
ಹಾವೇರಿಯ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ರೈತ ಹುತಾತ್ಮ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ರೈತರು ಹಸಿರು ಶಾಲು ಬೀಸಿದರು
ಹಾವೇರಿ: ಮಳೆಯ ವ್ಯತ್ಯಾಸದಿಂದ ಸೊರಗಿದ ರೈತರು. ಕಬ್ಬು–ಮೆಕ್ಕೆಜೋಳಕ್ಕೆ ವೈಜ್ಞಾನಿಕ ಬೆಲೆಗೆ ಆಗ್ರಹಿಸಿ ಅಹೋರಾತ್ರಿ ಧರಣಿ. ಲಂಚ–ಅಕ್ರಮದಲ್ಲಿ ತೊಡಗಿದ್ದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಪೊಲೀಸರು. ಕರ್ತವ್ಯ ಲೋಪ ಎಸಗಿ ಅಮಾನತಾದ ಪಿಡಿಒ–ಪೊಲೀಸ್ ಅಧಿಕಾರಿಗಳು. ಅಪಘಾತ–ಅವಘಡಗಳಿಂದ ಹೆಚ್ಚಾದ ಸಾವಿನ ಸಂಖ್ಯೆ. ಕಳಪೆ ಬೀಜ–ಗೊಬ್ಬರದ ಸದ್ದು. ಹೋರಿ ಬೆದರಿಸುವ ಸ್ಪರ್ಧೆ ಆಯೋಜನೆಗೆ 18 ಷರತ್ತು ವಿಧಿಸಿದ ಸರ್ಕಾರ....
2025ರಲ್ಲಿ ಹಾವೇರಿ ಜಿಲ್ಲೆ ಹಲವು ಘಟನೆಗಳಿಗೆ ಸಾಕ್ಷಿಯಾಯಿತು. ರೈತರ ಸಂಕಷ್ಟಗಳಿಗೆ ಈ ವರ್ಷವೂ ತಕ್ಕಮಟ್ಟಿಗೆ ಪರಿಹಾರ ಸಿಗಲಿಲ್ಲ. ವರ್ಷದ ಆರಂಭದಲ್ಲಿಯೇ ರೈತರು ಬೆಳೆ ಹಾನಿ ಅನುಭವಿಸಿದರು. ಜಂಟಿ ಸಮೀಕ್ಷೆಯಾಗಿ ಕೆಲ ರೈತರಿಗಷ್ಟೇ ಪರಿಹಾರ ತಲುಪಿದ್ದು, ಬಹುತೇಕ ರೈತರು ಪರಿಹಾರದಿಂದಲೂ ವಂಚಿತರಾದರು. ಕಳಪೆ ಬಿತ್ತನೆ ಬೀಜ ಹಾಗೂ ಕಳಪೆ ಗೊಬ್ಬರದಿಂದ ರೈತರು ಕೈ ಸುಟ್ಟುಕೊಂಡರು.
ಕಬ್ಬು ಹಾಗೂ ಮೆಕ್ಕೆಜೋಳ ಬೆಳೆ ಕೈಗೆ ಬರುತ್ತಿದ್ದಂತೆ, ಬೆಲೆಗಾಗಿ ರೈತರು ಅಹೋರಾತ್ರಿ ಧರಣಿ ನಡೆಸಬೇಕಾಯಿತು. ಕಾರ್ಖಾನೆಗಳು ತಕ್ಕಮಟ್ಟಿಗೆ ದರ ನೀಡಿ ಕಬ್ಬು ಬೆಳೆಗಾರರನ್ನು ಸಮಾಧಾನಪಡಿಸಿದರು. ಖರೀದಿ ಕೇಂದ್ರ ತೆರೆಯುವ ಮೂಲಕ ಸರ್ಕಾರ, ಮೆಕ್ಕೆಜೋಳದ ರೈತರಿಗೆ ನೆರವಾಯಿತು. ಆದರೆ, ಒಬ್ಬ ರೈತರಿಂದ 50 ಕ್ವಿಂಟಲ್ ಮಾತ್ರ ಖರೀದಿಸುವುದಾಗಿ ಹೇಳಿ ರೈತರ ಕೆಂಗಣ್ಣಿಗೆ ಗುರಿಯಾಯಿತು. ಉತ್ತಮ ದರಕ್ಕೆ ಕಾದು ಕುಳಿತಿದ್ದ ಹುರುಳಿಕುಪ್ಪಿ ಬಳಿಯ ರೈತರ ಮೆಕ್ಕೆಜೋಳ ಸುಟ್ಟು ಕರಕಲಾಗಿ ಲಕ್ಷಾಂತರ ರೂಪಾಯಿ ನಷ್ಟವಾಯಿತು.
ಮಳೆಯ ಕಣ್ಣಾಮುಚ್ಚಾಲೆಯಿಂದ ಬಿತ್ತನೆ ಮಾಡಿದ ಬೆಳೆ, ಮೊಳಕೆಯೊಡೆಯಲಿಲ್ಲ. ಮೆಕ್ಕೆಜೋಳ ನಾಶಪಡಿಸಬೇಕಾದ ಅನಿವಾರ್ಯತೆಯೂ ಬಂದೊದಗಿತ್ತು. ಜಿಟಿ ಜಿಟಿ ಮಳೆಯಿಂದಲೂ ಮೆಕ್ಕೆಜೋಳ ಹಾಳಾಗಿ, ರೈತರು ಕಣ್ಣೀರಿಡುವಂತಾಯಿತು. ವೈಜ್ಞಾನಿಕ ಬೆಲೆ, ಬೆಳೆ ಹಾನಿಗೆ ಪರಿಹಾರ, ಕೃಷಿ ಯಂತ್ರಗಳಿಗೆ ವಿಮೆ ಸೇರಿ ಎಲ್ಲದ್ದಕ್ಕೂ ರೈತರು ಪ್ರತಿಭಟನೆ ನಡೆಸಬೇಕಾದ ಪರಿಸ್ಥಿತಿ ಬಂದೊದಗಿತು. ‘₹ 2.32 ಕೋಟಿ ಬಿಲ್ ಬಾಕಿ ಉಳಿಸಿಕೊಂಡಿದ್ದಾರೆ’ ಎಂದು ಸಂಗೂರಿನಲ್ಲಿರುವ ಜಿ.ಎಂ. ಶುಗರ್ಸ್ ಕಾರ್ಖಾನೆಗೂ ರೈತರು ಬೀಗ ಹಾಕಿದ್ದರು.
108 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಜಿಲ್ಲೆಯಲ್ಲಿ ಅಪಘಾತಗಳು ಸಂಭವಿಸಿ, ಮಕ್ಕಳು ಸೇರಿ ಹಲವರು ಪ್ರಾಣ ಬಿಟ್ಟರು. ಸರ್ಕಾರಿ ಕೆಲಸಕ್ಕೆ ಲಂಚ ಪಡೆಯುತ್ತಿದ್ದ ಅಧಿಕಾರಿಗಳು–ಸಿಬ್ಬಂದಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸರು. ಕರ್ತವ್ಯ ಲೋಪ ಎಸಗಿದ್ದ ಪೊಲೀಸರು ಹಾಗೂ ಪಿಡಿಒಗಳನ್ನು ಕೆಲಸದಿಂದ ಅಮಾನತು ಮಾಡಲಾಯಿತು. ಇದರ ನಡುವೆಯೇ ಮಕ್ಕಳ ಸಾವಿನ ಪ್ರಕರಣಗಳು ಎಚ್ಚರಿಕೆಯ ಸಂದೇಶ ನೀಡಿದವು.
ವಿಶ್ವದ ಏಕೈಕ ಜಾನಪದ ವಿಶ್ವವಿದ್ಯಾಲಯದಲ್ಲಿ ಅಕ್ರಮ ನೇಮಕಾತಿ ಬಗ್ಗೆ ಆರೋಪಗಳು ಕೇಳಿಬಂದವು. ಸಿಂಡಿಕೇಟ್ ಸಭೆಯಲ್ಲೂ ಜಟಾಪಟಿ ನಡೆಯಿತು. ತನಿಖೆ ನಡೆಯದೇ ವರ್ಷವೇ ಮುಗಿದು ಹೋಯಿತು. ಹಾವೇರಿ ವಿಶ್ವವಿದ್ಯಾಲಯ ಬಂದ್ ಮಾಡುವ ಸುದ್ದಿ ಹರಿದಾಡಿದ್ದರಿಂದ, ವಿವಿ ಪರವೂ ಹೋರಾಟ ನಡೆದವು.
ಸವಣೂರಿನಲ್ಲಿ ಡಿ. 10ರಂದು ಸರ್ಕಾರಿ ಉರ್ದು ಶಾಲೆಯ ಆಂಗ್ಲ ಶಿಕ್ಷಕರನ್ನು ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದ ಘಟನೆ ರಾಜ್ಯಮಟ್ಟದ ಸುದ್ದಿಯಾಯಿತು. 24 ಮಂದಿ ಎಫ್‌ಐಆರ್ ಆಯಿತು. ಸಿಪಿಐ ಎಸ್.ದೇವಾನಂದ, ಹೆಡ್‌ಕಾನ್‌ಸ್ಟೆಬಲ್ ಮಲ್ಲಿಕಾರ್ಜುನ ಓದನಗರ, ಮುಖ್ಯ ಶಿಕ್ಷಕ ರಾಜೇಸಾಬ ಸಂಕನೂರ ಅಮಾನತಾದರು.
25 ವರ್ಷದಿಂದ ಬದಲಾವಣೆಯಾಗದ ರಾಣೆಬೆನ್ನೂರು ತಾಲ್ಲೂಕಿನ ದೇವರಗುಡ್ಡದ ಮಾಲತೇಶ ದೇವಸ್ಥಾನದ ಆಡಳಿತ ಸಮಿತಿಗೆ 2025ರಲ್ಲಿ ಹೊಸ ಆಡಳಿತ ಮಂಡಳಿ ನೇಮಕವಾಯಿತು.
ಹಾನಗಲ್ ತಾಲ್ಲೂಕಿನಲ್ಲಿ ಹಾದು ಹೋಗಿರುವ ಶಿವಮೊಗ್ಗ– ತಡಸ ರಾಜ್ಯ ಹೆದ್ದಾರಿಯಲ್ಲಿ ಟೋಲ್ ಗೇಟ್ ನಿರ್ಮಾಣಕ್ಕೆ ಜನರಿಂದ ವಿರೋಧ ವ್ಯಕ್ತವಾಗಿ ಪ್ರತಿಭಟನೆಗಳು ನಡೆದಿದ್ದವು. ಇದರ ನಡುವೆಯೇ ಟೋಲ್‌ಗೇಟ್ ಆರಂಭವಾಯಿತು.
ರೈತರಿಗೆ ಪರಿಹಾರ ವಿತರಣೆ ಸೇರಿದಂತೆ ವಿವಿಧ ವಿಷಯ ಇಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷದ ಹೋರಾಟವೂ ಈ ವರ್ಷ ಮುಂದುವರಿಯಿತು.
‘ಧರ್ಮಸ್ಥಳದಲ್ಲಿ ಕೊಲೆಗಳು ನಡೆದಿವೆ’ ಎಂಬ ಆರೋಪದಡಿ ಎಸ್‌ಐಟಿ ತನಿಖೆ ನಡೆಯುತ್ತಿರುವಾಗಲೇ ಇದೊಂದು ಅಪಪ್ರಚಾರವೆಂದು ಆರೋಪಿಸಿ ಧರ್ಮಸ್ಥಳ ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಸಿದರು.
ಸಾಹಿತ್ಯ ಕ್ಷೇತ್ರದಲ್ಲಿ, ಸಾಹಿತಿ ಸತೀಶ ಕುಲಕರ್ಣಿ ಅವರ 75ನೇ ಜನ್ಮದಿನದ ಅಭಿನಂದನಾ ಸಮಾರಂಭ ಹಾಗೂ ಕಟ್ಟುವ ಕವಿಯ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ ಅಚ್ಚುಕಟ್ಟಾಗಿ ನಡೆಯಿತು. ಸಾಹಿತಿ ಬರಗೂರು ರಾಮಚಂದ್ರಪ್ಪ ಭಾಗವಹಿಸಿದ್ದರು.
ಧಾರ್ಮಿಕ ಕ್ಷೇತ್ರದಲ್ಲಿ ಹುಕ್ಕೇರಿಮಠ ಜಾತ್ರೆ, ಜೈನ್ ಧರ್ಮದವರ ಸಿದ್ಧಚಕ್ರ ಮಹೋತ್ಸವ, ಮುಸ್ಲಿಂ ಸಮುದಾಯದವರ ‘ಸುನ್ನಿ ತರಬೇತಿ ಇಜ್ತಿಮಾ’ ಕಾರ್ಯಕ್ರಮ ನಡೆಯಿತು.
* ಮದುವೆ ವಿಚಾರವಾಗಿ ರಾಣೆಬೆನ್ನೂರಿನ ಆಸ್ಪತ್ರೆಯೊಂದರ ಶುಶ್ರೂಷಕಿ ಸ್ವಾತಿ ಬ್ಯಾಡಗಿ (22) ಅವರನ್ನು ಮಾರ್ಚ್ 3ರಂದು ಕೊಲೆ ತುಂಗಭದ್ರಾ ನದಿಗೆ ಮೃತದೇಹ ಎಸೆದಿದ್ದ ಆರೋಪದಡಿ ಹಳೇ ವೀರಾಪುರದ ನಯಾಜ್ ಇಮಾಮ್‌ಸಾಬ್ ಬೆಣ್ಣಿಗೇರಿ (28), ಮಾಸೂರಿನ ದುರ್ಗಾಚಾರಿ ಬಸವರಾಜಚಾರಿ ಬಡಿಗೇರ (25) ಹಾಗೂ ವಿನಾಯಕ ನಾಗಪ್ಪ ಪೂಜಾರ (27) ಅವರನ್ನು ಪೊಲೀಸರು ಬಂಧಿಸಿದರು.
* ಜೂನ್ 24: ಶಿಗ್ಗಾವಿ ಪಟ್ಟಣದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರ ಶಿವಾನಂದ ಚನ್ನಬಸಪ್ಪ ಕುನ್ನೂರು (43) ಎಂಬುವವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದ ಐವರು ಆರೋಪಿಗಳನ್ನು ಬಂಧಿಸಲಾಯಿತು.
* ಸೆಪ್ಟೆಂಬರ್ 24: 8 ಎಕರೆ ಆಸ್ತಿ ಹಾಗೂ ವಿಮೆ ಹಣಕ್ಕಾಗಿ ಸೆ. 24ರಂದು ಬಸವರಾಜ ಬೊಮ್ಮಪ್ಪ ಪುಟ್ಟಣ್ಣನವರ (38) ಹತ್ಯೆ ಮಾಡಿದ್ದ ಆರೋಪದಡಿ ರಟ್ಟೀಹಳ್ಳಿಯ ರಾಘವೇಂದ್ರ ಈರಪ್ಪ ಮಾಳಗೊಂಡರ, ಸಿದ್ದು ಅಲಿಯಾಸ್ ಸಿದ್ದನಗೌಡ ಮಂಜಪ್ಪ ಹಲಗೇರಿ, ದಾವಣಗೆರೆ ಜಿಲ್ಲೆಯ ಬಾಡಕಂದಗಲ್ಲು ನಿವಾಸಿ ಪ್ರವೀಣ ಜಯಪ್ಪ, ರಟ್ಟೀಹಳ್ಳಿ ತಾಲ್ಲೂಕಿನ ಕಡೂರಿನ ಲೋಕೇಶ ರಾಜಪ್ಪ ಬೆಟ್ಟಣ್ಣನವರ ಅವರನ್ನು ಪೊಲೀಸರು ಬಂಧಿಸಿದರು.
* ನ. 7: ಬ್ಯಾಡಗಿ ತಾಲ್ಲೂಕಿನ ಸಂಕ್ರಿಪುರದಲ್ಲಿ ‘ಶರತ್ ಎಂಬಾತ ಗರ್ಭಿಣಿ ಮಾಡಿ ಮದುವೆಯಾಗದೇ ವಂಚಿಸಿದ್ದಾನೆ’ ಎಂದು ಆರೋಪಿಸಿ ಸಿಂಧು ಪರಮೇಶಪ್ಪ ಪರಮಣ್ಣನವರ (25) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಕುದರಿಹಾಳದಲ್ಲಿದ್ದ ಶರತ್ ಮನೆ ಎದುರು ಮೃತದೇಹ ಇರಿಸಿ ಕುಟುಂಬಸ್ಥರು ಪ್ರತಿಭಟನೆ ಮಾಡಿದ್ದರು. ನಂತರ, ಶರತ್ ಸುರೇಶ ನೀಲಪ್ಪನವರ ಎಂಬಾತನನ್ನು ಪೊಲೀಸರು ಬಂಧಿಸಿದರು.
* ಬ್ಯಾನರ್ ತೆರವುಗೊಳಿಸುವ ವಿಚಾರವಾಗಿ ನಗರಸಭೆಯ ಆವರಣಕ್ಕೆ ನುಗ್ಗಿ ಪೌರಕಾರ್ಮಿಕರ ಮೇಲೆ ಹಲ್ಲೆ ನಡೆಸಿದ್ದ ಆರೋಪದಡಿ ಲಿಂಗತ್ವ ಅಲ್ಪಸಂಖ್ಯಾತರಾದ ಅಕ್ಷತಾ ಕೆ.ಸಿ. ಸೇರಿದಂತೆ ಮೂವರನ್ನು ಹಾವೇರಿ ಪೊಲೀಸರು ಬಂಧಿಸಿದರು. ಇದೇ ಪ್ರಕರಣದಿಂದ ನೊಂದು ಪೌರ ಕಾರ್ಮಿಕರ ಮೇಲ್ವಿಚಾರಕ ರಂಗಪ್ಪ ಹೆರಕಲ್ಲ (54) ಅವರು ಆತ್ಮಹತ್ಯೆ ಮಾಡಿಕೊಂಡರು.
* ದೀಪಾವಳಿ ಹಬ್ಬದ ದಿನದಂದು ಹೋರಿ ಬೆದರಿಸುವ ಸ್ಪರ್ಧೆ ಹಾಗೂ ಹೋರಿ ಮೆರವಣಿಗೆ ಸಂದರ್ಭದಲ್ಲಿ ಹೋರಿಗಳು ಗುದ್ದಿ ಹಾವೇರಿಯ ದಾನೇಶ್ವರಿನಗರದ ಚಂದ್ರಶೇಖರ ಕೋಡಿಹಳ್ಳಿ (75), ದೇವಿಹೊಸೂರಿನ ಘನಿಸಾಬ ಮಹಮ್ಮದ್ ಹುಸೇನ್ ಬಂಕಾಪುರ (75), ಹಾನಗಲ್ ತಾಲ್ಲೂಕಿನ ತಿಳವಳ್ಳಿಯ ಭರತ್ ರಾಮಪ್ಪ ಹಿಂಗಮೇರಿ (24), ಯಳವಟ್ಟಿ ಗ್ರಾಮದ ಶ್ರೀಕಾಂತ ಗುರುಶಾಂತಪ್ಪ ಕೋಣನಕೇರಿ (40) ಎಂಬುವವರು ಮೃತಪಟ್ಟರು.
* ಕಳಪೆ ಬೀಜಗಳನ್ನು ಮಾರಾಟ ಮಾಡಿ ರೈತರನ್ನು ವಂಚಿಸಿದ್ದ ಆರೋಪದಡಿ ನಿಸರ್ಗ ಸೀಡ್ಸ್ ಕಂಪನಿ, ಶಿವಂ ಸೀಡ್ಸ್, ನಿಸರ್ಗ ಸೀಡ್ಸ್, ಶ್ರೀ ಮರುಳಸಿದ್ದೇಶ್ವರ ಸೀಡ್ಸ್ ಮಳಿಗೆ ಮಾಲೀಕರು ಹಾಗೂ ನಿಸರ್ಗ ಸೀಡ್ಸ್ ಪ್ರೈವೇಟ್ ಲಿಮಿಟೆಡ್ ಮಾಲೀಕರ ವಿರುದ್ಧ ಪ್ರಕರಣ ದಾಖಲಾಯಿತು.
* ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ ಮನೋಜ್ ಪ್ರಕಾಶ ಉಡಗಣಿ (28) ಎಂಬುವವರ ಜುಲೈ 25ರಂದು ಅಪಹರಿಸಿ ಕೊಲೆ ಮಾಡಲಾಯಿತು. ಆರೋಪಿಗಳಾದ ಅಶ್ವಿನಿನಗರದ ಶಿವರಾಜ ವಿರೇಶ ಜಾಲವಡಗಿ (32), ನಾಗನೂರಿನ ಬಸವರಾಜ ಬೈಲಪ್ಪ ಓಂಕಾರಣ್ಣನವರ (35) ಹಾಗೂ ಹಿರೇಲಿಂಗದಹಳ್ಳಿಯ ವಿರೇಶ ಪರಮೇಶಪ್ಪ ಪೂಜಾರ (24) ಎಂಬುವವರನ್ನು ಪೊಲೀಸರು ಬಂಧಿಸಿದರು
ಫೆಬ್ರುವರಿ 10: ರಾಣೆಬೆನ್ನೂರು ತಾಲ್ಲೂಕಿನ ಗುಡಗೂರು ಬಳಿ ಭರತ ಹುಣ್ಣಿಮೆ ನಿಮಿತ್ತ ದೇವರಗುಡ್ಡಕ್ಕೆ ಹೊರಟಿದ್ದ ಚಕ್ಕಡಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ, ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಗೋಡಿಹಾಳದ ಆಕಾಶ್ ಮಲಕಪ್ಪ ಬಿರಾದಾರ (23), ಬೀದರ್ ಜಿಲ್ಲೆಯ ಜೋಜಾನ ಗ್ರಾಮದ ದರ್ಶನ (23) ಹಾಗೂ ಹಾವೇರಿ ತಾಲ್ಲೂಕಿನ ಕನವಳ್ಳಿ ಗ್ರಾಮದ ಶಶಿಕುಮಾರ ಹುಲಗಪ್ಪ ಉಪ್ಪಾರ (25) ಮೃತಪಟ್ಟರು.
ಮೇ 5 : ಹೊಸ ಬೈಕ್ ಖರೀದಿಸಿ ಊರಿಗೆ ಕೊಂಡೊಯ್ಯುತ್ತಿದ್ದ ಸಂದರ್ಭದಲ್ಲಿ ಗೌರಾಪುರ ಬಳಿ ಅಪಘಾತ ಸಂಭವಿಸಿ, ಹಾನಗಲ್ ತಾಲ್ಲೂಕಿನ ವರ್ದಿ ಗ್ರಾಮದ ನಾಗರಾಜ ಶಿವಯೋಗೆಪ್ಪ ಪವಾಡಿ (24) ಹಾಗೂ ಶಂಕ್ರಿಕೊಪ್ಪದ ಮಲ್ಲೇಶ ಮುರಿಗೆಪ್ಪ ದೇವಿಹೊಸೂರು (24) ಮೃತಪಟ್ಟರು.
ಜೂನ್ 18: ಅಕ್ಕಿಆಲೂರು ಬಳಿ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಗೆಜ್ಜಿಹಳ್ಳಿಯ ಅಶೋಕ ಪುಲಿಕೇಶಿ ಮಾಳಗಿ (23), ಅನು ರಘು ಚಿನ್ನಳ್ಳಿ (16) ಹಾಗೂ ಹಾನಗಲ್ ಪಟ್ಟಣದ ಚಿದಂಬರನಗರ ನಿವಾಸಿ ಶ್ರೀಧರ ಉಳವಿಸ್ವಾಮಿ ಸಾಲಿಮಠ (26) ಮೃತಪಟ್ಟರು
ಆಗಸ್ಟ್ 5: ಶಿಗ್ಗಾವಿ ತಾಲ್ಲೂಕಿನ ಬಂಕಾಪುರ ಬಳಿ ರಸ್ತೆಯ ಗುಂಡಿಯಿಂದ ಅಪಘಾತ ಸಂಭವಿಸಿ, ಬೈಕ್‌ನ ಹಿಂಬದಿ ಕುಳಿತಿದ್ದ ವರ್ದಿ ಗ್ರಾಮದ ಅನ್ನಪೂರ್ಣಾ ಕರೆಗೌಡ್ರ (45) ಮೃತಪಟ್ಟರು
ಅಕ್ಟೋಬರ್ 24: ಶಿಗ್ಗಾವಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಟಂಟಂ ಆಟೊ ಉರುಳಿಬಿದ್ದು ಗಾರ್ಮೆಂಟ್ಸ್ ಕಾರ್ಖಾನೆಯ ಉದ್ಯೋಗಿ ಸರೋಜಾ ವಿರೂಪಾಕ್ಷಪ್ಪ ಕಾಮನಹಳ್ಳಿ (35) ಮೃತಪಟ್ಟರು
* ಜನವರಿ 10–11: ಹಿರೇಕೆರೂರಿನ ಪೊಲೀಸ್ ಮೈದಾನದಲ್ಲಿ ಸಮ್ಮೇಳನಾಧ್ಯಕ್ಷರಾದ ಸಾಹಿತಿ ಸಂಕಮ್ಮ ಸಂಕಣ್ಣನವರ ಸಮ್ಮುಖದಲ್ಲಿ ‘ಹಾವೇರಿ ಜಿಲ್ಲೆಯ 14ನೇ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನ’ ನಡೆಯಿತು.
* ಜನವರಿ 22: ‘ಜಿಲ್ಲೆಯಲ್ಲಿ ಫೈನಾನ್ಸ್ ಕಂಪನಿ ಪ್ರತಿನಿಧಿಗಳಿಂದ ಕಿರುಕುಳ ಹೆಚ್ಚಾಗಿದ್ದು, ಪತಿಯಂದಿರಿಗೆ ಬೆದರಿಕೆಗಳು ಬರುತ್ತಿವೆ. ಕಿರುಕುಳ ತಪ್ಪಿಸಿ ಪತಿಯಂದಿರನ್ನು ರಕ್ಷಿಸಿ ನಮ್ಮ ಮಾಂಗಲ್ಯ ಉಳಿಸಬೇಕು’ ಎಂದು ಆಗ್ರಹಿಸಿ ಮಹಿಳೆಯರು, ತಮ್ಮ ಮಾಂಗಲ್ಯ ಸರದ ಸಮೇತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಕಳುಹಿಸಿದರು.
* ಮಾರ್ಚ್ 5: ‘ಭ್ರಷ್ಟಾಚಾರ ಸೇರಿ ಹಲವು ಆಪಾದನೆ ಹೊತ್ತಿರುವ ಕರ್ಜಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಈಶ್ವರಪ್ಪ ಎನ್.ಒ. ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿ ಸದಸ್ಯರು ಪ್ರತಿಭಟನೆ ನಡೆಸಿದರು.
* ಮಾರ್ಚ್ 7 : ‘ತುಂಗಾ ಮೇಲ್ದಂಡೆ ಯೋಜನೆಗಾಗಿ ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ ಇದುವರೆಗೂ ಪರಿಹಾರ ನೀಡಿಲ್ಲ’ ಎಂದು ಆರೋಪಿಸಿ ಮಣ್ಣೂರಿನ ಸಂತ್ರಸ್ತ ರೈತರು ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.
* ಜೂನ್ 18: ‘ದನದ ಕೊಟ್ಟಿಗೆ ನಿರ್ಮಾಣದ ಹಣ ಬಿಡುಗಡೆಯಲ್ಲಿ ಅಕ್ರಮ ನಡೆದಿದೆ’ ಎಂದು ಆರೋಪಿಸಿ ರೈತ ಚಂದ್ರಪ್ಪ ಹೊಳೆಸಿರಿಗೆರೆ ರಾಣೆಬೆನ್ನೂರು ತಾಲ್ಲೂಕಿನ ಕವಲೆತ್ತು ಗ್ರಾಮ ಪಂಚಾಯಿತಿ ಎದುರು ಆಕಳು ಕಟ್ಟಿ ಪ್ರತಿಭಟನೆ ನಡೆಸಿದರು.
* ಸವಣೂರಿನಲ್ಲಿ ಡಿ. 10ರಂದು ಸರ್ಕಾರಿ ಉರ್ದು ಶಾಲೆ ಶಿಕ್ಷಕ ಜಗದೀಶ್ ವಗ್ಗಣ್ಣನವರ ಅವರಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದ ಪ್ರಕರಣದಲ್ಲಿ ಶಾಲೆ ಮುಖ್ಯ ಶಿಕ್ಷಕ (ಪ್ರಭಾರ) ರಾಜೇಸಾಬ ಕೆ. ಸಂಕನೂರ, ಕಾನೂನು ಕ್ರಮ ಕೈಗೊಳ್ಳಲು ವಿಳಂಬ ಮಾಡಿದ ಆರೋಪದಡಿ ಸವಣೂರು ಸರ್ಕಲ್ ಇನ್‌ಸ್ಪೆಕ್ಟರ್ (ಸಿಪಿಐ) ಎಸ್. ದೇವಾನಂದ ಹಾಗೂ ಹೆಡ್ ಕಾನ್‌ಸ್ಟೆಬಲ್ ಮಲ್ಲಿಕಾರ್ಜುನ ಓದನವರ ಅವರನ್ನು ಕೆಲಸದಿಂದ ಅಮಾನತು ಮಾಡಲಾಯಿತು
* ಕರ್ತವ್ಯ ಲೋಪ ಎಸಗಿದ್ದ ಆರೋಪದಡಿ ರಾಣೆಬೆನ್ನೂರು ತಾಲ್ಲೂಕಿನ ಕವಲೆತ್ತು ಗ್ರಾಮದ ಪಿಡಿಒ ಶಾಂತಿನಾಥ ಜೈನ್, ಹಾವೇರಿ ತಾಲ್ಲೂಕಿನ ಯಲಗಚ್ಚ ಗ್ರಾಮದ ಪಿಡಿಒ ಮಾಬುಸಾಬ್ ಹೊಟ್ಟೆಫಕ್ಕೀರಣ್ಣನವರ, ಅಣಜಿ ಗ್ರಾಮ ಪಂಚಾಯಿತಿಯ ಪ್ರಭಾರಿ ಪಿಡಿಒ (ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ) ಬಸನಗೌಡ ಪಾಟೀಲ, ಮೆಡ್ಲೇರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ರವಿಕುಮಾರ ಎಚ್. ಅವರನ್ನು ಅಮಾನತು ಮಾಡಲಾಯಿತು.
* ‘ಮನೆಗಳಿಗೆ ನಂಬರ್ ಪ್ಲೇಟ್ ಅಳವಡಿಸಲು ಅಕ್ರಮವಾಗಿ ಹಣ ವಸೂಲಿ ಮಾಡಿ ಗಂಭೀರ ಸ್ವರೂಪದ ಕರ್ತವ್ಯ ಲೋಪ ಎಸಗಿದ’ ಆರೋಪದಡಿ ಹಾನಗಲ್ ತಾಲ್ಲೂಕಿನ ಅಕ್ಕಿಆಲೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಕುಮಾರ ಮಕರವಳ್ಳಿ ಅವರನ್ನು ಅಮಾನತು ಮಾಡಲಾಯಿತು.
* ‘ಮಹಿಳಾ ಸಹೋದ್ಯೋಗಿಯೊಬ್ಬರಿಗೆ ಅಸಭ್ಯ ಸಂದೇಶ ಕಳುಹಿಸಿ ಕರ್ತವ್ಯ ಲೋಪ ಎಸಗಿದ್ದಾರೆ’ ಎಂಬ ಆರೋಪದಡಿ ಹಿರೇಕೆರೂರು ವೃತ್ತ ನಿರೀಕ್ಷಕ (ಸರ್ಕಲ್ ಇನ್‌ಸ್ಪೆಕ್ಟರ್) ಬಸವರಾಜ ಪಿ.ಎಸ್. ಅವರನ್ನು ಅಮಾನತುಗೊಳಿಸಲಾಯಿತು
* ರಾಣೆಬೆನ್ನೂರು ತಾಲ್ಲೂಕಿನ ಉದಗಟ್ಟಿ ಗ್ರಾಮದ 2ನೇ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಗೌರಮ್ಮ ಇಟಗಿ ಅವರನ್ನು ಕರ್ತವ್ಯ ಲೋಪ ಆರೋಪದಡಿ ಅಮಾನತುಗೊಳಿಸಲಾಯಿತು.
* ಗುತ್ತಲ ಪಟ್ಟಣ ಪಂಚಾಯತಿಯ ಕರವಸೂಲಿಗಾರ ನಂಜುಂಡಪ್ಪ ಎಫ್. ಗಂಗಮ್ಮನವರ ಅವರನ್ನು ಕರ್ತವ್ಯಲೋಪ ಹಾಗೂ ಅನಧಿಕೃತ ಗೈರು ಹಾಜರಿ ಆರೋಪದಡಿ ಅಮಾನತುಗೊಳಿಸಲಾಯಿತು
* ಸಮುದಾಯವೊಂದರ ಪ್ರಭಾವಿ ತಂಗಿದ್ದ ಸ್ಥಳದ ಬಗ್ಗೆ ವಿರೋಧಿಗಳಿಗೆ ಲೋಕೇಷನ್ ಸಮೇತ ಮಾಹಿತಿ ಕೊಟ್ಟು ಕರ್ತವ್ಯ ಲೋಪ ಎಸಗಿದ್ದ ಆರೋಪದಡಿ ಹಾನಗಲ್ ಸರ್ಕಲ್ ಇನ್‌ಸ್ಪೆಕ್ಟರ್ (ಸಿಪಿಐ) ಆಂಜನೇಯ ಎನ್.ಎಚ್. ಅವರನ್ನು ಅಮಾನತುಗೊಳಿಸಲಾಯಿತು
* ಜಿಲ್ಲಾ ಕೇಂದ್ರ ಕಾರಾಗೃಹದ ಪಡಿತರ ಸಂಗ್ರಹ ಕೊಠಡಿಯಲ್ಲಿ ವಿಚಾರಾಣಾಧೀನ ಕೈದಿ ಕೋಟೆಪ್ಪ ಮಲ್ಲಪ್ಪ ಅಂಬಿಗೇರ (43) ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ, ಕರ್ತವ್ಯ ಲೋಪ ಎಸಗಿದ್ದ ಆರೋಪದಡಿ ಮುಖ್ಯ ವೀಕ್ಷಕರಾದ ಕೆ.ಡಿ. ಮಾದರ, ಎಸ್. ಪ್ರಭು ಹಾಗೂ ವೀಕ್ಷಕ ಅಂಬರೀಶ ಹಾವೇರಿ ಅವರನ್ನು ಅಮಾನತುಗೊಳಿಸಲಾಯಿತು.
* ಗಾಯಗೊಂಡಿದ್ದ ಬಾಲಕನ ಮುಖಕ್ಕೆ ಹೊಲಿಗೆ ಬದಲು ಫೆವಿಕ್ವಿಕ್ ಹಚ್ಚಿದ್ದ ಆರೋಪದಡಿ ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿ ಜ್ಯೋತಿ ಅವರನ್ನು ಅಮಾನತು ಮಾಡಲಾಯಿತು
* ‘ಮಕ್ಕಳ ಬಿಸಿಯೂಟದ ಹಣವನ್ನು ಅಕ್ರಮವಾಗಿ ಡ್ರಾ ಮಾಡಿಕೊಂಡು ದುರುಪಯೋಗಪಡಿಸಿಕೊಂಡಿದ್ದಾರೆ’ ಎಂಬ ಆರೋಪದಡಿ ನಾಗನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ (ಪ್ರಭಾರಿ) ಪ್ರತಾಪ್ ಎಂ. ಬಾರ್ಕಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಯಿತು.
* ಹಾನಗಲ್‌ನಿಂದ ವಿಶಾಲಗಡ್‌ಕ್ಕೆ ಹೋಗುವ ಬಸ್‌ನ್ನು ಮಾರ್ಗಮಧ್ಯೆಯೇ ನಿಲ್ಲಿಸಿ ಪ್ರಯಾಣಿಕರಿಗೆ ತೊಂದರೆಯನ್ನುಂಟು ಮಾಡಿ ಸೀಟಿನಲ್ಲಿಯೇ ನಮಾಜ್ ಮಾಡಿದ್ದ ಚಾಲಕ ನಯಾಜ್ ಮುಲ್ಲಾ ಅವರನ್ನು ಅಮಾನತು ಮಾಡಲಾಯಿತು.
* ಜೂನ್ 14: ಶಿಗ್ಗಾವಿ ತಾಲ್ಲೂಕಿನ ಕುನ್ನೂರು ಗ್ರಾಮದ ಶರೀಫಸಾಬ ಯರಗುಪ್ಪಿ ಅವರ ಮನೆಯಲ್ಲಿ ಮದುವೆ ನಡೆಯುತ್ತಿದ್ದಾಗ ಬಿಸಿ ಸಾಂಬಾರ ಪಾತ್ರೆಯಲ್ಲಿ ಬಿದ್ದು, ಎರಡೂವರೆ ವರ್ಷದ ರುಕ್ಸಾನಾಬಾನು ಮುಕ್ತುಂಸಾಬ್ ಶೇಖಸನದಿ ಎಂಬ ಬಾಲಕಿ ಮೃತಪಟ್ಟಳು.
* ಜೂನ್ 23: ಶಿಗ್ಗಾವಿ ತಾಲ್ಲೂಕಿನ ತಿಮ್ಮಾಪುರದ ಹನುಮಂತ ದೇವರ ದೇವಸ್ಥಾನದಲ್ಲಿ ದೀಪದ ಬೆಂಕಿ ಬಾಲಕಿ ಕೀರ್ತಿ ಮಲ್ಲೇಶಪ್ಪ ಚವ್ಹಾಣ (5) ಮೃತಪಟ್ಟಳು
* ಸೆಪ್ಟೆಂಬರ್ 17: ತಾಲ್ಲೂಕಿನ ಹಂಸಬಾವಿ ಬಳಿಯ ಚಿಕ್ಕನಜಿ ಕ್ರಾಸ್‌ನಲ್ಲಿರುವ (ತಿಳವಳ್ಳಿ ಕ್ರಾಸ್) ಕೆರೆಯಲ್ಲಿ ಬಿದ್ದು ಸೆ. 17ರಂದು ಎರಡೂವರೆ ವರ್ಷದ ಬಾಲಕಿ ಪೂಜಾ ನಾಗಪ್ಪ ದುರಮುರಗಿ ಮೃತಪಟ್ಟಳು
* ಅಕ್ಟೋಬರ್ 5: ರಾಣೆಬೆನ್ನೂರು ತಾಲ್ಲೂಕಿನ ಕೂನಬೇವು ಗ್ರಾಮದ ಮನೆಯೊಂದರಲ್ಲಿ ಜೋಕಾಲಿಯಲ್ಲಿ ಆಟವಾಡುತ್ತಿದ್ದ ರಾಹುಲ್ ಮಲ್ಲಿಕಾರ್ಜುನ ಬಾವಿಹಳ್ಳಿ (16) ಎಂಬ ಬಾಲಕ ಉಸಿರುಗಟ್ಟಿ ಮೃತಪಟ್ಟ
* ಅಕ್ಟೋಬರ್ 19: ಹಾವೇರಿ ಶಿವಬಸವನಗರದ ಮನೆಯೊಂದರ ಎದುರು ತುಂಬಿಸಿಟ್ಟಿದ್ದ ಬಕೆಟ್ ನೀರಿನಲ್ಲಿ ಬಿದ್ದು 14 ತಿಂಗಳ ದಕ್ಷಿತ್ ಎಂಬ ಮಗು ಮೃತಪಟ್ಟಿತು.
* ಆಕ್ಟೋಬರ್ 28: ರಟ್ಟೀಹಳ್ಳಿ ತಾಲ್ಲೂಕಿನ ಗುಂಡಗಟ್ಟಿ ಗ್ರಾಮದ ಮನೆಯೊಂದರಲ್ಲಿ ಅಡುಗೆ ಅನಿಲ ಸೋರಿಕೆಯಾಗಿದ್ದರಿಂದ ಪ್ರಜ್ಞೆ ತಪ್ಪಿ ಬಿದ್ದು ಬಾಲಕ ಮಂಜಪ್ಪ ಕರಬಸಪ್ಪ ಬೆಳ್ಳೊಡಿ (17) ಎಂಬಾತ ಮೃತಪಟ್ಟ.
* ಜಿಲ್ಲೆಯಲ್ಲಿ ಫೆಬ್ರುವರಿ 12ರಿಂದ 14ರವರೆಗೆ ಪ್ರವಾಸ ಕೈಗೊಂಡಿದ್ದ ಉಪ ಲೋಕಾಯುಕ್ತ ಬಿ. ವೀರಪ್ಪ, ವಿವಿಧ ಕಾರಣಕ್ಕೆ 11 ಅಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡರು
* ಏಪ್ರಿಲ್ 19: ಬಾಕಿ ವೇತನ ಮಂಜೂರು ಮಾಡಲು ₹ 30 ಸಾವಿರ ಲಂಚಕ್ಕೆ ಬೇಡಿಕೆ ಇರಿಸಿ ಮುಂಗಡವಾಗಿ ₹ 15 ಸಾವಿರ ಪಡೆಯುತ್ತಿದ್ದ ಆರೋಪದಡಿ ಹಾವೇರಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ್ ಬಡಿಗೇರ ಹಾಗೂ ಜೀಪು ಚಾಲಕ ಪಾಪು ಪೂಮಪ್ಪ ಉದಾಯತ್ ಅವರನ್ನು ಬಂಧಿಸಲಾಯಿತು
* ಮೇ 12: ಗೋದಾಮು ನಿರ್ಮಾಣ ಕಾಮಗಾರಿಯ ಬಿಲ್ ಮಂಜೂರು ಮಾಡಲು ಲಂಚ ಪಡೆಯುತ್ತಿದ್ದ ಆರೋಪದಡಿ ಸವಣೂರು ತಾಲ್ಲೂಕಿನ ತೆಗ್ಗಿಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ದಾವಲಮಲಿಕ್ ಇಮಾಮಸಾಬ್ ಮುರುಡಿ ಅವರನ್ನು ಬಂಧಿಸಲಾಯಿತು
* ಮೇ 19: ಸವಣೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ವಿದ್ಯಾರ್ಥಿಯೊಬ್ಬರಿಗೆ ಪ್ರವೇಶ ನೀಡಲು ₹ 10 ಸಾವಿರ ಲಂಚ ಪಡೆದ ಆರೋಪದಡಿ ಮುಖ್ಯ ಶಿಕ್ಷಕ ಮಂಜುನಾಥ ಕಲ್ಲಪ್ಪ ಕಾಟೇನಹಳ್ಳಿ ಅವರನ್ನು ಬಂಧಿಸಲಾಯಿತು.
* ಮೇ 31: ಶಿಗ್ಗಾವಿ ತಾಲ್ಲೂಕಿನ ಬಾಡ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ರಾಮಕೃಷ್ಣ ಬಿ. ಗುಡಗೇರಿ ಅವರ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿ, ಆದಾಯಕ್ಕಿಂತ ಶೇ 138ರಷ್ಟು ಅಕ್ರಮ ಆಸ್ತಿ ಹೊಂದಿರುವುದನ್ನು ಪತ್ತೆ ಮಾಡಲಾಯಿತು
* ಜೂನ್ 27: ‘ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದರು’ ಎನ್ನಲಾದ ಬಾಲಕಿ ವಂದನಾ ತುಪ್ಪದ ಅವರ ಸಾವಿನ ಪ್ರಕರಣದಲ್ಲಿ ಆಸ್ಪತ್ರೆಯ ಪರವಾಗಿ ಎಫ್‌ಎಸ್‌ಎಲ್ (ವಿಧಿ ವಿಜ್ಞಾನ ಪ್ರಯೋಗಾಲಯ) ವರದಿ ನೀಡಲು ₹ 5 ಲಕ್ಷ ಲಂಚಕ್ಕೆ ಬೇಡಿಕೆ ಇರಿಸಿದ್ದ ಆರೋಪದಡಿ ಜಿಲ್ಲಾಸ್ಪತ್ರೆಯ ವೈದ್ಯ ಡಾ. ಗುರುರಾಜ ಭೀಮರಾಯ ಬಿರಾದಾರ ಹಾಗೂ ಇಜಾರಿಲಕಮಾಪುರದ ನಿವಾಸಿ ಚನ್ನಬಸಯ್ಯ ಶಂಕ್ರಯ್ಯ ಕುಲಕರ್ಣಿ ಅವರನ್ನು ಬಂಧಿಸಲಾಯಿತು
* ಅಕ್ಟೋಬರ್ 9: ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿ ನಾಡಕಚೇರಿಯಲ್ಲಿ ಲಂಚ ಪಡೆಯುತ್ತಿದ್ದ ಆರೋಪದಡಿ ಉಪ ತಹಶೀಲ್ದಾರ್ ನಾಗರಾಜ ಸೂರ್ಯವಂಶಿ ಹಾಗೂ ಕಂಪ್ಯೂಟರ್ ಆಪರೇಟರ್ ಕಿರಣ ಮುದಕಣ್ಣನವರ ಅವರನ್ನು ಬಂಧಿಸಲಾಯಿತು
* ಅಕ್ಟೋಬರ್ 18: ಹಾನಗಲ್ ತಹಶೀಲ್ದಾರ್ ಕಚೇರಿಯಲ್ಲಿ ಪಹಣಿ ಪತ್ರ (ಆರ್.ಟಿ.ಸಿ.) ದುರಸ್ತಿ ಮಾಡಿಸಲು ₹ 12 ಸಾವಿರ ಲಂಚ ಪಡೆಯುತ್ತಿದ್ದ ಆರೋಪದಡಿ ಶಿರಸ್ತೆದಾರ ತಮ್ಮಣ್ಣ ಕಾಂಬಳೆ, ಎಸ್‌ಡಿಎ ಗೂಳಪ್ಪ ಮನಗೂಳಿ ಹಾಗೂ ಕೃತ್ಯಕ್ಕೆ ಸಹಕರಿಸಿದ್ದ ಎಸ್‌ಡಿಎ ಶಿವಾನಂದ ಬಡಿಗೇರ್ ಎಂಬುವವರನ್ನು ಬಂಧಿಸಲಾಯಿತು.
* ನವೆಂಬರ್ 25: ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಹಾವೇರಿ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಎಂಜಿನಿಯರ್ ಶೇಖಪ್ಪ ಸಣ್ಣಪ್ಪ ಮತ್ತೀಕಟ್ಟಿ ಅವರ ಮನೆ ಹಾಗೂ ಇತರೆ ಸ್ಥಳಗಳ ಮೇಲೆ ದಾಳಿ ಮಾಡಿ, ₹ 3.69 ಕೋಟಿ ಮೊತ್ತದ ಆಸ್ತಿ ಪತ್ತೆ ಮಾಡಲಾಯಿತು.
* ಡಿಸೆಂಬರ್ 23: ಕ್ಲಿನಿಕ್ ನಡೆಸಲು ಅಗತ್ಯವಿದ್ದ ವೈದ್ಯಕೀಯ ತ್ಯಾಜ್ಯ ನಿರ್ವಹಣಾ ಪ್ರಮಾಣ ಪತ್ರ (ಬಿಎಂಡಬ್ಲ್ಯು) ನೀಡಲು ₹ 10 ಸಾವಿರ ಲಂಚಕ್ಕೆ ಬೇಡಿಕೆ ಇರಿಸಿದ್ದ ಆರೋಪದಡಿ ಡಾಟಾ ಎಂಟ್ರಿ ಆಪರೇಟರ್ ಸವಿತಾ ಬೆಳ್ಳಿಗಟ್ಟಿ ಅವರನ್ನು ಬಂಧಿಸಲಾಯಿತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.