
ಹಾವೇರಿ: ‘ಅನುಭಾವದ ಜೀವನಕ್ಕೆ ನೀತಿಸಂಹಿತೆಯನ್ನು ಹಾಕಿಕೊಟ್ಟವರು 12ನೇ ಶತಮಾನದ ಬಸವಾದಿ ಶಿವಶರಣರು. ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸಿದಾಗ ಮಾತ್ರ ನರನು ಹರನಾಗುತ್ತಾನೆ’ ಎಂದು ಬೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಹೇಳಿದರು.
ನಗರದ ಸಿಂದಗಿ ಮಠದಲ್ಲಿ ‘ಲಿಂಗೈಕ್ಯ ಶಾಂತವೀರ ಪಟ್ಟಾಧ್ಯಕ್ಷರ 46ನೇ ಪುಣ್ಯ ಸ್ಮರಣೋತ್ಸವ’ದ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಮಠಾಧೀಶರಾದವರು ಸಮಾಜದ ಮುಖ್ಯವಾಹಿನಿಯಲ್ಲಿ ನಿಂತು, ತಮ್ಮ ಆತ್ಮೋನ್ನತಿ ಮಾಡಿಕೊಳ್ಳುವುದರ ಜತೆಗೆ ಸಮಾಜದ ಅಂಕು ಡೊಂಕುಗಳನ್ನು ತಿದ್ದಬೇಕು. ಭಕ್ತರಿಗೆ ಸನ್ಮಾರ್ಗವನ್ನು ತೋರುವ ಜವಾಬ್ದಾರಿಯನ್ನು ಹೊಂದಿರಬೇಕು. ಅಂಥ ಸಮಾಜೋದ್ಧಾರಕ ಕಾರ್ಯವನ್ನು ಮಾಡಿದವರು ಲಿಂ. ಸಿಂದಗಿ ಶಾಂತವೀರ ಪಟ್ಟಾಧ್ಯಕ್ಷರು, ಶಾಂತವೀರಶ್ರೀಯವರು. ನೈತಿಕ ನಡೆ ನುಡಿಗಳಿಂದ ಜ್ವಲಂತ ಜ್ಯೋತಿಗಳಾಗಿದ್ದಾರೆ. ಅವರ ನಡೆ, ನುಡಿ ನಮ್ಮ ಜೀವನದ ಮುನ್ನುಡಿ ಹಾಗೂ ಬಾಳಿನ ಕನ್ನಡಿಯಾಗಬೇಕು. ಶಾಂತವೀರ ಸ್ವಾಮೀಜಿಯವರ ಸಾಮಾಜಿಕ ಕಳಕಳಿ ಅನನ್ಯ. ಅವರ ಆದರ್ಶದ ಜೀವನ ನಮಗೆ ದಾರಿದೀಪ’ ಎಂದರು.
ಮುಧೋಳ ಸಿದ್ದಾರೂಢ ಶಿವಯೋಗಾಶ್ರಮದ ಸಿದ್ದರಾಮ ಸ್ವಾಮೀಜಿ, ಹೋತನಹಳ್ಳಿ ಸಿಂದಗಿ ಮಠದ ಶಂಭುಲಿಂಗ ಪಟ್ಟಾಧ್ಯಕ್ಷರು ಸಾನ್ನಿಧ್ಯ ವಹಿಸಿದ್ದರು.
ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಸಾಧಕರನ್ನು ಸನ್ಮಾನಿಸಲಾಯಿತು. ದಾವಣಗೆರೆ ವೀರೇಶ್ವರ ಪುಣ್ಯಾಶ್ರಮದ ಆನಂದ ಪಾಟೀಲ್ ಅವರಿಂದ ವಿಶೇಷ ಸಂಗೀತ ಕಾರ್ಯಕ್ರಮ ನಡೆಯಿತು. ಬಾಲ ನೃತ್ಯ ಕಲಾವಿದೆ ಅದ್ವಿತಿ ವಿಶಾಲ್ ಕೊಪ್ಪಳ ಅವರು ಭರತನಾಟ್ಯ ಪ್ರದರ್ಶಿಸಿದರು.
ಸಿಂದಗಿ ಮಠದ ಸಂಚಾಲಕ ಶಿವಬಸಯ್ಯ ಆರಾಧ್ಯಮಠ, ಚನ್ನಬಸಯ್ಯ ಹಿರೇಮಠ, ಮಹಾಂತೇಶ್ ಹಿರೇಮಠ, ರಾಮಾಪುರ ಶಾಸ್ತ್ರಿ, ವೀರಣ್ಣ ಮಹಾರಾಜಪೇಟೆ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.