ಹಾವೇರಿ: ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹ್ಮದ್ ಖಾನ್ ಪಠಾಣ ಪರ ಸಚಿವರು, ಶಾಸಕರು ಸೇರಿ ಇಡೀ ಸರ್ಕಾರವೇ ಪ್ರಚಾರದ ಕಣಕ್ಕೆ ಇಳಿದಿದೆ. ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರ ತಂದೆ, ಸಂಸದ ಬಸವರಾಜ ಬೊಮ್ಮಾಯಿ ಮತ್ತು ತಾಯಿ ಚನ್ನಮ್ಮ ಮಾತ್ರ ಪ್ರಚಾರ ನಡೆಸಿದ್ದಾರೆ.
ಸಚಿವರಾದ ಸತೀಶ ಜಾರಕಿಹೊಳಿ, ಶಿವಾನಂದ ಪಾಟೀಲ ಅವರು ಕ್ಷೇತ್ರದಲ್ಲೇ ಮೊಕ್ಕಾಂ ಹೂಡಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ ಶಿಗ್ಗಾವಿ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಅವರೆಲ್ಲರೂ ಶಿಗ್ಗಾವಿ ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದಾರೆ.
ಸಚಿವರಾದ ಎಚ್.ಕೆ. ಪಾಟೀಲ, ಜಮೀರ್ ಅಹ್ಮದ್ ಖಾನ್, ಆರ್.ಬಿ. ತಿಮ್ಮಾಪುರ, ಎಸ್.ಎಸ್. ಮಲ್ಲಿಕಾರ್ಜುನ, ಲಕ್ಷ್ಮಿ ಹೆಬಾಳ್ಕರ್, ಮಧು ಬಂಗಾರಪ್ಪ, ಭೈರತಿ ಸುರೇಶ್, ಶಿವರಾಜ ತಂಗಡಗಿ, ಮಂಕಾಳ ವೈದ್ಯ, ರಹೀಂಖಾನ್, ಡಿ. ಸುಧಾಕರ್, ಶರಣಪ್ರಕಾಶ ಪಾಟೀಲ, ದಿನೇಶ ಗುಂಡೂರಾವ್ ಅವರು ಚುನಾವಣೆ ಹಾಗೂ ಪ್ರಚಾರದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಇದರ ಜೊತೆಯಲ್ಲಿ ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರ ದಂಡೇ ಶಿಗ್ಗಾವಿ ಕಣದಲ್ಲಿ ಪ್ರಚಾರಕ್ಕೆ ಇಳಿಯುವ ಬಗ್ಗೆ ಕಾಂಗ್ರೆಸ್ ಪಟ್ಟಿಯನ್ನೂ ಬಿಡುಗಡೆ ಮಾಡಿದೆ.
ಜಿಲ್ಲೆಯ ಶಿಗ್ಗಾವಿ ಕ್ಷೇತ್ರದಲ್ಲಿ ಮಾತ್ರ ಕಮಲ ಅರಳಿಸಿದ್ದ ಬಸವರಾಜ ಬೊಮ್ಮಾಯಿ, ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪರ ಇಡೀ ಸರ್ಕಾರವೇ ಪ್ರಚಾರಕ್ಕೆ ಇಳಿದರೆ, ಬಸವರಾಜ ಬೊಮ್ಮಾಯಿ ಅವರು ಮಾತ್ರ ತಮ್ಮದೇ ಕಾರ್ಯತಂತ್ರದ ಮೂಲಕ ಮಿಂಚಿನ ಸಂಚಾರ ನಡೆಸಿದ್ದಾರೆ.
ಕ್ಷೇತ್ರದಲ್ಲಿರುವ ಪ್ರತಿಯೊಬ್ಬ ಸಮುದಾಯದ ಮುಖಂಡರ ಮನೆಗೆ ಹಾಗೂ ಗ್ರಾಮಗಳಿಗೆ ಭೇಟಿ ನೀಡುತ್ತಿರುವ ಬಸವರಾಜ ಬೊಮ್ಮಾಯಿ, ಪ್ರತಿಯೊಬ್ಬರ ಮಾತುಗಳನ್ನು ಆಲಿಸುತ್ತಿದ್ದಾರೆ. ಸಮುದಾಯಕ್ಕೆ ನೀಡಿರುವ ಕೊಡುಗೆಗಳು ಹಾಗೂ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದಾರೆ.
‘ಭರತ್ ಬೊಮ್ಮಾಯಿ ಅವರು ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ನಡೆಸಿದ್ದ ರೋಡ್ ಶೋನಲ್ಲಿ ಬಿಜೆಪಿ ರಾಜ್ಯ ನಾಯಕರು ಹಾಗೂ ಅಕ್ಕಪಕ್ಕದ ಜಿಲ್ಲೆಗಳ ಶಾಸಕರು ಭಾಗವಹಿಸಿದ್ದರು. ಇದಾದ ನಂತರ, ಕ್ಷೇತ್ರದ ಗ್ರಾಮಗಳಲ್ಲಿ ಅವರು ಯಾರೊಬ್ಬರೂ ಪ್ರಚಾರ ನಡೆಸಿಲ್ಲ. ಬೊಮ್ಮಾಯಿ ಕುಟುಂಬ ಮಾತ್ರ ಪ್ರಚಾರದ ಕಣಕ್ಕೆ ಇಳಿದಿದೆ. ರಾಜ್ಯ ನಾಯಕರನ್ನು ಗ್ರಾಮಗಳಲ್ಲಿ ನಾವು ನೋಡಿಲ್ಲ’ ಎಂದು ಮತದಾರರು ಹೇಳುತ್ತಾರೆ.
ಶಿಗ್ಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಲೆ ಇದೆ. ನಮ್ಮ ನಾಯಕರ ದಂಡೇ ಕ್ಷೇತ್ರಕ್ಕೆ ಬಂದಿದ್ದು ಸರ್ಕಾರದ ಯೋಜನೆಗಳನ್ನು ತಿಳಿಸಿ ಮತ ಕೇಳುತ್ತಿದ್ದಾರೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆಸಂಜೀವಕುಮಾರ ನೀರಲಗಿ ಅಧ್ಯಕ್ಷ ಕಾಂಗ್ರೆಸ್ ಜಿಲ್ಲಾ ಘಟಕ ಹಾವೇರಿ
ದೀಪಾವಳಿ ಬಳಿಕ ರಾಜ್ಯ ನಾಯಕರು ಮತ್ತು ಶಾಸಕ ಶಿಗ್ಗಾವಿ ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡುವರು. ಸದ್ಯಕ್ಕೆ ಮೊದಲ ಹಂತದ ಪ್ರಚಾರ ನಡೆದಿದೆ. ಭರತ್ ಪರ ಕ್ಷೇತ್ರದ ಜನರೇ ಪ್ರಚಾರ ಮಾಡುತ್ತಿದ್ದಾರೆ.ಬಸವರಾಜ ಬೊಮ್ಮಾಯಿ ಸಂಸದ
ನಾಮಪತ್ರ ಹಿಂಪಡೆಯುವೆ: ಖಾದ್ರಿ
ಹುಬ್ಬಳ್ಳಿ: ‘ಸಚಿವ ಜಮೀರ್ ಅಹ್ಮದ್ ಖಾನ್ ಜತೆ ಕ್ಷೇತ್ರಕ್ಕೆ ತೆರಳಿ ಬುಧವಾರ ನಾಮಪತ್ರ ಹಿಂಪಡೆಯುವೆ’’ ಎಂದು ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಸೈಯದ್ ಅಜ್ಜಂಪೀರ ಖಾದ್ರಿ ಹೇಳಿದರು.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಟಿಕೆಟ್ ಸಿಗದಿದ್ದಕ್ಕೆ ಅಸಮಾಧಾನವಾಗಿತ್ತು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಇತರ ನಾಯಕರು ನನ್ನ ಜತೆ ಮಾತನಾಡಿದ್ದಾರೆ. ಅಭಿಮಾನಿಗಳ ಒತ್ತಾಯಕ್ಕೆ ನಾಮಪತ್ರ ಸಲ್ಲಿಸಿದ್ದೆ’ ಎಂದರು.
‘ನಾನು ಸ್ಪರ್ಧಿಸಿದರೆ ಶಿಗ್ಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಹಿನ್ನಡೆ
ಯಾಗಬಹುದು. ಹೀಗಾಗಿ ನಾಮಪತ್ರ ವಾಪಸ್ ಪಡೆದು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುವೆ’ ಎಂದರು.
ಸಚಿವ ಜಮೀರ್ ಅಹ್ಮದ್ ಖಾನ್ ಮಾತನಾಡಿ, ‘ಶಿಗ್ಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಿಸಲು ಪಣ ತೊಟ್ಟಿದ್ದೇವೆ. ಖಾದ್ರಿ ಅವರು ಸ್ವ–ಇಚ್ಛೆಯಿಂದ ನಾಮಪತ್ರ ಹಿಂಪಡೆಯುವರು’ ಎಂದರು.
ನಾಮಪತ್ರ ಹಿಂಪಡೆಯಲು ಬುಧವಾರ ಕೊನೆಯ ದಿನವಾಗಿದ್ದು, ಖಾದ್ರಿ ಅವರು ನಾಮಪತ್ರ ವಾಪಸ್ ಪಡೆಯುವರೇ ಅಥವಾ ಇಲ್ಲವೇ ಎಂಬ ಬಗ್ಗೆ ಕ್ಷೇತ್ರದಲ್ಲಿ ಚರ್ಚೆ ನಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.