ADVERTISEMENT

ಹಾವೇರಿ: 39 ಗ್ರಾಮಗಳಿಗೆ ‘ಬಾಡಿಗೆ ಕೊಳವೆಬಾವಿ’ ನೀರು

* ಮಳೆ ಕೊರತೆಯಿಂದ ಬತ್ತಿದ ಗ್ರಾ.ಪಂ. ಕೊಳವೆಬಾವಿಗಳು * ರೈತರ ಜಮೀನಿನಿಂದ ನೀರು ಸರಬರಾಜು * ನೀರಿನ ಸಮಸ್ಯೆಯಾಗದಂತೆ ಜಿಲ್ಲಾಡಳಿತ ನಿಗಾ

ಸಂತೋಷ ಜಿಗಳಿಕೊಪ್ಪ
Published 14 ಮೇ 2025, 4:42 IST
Last Updated 14 ಮೇ 2025, 4:42 IST
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಗುಡ್ಡದ ಚನ್ನಾಪುರ ಗ್ರಾಮದ ಮನೆಯ ನಳದಲ್ಲಿ  ನೀರು ತುಂಬಿಕೊಂಡ ಮಹಿಳೆ
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಗುಡ್ಡದ ಚನ್ನಾಪುರ ಗ್ರಾಮದ ಮನೆಯ ನಳದಲ್ಲಿ  ನೀರು ತುಂಬಿಕೊಂಡ ಮಹಿಳೆ   

ಹಾವೇರಿ: ಮಳೆ ಕೊರತೆಯಿಂದಾಗಿ ಜಿಲ್ಲೆಯ ಹಲವು ಕಡೆಗಳಲ್ಲಿ ಕೊಳವೆಬಾವಿಗಳು ಬತ್ತಿದ್ದು, ಜನರಿಗೆ ಕುಡಿಯುವ ನೀರು ಸರಬರಾಜು ಮಾಡಲು ಜಿಲ್ಲಾಡಳಿತ ‘ಬಾಡಿಗೆ ಕೊಳವೆಬಾವಿ’ಗಳ ಮೊರೆ ಹೋಗಿದೆ.

ಪ್ರಸಕ್ತ ವರ್ಷದ ಏಪ್ರಿಲ್‌ ಹಾಗೂ ಮೇ ತಿಂಗಳಿನಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಂಡ ಜಿಲ್ಲೆಯ 39 ಗ್ರಾಮಗಳಲ್ಲಿ ಬಾಡಿಗೆ ಕೊಳವೆಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಈ ಗ್ರಾಮಗಳಲ್ಲಿ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಲು ತಹಶೀಲ್ದಾರ್‌ ಹಾಗೂ ಪಿಡಿಒಗಳಿಗೆ ಸೂಚನೆ ನೀಡಲಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಜಿಲ್ಲಾಡಳಿತ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಇದರ ನಡುವೆಯೇ ಹಲವು ಕಡೆಗಳಲ್ಲಿ ಗ್ರಾಮ ಪಂಚಾಯಿತಿ ಅಧೀನದ ಕೊಳವೆಬಾವಿಗಳು ಬತ್ತಿವೆ. ಇಂಥ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೇ ರೈತರ ಜಮೀನಿನಲ್ಲಿರುವ ಕೊಳವೆಬಾವಿಗಳನ್ನು ಬಾಡಿಗೆ ಪಡೆದು, ಜನರಿಗೆ ನೀರು ಸರಬರಾಜು ಮಾಡಲಾಗುತ್ತಿದೆ.

ADVERTISEMENT

ಬೇಸಿಗೆ ಕಳೆದು ಮಳೆಗಾಲ ಶುರುವಾಗುವ ದಿನಗಳು ಹತ್ತಿರದಲ್ಲಿದ್ದು, ಇಂಥ ಸಂದರ್ಭದಲ್ಲಿಯೇ ಹಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಬಾಡಿಗೆ ಕೊಳವೆಬಾವಿಗಳ ಮೂಲಕವೇ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಲಭ್ಯವಾಗಿದೆ. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಪರಿಸ್ಥಿತಿ ಬಂದಿಲ್ಲವೆಂಬುದು ಸಮಾಧಾನದ ಸಂಗತಿ.

‘ಬ್ಯಾಡಗಿ, ಹಾನಗಲ್, ಹಿರೇಕೆರೂರು, ರಟ್ಟೀಹಳ್ಳಿ, ಹಾವೇರಿ, ಶಿಗ್ಗಾವಿ ಹಾಗೂ ರಾಣೆಬೆನ್ನೂರು ತಾಲ್ಲೂಕಿನ 30 ಗ್ರಾಮ ಪಂಚಾಯಿತಿ ವ್ಯಾಪ್ತಿಯ 39 ಗ್ರಾಮಗಳ ಜನರಿಗೆ 44 ಬಾಡಿಗೆ ಕೊಳವೆಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ’ ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೇಲ್ಮಟ್ಟದ ನೀರು ಸಂಗ್ರಹಗಾರಗಳಿವೆ. ಕೊಳವೆಬಾವಿ ಮೂಲಕ ಸಂಗ್ರಹಗಾರಗಳನ್ನು ತುಂಬಿಸಿ, ಜನರಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ಗ್ರಾಮ ಪಂಚಾಯಿತಿ ಒಡೆತನದ ಕೊಳವೆಬಾವಿಗಳಲ್ಲಿಯೇ ನೀರು ಬತ್ತಿದೆ. ಹೀಗಾಗಿ, ಖಾಸಗಿಯವರ ಜಾಗದಲ್ಲಿರುವ ಕೊಳವೆಬಾವಿಗಳನ್ನು ಬಾಡಿಗೆ ಪಡೆಯಲಾಗಿದೆ. ಅದರ ಮೂಲಕವೇ ನೀರನ್ನು ಜನರಿಗೆ ತಲುಪಿಸಲಾಗುತ್ತಿದೆ’ ಎಂದು ಹೇಳಿದರು.

‘ಜಿಲ್ಲೆಯ 169 ಗ್ರಾಮಗಳು ಹಾಗೂ ನಗರ ಪ್ರದೇಶದ 113 ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆಯಾಗಬಹುದೆಂದು ಬೇಸಿಗೆ ಆರಂಭದಲ್ಲಿಯೇ ಅಂದಾಜಿಸಲಾಗಿತ್ತು. ಹೀಗಾಗಿ, ಈ ಗ್ರಾಮಗಳಲ್ಲಿ ನೀರಿನ ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದರು.

‘ಬಾಡಿಗೆ ಕೊಳವೆಬಾವಿ’ ಅವಲಂಬಿತ ಗ್ರಾಮಗಳು

* ಬ್ಯಾಡಗಿ: ಕಾಟೇನಹಳ್ಳಿ, ಹಿರೇಅಣಜಿ, ಚಿಕ್ಕಣಜಿ

* ಹಾನಗಲ್; ಇನಾಂನೀರಲಗಿ, ಆಲದಕಟ್ಟಿ, ಬೈಚವಳ್ಳಿ, ಗುರುರಾಯಪಟ್ಟಣ, ಗಿರಿಸಿನಕೊಪ್ಪ, ಗಡಿನಾಯಕನಹಳ್ಳಿ, ಹೊಂಕಣ

* ಹಿರೇಕೆರೂರು; ಜಾವಳ್ಳಿ, ಹಂಸಬಾವಿ, ಮಡ್ಲೂರ, ಕೋಡ, ಬಾಳಂಬೀಡ, ಬುರಡಿಕಟ್ಟಿ, ಕಾಲ್ವೆಹಳ್ಳಿ, ಹೊಲಬಿಕೊಂಡ

* ರಟ್ಟೀಹಳ್ಳಿ; ಇಂಗಳಗೊಂದಿ, ಹುಲ್ಲತ್ತಿ, ಯಡಗೋಡ, ಮಕರಿ, ನಾಗವಂದ, ಕಡೂರ

* ಹಾವೇರಿ; ಹುರುಳಿಹಾಳ, ಕೋಣನತಂಬಗಿ, ಕನಕಾಪುರ

* ಶಿಗ್ಗಾವಿ: ಗುಡ್ಡದಚನ್ನಾಪುರ, ಶಡಗರವಳ್ಳಿ, ಹಿರೇಬೆಂಡಿಗೇರಿ, ಹಿರೇಮಲ್ಲೂರ ಎನ್.ಎಂ., ತಡಸ, ತಿಮ್ಮಾಪುರ, ಕುಂದೂರ, ವನಹಳ್ಳಿ, ವನಹಳ್ಳಿ, ಪ್ಲಾಟ್ ಕಾಮನಹಳ್ಳಿ

* ರಾಣೆಬೆನ್ನೂರು; ಗೋಡಿಹಾಳ, ಮೆಡ್ಲೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.