ADVERTISEMENT

ಹಾವೇರಿ | ಜಲಾವೃತವಾದ ಜಮೀನು; ಬೆಳೆದ ಬೆಳೆ ವರದಾ ನದಿ ಪಾಲು: ರೈತರ ಆತಂಕ

* ಸೋಯಾಬಿನ್, ಮೆಕ್ಕೆಜೋಳ, ತರಕಾರಿ ಜಲಾವೃತ * ಆರ್ಥಿಕ ಸಂಕಷ್ಟದಲ್ಲಿ ರೈತರು

ಸಂತೋಷ ಜಿಗಳಿಕೊಪ್ಪ
Published 23 ಜುಲೈ 2024, 4:05 IST
Last Updated 23 ಜುಲೈ 2024, 4:05 IST
ಹಾವೇರಿ ತಾಲ್ಲೂಕಿನ ಕರ್ಜಗಿ ಬಳಿ ವರದಾ ನದಿ ನೀರಿನಲ್ಲಿ ಕ್ರಮೇಣ ಮುಳುಗುತ್ತಿರುವ ಟೊಮೆಟೊ ಬೆಳೆ ತೋರಿಸುತ್ತಿರುವ ರೈತ ಸತೀಶ ದಳವೆ
– ಪ್ರಜಾವಾಣಿ ಚಿತ್ರ/ ಮಾಲತೇಶ ಇಚ್ಚಂಗಿ
ಹಾವೇರಿ ತಾಲ್ಲೂಕಿನ ಕರ್ಜಗಿ ಬಳಿ ವರದಾ ನದಿ ನೀರಿನಲ್ಲಿ ಕ್ರಮೇಣ ಮುಳುಗುತ್ತಿರುವ ಟೊಮೆಟೊ ಬೆಳೆ ತೋರಿಸುತ್ತಿರುವ ರೈತ ಸತೀಶ ದಳವೆ – ಪ್ರಜಾವಾಣಿ ಚಿತ್ರ/ ಮಾಲತೇಶ ಇಚ್ಚಂಗಿ   

ಹಾವೇರಿ: ಜಿಲ್ಲೆಯಲ್ಲಿ ಹರಿಯುತ್ತಿರುವ ವರದಾ ನದಿಯ ನೀರಿನ ಮಟ್ಟ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ನದಿಯ ಅಚ್ಚುಕಟ್ಟು ಪ್ರದೇಶದ ಜಮೀನುಗಳಲ್ಲಿ ಬೆಳೆದ ಬೆಳೆಗಳೆಲ್ಲವೂ ನೀರು ಪಾಲಾಗುತ್ತಿವೆ.

ಮೆಕ್ಕೆಜೋಳ, ಸೋಯಾಬೀನ್, ಟೊಮೆಟೊ, ಮೆಣಸಿನಕಾಯಿ ಮತ್ತಿತರ ಬೆಳೆಗಳನ್ನು ಹೆಚ್ಚು ಬೆಳೆಯಲಾಗಿದೆ. ನಿರಂತರ ಮಳೆಯಿಂದ ಬೆಳೆಗಳು ಹಸಿರಿನಿಂದ ಕಂಗೊಳಿಸಿದವು. ಆದರೆ, ಈಗ ಜಮೀನುಗಳು ಜಲಾವೃತವಾಗಿವೆ.

ವರದಾ ನದಿ ಹರಿದು ಹೋಗುವ ಹಾವೇರಿ, ಹಾನಗಲ್, ಸವಣೂರು ತಾಲ್ಲೂಕಿನ ಅಚ್ಚುಕಟ್ಟು ಪ್ರದೇಶದ ಜಮೀನುಗಳಲ್ಲಿ ಮೆಕ್ಕೆಜೋಳ, ಸೋಯಾಬೀನ್, ಟೊಮೆಟೊ, ಮೆಣಸಿನಕಾಯಿ ಸೇರಿ ಇತರೆ ತರಕಾರಿ ಬೆಳೆ ಎಲ್ಲವೂ ನೀರುಪಾಲಾಗಿದೆ. ಕರ್ಜಗಿ– ಕಲ್ಲಕೋಟಿ ನಡುವಿನ ಮಾರ್ಗದಲ್ಲಿನ ನೂರಾರು ಎಕೆರೆ ಕೃಷಿ ಪ್ರದೇಶದಲ್ಲಿ ನೀರು ನಿಂತಿದೆ.

ADVERTISEMENT

‘ಶಿವಮೊಗ್ಗ ಮತ್ತು ಚಿಕ್ಕಮಗಳೂರು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಇದೇ ನೀರು ವರದಾ ನದಿ ಮೂಲಕ ಹಾವೇರಿ ಜಿಲ್ಲೆಯಲ್ಲಿ ಹರಿಯುತ್ತಿದೆ. ನದಿ ನೀರಿನ ಹರಿವು ಹೆಚ್ಚಳವಾಗಿ, ಎ‌ಲ್ಲಾ ಕಡೆ ನೀರು ನುಗ್ಗುತ್ತಿದೆ. ಕಟಾವು ಹಂತಕ್ಕೆ ಬಂದಿದ್ದ ಬೆಳೆಗಳು ಮುಳುಗಡೆಯಾಗಿವೆ. ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ’ ಎಂದು ರೈತರು ತಿಳಿಸಿದರು.

‘ನದಿ ಅಕ್ಕಪಕ್ಕದ 50ಕ್ಕೂ ಹೆಚ್ಚು ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದಿದ್ದೇವೆ. ಈಗ ನೀರು ಹೆಚ್ಚಳವಾಗಿ, ಎಲ್ಲ ಜಮೀನುಗಳಲ್ಲಿ ನೀರು ನಿಂತಿದೆ. ಕೆಲವೇ ದಿನಗಳಲ್ಲಿ ಊರಿಗೂ ನೀರು ನುಗ್ಗುವ ಆತಂಕವಿದೆ’ ಎಂದು ಹಾವೇರಿ ತಾಲ್ಲೂಕಿನ ಕಲಕೋಟಿ ರೈತ ಬಸವಣ್ಣೆಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ತರಾತುರಿ ಕಟಾವು, ಕಾರ್ಮಿಕರ ಕೊರತೆ: ವರದಾ ನದಿ ದಡದಲ್ಲಿರುವ ಕರ್ಜಗಿ, ದೇವಗಿರಿ, ನಾಗನೂರು ಹಾಗೂ ಇತರೆ ಗ್ರಾಮಗಳಲ್ಲಿ ರೈತರು ತರಾತುರಿಯಲ್ಲಿ ಟೊಮೆಟೊ ಕಟಾವು ಮಾಡುತ್ತಿದ್ದಾರೆ. ನದಿ ನೀರಿನ ಹರಿವು ಇರುವುದರಿಂದ, ಕಾಯಿ ಕೀಳಲು ಕಾರ್ಮಿಕರ ಕೊರತೆ ಎದುರಾಗಿದೆ. ಕರ್ಜಗಿ ಬಳಿ ಮೂರೂವರೆ ಎಕರೆಯಲ್ಲಿ ಟೊಮೆಟೊ ಬೆಳೆದಿರುವ ರೈತ ಸತೀಶ ದಳವೆ ಅವರು ಬೆಳೆ ಹಾನಿಯಾದ ಬಗ್ಗೆ ಕಣ್ಣೀರಿಟ್ಟರು.

ಮೂರೂವರೆ ಎಕರೆಯಲ್ಲಿ ಬೆಳೆದ ಟೊಮೆಟೊ ಗುಣಮಟ್ಟ ಉತ್ತಮವಿತ್ತು. ಈಗ ನದಿ ನೀರು ನುಗ್ಗಿ ಒಂದೂವರೆ ಎಕರೆ ಜಮೀನಿನಲ್ಲಿ ನೀರು ನಿಂತಿದೆ. ಉಳಿದ ಜಮೀನಿಗೂ ನೀರು ನುಗ್ಗುತ್ತಿದೆ.
ಸತೀಶ ಕೆ. ದಳವೆ ರೈತ ಕರ್ಜಗಿ ಹಾವೇರಿ ಜಿಲ್ಲೆ
ನದಿಯ ಅಕ್ಕಪಕ್ಕದ ಜಮೀನಿನಲ್ಲಿದ್ದ ಬಾಳೆ ತರಕಾರಿ ಹಾಗೂ ಇತರೆ ಬೆಳೆ ಜಲಾವೃತಗೊಂಡಿದೆ. ಬೆಳೆ ಹಾನಿ ಸೇರಿದಂತೆ ಒಟ್ಟಾರೆ ನಷ್ಟದ ಬಗ್ಗೆ ಸಮೀಕ್ಷೆ ಪ್ರಕ್ರಿಯೆ ನಡೆದಿದೆ.
ವಿಜಯ ಮಹಾಂತೇಶ ದಾನಮ್ಮನವರ ಜಿಲ್ಲಾಧಿಕಾರಿ ಹಾವೇರಿ

31.27 ಹೆಕ್ಟೇರ್ ಬೆಳೆ ಹಾನಿ

49 ಬೆಳೆ ಹಾನಿ ಅನುಭವಿಸಿದ ರೈತರ ಸಂಖ್ಯೆ

(ಹಾವೇರಿ ಜಿಲ್ಲಾಡಳಿತ ಮಾಹಿತಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.