ADVERTISEMENT

ಹಾವೇರಿ | ವಸತಿ ಯೋಜನೆಯಲ್ಲಿ ಅಕ್ರಮ ಶಂಕೆ: ವರದಿ ಸಲ್ಲಿಕೆ

* ₹118.78 ಕೋಟಿ ಮೊತ್ತದ 2,000 ಮನೆ ಯೋಜನೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 23:28 IST
Last Updated 30 ಜೂನ್ 2025, 23:28 IST
ವಿಜಯ ಮಹಾಂತೇಶ ದಾನಮ್ಮನವರ  
ವಿಜಯ ಮಹಾಂತೇಶ ದಾನಮ್ಮನವರ     

ಹಾವೇರಿ: ಜಿಲ್ಲೆಯ ಶಿಗ್ಗಾವಿ, ಸವಣೂರು ಹಾಗೂ ಬಂಕಾಪುರ ಪಟ್ಟಣಗಳಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಜಾರಿಗೊಳಿಸಿದ್ದ ವಸತಿ ಯೋಜನೆಯಲ್ಲಿ ಅಕ್ರಮ ನಡೆದಿರುವ ಆರೋಪ ಬಂದಿದ್ದು, ಈ ಬಗ್ಗೆ ಪರಿಶೀಲಿಸಿದ ಸವಣೂರು ಉಪವಿಭಾಗಾಧಿಕಾರಿಯವರು (ಎ.ಸಿ) ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದಾರೆ.

‘ಮೂರು ಪಟ್ಟಣಗಳಲ್ಲಿ 2021ರಲ್ಲಿ ₹ 118.78 ಕೋಟಿ ವೆಚ್ಚದಲ್ಲಿ 2,000 ಮನೆಗಳನ್ನು ನಿರ್ಮಿಸುವ ಕಾಮಗಾರಿ ಕೈಗೊಳ್ಳಲಾಗಿತ್ತು. ಈ ಪೈಕಿ ಕೆಲ ಮನೆಗಳು ಮಾತ್ರ ಪೂರ್ಣಗೊಂಡಿವೆ. ಆದರೆ, ಗುತ್ತಿಗೆದಾರರಿಗೆ ₹ 66.42 ಕೋಟಿ ಬಿಡುಗಡೆ ಮಾಡಲಾಗಿದೆ. ₹ 23.93 ಕೋಟಿ ಬಿಡುಗಡೆ ಬಾಕಿಯಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘350 ಚದರ ಅಡಿ ವಿಸ್ತೀರ್ಣದಲ್ಲಿ ಮಾತ್ರ ನಿಗದಿತ ಮೊತ್ತದಲ್ಲಿ ಮನೆ ನಿರ್ಮಿಸಬೇಕೆಂದು ಗುತ್ತಿಗೆದಾರರಿಗೆ ಷರತ್ತು ವಿಧಿಸಲಾಗಿತ್ತು. ಆದರೆ, ಹಲವು ಫಲಾನುಭವಿಗಳು 350 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಇದು ಗೊತ್ತಿದ್ದರೂ ಗುತ್ತಿಗೆದಾರರು, ಫಲಾನುಭವಿಗಳ ಜೊತೆ ನಿಯಮಬಾಹಿರವಾಗಿ ಒಪ್ಪಂದ ಮಾಡಿಕೊಂಡು ಹಣ ನೀಡಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಜೊತೆಗೆ, ಹಲವು ಫಲಾನುಭವಿಗಳಿಗೆ ಗುತ್ತಿಗೆದಾರರು ಹಣ ನೀಡಿಲ್ಲ’ ಎಂಬ ಮಾಹಿತಿಯೂ ವರದಿಯಲ್ಲಿದೆ.

ADVERTISEMENT

‘ಮನೆಗಳು ಪೂರ್ಣಪ್ರಮಾಣದಲ್ಲಿ ಮುಗಿಯದಿದ್ದರೂ ಮುಗಿದಿರುವುದಾಗಿ ಹೇಳಿ ಗುತ್ತಿಗೆದಾರರು ಬಾಕಿ ಹಣ ಮಂಜೂರು ಮಾಡುವಂತೆ ಕೋರುತ್ತಿದ್ದಾರೆ. ಯೋಜನೆಯ ಸ್ಥಳ ಪರಿಶೀಲಿಸಿದಾಗ, ಗುತ್ತಿಗೆದಾರರ ವಿರುದ್ಧ ಫಲಾನುಭವಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮನೆ ಕಟ್ಟಿಕೊಳ್ಳಲು ಗುತ್ತಿಗೆದಾರರು ಸಮರ್ಪಕವಾಗಿ ಸ್ಪಂದಿಸಿಲ್ಲವೆಂದು ದೂರಿದ್ದಾರೆ. ಗುತ್ತಿಗೆದಾರರ ಬಗ್ಗೆ ದೂರುಗಳಿದ್ದರೂ ಹಂತಹಂತವಾಗಿ ಹಣ ಬಿಡುಗಡೆ ಆಗಿರುವುದು ಗೊತ್ತಾಗುತ್ತಿದೆ. ಜೊತೆಗೆ, ಕಾರ್ಮಿಕ ಗೃಹ ಭಾಗ್ಯ ಯೋಜನೆಯಡಿಯಲ್ಲಿಯೂ ಹಣ ಬಿಡುಗಡೆಯಾಗಿದ್ದು, ಇದರ ಹಂಚಿಕೆಯಲ್ಲೂ ಲೋಪವಾಗಿರುವುದು ಪರಿಶೀಲನೆಯಿಂದ ತಿಳಿದಿದೆ. ವಸತಿ ಯೋಜನೆಯ ಎಲ್ಲ ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದೆಂದು ಫಲಾನುಭವಿಗಳಿಗೆ ತಿಳಿಸಲಾಗಿದೆ’ ಎಂದು ಉಲ್ಲೇಖಿಸಲಾಗಿದೆ.

‘ಬೆಂಗಳೂರು ಜಯನಗರದ ನಕ್ಷತ್ರ ಇನ್ಫ್ರಾಸ್ಟ್ರಕ್ಚರ್ ಡೆವೆಲಪ್‌ಮೆಂಟ್ ಕಾರ್ಪೊರೇಷನ್‌ನ ಸೆಲ್ವಿ ಶಣ್ಮುಗ, ಬೆಂಗಳೂರಿನ ಜಿ. ಚಂದ್ರೇಗೌಡ ಹಾಗೂ ಮಂಡ್ಯ ಜಿಲ್ಲೆಯ ನಾಗಮಂಗಲದ ಟಿ.ಎನ್. ಪರಮೇಶ (ಚಿತ್ರಾ ವೆಂಚರ್ಸ್ ಎಲ್‌ಎಲ್‌ಪಿ) ಅವರಿಗೆ ಗುತ್ತಿಗೆ ನೀಡಲಾಗಿತ್ತು. ಯೋಜನೆ ಜಾರಿ ಬಗ್ಗೆ ಉನ್ನತ ತನಿಖೆ ಅಗತ್ಯವಿರುವಂತೆ ಕಾಣುತ್ತಿದೆ’ ಎಂದು ತಿಳಿಸಲಾಗಿದೆ.

ನಗರದಲ್ಲಿ ಏಪ್ರಿಲ್ 8ರಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅಧ್ಯಕ್ಷತೆಯಲ್ಲಿ ನಡೆದಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕರು, ‘ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಪರಸ್ಪರ ಶಾಮೀಲಾಗಿ ವಸತಿ ಯೋಜನೆಯಲ್ಲಿ ಅಕ್ರಮ ಎಸಗಿದ್ದಾರೆ. ಸೂಕ್ತ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದ್ದರು. ಆರೋಪವನ್ನು ಗಂಭೀರವಾಗಿ ಪರಿಗಣಿಸಿದ್ದ ಸಚಿವ, ಪರಿಶೀಲನೆ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗೆ ವಹಿಸಿದ್ದರು. ನಂತರ, ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಜಂಟಿ ಸಮಿತಿ ರಚಿಸಲಾಗಿತ್ತು.

ಶಿಗ್ಗಾವಿ ಸವಣೂರು ಹಾಗೂ ಬಂಕಾಪುರದಲ್ಲಿ ಜಾರಿಯಾದ ವಸತಿ ಯೋಜನೆಯ ವಾಸ್ತವ ಸ್ಥಿತಿ ಬಗ್ಗೆ ಉಪವಿಭಾಗಾಧಿಕಾರಿ ವರದಿ ನೀಡಿದ್ದಾರೆ. ಪರಿಶೀಲನೆ ಹಂತದಲ್ಲಿದೆ
ವಿಜಯ ಮಹಾಂತೇಶ ದಾನಮ್ಮನವರ, ಜಿಲ್ಲಾಧಿಕಾರಿ

ವಸತಿ ಯೋಜನೆ ಕಾಮಗಾರಿ ವಿವರ

  • ಸವಣೂರು: ₹ 43.71 ಕೋಟಿ ವೆಚ್ಚದಲ್ಲಿ 696 ಮನೆಗಳು ಮಂಜೂರಾಗಿದ್ದವು. ಪ್ರತಿ ಮನೆಯ ವೆಚ್ಚ ₹ 7.20 ಲಕ್ಷವಿತ್ತು.  696 ಮನೆಗಳ ಪೈಕಿ ಕೇವಲ 545 ಮನೆಗಳು ಪೂರ್ಣಗೊಂಡಿದ್ದು 151 ಮನೆಗಳ ನಿರ್ಮಾಣ ಪ್ರಗತಿಯಲ್ಲಿದೆ. ₹ 38.22 ಕೋಟಿ ಆರ್ಥಿಕ ಪ‍್ರಗತಿ ಸಾಧಿಸಲಾಗಿದ್ದು ₹ 28.97 ಕೋಟಿ ಮೊತ್ತ ಬಿಡುಗಡೆಯಾಗಿದೆ. ₹ 9.25 ಕೋಟಿ ಬಾಕಿಯಿದೆ’ ಎಂದು ತಿಳಿಸಲಾಗಿದೆ.

  • ಬಂಕಾಪುರ: ₹ 27.76 ಕೋಟಿ ವೆಚ್ಚದಲ್ಲಿ 454 ಮನೆಗಳು ಮಂಜೂರಾಗಿದ್ದವು. ಪ್ರತಿ ಮನೆಗೆ ₹ 7 ಲಕ್ಷವಿತ್ತು. 254 ಮನೆಗಳ ಕಾಮಗಾರಿ ಶುರುವಾಗಿತ್ತು. 100 ಮನೆಗಳು ಮಾತ್ರ ಪೂರ್ಣಗೊಂಡಿದ್ದು 154 ಮನೆಗಳು ಪ್ರಗತಿಯಲ್ಲಿವೆ. ಉಳಿದ 200 ಮನೆಗಳ ನಿರ್ಮಾಣ ತಾಂತ್ರಿಕ ಕಾರಣಗಿಂದ ಶುರುವಾಗಿಲ್ಲ. ₹ 12.32 ಕೋಟಿ ಆರ್ಥಿಕ ಪ್ರಗತಿಯಾಗಿದ್ದು ₹ 7.57 ಕೋಟಿ ಬಿಡುಗಡೆಯಾಗಿದೆ. ₹ 4.75 ಕೋಟಿ ಬಾಕಿಯಿದೆ.

  • ಶಿಗ್ಗಾವಿ: ಮೊದಲ ಹಂತದಲ್ಲಿ ₹ 26.54 ಕೋಟಿ ವೆಚ್ಚದಲ್ಲಿ 500 ಮನೆಗಳು ಮಂಜೂರಾಗಿದ್ದವು. ಪ್ರತಿ ಮನೆಗೆ ₹ 5.31 ಲಕ್ಷವಿತ್ತು. 500 ಮನೆ ನಿರ್ಮಾಣ ಆರಂಭಿಸಿದ್ದರು. 474 ಮನೆಗಳು ಪೂರ್ಣಗೊಂಡಿದ್ದು 26 ಮನೆಗಳು ಪ್ರಗತಿಯಲ್ಲಿವೆ. ₹ 17.92 ಕೋಟಿ ಬಿಡುಗಡೆಯಾಗಿದ್ದು ₹ 7.43 ಕೋಟಿ ಬಾಕಿಯಿದೆ.

  • ಶಿಗ್ಗಾವಿ: ಎರಡನೇ ಹಂತದಲ್ಲಿ ₹ 20.77 ಕೋಟಿ ವೆಚ್ಚದಲ್ಲಿ 350 ಮನೆಗಳು ಮಂಜೂರಾಗಿದ್ದವು. ಪ್ರತಿ ಮನೆಗೆ ₹ 5.89 ಲಕ್ಷವಿತ್ತು. 350 ಮನೆಗಳ ನಿರ್ಮಾಣ ಪ್ರಾರಂಭವಾಗಿ 160 ಮನೆಗಳು ಪೂರ್ಣಗೊಂಡಿವೆ. 190 ಮನೆಗಳು ಪ್ರಗತಿಯಲ್ಲಿವೆ. ₹ 11.96 ಕೋಟಿ ಬಿಡುಗಡೆಯಾಗಿದ್ದು ₹ 2.5 ಕೋಟಿ ಬಾಕಿಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.