ಹಿರೇಕೆರೂರು: ಇಲ್ಲಿಯ ಪಟ್ಟಣ ಪಂಚಾಯಿತಿ ಕಟ್ಟಡದ ಮೊದಲ ಮಹಡಿಯಲ್ಲಿರುವ ಶಾಖಾ ಗ್ರಂಥಾಲಯ ಶಿಥಿಲಾವಸ್ಥೆಯಲ್ಲಿದ್ದು, ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಇದರಿಂದಾಗಿ ಓದುಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಮೊದಲ ಮಹಡಿಗೆ ಸಂಪರ್ಕ ಕಲ್ಪಿಸುವ ಮೆಟ್ಟಿಲುಗಳು ಪಾಚಿ ಕಟ್ಟಿದ್ದು, ಜಾರಿ ಬೀಳುವ ಭಯ ಓದುಗರನ್ನು ಕಾಡುತ್ತಿದೆ. ಮೆಟ್ಟಿಲು ಹತ್ತಲು ನೆರವಾಗುವ ಸೈಡ್ ವಾಲ್‌ಗಳ ಕಬ್ಬಿಣದ ರಾಡ್‌ಗಳು ಮುರಿದಿದ್ದು, ಅಪಾಯ ರೀತಿಯಲ್ಲಿ ಹೊರ ಚಾಚಿವೆ.
ಪಟ್ಟಣ ಪಂಚಾಯಿತಿ ಕಚೇರಿ ಅವಧಿ ಮುಗಿದ ನಂತರ ಮುಖ್ಯದ್ವಾರವನ್ನು ಮುಚ್ಚಲಾಗುತ್ತಿದೆ. ಇದರಿಂದಾಗಿ ಗ್ರಂಥಾಲಯಕ್ಕೆ ಬರುವ ಓದುಗರು, ವಾಪಸು ಹೋಗುವ ಸ್ಥಿತಿಯಿದೆ.
ಪಟ್ಟಣದಲ್ಲಿರುವ ಸ್ಪರ್ಧಾರ್ಥಿಗಳು, ಅಂಗವಿಕಲರು, ಮಕ್ಕಳು, ಮಹಿಳೆಯರು ಹಾಗೂ ವೃದ್ಧರು ಗ್ರಂಥಾಲಯಕ್ಕೆ ಪುಸ್ತಕ–ಪತ್ರಿಕೆ ಓದಲು ಬರುತ್ತಿದ್ದಾರೆ. ಓದುಗರಿಗೆ ಸೂಕ್ತ ರಕ್ಷಣೆ ಇಲ್ಲದ ಸ್ಥಿತಿಯಿದೆ.
‘ಪಟ್ಟಣದ ಗ್ರಂಥಾಲಯಕ್ಕೆ ಹೆಚ್ಚು ಓದುಗರು ಬರುತ್ತಾರೆ. ಆದರೆ, ಕಟ್ಟಡ ಹಳೆಯದಾಗಿರುವುದರಿಂದ ದುಃಸ್ಥಿತಿಯಲ್ಲಿದೆ. ಓದುಗರು ಒಂದೆಡೆ ಕುಳಿತು ಓದಲು ಸಾಧ್ಯವಾಗುತ್ತಿಲ್ಲ. ಸರಿಯಾದ ಗಾಳಿ, ಬೆಳಕು, ಕುಡಿಯುವ ನೀರು ಹಾಗೂ ಶೌಚಾಲಯದ ವ್ಯವಸ್ಥೆಯಿಲ್ಲ’ ಎಂದು ಓದುಗರು ದೂರಿದರು.
‘ಗ್ರಂಥಾಲಯದಲ್ಲಿ ಸಾಕಷ್ಟು ಸ್ಥಳದ ಕೊರತೆಯಿದೆ. ಎರಡು ಕೊಠಡಿಗಳಿದ್ದು, ಒಂದರಲ್ಲಿ ಓದುಗರಿಗೆ ಆಸನ ಹಾಗೂ ಇನ್ನೊಂದು ಕೊಠಡಿಯಲ್ಲಿ ಪುಸ್ತಕದ ದಾಸ್ತಾನು ಮಾಡಲಾಗಿದೆ. ಮೂಲ ಸೌಕರ್ಯಗಳ ಕೊರತೆಯಿಂದ ಓದುಗರು ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಹೇಳಿದರು.
30,000 ಪುಸ್ತಕ: ಈ ಶಾಖಾ ಗ್ರಂಥಾಲಯದಲ್ಲಿ 30,000 ಪುಸ್ತಕಗಳ ಸಂಗ್ರಹವಿದೆ. 915 ಸದಸ್ಯರಿದ್ದಾರೆ. ಪುಸ್ತಕಗಳನ್ನು ಸರಿಯಾಗಿ ಹೊಂದಿಸಿಡಲೂ ವ್ಯವಸ್ಥೆಯಿಲ್ಲ. ನೆಲದ ಮೇಲೆಯ ಪುಸ್ತಕಗಳನ್ನು ಇರಿಸಲಾಗಿದೆ.
‘ಪಟ್ಟಣದ ಶಾಖಾ ಗ್ರಂಥಾಲಯಕ್ಕೆ ಸ್ವಂತ ಕಟ್ಟಡವಿಲ್ಲ. 2018ರಿಂದ ಪಟ್ಟಣ ಪಂಚಾಯಿತಿಯಿಂದ ಹೊಸ ಕಟ್ಟಡ ನಿರ್ಮಾಣಕ್ಕೆ ಜಾಗ ಕೋರಲಾಗಿದ್ದು, ಇದುವರೆಗೂ ಮಂಜೂರಾಗಿಲ್ಲ. ಮೂಲ ಸೌಕರ್ಯ ಕೊರತೆ ಇದೆ. ಬೇಕಾಬಿಟ್ಟಿಯಾಗಿ ಹೆಸರಿಗಷ್ಟೇ ಗ್ರಂಥಾಲಯ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ತಕ್ಕಂತೆ ಸ್ಪರ್ಧಾತ್ಮಕ ಪುಸ್ತಕ ಒದಗಿಸುತ್ತಿಲ್ಲ’ ಎಂದು ಓದುಗರು ಹೇಳಿದರು.
‘ಶಾಖಾ ಗ್ರಂಥಾಲಯದಲ್ಲಿ ಡಿಜಿಟಲ್ ಗ್ರಂಥಾಲಯಕ್ಕೆಂದು 2 ಕಂಪ್ಯೂಟರ್ ಮತ್ತೆ 4 ಟ್ಯಾಬ್ ನೀಡಲಾಗಿದೆ. ಆದರೆ, ಗ್ರಂಥಾಲಯಕ್ಕೆ ಅಂತರ್ಜಾಲ ವ್ಯವಸ್ಥೆ ಇಲ್ಲ. ಇದರಿಂದಾಗಿ ಕಂಪ್ಯೂಟರ್ ಹಾಗೂ ಟ್ಯಾಬ್‌ಗಳು ದೂಳು ಹಿಡಿದಿವೆ’ ಎಂದು ದೂರಿದರು.
‘ಮೊದಲ ಮಹಡಿಯಲ್ಲಿರುವ ಗ್ರಂಥಾಲಯಕ್ಕೆ ಹೋಗಿ ಬರಲು ಹರಸಾಹಸ ಪಡಬೇಕು. ಮೆಟ್ಟಿಲುಗಳಲ್ಲಿ ಪಾಚಿ ಕಟ್ಟಿದ್ದರಿಂದ, ಜಾರಿ ಬೀಳುವ ಭಯ ಕಾಡುತ್ತಿದೆ. ಈ ಗ್ರಂಥಾಲಯವನ್ನು ಸುಸಜ್ಜಿತ ಸ್ಥಿತಿಯಲ್ಲಿರಬೇಕು. ಇಲ್ಲದಿದ್ದರೆ, ಸ್ವಂತ ಕಟ್ಟಡ ಮಂಜೂರು ಮಾಡಿ ಮೂಲ ಸೌಕರ್ಯ ಕಲ್ಪಿಸಬೇಕು’ ಎಂದು ಓದುಗ ಅಶೋಕ ಮಹಾದೇವಪ್ಪ ಕಲ್ಯಾಣಿ ಆಗ್ರಹಿಸಿದರು.
ವಿದ್ಯಾರ್ಥಿಗಳ ಅಧ್ಯಯನಕ್ಕೆ ಅಗತ್ಯವಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳು ಗ್ರಂಥಾಲಯದಲ್ಲಿಲ್ಲ. ಅವುಗಳನ್ನು ಒದಗಿಸಿ ಅನುಕೂಲ ಮಾಡಿಕೊಡಬೇಕುವಿನಾಯಕ ಕರಡಿ ಓದುಗ
ಗ್ರಂಥಾಲಯಕ್ಕೆ ಹತ್ತಿ ಹೋಗಲು ಮೆಟ್ಟಿಲುಗಳ ಬಳಿ ರೆಲಿಂಗ್ಸ್ (ಹಿಡಿಕೈ ) ಮಾಡಿಕೊಡಲು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆಅಶೋಕ ನಡಕಟ್ಟಿನ ಮುಖ್ಯ ಗ್ರಂಥಾಲಯ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.