ADVERTISEMENT

ಹಾವೇರಿ | ಪ್ರತ್ಯೇಕ ಡಿಸಿಸಿ ಬ್ಯಾಂಕ್ ಕನಸಿಗೆ ಜೀವ

‘ಜಿಲ್ಲೆಗೊಂದು ಡಿಸಿಸಿ ಬ್ಯಾಂಕ್’ ಘೋಷಣೆ: ವರದಿ ಕೇಳಿದ ಕೇಂದ್ರ ಸರ್ಕಾರ; 15 ವರ್ಷಗಳ ಹೋರಾಟದ ಫಲ

ಸಂತೋಷ ಜಿಗಳಿಕೊಪ್ಪ
Published 25 ಫೆಬ್ರುವರಿ 2026, 6:34 IST
Last Updated 25 ಫೆಬ್ರುವರಿ 2026, 6:34 IST
ಧಾರವಾಡದಲ್ಲಿರುವ ‘ದಿ ಕರ್ನಾಟಕ ಸೆಂಟ್ರಲ್ ಕೋ–ಆಪರೇಟಿವ್ (ಧಾರವಾಡ)‘ ಬ್ಯಾಂಕ್ ಕಟ್ಟಡ
ಧಾರವಾಡದಲ್ಲಿರುವ ‘ದಿ ಕರ್ನಾಟಕ ಸೆಂಟ್ರಲ್ ಕೋ–ಆಪರೇಟಿವ್ (ಧಾರವಾಡ)‘ ಬ್ಯಾಂಕ್ ಕಟ್ಟಡ   

ಹಾವೇರಿ: ‘ಹಾವೇರಿ ಜಿಲ್ಲೆಗೆ ಪ್ರತ್ಯೇಕ ಡಿಸಿಸಿ (ಜಿಲ್ಲಾ ಸೆಂಟ್ರಲ್ ಕೋ–ಆಪರೇಟಿವ್) ಬ್ಯಾಂಕ್ ಸ್ಥಾಪಿಸಬೇಕು’ ಎಂದು ಒತ್ತಾಯಿಸಿ ಜಿಲ್ಲೆಯ ಜನರು ನಡೆಸುತ್ತಿದ್ದ ಹೋರಾಟಕ್ಕೆ ಸ್ಪಂದನೆ ಸಿಕ್ಕಿದೆ. ‘ಜಿಲ್ಲೆಗೊಂದು ಡಿಸಿಸಿ ಬ್ಯಾಂಕ್’ ಸ್ಥಾಪಿಸಲು ಕೇಂದ್ರ ಸರ್ಕಾರ ಪ್ರಕ್ರಿಯೆ ಆರಂಭಿಸಿದ್ದು, ಜಿಲ್ಲೆಯ ಜನರ ಕನಸಿಗೆ ಜೀವ ಬಂದಂತಾಗಿದೆ.

ರಾಜ್ಯದ 18 ಜಿಲ್ಲೆಗಳನ್ನು ಒಳಗೊಂಡು 8 ಡಿಸಿಸಿ ಬ್ಯಾಂಕ್‌ಗಳು ಸದ್ಯ ಕಾರ್ಯನಿರ್ವಹಿಸುತ್ತಿವೆ. ಹಾವೇರಿ, ಗದಗ ಹಾಗೂ ಧಾರವಾಡ ಜಿಲ್ಲೆಯನ್ನು ಒಳಗೊಂಡು, ‘ದಿ ಕರ್ನಾಟಕ ಸೆಂಟ್ರಲ್ ಕೋ–ಆಪರೇಟಿವ್ (ಧಾರವಾಡ)‘ ಬ್ಯಾಂಕ್ ಕೆಲಸ ಮಾಡುತ್ತಿದೆ. ಹಾವೇರಿ ಜಿಲ್ಲೆಯ ಜನರ ಅನುಕೂಲದ ಉದ್ದೇಶದಿಂದ, ಹಾವೇರಿ ಜಿಲ್ಲೆಯಲ್ಲಿಯೇ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪಿಸುವಂತೆ 15 ವರ್ಷಗಳಿಂದ ಹೋರಾಟ ಶುರುವಾಗಿದೆ. ರೈತ ಸಂಘಟನೆಯವರು ಸಹ ಬೀದಿಗಿಳಿದು ಆಗಾಗ ಹೋರಾಟ ಮಾಡುತ್ತಿದ್ದಾರೆ.

ಅಖಂಡ ಧಾರವಾಡ ಜಿಲ್ಲೆಯಿಂದ ವಿಭಜಿಸಿ ಪ್ರತ್ಯೇಕವಾಗಿ ಹಾವೇರಿ ಹಾಗೂ ಗದಗ ಜಿಲ್ಲೆ ರಚಿಸಲಾಗಿದೆ. ಹೀಗಾಗಿ, ಪ್ರತ್ಯೇಕ ಡಿಸಿಸಿ ಬ್ಯಾಂಕ್‌ ಸ್ಥಾಪಿಸುವಂತೆಯೂ ಜನರು ಆಗ್ರಹಿಸುತ್ತಿದ್ದರು. ಪ್ರತ್ಯೇಕ ಡಿಸಿಸಿ ಬ್ಯಾಂಕ್‌ ಆರಂಭಿಸಲು ಅನುಮತಿ ನೀಡುವಂತೆ ನಬಾರ್ಡ್‌ ಮೂಲಕ ಕೇಂದ್ರ ಸರ್ಕಾರಕ್ಕೂ ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು.

ADVERTISEMENT

ಮನವಿ ಪರಿಶೀಲಿಸಿದ್ದ ಕೇಂದ್ರ ಸರ್ಕಾರ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ನಿಯಮಾವಳಿ ಪ್ರಕಾರ ಪ್ರತ್ಯೇಕ ಡಿಸಿಸಿ ಬ್ಯಾಂಕ್‌ಗೆ ಅನುಮತಿ ನೀಡಲು ಸಾಧ್ಯವಿಲ್ಲವೆಂದು ತಿರಸ್ಕರಿಸಿತ್ತು. ಈಗ ಸಹಕಾರ ಸಚಿವ ಅಮಿತ್ ಶಾ ಅವರು ‘ಜಿಲ್ಲೆಗೊಂದು ಡಿಸಿಸಿ ಬ್ಯಾಂಕ್’ ಸ್ಥಾಪಿಸುವ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಅದರನ್ವಯ, ಹೊಸ ಡಿಸಿಸಿ ಬ್ಯಾಂಕ್ ಸ್ಥಾಪಿಸಲು ಸಕಲ ಮಾಹಿತಿ ನೀಡುವಂತೆ ಸೂಚಿಸಿ ರಾಜ್ಯದ ಧಾರವಾಡ ಸೇರಿದಂತೆ ಎಂಟು ಡಿಸಿಸಿ ಬ್ಯಾಂಕ್‌ಗಳ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.

ಹಾವೇರಿ ಜಿಲ್ಲೆ ಅರ್ಹ: ‘ದಿ ಕರ್ನಾಟಕ ಸೆಂಟ್ರಲ್ ಕೋ–ಆಪರೇಟಿವ್ (ಧಾರವಾಡ) ಬ್ಯಾಂಕ್‌ ವ್ಯಾಪ್ತಿಯಲ್ಲಿ ಹಾವೇರಿ ಜಿಲ್ಲೆಯಿಂದ ಏಳು ಮಂದಿ ಸದಸ್ಯರಿದ್ದಾರೆ. ಜಿಲ್ಲೆಯಲ್ಲಿ 224 ಸೊಸೈಟಿಗಳಿದ್ದು, ಆರ್ಥಿಕ ವಹಿವಾಟು ಹಾಗೂ ಸಾಲ ವಸೂಲಾತಿ ಉತ್ತಮವಾಗಿದೆ. ಕೇಂದ್ರ ಸರ್ಕಾರದ ಷರತ್ತು ಪ್ರಕಾರ, ಪ್ರತ್ಯೇಕ ಡಿಸಿಸಿ ಬ್ಯಾಂಕ್ ಆಗುವ ಎಲ್ಲ ಅರ್ಹತೆ ಜಿಲ್ಲೆಗಿದೆ’ ಎಂದು ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಾವೇರಿ ಜಿಲ್ಲಾ ಸೆಂಟ್ರಲ್ ಕೋ–ಆಪರೇಟಿವ್ ಬ್ಯಾಂಕ್’ ಸ್ಥಾಪನೆಗಾಗಿ 2014ರ ಸಪ್ತಾಹ ಕಾರ್ಯಕ್ರಮದ ಮೂಲಕ ಪಕ್ಷಾತೀತ ಹೋರಾಟ ಶುರುವಾಗಿತ್ತು. ಅಂದಿನಿಂದ ಇಂದಿನವರೆಗೂ ಹೋರಾಟ ಚಾಲ್ತಿಯಲ್ಲಿದೆ. ಪ್ರತ್ಯೇಕ ಬ್ಯಾಂಕ್‌ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಆರ್‌ಬಿಐ ನಿಯಮಾವಳಿ ನೆಪದಲ್ಲಿ ಅವಕಾಶ ನೀಡಿರಲಿಲ್ಲ. ಈಗ, ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ‘ಜಿಲ್ಲೆಗೊಂದು ಡಿಸಿಸಿ ಬ್ಯಾಂಕ್’ ಘೋಷಣೆ ಮಾಡಿದ್ದಾರೆ. ಕನಸು ನನಸಾಗುವ ಕಾಲ ಬಂದಿದೆ’ ಎಂದರು.

‘ಪ್ರತ್ಯೇಕ ಬ್ಯಾಂಕ್ ಸ್ಥಾಪನೆಗಾಗಿ, 10 ರಿಂದ 12 ಷರತ್ತು ವಿಧಿಸಲಾಗಿದೆ. ಎಲ್ಲ ಷರತ್ತುಗಳಿಗೂ ಹಾವೇರಿ ಅರ್ಹತೆ ಪಡೆದಿದೆ. ಸುಸಜ್ಜಿತ ಕಟ್ಟಡ ಹಾಗೂ ಖುಲ್ಲಾ ಪ್ರದೇಶದಲ್ಲಿ 4 ಗುಂಟೆ ಜಾಗವೂ ಲಭ್ಯವಿದೆ. ಮೂಲ ಸೌಕರ್ಯಕ್ಕೂ ಅವಕಾಶವಿದೆ’ ಎಂದರು.

‘ಜಿಲ್ಲೆಯ ಜನರು ಬ್ಯಾಂಕ್‌ನ ಪ್ರತಿಯೊಂದು ಕೆಲಸಕ್ಕೂ ಧಾರವಾಡಕ್ಕೆ ಹೋಗಬೇಕಾದ ಅನಿವಾರ್ಯತೆ ಇದೆ. ಪ್ರತ್ಯೇಕ ಡಿಸಿಸಿ ಬ್ಯಾಂಕ್ ನಿರ್ಮಾಣವಾದರೆ, ಜಿಲ್ಲೆಯಲ್ಲೇ ಸೇವೆ ಸಿಗಲಿದೆ. ಸುಸಜ್ಜಿತ ಕಟ್ಟಡದಲ್ಲಿ ವ್ಯವಸ್ಥಾಪಕ ನಿರ್ದೇಶಕ, ಜನರಲ್ ಮ್ಯಾನೇಜರ್, ಕ್ಲರ್ಕ್, ಸಾಲ ವಸೂಲಿಗಾರರು ಹಾಗೂ ಇತರೆ ಎಲ್ಲ ಸಿಬ್ಬಂದಿ ಲಭ್ಯವಾಗಲಿದ್ದಾರೆ’ ಎಂದು ಹೇಳಿದರು. 

ಹಾವೇರಿ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಹಾಗೂ ಡಿಸಿಸಿ ಬ್ಯಾಂಕ್ ಕನಸು ಕಂಡಿದ್ದೆ. ಹೋರಾಟವನ್ನೂ ಮಾಡಿದ್ದೆ. ಸಿ.ಎಂ. ಆಗಿದ್ದಾಗ ಹಾಲು ಒಕ್ಕೂಟ ಆಯಿತು. ಈಗ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಕನಸು ಈಡೇರುತ್ತಿದೆ
ಬಸವರಾಜ ಬೊಮ್ಮಾಯಿ ಸಂಸದ
ಕೇಂದ್ರ ಸರ್ಕಾರವು ಹಾವೇರಿ ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಘೋಷಣೆ ಮಾಡಿದರೆ ಬ್ಯಾಂಕ್ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರದಿಂದ ವಿಶೇಷ ಅನುದಾನ ಸಿಗುವ ಭರವಸೆಯಿದೆ. ಅನುದಾನ ತರಲು ಒಗ್ಗಟ್ಟಿನಿಂದ ಪ್ರಯತ್ನಿಸುತ್ತೇವೆ
ಕೊಟ್ರೇಶಪ್ಪ ಬಸೇಗಣ್ಣಿ ಕೆಸಿಸಿ ಬ್ಯಾಂಕ್ ನಿರ್ದೇಶಕ
ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪನೆಗೆ ಪ್ರಕ್ರಿಯೆ ಆರಂಭಿಸಿರುವುದು ಸ್ವಾಗತಾರ್ಹ. ಇದು ಕೇವಲ ಘೋಷಣೆಯಾಗದೇ ಅನುಷ್ಠಾನಕ್ಕೆ ಬರಬೇಕು. ರೈತರಿಗೆ ₹ 5 ಲಕ್ಷವರೆಗೂ ಸಾಲ ಸಿಗಬೇಕು
ಮಲ್ಲಿಕಾರ್ಜುನ ಬಳ್ಳಾರಿ ರೈತ ಮುಖಂಡ

‘ತೀರ್ಮಾನ ಕೈಗೊಳ್ಳದ ರಾಜ್ಯ ಸರ್ಕಾರ’

‘ಒಂದು ದಶಕದ ನಮ್ಮ ಹೋರಾಟದಿಂದ ಪ್ರತ್ಯೇಕ ಡಿಸಿಸಿ ಬ್ಯಾಂಕ್‌ ನಿರ್ಮಾಣ ಕನಸು ನನಸಾಗುತ್ತಿದೆ. ಇದಕ್ಕೆ ಸಹಕಾರ ನೀಡುತ್ತಿರುವ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು. ಪ್ರಕಟಣೆ ನೀಡಿರುವ ಅವರು ‘ನಬಾರ್ಡ್‌ನ ಜನರಲ್ ಮ್ಯಾನೇಜರ್ ಅವರು ರಿಜಿಸ್ಟ್ರಾರ್ ಕೋ ಆಪರೇಟಿವ್ ಸೊಸೈಟಿಗೆ 2025ರ ಅಕ್ಟೋಬರ್ 30ರಂದು ಪತ್ರ ಬರೆದಿದ್ದಾರೆ. ಧಾರವಾಡ ಹಾವೇರಿ ಗದಗ ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಮಾಡುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ’ ಎಂದರು. ‘ಕೇಂದ್ರ ಸರ್ಕಾರ ಒಂದು ಜಿಲ್ಲೆಗೆ ಒಂದು ಬ್ಯಾಂಕ್ ತೀರ್ಮಾನ ಕೈಗೊಂಡಿದೆ. ಆದರೆ ರಾಜ್ಯ ಸರ್ಕಾರ ಬ್ಯಾಂಕ್ ಸ್ಥಾಪನೆ ಕುರಿತು ಯಾವುದೇ ತೀರ್ಮಾನ ತೆಗೆದುಕೊಳ್ಳದಿರುವುದು ಅತ್ಯಂತ ದುರದೃಷ್ಟಕರ. ಸಹಕಾರ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲ ಜಿಲ್ಲೆಗಳ ಬೇಡಿಕೆ ಈಡೇರಿಸಲು ಕ್ರಮ ಕೈಗೊಂಡು ರಾಜ್ಯ ಸರ್ಕಾರದಿಂದ ಸೂಕ್ತ ಶಿಫಾರಸ್ಸು ಮಾಡಬೇಕು’ ಎಂದು ಆಗ್ರಹಿಸಿದರು. ‘ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಜನರಲ್ ಮ್ಯಾನೇಜರ್ ಜೊತೆಗೆ ಮಾತನಾಡಿದ್ದೇನೆ. ಬರುವ ತಿಂಗಳು ಆಡಳಿತ ಮಂಡಳಿ ಸಭೆಯಿದೆ. ಎಲ್ಲ ಶಿಫಾರಸ್ಸುಗಳಿಗೆ ಒಪ್ಪಿಗೆ ಸೂಚಿಸಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲು ಚರ್ಚಿಸಲಾಗುವುದೆಂದು ತಿಳಿಸಿದ್ದಾರೆ. ಎಲ್ಲ ಪ್ರಕ್ರಿಯೆಯು ನಿಗದಿತ ದಿನದೊಳಗೆ ಮುಕ್ತಾಯಗೊಂಡರೆ ಮುಂಬರುವ ಆರ್ಥಿಕ ವರ್ಷದಲ್ಲಿಯೇ ಹಾವೇರಿಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಆಗುವುದು ನಿಶ್ಚಿತ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.