ADVERTISEMENT

ಹಾವೇರಿ: ಅಕ್ಷರ ಕಲಿಸಿದ ಗುರುಗಳಿಗೆ ಪಾದಪೂಜೆ

ಹಂದಿಗನೂರಿನ ಎಸ್‌.ಎಸ್‌.ಬಿ. ಮಾಮಲೇದೇಸಾಯಿ ಪ್ರೌಢಶಾಲೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 4:04 IST
Last Updated 24 ನವೆಂಬರ್ 2025, 4:04 IST
ಹಾವೇರಿ ತಾಲ್ಲೂಕಿನ ಹಂದಿಗನೂರಿನ ಎಸ್‌.ಎಸ್‌.ಬಿ. ಮಾಮಲೇದೇಸಾಯಿ ಪ್ರೌಢಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಶಿಕ್ಷಕರು ಹಾಗೂ ಹಳೇ ವಿದ್ಯಾರ್ಥಿಗಳು
ಹಾವೇರಿ ತಾಲ್ಲೂಕಿನ ಹಂದಿಗನೂರಿನ ಎಸ್‌.ಎಸ್‌.ಬಿ. ಮಾಮಲೇದೇಸಾಯಿ ಪ್ರೌಢಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಶಿಕ್ಷಕರು ಹಾಗೂ ಹಳೇ ವಿದ್ಯಾರ್ಥಿಗಳು   

ಹಾವೇರಿ: ತಾಲ್ಲೂಕಿನ ಹಂದಿಗನೂರಿನ ಎಸ್‌.ಎಸ್‌.ಬಿ. ಮಾಮಲೇದೇಸಾಯಿ ಪ್ರೌಢಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಸಮಾರಂಭವು ಹಳೇ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸಂಭ್ರಮಕ್ಕೆ ಸಾಕ್ಷಿಯಾಯಿತು.

2001ರಿಂದ 2004ರ ಅವಧಿಯಲ್ಲಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದ ವಿದ್ಯಾರ್ಥಿಗಳು, ಅಕ್ಷರ ಕಲಿಸಿದ ಗುರುಗಳಿಗೆ ಪಾದಪೂಜೆ ಮಾಡಿ ನಮನ ಸಲ್ಲಿಸಿದರು.

ಹಂದಿಗನೂರು ಗ್ರಾಮದ ಆಂಜನೇಯ ದೇವಸ್ಥಾನದಿಂದ ವಿವಿಧ ವಾದ್ಯ, ವೈಭವಗಳೊಂದಿಗೆ ಗುರುಗಳ ಮೆರವಣಿಗೆ ಭವ್ಯವಾಗಿ ನಡೆಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆಯು ಎಸ್.ಎಸ್.ಬಿ. ಮಾಮಲೇದೇಸಾಯಿ ಪ್ರೌಢಶಾಲೆ ಆವರಣದ ಕಾರ್ಯಾಕ್ರಮದ ವೇದಿಕೆ ತಲುಪಿತು. ನಂತರ, ಸಭಾ ಕಾರ್ಯಕ್ರಮ ಜರುಗಿತು.

ADVERTISEMENT

ಶಾಲಾ ದಿನಗಳ ನಂತರ ವಿವಿಧ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಿರುವ ಹಾಗೂ ಗೃಹಿಣಿಯಾಗಿರುವ ವಿದ್ಯಾರ್ಥಿಗಳು, ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ಬಾಲ್ಯದ ದಿನಗಳನ್ನು ನೆನೆದರು. ತಾವು ಆಡಿ ಬೆಳೆದ ಶಾಲೆಯಲ್ಲಿ ಓಡಾಡಿದರು. ಮೇಜಿನ ಮೇಲೆ ಕುಳಿತು, ಶಾಲಾ ದಿನಗಳನ್ನು ನೆನೆಪು ಮಾಡಿಕೊಂಡರು. ಸ್ನೇಹಿತರು ಹಾಗೂ ಗುರುಗಳ ಜೊತೆಗಿನ ಪಾಠ, ಹರಟೆ ಎಲ್ಲವನ್ನೂ ನೆನೆದು ಖುಷಿಪಟ್ಟರು.

ಇದೇ ಸಂದರ್ಭದಲ್ಲಿ 13 ಶಿಕ್ಷಕರಿಗೆ ವಿದ್ಯಾರ್ಥಿಗಳು ಪಾದಪೂಜೆ ಮಾಡಿ ಸತ್ಕರಿಸಿದರು. ಶಾಲಾ ಸಿಬ್ಬಂದಿಗೂ ಸನ್ಮಾನ ಮಾಡಲಾಯಿತು.

ಗುರುವಿನ ಆಶೀರ್ವಾದದಿಂದ ಉನ್ನತ ಸ್ಥಾನ: ‘ಜೀವನದಲ್ಲಿ ಗುರಿ, ಛಲ ಹಾಗೂ ಗುರುವಿನ ಆಶೀರ್ವಾದವಿದ್ದರೆ ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಲು ಸಾಧ್ಯ’ ಎಂದು ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಸ್ವಾಮೀಜಿ ಹೇಳಿದರು.

ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ‘ನಾವು ಗಳಿಸಿದ ಆಸ್ತಿ, ಅಂತಸ್ತು, ಸಂಪತ್ತು ಯಾವುದೂ ಕೊನೆಯವರೆಗೆ ಉಳಿಯುವುದಿಲ್ಲ. ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜೊತೆಗಿರುತ್ತದೆ’ ಎಂದರು.

‘ಉದ್ಯೋಗ ಇನ್ನಿತರ ಕಾರಣಗಳಿಂದ ಹುಟ್ಟಿದ ಊರು ಬಿಟ್ಟು ಬೇರೆಲ್ಲೋ ನೆಲೆಸಿದವರು ತಮ್ಮ ದಿನನಿತ್ಯದ ಒತ್ತಡ ಜೀವನದಲ್ಲಿ ಹುಟ್ಟಿದ ಊರು, ಹೆತ್ತವರು, ಅಕ್ಷರ ಕಲಿಸಿದ ಗುರುಗಳನ್ನು ನೆನೆಸಿಕೊಳ್ಳಲಾಗದ ಸ್ಥಿತಿಗೆ ತಲುಪಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಿರಿಯ ವಿದ್ಯಾರ್ಥಿಗಳೆಲ್ಲರನ್ನು ಒಟ್ಟುಗೂಡಿಸುವ, ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕುವಂಥ ಸುಂದರ ಕ್ಷಣಗಳಿಗೆ ಸಾಕ್ಷಿಯಾದ ಇಂತಹ ಕಾರ್ಯಕ್ರಮ ಇಂದಿನ ದಿನಗಳಲ್ಲಿ ಅಗತ್ಯವಿದೆ’ ಎಂದು ಹೇಳಿದರು.

ಜ್ಞಾನ ಪ್ರಸಾರ ಸಂಸ್ಥೆ ಕಾರ್ಯಾಧ್ಯಕ್ಷ ಅರವಿಂದಣ್ಣ ಮಾಮಲೇದೇಸಾಯಿ ಮಾತನಾಡಿ, ‘ಪ್ರಪಂಚದಲ್ಲಿ ಗುರುವಿಗೆ ಇರುವ ಸ್ಥಾನ ಅತ್ಯಂತ ಅಮೂಲ್ಯವಾದದ್ದು. ದೇವರು, ತಾಯಿ ನಂತರ ಸ್ಥಾನ ಇರುವುದೇ ಗುರುಗಳಿಗೆ. ಆ ಕಾಯಕವನ್ನು ಪ್ರತಿಯೊಬ್ಬ ಶಿಕ್ಷಕರು ಸಮಾಜದಲ್ಲಿ ನಿರ್ವಹಿಸಿಕೊಂಡು ಬರುತ್ತಿದ್ದಾರೆ’ ಎಂದರು.

ಶಾಲೆಯ ಮುಖ್ಯ ಶಿಕ್ಷಕ ಸಿ.ಎಸ್. ಮರಳಿಹಳ್ಳಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮೇಶ ಮಾಮಲೇದೇಸಾಯಿ, ಬಿ.ಎ. ಮಾಮಲೇದೇಸಾಯಿ ಇದ್ದರು.

ಹಳೇ ವಿದ್ಯಾರ್ಥಿಗಳು ನಮ್ಮನ್ನು ಸ್ಮರಿಸಿ ಸತ್ಕಾರ ಮಾಡಿರುವುದಕ್ಕೆ ಸಂತೋಷವಾಗಿದೆ. ಇದು ನಮ್ಮ ಜೀವನದಲ್ಲಿ ಸುವರ್ಣ ಅಕ್ಷರದಲ್ಲಿ ಬರೆದಿಡುವ ಕಾರ್ಯಕ್ರಮ
ಎಂ.ಸಿ. ಕೋರಿ ನಿವೃತ್ತ ಶಿಕ್ಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.