ADVERTISEMENT

ನೇತ್ರದಾನ ಜಾಗೃತಿಗೆ 500 ಕಿ.ಮೀ ಓಟ

ಹಾವೇರಿಯಲ್ಲಿ ಅಪ್ಪು ಅಭಿಮಾನಿ ದಾಕ್ಷಾಯಿಣಿ ಪಾಟೀಲಗೆ ಆತ್ಮೀಯ ಸನ್ಮಾನ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2021, 12:16 IST
Last Updated 2 ಡಿಸೆಂಬರ್ 2021, 12:16 IST
ಹಾವೇರಿಗೆ ಗುರುವಾರ ಬಂದ ದಾಕ್ಷಾಯಿಣಿ ಪಾಟೀಲ ಅವರನ್ನು ಹಾವೇರಿ ಜಿಲ್ಲಾ ಅಥ್ಲೆಟಿಕ್‌ ಅಸೋಸಿಯೇಷನ್‌ ವತಿಯಿಂದ ಸನ್ಮಾನಿಸಲಾಯಿತು. ಅಸೋಸಿಯೇಷನ್‌ ಪ್ರಧಾನ ಕಾರ್ಯದರ್ಶಿ ಬಸವರಾಜ ಹಾಲಪ್ಪನವರ, ಶಿವಲಿಂಗಪ್ಪ ಸಾತೇನಹಳ್ಳಿ, ಉಮೇಶ ಪಾಟೀಲ ಇದ್ದಾರೆ 
ಹಾವೇರಿಗೆ ಗುರುವಾರ ಬಂದ ದಾಕ್ಷಾಯಿಣಿ ಪಾಟೀಲ ಅವರನ್ನು ಹಾವೇರಿ ಜಿಲ್ಲಾ ಅಥ್ಲೆಟಿಕ್‌ ಅಸೋಸಿಯೇಷನ್‌ ವತಿಯಿಂದ ಸನ್ಮಾನಿಸಲಾಯಿತು. ಅಸೋಸಿಯೇಷನ್‌ ಪ್ರಧಾನ ಕಾರ್ಯದರ್ಶಿ ಬಸವರಾಜ ಹಾಲಪ್ಪನವರ, ಶಿವಲಿಂಗಪ್ಪ ಸಾತೇನಹಳ್ಳಿ, ಉಮೇಶ ಪಾಟೀಲ ಇದ್ದಾರೆ    

ಹಾವೇರಿ:ಧಾರವಾಡ ಜಿಲ್ಲೆಯ ಮನಗುಂಡಿಯಿಂದ ಬೆಂಗಳೂರಿನ ಅಪ್ಪು ಸಮಾಧಿ ಸ್ಥಳದವರೆಗೆ 500 ಕಿ.ಮೀ. ಜಾಗೃತಿ ಓಟ ಹಮ್ಮಿಕೊಂಡಿರುವ ದಾಕ್ಷಾಯಿಣಿ ಪಾಟೀಲ ಅವರು ನಗರಕ್ಕೆ ಗುರುವಾರ ಬಂದ ಸಂದರ್ಭ ಜಿಲ್ಲಾ ಅಥ್ಲೆಟಿಕ್‌ ಅಸೋಸಿಯೇಷನ್‌ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ದಾಕ್ಷಾಯಿಣಿ ಪಾಟೀಲ, ‘ನಾನು ಪುನೀತ್‌ ಅವರ ದೊಡ್ಡ ಅಭಿಮಾನಿ. ಅವರ ಸಾವಿನ ನೋವನ್ನು ಅರಗಿಸಿಕೊಳ್ಳಲು ಇನ್ನೂ ಸಾಧ್ಯವಾಗುತ್ತಿಲ್ಲ. ಅವರ ಸ್ಮರಣಾರ್ಥ ನೇತ್ರದಾನ, ರಕ್ತದಾನ ಹಾಗೂ ಕ್ರೀಡೆಯ ಬಗ್ಗೆ ಅರಿವು ಮೂಡಿಸಲು ‘ಜಾಗೃತಿ ಓಟ’ ಹಮ್ಮಿಕೊಂಡಿದ್ದೇನೆ. ಪುನೀತ್‌ ಅಭಿಮಾನಿಯಾಗಿ ನಾನು ಸಮಾಜಕ್ಕೆ ನೀಡುವ ಅಳಿಲು ಸೇವೆ ಇದಾಗಿದೆ’ ಎಂದರು.

‘ನಾನು ವಿದ್ಯಾರ್ಥಿದೆಸೆಯಿಂದಲೂ ಕ್ರೀಡಾಪಟುವಾಗಿದ್ದು, 100 ಮೀ, 200 ಮೀ, 400 ಮೀ ಓಟದಲ್ಲಿ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೇನೆ. ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಹಲವು ಬಹುಮಾನಗಳು ಸಿಕ್ಕಿವೆ. ಮದುವೆಯ ನಂತರ ಕ್ರೀಡೆಯಿಂದ ದೂರ ಉಳಿದಿದ್ದೆ. ಪುನೀತ್‌ ಸಮಾಧಿ ಸ್ಥಳ ನೋಡಬೇಕು ಎಂಬ ಹಂಬಲಕ್ಕೆ ನನ್ನ ಪತಿ ಬೆನ್ನೆಲುಬಾಗಿ ನಿಂತರು. ನಾನು ಮತ್ತು ನನ್ನ ಪತಿ, ನೇತ್ರದಾನ ಮಾಡುವ ನಿರ್ಧಾರ ಕೈಗೊಂಡಿದ್ದೇವೆ. ಬೆಂಗಳೂರಿನಲ್ಲಿ ರಾಜ್‌ ಕುಟುಂಬವನ್ನು ಭೇಟಿ ಮಾಡಿ ಬರುವ ಉದ್ದೇಶ ಹೊಂದಿದ್ದೇವೆ’ ಎಂದು ಹೇಳಿದರು.

ADVERTISEMENT

‘ನಿತ್ಯ 30ರಿಂದ 35 ಕಿ.ಮೀ. ಓಡುತ್ತಿದ್ದೇನೆ. ದಾರಿಯುದ್ದಕ್ಕೂ ಜನರು ಮತ್ತು ಪುನೀತ್‌ ಅಭಿಮಾನಿಗಳು ಪ್ರೀತಿ ಮತ್ತು ಪ್ರೋತ್ಸಾಹ ನೀಡುತ್ತಿದ್ದಾರೆ. ‘ಪುನೀತ್‌ ಹೆಸರಿನಲ್ಲಿ ಸ್ಪೋರ್ಟ್ಸ್‌ ಕ್ಲಬ್‌’ ತೆರೆದು, ಬಡ ಕ್ರೀಡಾಪುಟಗಳಿಗೆ ತರಬೇತಿ ನೀಡುವ ಉದ್ದೇಶ ಹೊಂದಿದ್ದೇನೆ’ ಎಂದರು.

ಹಾವೇರಿ ಜಿಲ್ಲಾ ಅಥ್ಲೆಟಿಕ್‌ ಅಸೋಸಿಯೇಷನ್‌ ಪ್ರಧಾನ ಕಾರ್ಯದರ್ಶಿ ಬಸವರಾಜ ಹಾಲಪ್ಪನವರ, ಶಿವಲಿಂಗಪ್ಪ ಸಾತೇನಹಳ್ಳಿ, ದಾಕ್ಷಾಯಿಣಿ ಅವರ ಪತಿ ಉಮೇಶ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.