ಹಾವೇರಿ: ಮಳೆ ಬಂದರೆ ಎಲ್ಲೆಂದರಲ್ಲಿ ನೀರು ನಿಂತು ಕೆಸರು ಗದ್ದೆಯಾಗುತ್ತಿರುವ ಕ್ರೀಡಾಂಗಣಗಳು, ಹುಲ್ಲು ಬೆಳೆದು ದನಕರುಗಳು ಮೇಯುವ ಸ್ಥಳವಾಗುತ್ತಿವೆ. ಜಿಲ್ಲೆಯಲ್ಲಿ ಸುಸಜ್ಜಿತ ಕ್ರೀಡಾಂಗಣಗಳ ಕೊರತೆ ಇರುವುದರಿಂದ ಕ್ರೀಡಾ ಕ್ಷೇತ್ರದಲ್ಲಿ ಜಿಲ್ಲೆ ಸಾಕಷ್ಟು ಹಿಂದುಳಿದಿರುವುದಾಗಿ ಕ್ರೀಡಾಪಟುಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಹಾವೇರಿ ವಿಶ್ವವಿದ್ಯಾಲಯವಿದೆ. ಹಲವು ಶೈಕ್ಷಣಿಕ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಇದರ ಜೊತೆಯಲ್ಲಿ ಸರ್ಕಾರದ ವಿವಿಧ ಇಲಾಖೆಗಳು, ಖಾಸಗಿ ಕಂಪನಿಗಳು ಸಹ ಕ್ರೀಡೆಯನ್ನು ಪ್ರೋತ್ಸಾಹಿಸುತ್ತಿವೆ. ಆದರೆ, ಕ್ರೀಡೆಯ ಅಭ್ಯಾಸಕ್ಕೆ ಗುಣಮಟ್ಟದ ಕ್ರೀಡಾಂಗಣ ಇಲ್ಲದಿರುವುದು ಜನರ ಆಕ್ರೋಶಕ್ಕೂ ಕಾರಣವಾಗಿದೆ.
ಜಿಲ್ಲಾ ಕೇಂದ್ರ ಎನಿಸಿಕೊಂಡಿರುವ ಹಾವೇರಿಯಲ್ಲಿರುವ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣವು ಅಭಿವೃದ್ಧಿಯಿಂದ ವಂಚಿತವಾಗಿದೆ. ಮಳೆ ಬಂದರೆ ನೀರು ನಿಂತು, ಇಡೀ ಕ್ರೀಡಾಂಗಣವೇ ಕೆಸರು ಗದ್ದೆಯಂತಾಗುತ್ತದೆ. ಪ್ರತಿನಿತ್ಯ ಬೆಳಿಗ್ಗೆ ವಾಯುವಿಹಾರ ಮಾಡಲು ಹಾಗೂ ಓಟದ ಅಭ್ಯಾಸ ನಡೆಸಲು ಜನರು ಕ್ರೀಡಾಂಗಣಕ್ಕೆ ಬಂದು ಹೋಗುತ್ತಾರೆ. ಕೆಸರಿನಲ್ಲೇ ಓಡಾಡಬೇಕಾದ ಅನಿವಾರ್ಯತೆಯೂ ಇದೆ.
‘ಸಿಂಥೆಟಿಕ್ ಟ್ರ್ಯಾಕ್’ ನಿರ್ಮಿಸಬೇಕು ಎಂದು ಹಾವೇರಿ ಜನರು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಸಿಂಥೆಟಿಕ್ ಟ್ರ್ಯಾಕ್ ಮಂಜೂರಾತಿ ಆಗಿರುವುದಾಗಿ ಹೇಳಿಕೊಂಡೇ ಜನಪ್ರತಿನಿಧಿಗಳು ದಿನದೂಡುತ್ತಿದ್ದಾರೆ.
ಈಗ ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ ಆಚರಣೆಗೆ ಸಿದ್ಧತೆ ನಡೆದಿದೆ. ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿಯೇ ರಾಷ್ಟ್ರ ಧ್ವಜಾರೋಹಣ ನಡೆಯಲಿದೆ. ಈ ಕಾರ್ಯಕ್ರಮದ ದಿನದಂದು ಮಾತ್ರ, ತಾತ್ಕಾಲಿಕವಾಗಿ ಕ್ರೀಡಾಂಗಣವನ್ನು ಸ್ವಚ್ಛಗೊಳಿಸಲಾಗುತ್ತದೆ. ಕೆಸರು ಇರುವ ಜಾಗದಲ್ಲಿ ಮಣ್ಣು ಹಾಗೂ ಜಲ್ಲಿಕಲ್ಲು ಹಾಕಲಾಗುತ್ತದೆ. ಆದರೆ, ಕಾರ್ಯಕ್ರಮ ಮುಗಿದ ನಂತರ ಕ್ರೀಡಾಂಗಣದತ್ತ ಯಾರೊಬ್ಬರೂ ತಿರುಗಿ ನೋಡುವುದಿಲ್ಲವೆಂಬ ಆರೋಪವಿದೆ.
‘ಹಾವೇರಿ ಜಿಲ್ಲಾ ಕ್ರೀಡಾಂಗಣ ಹಲವು ಸೌಕರ್ಯಗಳಿಂದ ವಂಚಿತವಾಗಿದೆ. ಮಳೆ ಬಂದರೆ ನೀರು ನಿಂತು ಕೆಸರು ಹೆಚ್ಚಾಗುತ್ತದೆ. ಕ್ರೀಡಾಪಟುಗಳಿಗೆ, ವಾಯುವಿಹಾರಿಗಳಿಗೆ ಹಾಗೂ ಇತರ ಕಾರ್ಯಕ್ರಮ ನಡೆಸುವವರಿಗೆ ಅನಾನೂಕೂಲವಾಗುತ್ತಿದೆ. ಹಾವೇರಿ ಜಿಲ್ಲೆ ರಚನೆಯಾದ ದಿನದಿಂದಲೂ ಈ ಸಮಸ್ಯೆ ಕಾಡುತ್ತಿದೆ’ ಎಂದು ವಾಯುವಿಹಾರಿ ಲಕ್ಷ್ಮಣ ಎಚ್. ಬೇಸರ ಹೊರಹಾಕಿದರು.
‘ಕಲ್ಲು, ಇಟ್ಟಿಗೆ ಮತ್ತು ಮಣ್ಣಿನಿಂದ ಕೂಡಿದ ಈ ಕ್ರೀಡಾಂಗಣದಲ್ಲಿ ಕ್ರೀಡೆಗಳ ಅಭ್ಯಾಸ ಕಷ್ಟ. ಸ್ವಾತಂತ್ರ್ಯೋತ್ಸವದ ಆಚರಣೆ ಸಂದರ್ಭದಲ್ಲಿ ಮಾತ್ರ ಅಧಿಕಾರಿಗಳು ಬಂದು, ಕ್ರೀಡಾಂಗಣವನ್ನು ಕೆಸರುಮುಕ್ತಗೊಳಿಸುತ್ತಾರೆ. ಆ ನಂತರ, ಕ್ರೀಡಾಂಗಣ ಹೇಗಿದೆ? ಎಂಬುದನ್ನು ನೋಡುವುದಿಲ್ಲ. ಇತ್ತೀಚೆಗೆ ಮಳೆ ಸುರಿದ ಸಂದರ್ಭದಲ್ಲಿ ಇಡೀ ಕ್ರೀಡಾಂಗಣದಲ್ಲಿ ನೀರು ನಿಂತುಕೊಂಡಿತ್ತು. ನೀರು ಕಡಿಮೆಯಾಗಲು ವಾರವೇ ಬೇಕಾಯಿತು’ ಎಂದು ಹೇಳಿದರು.
ಕ್ರೀಡಾಂಗಣಕ್ಕೆ ಹೊಂದಿಕೊಂಡು ಮುನ್ಸಿಪಲ್ ಹೈಸ್ಕೂಲ್ ಮೈದಾನವಿದೆ. ಈ ಮೈದಾನದ ಅಭಿವೃದ್ಧಿಯೂ ಅಷ್ಟಕ್ಕಷ್ಟೇ. ಮಳೆಗಾಲದ ಸಂದರ್ಭದಲ್ಲಿ ಇಡೀ ಮೈದಾನ ಕೆಸರು ಗದ್ದೆಯಾಗಿರುತ್ತದೆ. ನಗರಸಭೆ ಅಧೀನದಲ್ಲಿರುವ ಈ ಮೈದಾನದ ಅಭಿವೃದ್ಧಿಗೂ ಜನರು ಆಗ್ರಹಿಸುತ್ತಿದ್ದಾರೆ.
ಜಿಲ್ಲೆ ಮಾತ್ರವಲ್ಲದೇ ಹಲವು ತಾಲ್ಲೂಕಿನ ಕ್ರೀಡಾಂಗಣದಲ್ಲಿಯೂ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಕ್ರೀಡಾಂಗಣಗಳನ್ನು ಅಭಿವೃದ್ಧಿಪಡಿಸಿದರೆ ಮಾತ್ರ ಜಿಲ್ಲೆಯ ಕ್ರೀಡಾಪಟುಗಳು ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂಬುದು ಕ್ರೀಡಾಪ್ರೇಮಿಗಳ ಅಭಿಪ್ರಾಯ.
ರಾಣೆಬೆನ್ನೂರು: ಇಲ್ಲಿಯ ನಗರಸಭೆ ಕ್ರೀಡಾಂಗಣ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. 8 ಎಕರೆ 20 ಗುಂಟೆ ಜಾಗದಲ್ಲಿರುವ ಕ್ರೀಡಾಂಗಣದಲ್ಲಿ ಮಳೆ ಬಂದರೆ ನೀರು ನಿಲ್ಲುತ್ತದೆ. ಇಡೀ ಕ್ರೀಡಾಂಗಣ ಕೆಸರು ತುಂಬಿಕೊಳ್ಳುತ್ತದೆ. ಧ್ವಜದ ಕಟ್ಟೆಯೂ ಶಿಥಿಲಗೊಂಡಿದೆ.
ತಾಲ್ಲೂಕಿನಲ್ಲಿ ಕ್ಲಸ್ಟರ್ ಮಟ್ಟ ಸೇರಿದಂತೆ ವಿವಿಧ ಕ್ರೀಡಾಕೂಟಗಳು ನಡೆಯುತ್ತಿವೆ. ಆದರೆ, ಎಲ್ಲರೂ ರೋಟರಿ ಸಂಸ್ಥೆ ಮತ್ತು ಆರ್‌ಟಿಇಎಸ್ ಕಾಲೇಜಿನ ಖಾಸಗಿ ಕ್ರೀಡಾಂಗಣವನ್ನು ಅವಲಂಬಿಸಿದ್ದಾರೆ.
ನಗರಸಭೆ ಕ್ರೀಡಾಂಗಣ ರಾಜಕೀಯ ಸಮಾವೇಶ, ಗಣೇಶ ಪ್ರತಿಷ್ಠಾಪನೆ, ಜಾತ್ರೆ, ಉರುಸು, ಹಬ್ಬ, ಸಾರ್ವಜನಿಕ ಪ್ರದರ್ಶನ, ವಿವಿಧ ವರ್ಗಗಳ ಸಮಾವೇಶಕ್ಕೆ ಮಾತ್ರ ಸೀಮಿತವಾಗಿದೆ. ಯಾವುದೇ ಕ್ರೀಡೆಗಳಿಗೆ ಉತ್ತೇಜನ ಸಿಗುತ್ತಿಲ್ಲ. ಕ್ರೀಡಾಂಗಣವನ್ನು ಅಂತರರಾಷ್ಟ್ರೀಯ ಕ್ರೀಡಾಂಗಣವನ್ನಾಗಿಸುತ್ತೇವೆ ಎಂದು ಹಿಂದಿನ ಶಾಸಕರು ಭರವಸೆ ನೀಡಿದ್ದರು. ಆದರೆ, ಇದುವರೆಗೂ ಭರವಸೆ ಈಡೇರಿಲ್ಲ ಎಂದು ಜನರು ಬೇಸರ ಹೊರಹಾಕಿದರು.
ಕುಡಿಯುವ ನೀರು, ಶೌಚಾಲಯ, ವಿದ್ಯುತ್, ಒಳ ಚರಂಡಿ ವ್ಯವಸ್ಥೆ ಸರಿಯಿಲ್ಲ. ಕಿಡಿಗೇಡಿಗಳು ಅಕ್ರಮ ಚಟುವಟಿಕೆ ನಡೆಸುತ್ತಿದ್ದಾರೆ. ಜಾನುವಾರು ಮೇಯಿಸುತ್ತಿದ್ದಾರೆ. ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಕಚೇರಿ ಸದಾ ಬಾಗಿಲು ಹಾಕಿರುತ್ತದೆ.
ಹಿರೇಕೆರೂರು: ಇಲ್ಲಿಯ ತಾಲ್ಲೂಕು ಕ್ರೀಡಾಂಗಣ ಸಂಪೂರ್ಣ ಹದಗೆಟ್ಟಿದೆ. ನಿರ್ವಹಣೆ ಕೊರತೆಯಿಂದಾಗಿ ಎಲ್ಲ ಸೌಕರ್ಯಗಳು ಹಾಳಾಗಿವೆ. ಇಡೀ ಕ್ರೀಡಾಂಗಣದಲ್ಲಿ ಹುಲ್ಲು ಬೆಳೆದಿದ್ದು, ಎಲ್ಲೆಂದರಲ್ಲಿ ನೀರು ನಿಂತು ಕೆಸರು ಗದ್ದೆಯಂತಾಗಿದೆ.
8 ಎಕರೆ ಜಾಗದಲ್ಲಿರುವ ಈ ಕ್ರೀಡಾಂಗಣದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಅದರ ಕಿಟಕಿಯ ಗಾಜುಗಳು ಒಡೆದು ಹೋಗಿದ್ದು, ಇಡೀ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದೆ.
ಕ್ರೀಡಾಂಗಣಕ್ಕೆ ಸೂಕ್ತ ಗೇಟ್ ಇಲ್ಲ. ಕಿಡಿಗೇಡಿಗಳು ಬೇಕಾಬಿಟ್ಟಿಯಾಗಿ ಕ್ರೀಡಾಂಗಣದೊಳಗೆ ನುಗ್ಗಿ ಮದ್ಯದ ಪಾರ್ಟಿ ಮಾಡುತ್ತಿದ್ದಾರೆ. ಇದರ ನಂತರ, ಪ್ಲಾಸ್ಟಿಕ್ ಬಾಟಲಿಗಳನ್ನು ಸ್ಥಳದಲ್ಲೇ ಎಸೆದು ಹೋಗುತ್ತಿದ್ದಾರೆ.
ತಾಲ್ಲೂಕು ಕ್ರೀಡಾಂಗಣದಲ್ಲಿ ಸೂಕ್ತ ವ್ಯವಸ್ಥೆ ಇಲ್ಲದ್ದರಿಂದ, ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ದಿನಗಳನ್ನು ಆಚರಿಸುತ್ತಿಲ್ಲ.
‘ಮಳೆ ಬಂದರೆ ಕ್ರೀಡಾಂಗಣ ಸಂಪೂರ್ಣ ಕೆಸರುಗದ್ದೆಯಾಗುತ್ತದೆ. ಈಗ ಹುಲ್ಲು ಬೆಳೆದಿದ್ದು, ದನಕರುಗಳನ್ನು ಮೇಯಿಸುತ್ತಿದ್ದಾರೆ. ಕ್ರೀಡಾಂಗಣಕ್ಕೆ ಸೂಕ್ತ ಟ್ರ್ಯಾಕ್ ಮಾಡಬೇಕು. ಕಾಂಪೌಂಡ್ ನಿರ್ಮಿಸಬೇಕು’ ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.
ಬ್ಯಾಡಗಿ: ಇಲ್ಲಿಯ ಎಸ್‌ಜೆಜೆಎಂ ತಾಲ್ಲೂಕು ಕ್ರೀಡಾಂಗಣದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ತಂಬಾಕು, ಗುಟ್ಕಾ ತಿಂದು ಎಲ್ಲೆಂದರಲ್ಲಿ ಉಗುಳುವ ಜನರು ಹೆಚ್ಚಾಗಿದ್ದಾರೆ.
ಬೆಳಿಗ್ಗೆ ಮತ್ತು ಸಂಜೆ ಸಾಕಷ್ಟು ಜನರು ವಾಯುವಿಹಾರಕ್ಕೆ ಬರುತ್ತಿದ್ದಾರೆ. ರಾತ್ರಿ 9 ಗಂಟೆಯವರೆಗೆ ವಾಯುವಿಹಾರ ಮಾಡುತ್ತಾರೆ. ಕ್ರೀಡಾಂಗಣದ ಸುತ್ತಲೂ ವಿವಿಧ ಖಾದ್ಯಗಳ ಅಂಗಡಿಗಳು ಇವೆ. ಅಂಗಡಿಗಳಲ್ಲಿ ಖಾದ್ಯ ತಿನ್ನುವ ಜನರು, ತ್ಯಾಜ್ಯವನ್ನು ಕ್ರೀಡಾಂಗಣದೊಳಗೆ ಎಸೆಯುತ್ತಿದ್ದಾರೆ. ಜೊತೆಗೆ, ತ್ಯಾಜ್ಯವು ಗಾಳಿಯಿಂದಾಗಿ ಕ್ರೀಡಾಂಗಣಕ್ಕೆ ನುಗ್ಗುತ್ತಿದೆ.
ಟ್ರ್ಯಾಕ್‌ನಲ್ಲಿ ಕಲ್ಲುಗಳು ಬಿದ್ದಿದ್ದು, ಅಲ್ಲಲ್ಲಿ ತಗ್ಗುಗಳು ಹೆಚ್ಚಿವೆ. ಒಳಾಂಗಣ ಕ್ರೀಡಾಂಗಣದ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ. ಕ್ರೀಡಾಂಗಣಕ್ಕೆ ಕಾವಲು ಸಿಬ್ಬಂದಿ ಇದ್ದರೂ ರಕ್ಷಣೆ ಮಾತ್ರ ಆಗುತ್ತಿಲ್ಲವೆಂದು ಜನರು ದೂರುತ್ತಿದ್ದಾರೆ.
‘ಕ್ರೀಡಾಂಗಣವನ್ನು ರಕ್ಷಿಸಬೇಕು. ಅಭಿವೃದ್ಧಿ ಕೆಲಸಗಳನ್ನು ಮಾಡಿಸಬೇಕು. ಸಿಂಥೆಟಿಕ್ ಟ್ರ್ಯಾಕ್ ಮಾಡಲು ಕ್ರಮ ಕೈಗೊಳ್ಳಬೇಕು’ ಎಂದು ಜನರು ಆಗ್ರಹಿಸುತ್ತಿದ್ದಾರೆ.
ಶಿಗ್ಗಾವಿ: ತಾಲ್ಲೂಕು ಕ್ರೀಡಾಂಗಣ ಸಂಪೂರ್ಣ ಹದಗೆಟ್ಟಿದೆ. ಇದೇ ಸ್ಥಿತಿಯಲ್ಲಿಯೇ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮಗಳು ನಡೆಯುತ್ತಿವೆ. ಕ್ರೀಡಾಂಗಣದ ಅಭಿವೃದ್ಧಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನ ಹರಿಸದಿರುವುದು ಸ್ಥಳೀಯ ಆಕ್ರೋಶಕ್ಕೆ ಕಾರಣವಾಗಿದೆ.
ಕ್ರೀಡಾಂಗಣದ ಹಲವು ಕಡೆ ಗುಂಡಿಗಳು ಬಿದ್ದಿದ್ದು, ನೀರು ನಿಂತು ಕೆಸರು ಹೆಚ್ಚಾಗಿದೆ. ಅದರಲ್ಲಿಯೇ ನಿಂತು ಧ್ವಜಾರೋಹಣ ನೆರವೇರಿಸಿದವರೂ ಇದ್ದಾರೆ. ಶಾಲೆ–ಕಾಲೇಜಿನ ಮಕ್ಕಳು, ಕೆಸರಿನಲ್ಲೇ ನಿಂತುಕೊಳ್ಳಬೇಕಾದ ಅನಿವಾರ್ಯತೆಯೂ ಇದೆ.
ಸ್ವಾತಂತ್ರ್ಯೋತ್ಸವ ಹತ್ತಿರದಲ್ಲಿದ್ದು, ಇರುವ ಕ್ರೀಡಾಂಗಣದಲ್ಲೇ ಮಾಡಿ ಮುಗಿಸಲಾಗುತ್ತದೆ. ನಂತರ, ಕ್ರೀಡಾಂಗಣದತ್ತ ಯಾರೊಬ್ಬರೂ ಮುಖ ಮಾಡುವುದಿಲ್ಲ. ಕ್ರೀಡಾಂಗಣ ಇಲ್ಲದಿದ್ದರಿಂದ, ಕ್ರೀಡಾಪಟುಗಳ ಅಭ್ಯಾಸಕ್ಕೂ ತೊಂದರೆಯಾಗಿದೆ. ಕ್ರೀಡಾಂಗಣದಲ್ಲಿ ಕಟ್ಟಡವಿದ್ದು, ಅದು ಸಹ ಪಾಳು ಬಿದ್ದ ರೀತಿಯಲ್ಲಿ ಹಾಳಾಗುತ್ತಿದೆ. ಮಳೆ ಬಂದರೆ ಸೋರುತ್ತಿದೆ.
ದನಕರು ಮೇಯಿಸುವ ಜಾಗವಾದ ಸವಣೂರು ಕ್ರೀಡಾಂಗಣ: ಸವಣೂರಿನ ತಾಲ್ಲೂಕು ಕ್ರೀಡಾಂಗಣ ದನ-ಕರು ಮೇಯಿಸುವ ಸ್ಥಳವಾಗಿ ಮಾರ್ಪಟ್ಟಿದೆ. ಧ್ವಜಾರೋಹಣಕ್ಕಷ್ಟೇ ಸೀಮಿತವಾಗಿರುವ ಕ್ರೀಡಾಂಗಣ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪಾಳು ಬಿದ್ದ ಸ್ಥಿತಿಯಲ್ಲಿದೆ.
ನಿರಂತರ ಮಳೆಯಿಂದಾಗಿ ನೀರು ನಿಂತು ಕ್ರೀಡಾಂಗಣ ಭತ್ತದ ಗದ್ದೆಯಂತಾಗಿದೆ. ಸುಸಜ್ಜಿತ ಶೌಚಗೃಹವಿಲ್ಲ. 2010ರಲ್ಲಿ ನಿರ್ಮಿತಿ ಕೇಂದ್ರದಿಂದ ನಿರ್ಮಿಸಿದ್ದ ತಾಲ್ಲೂಕು ಕ್ರೀಡಾಂಗಣ, ಅವೈಜ್ಞಾನಿಕ ಕಾಮಗಾರಿಯಿಂದ ಕೆಲವೇ ವರ್ಷಗಳಲ್ಲಿ ಸೊರಗಿದೆ.
2024ರ ಡಿಸೆಂಬರ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮದ ನಿಮಿತ್ತ ಕ್ರೀಡಾಂಗಣದ ತಡೆಗೋಡೆ ಒಡೆಯಲಾಗಿತ್ತು. ಇದಾದ ನಂತರ, ತಡೆಗೋಡೆ ನಿರ್ಮಿಸಿಲ್ಲ. ಗೋಮಾಳವಾಗಿರುವ ಕ್ರೀಡಾಂಗಣ, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.
ಹಾನಗಲ್: ತಾಲ್ಲೂಕಿನ ಕ್ರೀಡಾಂಗಣವು ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆಯ ನಿರ್ಲಕ್ಷಕ್ಕೆ ಒಳಗಾಗಿದೆ.
ರಾಷ್ಟ್ರೀಯ ಹಬ್ಬಗಳು ಮತ್ತು ಚುನಾವಣೆಗಳ ಸಮಯದಲ್ಲಿ ರಾಜಕೀಯ ಕಾರ್ಯಕ್ರಮಗಳಿಗೆ ಬಳಕೆಯಾಗುವ ಕ್ರೀಡಾಂಗಣ, ಮಳೆಗಾಲದಲ್ಲಿ ಸಾಕಷ್ಟು ಅವಾಂತರಗಳಿಗೆ ಸಾಕ್ಷಿಯಾಗುತ್ತಿದೆ.
ಆಗಸ್ಟ್ 15ರಂದು ಧ್ವಜಾರೋಹಣ ಸಮಯದಲ್ಲಿ ಶಾಲೆ ವಿದ್ಯಾರ್ಥಿಗಳು, ಕೆಸರಿನಿಂದ ಫಜೀತಿಗೆ ಒಳಗಾಗುತ್ತಾರೆ. ಸೌಕರ್ಯಗಳ ಕೊರತೆಯಿಂದಾಗಿ ವಾಯು ವಿಹಾರಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ಕ್ರೀಡಾಂಗಣ, ಕಿಡಿಗೇಡಿಗಳ ಅಕ್ರಮ ಚಟುವಟಿಕೆ ತಾಣವೂ ಆಗುತ್ತಿದೆ.
ಹಾವೇರಿ ಜಿಲ್ಲಾ ಕ್ರೀಡಾಂಗಣವನ್ನು ಆಧುನಿಕ ಸೌಲಭ್ಯದೊಂದಿಗೆ ಅಭಿವೃದ್ಧಿಪಡಿಸಬೇಕು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇಚ್ಛಾಶಕ್ತಿ ತೋರಿಸಬೇಕುರಮೇಶ ಕ್ರೀಡಾಪಟು
ರಾಣೆಬೆನ್ನೂರು ಕ್ರೀಡಾಂಗಣದಲ್ಲಿ ಮಳೆಗಾಲದಲ್ಲಿ ಅಭ್ಯಾಸ ಕಷ್ಟವಾಗಿದೆ. ಸಿಂಥೆಟಿಕ್ ಟ್ರ್ಯಾಕ್ ಮಾಡಬೇಕು. ಶೌಚಾಲಯ ಕುಡಿಯುವ ನೀರು ಎಲ್ಲ ಸೌಕರ್ಯ ಕಲ್ಪಿಸಬೇಕುಶಿವಾನಂದ ಆರೇರ ಕರ್ನಾಟಕ ಸ್ಫೋರ್ಟ್ಸ್ ಕ್ಲಬ್ ಅಧ್ಯಕ್ಷ
‘ರಟ್ಟೀಹಳ್ಳಿ: ತಾಲ್ಲೂಕು ಕ್ರೀಡಾಂಗಣವಿಲ್ಲ’
ರಟ್ಟೀಹಳ್ಳಿ ಪಟ್ಟಣವು ತಾಲ್ಲೂಕು ಕೇಂದ್ರವಾಗಿ ಹಲವು ವರ್ಷವಾದರೂ ತಾಲ್ಲೂಕು ಕ್ರೀಡಾಂಗಣವಿಲ್ಲ. ಪಟ್ಟಣದ ಪ್ರಾಥಮಿಕ ಕನ್ನಡ ಶಾಲಾ ಮೈದಾನದಲ್ಲಿಯೇ ಪ್ರತಿವರ್ಷ ಧ್ವಜಾರೋಹಣ ಮಾಡಲಾಗುತ್ತಿದೆ. ಈ ಮೈದಾನ ಸಹ ಮಳೆಗಾಲದಲ್ಲಿ ಕೆಸರುಮಯವಾಗುತ್ತಿದೆ. ‘ತಾಲ್ಲೂಕು ಕಚೇರಿಗಳ ನಿರ್ಮಾಣಕ್ಕಾಗಿ ಬೀಜೋತ್ಪಾದನಾ ಕೇಂದ್ರದ ಆವರಣದಲ್ಲಿ 28 ಎಕರೆ ಜಾಗವನ್ನು ಮೀಸಲಿಡಲಾಗಿದೆ. ಇದೇ ಜಾಗದಲ್ಲಿ ತಾಲ್ಲೂಕು ಕ್ರೀಡಾಂಗಣ ನಿರ್ಮಾಣವೂ ಆಗಲಿದೆ’ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
(ಮಾಹಿತಿ: ಸಂತೋಷ ಜಿಗಳಿಕೊಪ್ಪ, ಮುಕ್ತೇಶ್ವರ ಪಿ. ಕೂರಗುಂದಮಠ, ಹುತ್ತೇಶ ಲಮಾಣಿ, ಪ್ರಮೀಳಾ ಹುನಗುಂದ, ಎಂ.ವಿ. ಗಾಡದ, ಪ್ರದೀಪ ಕುಲಕರ್ಣಿ, ಗಣೇಶಗೌಡ ಪಾಟೀಲ, ಮಾರುತಿ ಪೇಟಕರ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.