ಬಂಧನ
(ಪ್ರಾತಿನಿಧಿಕ ಚಿತ್ರ)
ಹಾವೇರಿ: ಜಿಲ್ಲೆಯ ಹಾನಗಲ್ ತಾಲ್ಲೂಕಿನಲ್ಲಿ ಅಕ್ರಮ ಬಡ್ಡಿ ದಂಧೆ ಜೋರಾಗಿದ್ದು, ಬಡವರು ಹಾಗೂ ದಿನಗೂಲಿ ನಂಬಿ ಬದುಕುತ್ತಿರುವವರು ಬಡ್ಡಿಕೋರರ ಕೈಗೆ ಸಿಕ್ಕು ನಲಗುತ್ತಿದ್ದಾರೆ. ಬಡ್ಡಿ ಸಮೇತ ಸಾಲ ಮರು ಪಾವತಿ ಮಾಡಲಿಲ್ಲವೆಂಬ ಕಾರಣಕ್ಕೆ ಮನೆಗೆ ನುಗ್ಗಿ ಕೊಲೆಗೆ ಯತ್ನಿಸಲಾಗಿದ್ದು, ಈ ಸಂಬಂಧ ಆರು ಮಂದಿಯನ್ನು ಹಾನಗಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ ನಿವಾಸಿ ಜೈನುಲಸಾಬ್ ಬಾಬುಸಾಬ್ ತುಂಬರಗಿ (62) ಎಂಬುವವರ ಮನೆಗೆ ನುಗ್ಗಿದ್ದ ಆರು ಮಂದಿ, ಬಡ್ಡಿ ಸಾಲ ವಸೂಲಿ ನೆಪದಲ್ಲಿ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದಾರೆ. ಜೈನುಲಸಾಬ್ ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಕೃತ್ಯ ಎಸಗಿರುವ ಆರೋಪಿಗಳಾದ ಬೊಮ್ಮನಹಳ್ಳಿಯ ರವಿ ಉಡಚಪ್ಪ ಸುಣಗಾರ, ಅಪ್ಪು ಗೌಡಪ್ಪ ಸುಣಗಾರ, ಯೋಗೇಶ ಸುಭಾಸ್ ಸುಣಗಾರ, ಅಶೋಕ ಉಡಚಪ್ಪ ಸುಣಗಾರ, ಮನೋಜ ಗೌಡಪ್ಪ ಸುಣಗಾರ ಹಾಗೂ ದೇವರಾಜ ಬಸವರಾಜ ತರವಂದ ಅವರನ್ನು ಬಂಧಿಸಲಾಗಿದೆ. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಆರೋಪಿ ಅಶೋಕ, ಗ್ರಾಮದ ಬ್ಯಾಂಕ್‌ವೊಂದರ ಫಿಗ್ಮಿ ಸಂಗ್ರಹಕಾರನಾಗಿದ್ದ. ಫಿಗ್ಮಿ ಜೊತೆಯಲ್ಲಿಯೇ ಬಡ್ಡಿ ವ್ಯವಹಾರ ಮಾಡುತ್ತಿದ್ದ ಮಾಹಿತಿಯಿದ್ದು, ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.
‘ಆರೋಪಿಗಳು ಗ್ರಾಮದಲ್ಲಿ ಬಡ್ಡಿ ವ್ಯವಹಾರ ಮಾಡುತ್ತಿದ್ದರು. ತರಕಾರಿ ಮಾರಾಟ, ಬೀದಿ ಬದಿ ವ್ಯಾಪಾರ ಹಾಗೂ ಇತರೆ ಕೆಲಸ ಮಾಡುತ್ತಿದ್ದವರಿಗೆ ಬಡ್ಡಿಗೆ ಹಣ ನೀಡುತ್ತಿದ್ದರು. ಬಡ್ಡಿ ಕೊಡದಿದ್ದರೆ ಕಿರುಕುಳ ನೀಡುತ್ತಿದ್ದರೆಂಬ ಮಾಹಿತಿಯಿದೆ’ ಎಂದರು.
ಮನೆಗೆ ನುಗ್ಗಿದ್ದ ಆರೋಪಿಗಳು: ‘ದೂರುದಾರ ಜೈನುಲಸಾಬ ಅವರ ಮಗ, ಆರೋಪಿಗಳ ಬಳಿ ಹಣ ಪಡೆದುಕೊಂಡಿದ್ದರು. ಕಾಲ ಕಾಲಕ್ಕೆ ಬಡ್ಡಿಯನ್ನೂ ಕಟ್ಟಿದ್ದರು. ಅಷ್ಟಾದರೂ ಆರೋಪಗಳು, ಹೆಚ್ಚಿನ ಬಡ್ಡಿ ನೀಡುವಂತೆ ಒತ್ತಾಯಿಸುತ್ತಿದ್ದರು. ನ. 25ರಂದು ಮನೆಗೆ ನುಗ್ಗಿದ್ದ ಆರೋಪಿಗಳು, ಗಲಾಟೆ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.
‘ಮನೆಯಲ್ಲಿದ್ದವರನ್ನು ತಳ್ಳಾಡಿ ಹಲ್ಲೆ ಮಾಡಿ ಜೀವ ಬೆದರಿಕೆಯೊಡ್ಡಿದ್ದರು. ಆರೋಪಿ ಯೋಗೇಶ್ ಸುಣಗಾರ ಎಂಬಾತ ಕುಡಗೋಲಿನಿಂದ ಜೈನುಲಸಾಬ್ ಅವರಿಗೆ ಹೊಡೆಯಲು ಹೋಗಿದ್ದ. ಜಗಳ ಬಿಡಿಸಲು ಬಂದ ಗೌಸಮೋದಿನ್ ರಾಜಖಾನ್ ಅವರ ಎಡಗೈಗೆ ಕುಡಗೋಲು ತಾಗಿ ತೀವ್ರ ಗಾಯವಾಗಿದೆ. ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಎಲ್ಲರ ಹೇಳಿಕೆ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.