ಹಾವೇರಿ: ಜಿಲ್ಲೆಯ ಹಲವು ಕಡೆಗಳಲ್ಲಿ ವಿದ್ಯುತ್ ಕಂಬಗಳ ಸಮೇತ ತಂತಿಗಳು ಜೋತು ಬಿದ್ದಿದ್ದು, ರೈತರು ಹಾಗೂ ನಿವಾಸಿಗಳು ನಿತ್ಯವೂ ಜೀವ ಭಯದಲ್ಲಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಕೈಗೆ ನಿಲುಕುವ ರೀತಿಯಲ್ಲಿ ಜೋತು ಬಿದ್ದ ವಿದ್ಯುತ್ ತಂತಿಗಳಿಂದಾಗಿ ಬೆಳೆಗೂ ಬೆಂಕಿ ತಗುಲಿದ್ದ ಪ್ರಕರಣಗಳು ವರದಿಯಾಗುತ್ತಿದ್ದು, ರೈತರು ಆರ್ಥಿಕವಾಗಿಯೂ ಸಂಕಷ್ಟದಲ್ಲಿ ಸಿಲುಕುತ್ತಿದ್ದಾರೆ.
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಹೆಸ್ಕಾಂ) ವ್ಯಾಪ್ತಿಯಲ್ಲಿರುವ ಹಾವೇರಿ ಜಿಲ್ಲೆಯ ಹಲವು ಕಡೆಗಳಲ್ಲಿ ಅಳವಡಿಸಿರುವ ವಿದ್ಯುತ್ ಕಂಬಗಳು ಹಾಗೂ ತಂತಿಗಳು ಹಳೆಯದ್ದಾಗಿವೆ. ಅಪಾಯಕ್ಕೆ ಆಹ್ವಾನ ನೀಡುವಂತಿರುವ ಕಂಬಗಳು ಹಾಗೂ ತಂತಿಗಳ ಸ್ಥಳಾಂತರಕ್ಕೆ ಹೆಸ್ಕಾಂ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಜಿಲ್ಲೆಯ ಹಾವೇರಿ, ರಾಣೆಬೆನ್ನೂರು, ಹಾನಗಲ್, ಹಿರೇಕೆರೂರು, ರಟ್ಟೀಹಳ್ಳಿ, ಶಿಗ್ಗಾವಿ, ಸವಣೂರು ಹಾಗೂ ಬ್ಯಾಡಗಿ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ವಿದ್ಯುತ್ ತಂತಿಗಳು ಕೈಗೆ ಸಿಗುವ ರೀತಿಯಲ್ಲಿ ಜೋತು ಬಿದ್ದಿವೆ. ರಸ್ತೆ ಬದಿ ಹಾಗೂ ಜಮೀನುಗಳ ಮಧ್ಯದಲ್ಲಿರುವ ವಿದ್ಯುತ್ ಕಂಬಗಳು ಸಹ ಬಾಗಿವೆ. ಇಂಥ ಕಂಬಗಳ ಬಳಿ ಓಡಾಡಲು ನಿವಾಸಿಗಳು ಹಾಗೂ ರೈತರು ಭಯಪಡುತ್ತಿದ್ದಾರೆ.
ವಿದ್ಯುತ್ ಕಂಬ ಹಾಗೂ ತಂತಿಗಳಿಂದ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಹೆಸ್ಕಾಂ ಅಧಿಕಾರಿಗಳಿಗೆ ಜನರು ಪದೇ ಪದೇ ದೂರು ನೀಡುತ್ತಿದ್ದಾರೆ. ಅನುದಾನದ ನೆಪ ಹೇಳುತ್ತಿರುವ ಅಧಿಕಾರಿಗಳು, ಕಂಬ ಹಾಗೂ ತಂತಿ ಬದಲಾವಣೆಗೆ ಕ್ರಮ ಕೈಗೊಳ್ಳುತ್ತಿಲ್ಲವೆಂದು ಜನರು ದೂರುತ್ತಿದ್ದಾರೆ.
ಜಿಲ್ಲೆಯ ಹಲವು ಗ್ರಾಮಗಳಲ್ಲಿ 40ರಿಂದ 50 ವರ್ಷಗಳ ಹಿಂದೆ ವಿದ್ಯುತ್ ಕಂಬಗಳನ್ನು ಅಳವಡಿಸಿ, ತಂತಿ ಎಳೆಯಲಾಗಿದೆ. ಇಂದಿಗೂ ಅದೇ ಕಂಬ ಹಾಗೂ ತಂತಿಗಳು ಇದ್ದು, ಅಲ್ಲಲ್ಲಿ ಕಳಚಿ ಬೀಳುತ್ತಿವೆ.
‘ವಿದ್ಯುತ್ ಕಂಬಗಳ ಸಿಮೆಂಟ್ ಕಿತ್ತು ಹೋಗಿದ್ದು, ಒಳಗಿನ ಕಬ್ಬಿಣದ ರಾಡುಗಳು ಹೊರಗೆ ಬಂದಿವೆ. ಹಲವು ಕಡೆಗಳಲ್ಲಿ ಕಂಬಗಳು ಭಾಗಶಃ ಬಾಗಿದ್ದು, ಇಂದು ಅಥವಾ ನಾಳೆ ಬೀಳುವ ಸ್ಥಿತಿಯಲ್ಲಿವೆ’ ಎಂದು ಕಬ್ಬೂರು ರೈತ ಚಂದ್ರಪ್ಪ ಹೇಳಿದರು.
‘ಕೆರಿಮತ್ತಿಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ನಮ್ಮೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯುದ್ದಕ್ಕೂ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದೆ. ಈ ಪೈಕಿ ಹಲವು ಕಂಬಗಳು ಬಾಗಿವೆ. ವಿದ್ಯುತ್ ತಂತಿಗಳು, ಕೈಗೆ ಸಿಗುವಷ್ಟು ಜೋತು ಬಿದ್ದಿವೆ. ಇದರಿಂದಾಗಿ ರಸ್ತೆಯಲ್ಲಿ ಓಡಾಡಲು ಭಯವಾಗುತ್ತಿವೆ’ ಎಂದು ಅವರು ಅಳಲು ತೋಡಿಕೊಂಡರು.
ಗೌರಾಪುರದ ರೈತ ಲಕ್ಷ್ಮಣ ಮಾವಿನಕೊಪ್ಪ, ‘ಹೊಲಕ್ಕೆ ಹೋಗುವ ದಾರಿಯಲ್ಲಿರುವ ವಿದ್ಯುತ್ ಕಂಬಗಳು ಹಳೆಯದ್ದಾಗಿವೆ. ನಾವು ಸಣ್ಣವರಿದ್ದಾಗ ಈ ಕಂಬಗಳನ್ನು ಹಾಕಲಾಗಿತ್ತು. ಅಂದಿನಿಂದ ಕಂಬಗಳನ್ನು ಬದಲಾವಣೆ ಮಾಡಿಲ್ಲ. ಇಂದಿನ ಕಂಬಗಳು, ನಿಧಾನವಾಗಿ ಬಾಗುತ್ತಿವೆ. ತಂತಿಗಳು ಜೋತು ಬಿದ್ದಿದ್ದರಿಂದ, ಜಮೀನಿಗೆ ಹೋಗಿ ಬರುವಾಗ ಭಯವಾಗುತ್ತಿದೆ’ ಎಂದು ಹೇಳಿದರು.
ಹಾವೇರಿ ಜಿಲ್ಲೆಯ ಸಂಗೂರು ಗ್ರಾಮದಲ್ಲಿ 2024ರ ಡಿಸೆಂಬರ್‌ನಲ್ಲಿ 4 ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬಿಗೆ ಬೆಂಕಿ ತಗುಲಿತ್ತು. ಬಹುತೇಕ ಕಬ್ಬು ಸುಟ್ಟು ಹೋಗಿತ್ತು.
‘ಜಮೀನಿನಲ್ಲಿ ಹಾದು ಹೋಗಿದ್ದ ವಿದ್ಯುತ್ ಕಂಬದಿಂದ ಶಾರ್ಟ್ ಸರ್ಕಿಟ್ ಉಂಟಾಗಿ, ಬೆಂಕಿ ತಗುಲಿದೆ’ ಎಂದು ಆರೋಪಿಸಿದ್ದ ರೈತರು ಹೆಸ್ಕಾಂ ಅಧಿಕಾರಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಇದರನ್ವಯ ಪ್ರಕರಣವೂ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
‘ಜಿಲ್ಲೆಯ ಬಹುತೇಕ ಕಡೆ ವಿದ್ಯುತ್ ಕಂಬಗಳು ಹಾಗೂ ತಂತಿಗಳು ಹಳೇಯದ್ದಾಗಿವೆ. ಸಂಗೂರಿನ ರೈತ ಹೇಮಣ್ಣ ಸೇರಿ ಇಬ್ಬರು ರೈತರ ಜಮೀನಿನಲ್ಲಿಯೇ ವಿದ್ಯುತ್ ತಂತಿ ಹಾದು ಹೋಗಿವೆ. ತಂತಿಗಳೂ ಹಳೆಯದ್ದಾಗಿವೆ. ಜೋರಾಗಿ ಗಾಳಿ ಬಿಟ್ಟಿದ್ದ ಸಂದರ್ಭದಲ್ಲಿ ಒಂದಕ್ಕೊಂದು ತಂತಿಗಳು ತಗುಲಿದ್ದರಿಂದ, ಶಾರ್ಟ್ ಸರ್ಕಿಟ್ ಉಂಟಾಗಿತ್ತು. ಬೆಂಕಿಯ ಕಿಡಿ, ಕಬ್ಬಿಗೆ ತಗುಲಿತ್ತು. ಕೆಲ ನಿಮಿಷಗಳಲ್ಲಿ ಇಡೀ ಕಬ್ಬಿಗೆ ಬೆಂಕಿ ಹೊತ್ತಿಕೊಂಡಿತ್ತು’ ಎಂದು ಕಬ್ಬು ಬೆಳೆಗಾರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭುವನೇಶ್ವರ ಶಿಡ್ಲಾಪೂರ ಹೇಳಿದರು.
‘ಜೋತು ಬಿದ್ದ ವಿದ್ಯುತ್ ತಂತಿಗಳು ಹಾಗೂ ಬಾಗಿದ ಕಂಬಗಳನ್ನು ಬದಲಾವಣೆ ಮಾಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಅನುದಾನ ಇಲ್ಲವೆಂದು ಕೈ ತೊಳೆದುಕೊಳ್ಳುತ್ತಿದ್ದಾರೆ. ಹೆಸ್ಕಾಂ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ, ಮೇಲಿಂದ ಮೇಲೆ ವಿದ್ಯುತ್ ಅವಘಡಗಳು ಸಂಭವಿಸುತ್ತಿದೆ. ಮುಂದಿನ ದಿನಗಳಲ್ಲಿ ಯಾರಿಗಾದರೂ ಜೀವ ಹಾನಿಯಾದರೆ ಯಾರು ಹೊಣೆ’ ಎಂದು ಅವರು ಪ್ರಶ್ನಿಸಿದರು.
‘ಹಲವು ಕಡೆಗಳಲ್ಲಿ ವಿದ್ಯುತ್ ಕಂಬದ ಸಿಮೆಂಟ್ ಕಿತ್ತು ಹೋಗಿದೆ. ಕಂಬಗಳನ್ನು ಬದಲಾವಣೆ ಮಾಡುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಅಷ್ಟಾದರೂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಕೆಲವು ಕಡೆಗಳಲ್ಲಿ 50 ವರ್ಷಗಳ ಕಂಬಗಳಿವೆ. ಜೋರು ಗಾಳಿ ಬಿಟ್ಟ ಸಂದರ್ಭದಲ್ಲಿ ರೈತರು ಆತಂಕಪಡುವಂತಾಗಿದೆ’ ಎಂದು ಹೇಳಿದರು.
ಹಾನಗಲ್ ತಾಲ್ಲೂಕಿನ ನರೇಗಲ್ ಗ್ರಾಮಕ್ಕೆ ಹೊಂದಿರುವ ಕೆರೆ ದಡದಲ್ಲಿ ವಿದ್ಯುತ್ ಕಂಬಗಳು ತಂತಿ ಸಮೇತ ಬಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿವೆ.
ವರ್ದಿ ಗ್ರಾಮದಿಂದ ನರೇಗಲ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬೃಹತ್ ಕೆರೆಯಿದೆ. ಇದರ ದಡದ ಮೇಲೆ ವಿದ್ಯುತ್ ಕಂಬಗಳು ಅಳವಡಿಸಲಾಗಿದ್ದು, ಅವುಗಳು ಬಾಗಿ ಹಲವು ತಿಂಗಳಾಗಿದೆ. ಅವುಗಳ ಬದಲಾವಣೆಗೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲವೆಂದು ಗ್ರಾಮಸ್ಥರು ದೂರುತ್ತಿದ್ದಾರೆ.
‘ರೈತರು ಜಮೀನಿಗೆ ಇದೇ ರಸ್ತೆ ಮೂಲಕ ಹೋಗುತ್ತಾರೆ. ಕೆಲವು ಬಾರಿ ಕೆರೆಗೆ ಇಳಿದು, ಮುಖ ತೊಳೆದುಕೊಳ್ಳುತ್ತಾರೆ. ಜಾನುವಾರುಗಳ ಮೈ ತೊಳೆಯಲು ಸಹ ರೈತರು ಕೆರೆಗೆ ಹೋಗಿ ಬರುತ್ತಾರೆ. ಇಂಥ ಸಂದರ್ಭದಲ್ಲಿ ಏನಾದರೂ ಅನಾಹುತಗಳು ಸಂಭವಿಸಿದರೆ, ಯಾರು ಹೊಣೆ’ ಎಂದು ಗ್ರಾಮಸ್ಥರು ಪ್ರಶ್ನಿಸಿದರು.
ವಿದ್ಯುತ್ ಸಂಬಂಧಿತವಾಗಿ ಯಾವುದೇ ಸಮಸ್ಯೆ ಇದ್ದರೆ ತಕ್ಷಣ ದೂರು ನೀಡಬೇಕು. ಜನರ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಲಾಗುವುದುನಾರಾಯಣ ಕಳ್ಳಿಮನಿ ಹಾವೇರಿ ಉಪವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್
ಅಪಾಯ ಸ್ಥಿತಿಯಲ್ಲಿರುವ ಕಂಬ–ತಂತಿಗಳನ್ನು ತ್ವರಿತವಾಗಿ ಸ್ಥಳಾಂತರಿಸಬೇಕು. ಏನಾದರೂ ಅನಾಹುತವಾದರೆ ಹೆಸ್ಕಾಂ ಅಧಿಕಾರಿಗಳೇ ಹೊಣೆಯಾಗಲಿದ್ದಾರೆಭುವನೇಶ್ವರ ಶಿಡ್ಲಾಪೂರ ಕಬ್ಬು ಬೆಳೆಗಾರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ
‘ಹಳೇ ಕಂಬ ಹಾಗೂ ತಂತಿಯನ್ನು ಬದಲಿಸಿ ಹೊಸ ಕಂಬ–ತಂತಿ ಅಳವಡಿಸುವುದು ನಿರಂತರ ಪ್ರಕ್ರಿಯೆ. ಜನರ ಮನವಿಯಂತೆ ಆದ್ಯತೆ ಮೇರೆಗೆ ಹೊಸ ಕಂಬ ಹಾಗೂ ತಂತಿ ಅಳವಡಿಸುವ ಕೆಲಸ ನಡೆಯುತ್ತಿದೆ’ ಎಂದು ಹಾವೇರಿ ಉಪವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ನಾರಾಯಣ ಕಳ್ಳಿಮನಿ ತಿಳಿಸಿದರು. ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘ಕಂಬಗಳು ಹಾಗೂ ತಂತಿಗಳ ಬದಲಾವಣೆ ಅಗತ್ಯತೆ ಬಗ್ಗೆ ವಿಭಾಗದ ಎಂಜಿನಿಯರ್‌ಗಳು ಪಟ್ಟಿ ಮಾಡಿಕೊಳ್ಳುತ್ತಾರೆ. ಅನುದಾನದ ಲಭ್ಯತೆ ಆಧರಿಸಿ ಕಂಬ–ತಂತಿ ಬದಲಾವಣೆ ಮಾಡುತ್ತಿರುತ್ತಾರೆ’ ಎಂದರು. ‘ಕಂಬ–ತಂತಿ ಬದಲಾವಣೆ ಬಗ್ಗೆ ರೈತರು ಗ್ರಾಮಸ್ಥರಿಂದ ಮನವಿಗಳು ಬಂದರೆ ಪರಿಶೀಲನೆ ನಡೆಸಲಾಗುತ್ತಿದೆ. ಹೆಚ್ಚು ಅಪಾಯವಿದ್ದರೆ ತ್ವರಿತವಾಗಿ ಕಂಬ–ತಂತಿ ಬದಲಾವಣೆ ಮಾಡಲಾಗುತ್ತದೆ. ಜನರಿರುವ ಪ್ರದೇಶಗಳಲ್ಲಿ ಕಂಬ–ತಂತಿಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಹೆಚ್ಚಿನ ನಿಗಾ ವಹಿಸಲಾಗಿದೆ’ ಎಂದು ಹೇಳಿದರು.
ಜಿಲ್ಲೆಯ ಹಲವು ಜಮೀನುಗಳಲ್ಲಿ ಹೈಟೆನ್ಶನ್ ತಂತಿಗಳು ಹಾದು ಹೋಗಿವೆ. ಇಂಥ ಸ್ಥಳಗಳಲ್ಲಿ ವಿದ್ಯುತ್ ಪ್ರಸರಣದ ಸಾಮರ್ಥ್ಯವಿದ್ದು ಜೋರು ಶಬ್ದವೂ ಕೇಳಿಸುತ್ತಿದೆ. ಇಂಥ ಸ್ಥಿತಿಯಿಂದ ಜಮೀನಿನಲ್ಲಿ ಉಳುಮೆ ಮಾಡಲು ರೈತರು ಭಯಪಡುತ್ತಿದ್ದಾರೆ. ಹೈಟೆನ್ಶನ್ ತಂತಿ ಸ್ಥಳಾಂತರಕ್ಕೆ ಜನರು ಮನವಿ ಸಲ್ಲಿಸುತ್ತಿದ್ದಾರೆ. ಹೆಸ್ಕಾಂ ಅಧಿಕಾರಿಗಳು ಆದ್ಯತೆ ಮೇರೆಗೆ ತಂತಿಗಳನ್ನು ಸ್ಥಳಾಂತರಿಸುವ ಕೆಲಸ ಮಾಡುತ್ತಿದ್ದಾರೆ.
1912 ವಿದ್ಯುತ್ ಸಂಬಂಧಿತ ಯಾವುದೇ ದೂರು ನೀಡಲು ಸಹಾಯವಾಣಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.