
ಹಾವೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಜ್ಞಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಕ್ಕಳು
ಹಾವೇರಿ: ವಿಮಾನ ನಿಲ್ದಾಣಗಳಲ್ಲಿ ದೃಶ್ಯ ಗೋಚರಿಸಲು ಪೈಲೆಟ್‌ಗೆ ‘ದೃಷ್ಟಿ’ ವ್ಯವಸ್ಥೆ ಹೇಗೆ ನೆರವಾಗುತ್ತದೆ? ಆರೋಗ್ಯದ ತುರ್ತು ಪರಿಸ್ಥಿತಿಯಲ್ಲಿ ಡ್ರೋನ್ ಹೇಗೆ ಕೆಲಸ ಮಾಡುತ್ತದೆ? ವಿಜ್ಞಾನ ಕ್ಷೇತ್ರದಲ್ಲಿರುವ ಅವಕಾಶಗಳೇನು? ಎಂಬಿತ್ಯಾದಿ ವಿಜ್ಞಾನದ ಪ್ರಶ್ನೆಗಳಿಗೆ ‘ಜಿಜ್ಞಾಸ’ ಕಾರ್ಯಕ್ರಮ ಉತ್ತರ ನೀಡಿತು.
ಉತ್ತರ ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಜಿಜ್ಞಾಸ; ವಿಜ್ಞಾನಿ– ವಿದ್ಯಾರ್ಥಿಗಳ ಸಮಾಗಮ’ ಕಾರ್ಯಕ್ರಮಕ್ಕೆ ಸರ್ಕಾರಿ ಶಾಲೆ ಮಕ್ಕಳಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಬೆಂಗಳೂರಿನ ಸಿಎಸ್‌ಐಆರ್–ಎನ್‌ಎಎಲ್ (ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರೀಸ್ ಸಂಸ್ಥೆ) ವತಿಯಿಂದ ಜಿಲ್ಲಾಡಳಿತ ಹಾಗೂ ವಿದ್ಯಾಶಿಲ್ಪಿ ಇಂಟರ್‌ನ್ಯಾಷನಲ್ ಸ್ಕೂಲ್ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲೆಯ ವಿವಿಧ ಸರ್ಕಾರಿ ಶಾಲೆಗಳ 200ಕ್ಕೂ ಹೆಚ್ಚು ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಎನ್‌ಎಎಲ್ ಮುಖ್ಯ ವಿಜ್ಞಾನಿಗಳಾದ ವಿ.ಪಿ.ಎಸ್. ನಾಯ್ಡು, ಗಿರೀಶ ಯನಮಶೆಟ್ಟಿ, ಮುಖ್ಯಸ್ಥ ಶಿವರಾಮ್ ಬಿ.ಎಸ್. ಅವರು ವಿಜ್ಞಾನಗಳ ಆವಿಷ್ಕಾರ ಹಾಗೂ ಪ್ರಯೋಗಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ವಿಮಾನ ನಿಲ್ದಾಣದಲ್ಲಿ ಬಳಸುವ ‘ದೃಷ್ಟಿ’ ಸ್ವದೇಶಿ ವ್ಯವಸ್ಥೆ ಕಂಡುಹಿಡಿದ ವಿಜ್ಞಾನಿಗೆ ಪದ್ಮಶ್ರೀ ಬಂದಿರುವ ಸಂಭ್ರಮವನ್ನೂ ಹಂಚಿಕೊಂಡರು.
ವಿದ್ಯಾರ್ಥಿಗಳನ್ನು ಎರಡು ಗುಂಪುಗಳಾಗಿ ವಿಭಾಗಿಸಿ, ತಾಂತ್ರಿಕ ಮಾಹಿತಿಯ ತರಗತಿ ಹಾಗೂ ವಸ್ತು ಪ್ರದರ್ಶನದ ಮಾಹಿತಿ ನೀಡಲಾಯಿತು. ಎಲ್ಲವನ್ನೂ ಕುತೂಹಲದಿಂದ ವೀಕ್ಷಿಸಿದ ವಿದ್ಯಾರ್ಥಿಗಳು, ಪುಸ್ತಕದಲ್ಲಿ ಮಾಹಿತಿ ದಾಖಲಿಸಿಕೊಂಡರು. ಹಾಳೆಯಲ್ಲಿ ಏರೋಪ್ಲೇನ್ ನಿರ್ಮಾಣ ಮಾಡಿ ಹಾರಿಸಿ ಸಂಭ್ರಮಿಸಿದರು. ಡ್ರೋನ್ ಹಾರಿಸುವ ಮೂಲಕ ಅದರ ನಿರ್ಮಾಣದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಲಾಯಿತು.
ಕೇವಲ ಪಠ್ಯದಲ್ಲಷ್ಟೇ ವಿಜ್ಞಾನದ ಪ್ರಯೋಗಗಳನ್ನು ಓದುತ್ತಿದ್ದ ವಿದ್ಯಾರ್ಥಿಗಳು, ಕಾರ್ಯಕ್ರಮದ ಮೂಲಕ ಕಣ್ಣೆದುರೇ ಪ್ರಯೋಗಗಳನ್ನು ನೋಡಿ ಖುಷಿಪಟ್ಟರು. ಶಿಕ್ಷಕರು ಅವರಿಗೆ ಸಾಥ್ ನೀಡಿದರು.
ಜಿಲ್ಲಾಧಿಕಾರಿಯಿಂದ ಉದ್ಘಾಟನೆ: ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ‘ಆರೋಗ್ಯ, ಸಾರಿಗೆ, ಸಂಪರ್ಕ ಸಂವಹನ, ಉತ್ಪಾದನೆ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ವಿಜ್ಞಾನ–ತಂತ್ರಜ್ಞಾನದಿಂದ ದೊಡ್ಡ ಬದಲಾವಣೆ ಆಗಿದೆ. ಯಾವ ದೇಶ ಸಂಶೋಧನೆ ಹಾಗೂ ವಿಜ್ಞಾನ–ತಂತ್ರಜ್ಞಾನದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತದೆಯೋ, ಆ ದೇಶ ಬಲಿಷ್ಠ ದೇಶವಾಗುತ್ತದೆ’ ಎಂದರು.
‘ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ವಿಜ್ಞಾನಿ ಇರುತ್ತಾನೆ. ಅದನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸವಾಗಬೇಕು. ವಿದ್ಯಾರ್ಥಿಯು ಮುಂದೊಂದು ದಿನ ದೊಡ್ಡ ವಿಜ್ಞಾನಿಯಾಗಿ, ದೇಶದ ಪ್ರಗತಿಗೂ ಕೊಡುಗೆ ನೀಡಬಹುದು. ವಿದ್ಯಾರ್ಥಿಗಳಲ್ಲಿರುವ ವಿಜ್ಞಾನಿಯನ್ನು ಗುರುತಿಸಿ, ಸೂಕ್ತ ಮಾರ್ಗದರ್ಶನದೊಂದಿಗೆ ಬೆಳೆಸಲು ಈ ಕಾರ್ಯಕ್ರಮ ಸಹಕಾರಿ’ ಎಂದು ಹೇಳಿದರು.
ಮುಖ್ಯ ವಿಜ್ಞಾನಿ ಗಿರೀಶ ಯನಮಶೆಟ್ಟಿ, ‘ಕೇಂದ್ರೀಯ ವಿದ್ಯಾಲಯಕ್ಕೆ ಸೀಮಿತವಾಗಿದ್ದ ಈ ಕಾರ್ಯಕ್ರಮವನ್ನು, ಸರ್ಕಾರಿ ಶಾಲೆಗಳಿಗೆ ವಿಸ್ತರಿಸಲಾಗಿದೆ. ವಿಜ್ಞಾನಿಗಳ ಜೊತೆ ಮಕ್ಕಳನ್ನು ಒಗ್ಗೊಡಿಸುವ ಹಾಗೂ ಅವರನ್ನು ವಿಜ್ಞಾನಿಗಳಾಗಿ ಮಾಡುವ ಉದ್ದೇಶವಿದೆ’ ಎಂದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮೋಹನ ದಂಡಿನ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ಪಾಟೀಲ, ಸೌಮ್ಯ ಎಸ್. ಮಾಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.