
ಹಾವೇರಿಯ ಗುತ್ತಲ ರಸ್ತೆಯಲ್ಲಿ ಮಂಜು ಕವಿದ ವಾತಾವರಣದಲ್ಲಿಯೇ ರೈತರೊಬ್ಬರು ಚಕ್ಕಡಿ ಹೊಡೆದುಕೊಂಡು ಹೊಲಕ್ಕೆ ಹೋದರು
– ಪ್ರಜಾವಾಣಿ ಚಿತ್ರ / ಮಾಲತೇಶ ಇಚ್ಚಂಗಿ
ಹಾವೇರಿ: ಜಿಲ್ಲೆಯಲ್ಲಿ ಚಳಿಗಾಲ ಶುರುವಾದಾಗಿನಿಂದ ತಾಪಮಾನದ ಪ್ರಮಾಣ ಕ್ರಮೇಣ ಕುಸಿಯುತ್ತಿದ್ದು, ಶುಕ್ರವಾರ ಒಂದೇ ದಿನ ಕನಿಷ್ಠ 8.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ತಾಪಮಾನ ಕುಸಿತದ ಜೊತೆಗೆ ಶೀತಗಾಳಿ ಹಾಗೂ ಮಂಜು ಕಾಣಿಸಿಕೊಳ್ಳುತ್ತಿದ್ದು, ಇದರಿಂದಾಗಿ ಮೈ ನಡುಗಿಸುವ ಚಳಿಯ ಅನುಭವವಾಗುತ್ತಿದೆ.
ರಾಜ್ಯದ ಅತೀ ಕಡಿಮೆ ತಾಪಮಾನ ದಾಖಲಾದ ಜಿಲ್ಲೆಗಳ ಪೈಕಿ ಹಾವೇರಿ 9ನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಬೀದರ್, ಎರಡನೇ ಸ್ಥಾನದಲ್ಲಿ ಬೆಳಗಾವಿ ಹಾಗೂ ಮೂರನೇ ಸ್ಥಾನದಲ್ಲಿ ಧಾರವಾಡ ಜಿಲ್ಲೆಯಿದೆ.
2024ರ ಡಿಸೆಂಬರ್ ಸಮಯದಲ್ಲಿಯೂ ಹಾವೇರಿಯಲ್ಲಿ ಕನಿಷ್ಠ ತಾಪಮಾನ ದಾಖಲಾಗಿತ್ತು. ಈ ಬಾರಿಯೂ ಕನಿಷ್ಠ ತಾಪಮಾನ ದಾಖಲಾಗಿದ್ದು, ಮುಂಬರುವ ಕೆಲ ದಿನಗಳಲ್ಲಿ ತಾಪಮಾನ ಮತ್ತಷ್ಟು ಕುಸಿತವಾಗುವ ಸಾಧ್ಯತೆ ಇರುವುದಾಗಿ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಹಾವೇರಿ ನಗರ ಹಾಗೂ ಜಿಲ್ಲೆಯಾದ್ಯಂತ ಶೀತಗಾಳಿ, ಮಂಜು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಜನರು ಅಧಿಕ ಚಳಿಯಿಂದ ನಡುಗುತ್ತಿದ್ದಾರೆ. ಗುತ್ತಲ ಹೋಬಳಿಯ ಮಾಪನ ಕೇಂದ್ರದಲ್ಲಿ ಶುಕ್ರವಾರ ಕನಿಷ್ಠ 8.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇದು ಜಿಲ್ಲೆಯ ಹೋಬಳಿ ಮಟ್ಟದಲ್ಲಿ ದಾಖಲಾದ ಅತೀ ಕಡಿಮೆ ತಾಪಮಾನವೆಂದು ಕೆಎಸ್‌ಎನ್‌ಡಿಎಂಸಿ ತಜ್ಞರು ತಿಳಿಸಿದ್ದಾರೆ. ಜೊತೆಗೆ, ಜಿಲ್ಲೆಯಾದ್ಯಂತ ಕನಿಷ್ಠ 13 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡುಬಂದಿದೆ.
ವಾಯುವಿಹಾರಿಗಳ ಸಂಖ್ಯೆ ಇಳಿಮುಖ: ಜಿಲ್ಲೆಯ ಪ್ರತಿಯೊಂದು ನಗರ ಹಾಗೂ ಗ್ರಾಮಗಳಲ್ಲಿ ನಸುಕಿನಲ್ಲಿ ಮಂಜು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದೆ. ಇದರಿಂದಾಗಿ ವಾಯುವಿಹಾರಿಗಳು ಹಾಗೂ ನಸುಕಿನಲ್ಲಿ ಕೃಷಿ ಕೆಲಸಕ್ಕೆ ಹೋಗುವವರ ಸಂಖ್ಯೆ ಕಡಿಮೆಯಾಗಿದೆ.
ಜಿಲ್ಲಾ ಕೇಂದ್ರ ಹಾವೇರಿಯ ಕ್ರೀಡಾಂಗಣ ಹಾಗೂ ಪ್ರಮುಖ ರಸ್ತೆಗಳಲ್ಲಿ ನಿತ್ಯವೂ ಹಲವರು ವಾಯುವಿಹಾರ ಮಾಡುತ್ತಾರೆ. ಆದರೆ, ಈಗ ತಾಪಮಾನ ಪ್ರಮಾಣ ಕುಸಿದಿದ್ದರಿಂದ ವಾಯುವಿಹಾರಿಗಳ ಸಂಖ್ಯೆ ಇಳಿಮುಖವಾಗಿದೆ. ಮನೆ ಮನೆಗೆ ಪತ್ರಿಕೆ ವಿತರಿಸುವವರು, ಹಾಲು ಕೊಡುವವರು ಹಾಗೂ ಅಗತ್ಯ ವಸ್ತುಗಳನ್ನು ಮಾರುವವರು ಕೊರೆಯುವ ಚಳಿಯಲ್ಲಿಯೇ ಕೆಲಸ ಮಾಡುತ್ತಿದ್ದಾರೆ.
ಬೆಳಿಗ್ಗೆ ಮಾತ್ರವಲ್ಲದೇ ಹಲವು ಕಡೆಗಳಲ್ಲಿ ಸಂಜೆಯೂ ದಟ್ಟವಾದ ಮಂಜು ಕಾಣಿಸುತ್ತಿದೆ. ಗ್ರಾಮೀಣ ಭಾಗದಲ್ಲಿ ರೈತಾಪಿ ಜನರು, ಮಂಜಿನಲ್ಲಿಯೇ ಚಕ್ಕಡಿ ಹಾಗೂ ಜಾನುವಾರು ಸಮೇತ ಹೊಲಕ್ಕೆ ತೆರಳುತ್ತಿದ್ದಾರೆ. ಕೃಷಿ ಹಾಗೂ ತೋಟಗಾರಿಕೆ ಬೆಳೆ ಬೆಳೆಯುತ್ತಿರುವ ಹಲವು ರೈತರು, ಚಳಿಯನ್ನು ಲೆಕ್ಕಿಸದೇ ಜಮೀನಿನಲ್ಲಿ ಕಾಯಕದಲ್ಲಿ ತೊಡಗುತ್ತಿದ್ದಾರೆ.
ನಸುಕಿನ ಸಮಯದಲ್ಲಿ ಆಕಾಶದ ಮೋಡಗಳು ಭೂಮಿಗೆ ಇಳಿದ ಅನುಭವವಾಗುತ್ತಿದೆ. ರಸ್ತೆಯಲ್ಲಿ ಒಬ್ಬರ ಮುಖ ಒಬ್ಬರಿಗೆ ಕಾಣಿಸುತ್ತಿಲ್ಲ. ಚಳಿಯಿಂದ ರಕ್ಷಿಸಿಕೊಳ್ಳಲು ಬಹುತೇಕರು ಸ್ವೆಟರ್, ಜರ್ಕೀನ್ ಹಾಗೂ ದಪ್ಪ ಬಟ್ಟೆಗಳನ್ನು ಧರಿಸುತ್ತಿದ್ದಾರೆ. ಬಹುತೇಕ ಕಡೆಗಳಲ್ಲಿ ನಸುಕಿನಲ್ಲಿ ಹಲವರು ಬೆಂಕಿ ಕಾಯಿಸಿಕೊಳ್ಳುತ್ತಿರುವ ದೃಶ್ಯಗಳು ಕಂಡುಬರುತ್ತಿವೆ. ಸೂರ್ಯೋದಯ ಹಾಗೂ ಸೂರ್ಯಾಸ್ತದ ಸಂದರ್ಭದಲ್ಲಿ ಮಂಜು ಆವರಿಸಿಕೊಳ್ಳುತ್ತಿರುವುದರಿಂದ, ಈ ಅವಧಿಯಲ್ಲಿ ಅತೀ ಹೆಚ್ಚು ಚಳಿಯ ಅನುಭವವಾಗುತ್ತಿದೆ.
ಚಹಾಕ್ಕೆ ಬೇಡಿಕೆ: ಶೀತಗಾಳಿ ಹಾಗೂ ಚಳಿಯ ಪರಿಣಾಮ ನಸುಕಿನಲ್ಲಿ ಬಿಸಿ ಬಿಸಿ ಚಹಾ ಕುಡಿಯುವವರ ಸಂಖ್ಯೆ ಹೆಚ್ಚುತ್ತಿದ್ದು, ಚಹಾಕ್ಕೆ ಬೇಡಿಕೆ ಬಂದಿದೆ. ಬಸ್ ನಿಲ್ದಾಣ, ಕ್ರೀಡಾಂಗಣ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಚಹಾ ಅಂಗಡಿ ಎದುರು ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸುತ್ತಿರುವ ದೃಶ್ಯಗಳು ಕಂಡುಬರುತ್ತಿದೆ.
ಚಿಕ್ಕಮಕ್ಕಳು, ವೃದ್ಧರು, ಉಸಿರಾಟ ತೊಂದರೆ ಇರುವವರ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತಿದೆ. ಶೀತ, ಕೆಮ್ಮು, ಕಫ, ಜ್ವರದಿಂದ ಬಳಲುತ್ತಿರುವವರು ಆಸ್ಪತ್ರೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.