ADVERTISEMENT

ನಾನೂ ಕುರಿ ಕಾಯ್ದವನು: ಕಾಂಗ್ರೆಸ್‌ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 15:14 IST
Last Updated 25 ಅಕ್ಟೋಬರ್ 2021, 15:14 IST
ಹಾನಗಲ್ ತಾಲ್ಲೂಕಿನ ಯಳವಟ್ಟಿ ಗ್ರಾಮದಲ್ಲಿ ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಶಾಸಕ ಅಮೃತ ದೇಸಾಯಿ, ಕಾರ್ಮಿಕ ಇಲಾಖೆ ಸಚಿವ ಶಿವರಾಮ ಹೆಬ್ಬಾರ, ಸಂಸದ ಶಿವಕುಮಾರ ಉದಾಸಿ ಇದ್ದಾರೆ
ಹಾನಗಲ್ ತಾಲ್ಲೂಕಿನ ಯಳವಟ್ಟಿ ಗ್ರಾಮದಲ್ಲಿ ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಶಾಸಕ ಅಮೃತ ದೇಸಾಯಿ, ಕಾರ್ಮಿಕ ಇಲಾಖೆ ಸಚಿವ ಶಿವರಾಮ ಹೆಬ್ಬಾರ, ಸಂಸದ ಶಿವಕುಮಾರ ಉದಾಸಿ ಇದ್ದಾರೆ   

ಹಾನಗಲ್: ‘ಬಂಕಾಪುರದಲ್ಲಿ ಮಹಾರಾಷ್ಟ್ರದ ಬಾಳುಮಾಮಾ ಕುರಿಗಳನ್ನು ಕಾಯ್ದವನು ನಾನು. ಕುರಿಯ ಉಣ್ಣೆಯಿಂದ ತಯಾರಿಸುವ ಕಂಬಳಿ ಬಗ್ಗೆ ಗೌರವ ಹೊಂದಿದ್ದೇನೆ. ಕಂಬಳಿ ನೆಯ್ಗೆಯ ಶ್ರಮ ಅರಿತಿದ್ದೇನೆ. ಕಂಬಳಿಯನ್ನು ಮೈಮೇಲೆ ಹಾಕಿಕೊಳ್ಳಲು ಯೋಗ್ಯತೆ ಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.

ತಾಲ್ಲೂಕಿನ ಯಳವಟ್ಟಿ, ಹುಲ್ಲತ್ತಿ, ಕರಗುದರಿ, ಬೈಚವಳ್ಳಿ ಗ್ರಾಮಗಳಲ್ಲಿ ಸೋಮವಾರ ತೆರೆದ ವಾಹನದಲ್ಲಿ ಅವರು ಬಿಜೆಪಿ ಅಭ್ಯರ್ಥಿ ಪರವಾಗಿ ಚುನಾವಣಾ ಪ್ರಚಾರ ಕೈಗೊಂಡು ಮಾತನಾಡಿದರು.

‘ಎಲ್ಲ ಸಮಾಜದ ಜೊತೆಯಲ್ಲಿ ಸಾಮರಸ್ಯದಿಂದ ಬಾಳುವವರು ನಾವು. ಜಾತಿಗಳ ಮಧ್ಯೆ ವಿಷಬೀಜ ಬಿತ್ತಿ ರಾಜಕೀಯ ಲಾಭ ಮಾಡಿಕೊಳ್ಳುವುದು ಕಾಂಗ್ರೆಸ್ ಸಿದ್ಧಾಂತ’ ಎಂದು ಅವರು ಟೀಕಿಸಿದರು.

ADVERTISEMENT

‘ಇಲ್ಲಿನ ಉಪ ಚುನಾವಣೆಯಲ್ಲಿ ಕಾಂಗ್ರೆಸ್ಸಿಗರ ‘ಖತಲ್‌ ರಾತ್ರಿ’ ಆಟ ನಡೆಯಬಾರದು. ಡಿ.ಕೆ.ಶಿವಕುಮಾರ ತಂದಿರುವ ದುಡ್ಡಿನ ಗೋಣಿಚೀಲವನ್ನು ಬೆಂಗಳೂರಿಗೇ ವಾಪಸ್‌ ಕಳಿಸಬೇಕು’ ಎಂದು ಹೇಳಿದರು.

‘ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಚುನಾವಣೆ ಸಮಯದಲ್ಲಿ ಬಂದು ಹೇಳಿ ಹೋಗುತ್ತಾರೆ. ಬಳಿಕ ನಿಮ್ಮ ಕೈಗೆ ಸಿಗಲ್ಲ. ಆದರೆ ನಾನು ಇಲ್ಲಿಯವನು. ಚುನಾವಣೆ ಬಳಿಕವೂ ನಿಮಗೆ ಸಿಗುತ್ತೇನೆ. ಹೀಗಾಗಿ ಬಿಜೆಪಿ ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ಕಾರ್ಮಿಕ ಇಲಾಖೆ ಸಚಿವ ಶಿವರಾಮ ಹೆಬ್ಬಾರ, ಸಂಸದ ಶಿವಕುಮಾರ ಉದಾಸಿ, ಶಾಸಕ ಅಮೃತ ದೇಸಾಯಿ, ಎಸ್.ವಿ.ಸಂಕನೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.