯಿಂದ ಹೊಡೆದಿದ್ದಾರೆ. ನಂತರ ಚಪ್ಪಲಿ ಹಾರ ಹಾಕಿ ಬೀದಿಗಳಲ್ಲಿ ಮೆರವಣಿಗೆ ಮಾಡಿದ್ದಾರೆ. ಜೊತೆಗೆ ರಸ್ತೆಯುದ್ದಕ್ಕೂ ಚಪ್ಪಲಿಯಿಂದ ಹೊಡೆದಿದ್ದಾರೆ. ಪೊಲೀಸರ ಸಮ್ಮುಖದಲ್ಲಿಯೇ ಮೆರವಣಿಗೆ ನಡೆದಿದ್ದು ಕೃತ್ಯವನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ. ತಪ್ಪಿತಸ್ಥ ಪೊಲೀಸರನ್ನು ಅಮಾನತು ಮಾಡಬೇಕು’ ಎಂದು ಬಿಜೆಪಿ ಸವಣೂರು ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಕಲಕೋಟಿ ಒತ್ತಾಯಿಸಿದರು.

ಬಂದ್ ಅವಶ್ಯವಿಲ್ಲ; ಶಾಸಕ 

‘ಯಾರೇ ತಪ್ಪು ಮಾಡಿದರೂ ಅವರ ವಿರುದ್ಧ ಪೊಲೀಸ್‌ ಇಲಾಖೆ ಹಾಗೂ ನ್ಯಾಯಾಲಯ ಕ್ರಮ ಕೈಗೊಳ್ಳುತ್ತದೆ. ಅದನ್ನು ಬಿಟ್ಟು ಕಾನೂನು ಕೈಗೆತ್ತಿಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ಶಿಕ್ಷಕನ ಪ್ರಕರಣದಲ್ಲಿ ಎರಡೂ ಕಡೆಯಿಂದಲೂ ಪ್ರಕರಣ ದಾಖಲಾಗಿದೆ. ತಪ್ಪು ಮಾಡಿದವರ ಮೇಲೆ ಕಾನೂನು ಕ್ರಮ ಆಗಲಿದೆ. ಬಂದ್ ಮಾಡಿ ಜನರಿಗೆ ತೊಂದರೆ ಮಾಡುವ ಅವಶ್ಯತೆಯಿಲ್ಲ’ ಎಂದು ಶಿಗ್ಗಾವಿ ಶಾಸಕ ಯಾಸೀರ ಅಹ್ಮದ್ ಖಾನ್ ಪಠಾಣ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಸಂತ್ರಸ್ತರು ಹಾಗೂ ಮುಖಂಡರ ಜೊತೆ ಚರ್ಚಿಸಿದ್ದೇನೆ. ಎರಡೂ ಕಡೆಯಿಂದಲೂ ತಪ್ಪು ಆಗಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಅದು ಸರಿಯೋ ತಪ್ಪು ಎಂಬುದು ತನಿಖೆಯಿಂದಲೇ ನಿರಖವಾಗಿ ಗೊತ್ತಾಗಬೇಕಿದೆ’ ಎಂದರು. ‘ವಿದ್ಯಾರ್ಥಿನಿಯರ ಮೇಲೆ ನಡೆದಿರುವ ದೌರ್ಜನ್ಯದ ಬಗ್ಗೆ ಮುಖ್ಯಶಿಕ್ಷಕರು ದೂರು ನೀಡಿದ್ದು ಆರೋಪಿ ಶಿಕ್ಷಕನ ವಿರುದ್ಧ ಪ್ರಕರಣ ದಾಖಲಾಗಿದೆ. ಶಿಕ್ಷಕನಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ ಬಗ್ಗೆ ಶಿಕ್ಷಕ ನೀಡಿರುವ ದೂರು ಆಧರಿಸಿ 22 ಮಂದಿ ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ.

ಅಂದು ಮಧ್ಯಾಹ್ನ ಘಟನೆ ನಡೆದಿದೆ. ಆಗ ನಾನು ಅಧಿವೇಶನದಲ್ಲಿದ್ದೆ. ಸಂಜೆಯೇ ವಿಷಯ ಗೊತ್ತಾಯಿತು. ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯಿಲ್ಲ. ಇದರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.