ಗುತ್ತಲ: ಇಲ್ಲಿಯ ತುಂಗಭದ್ರಾ ನದಿ ಪಾತ್ರದಲ್ಲಿ ಅಕ್ರಮವಾಗಿ ಮರಳು ತೆಗೆದು ಸಾಗಿಸುತ್ತಿದ್ದ ಸ್ಥಳದ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದು, ಮೂರು ತೆಪ್ಪಗಳನ್ನು ಜಪ್ತಿ ಮಾಡಿದ್ದಾರೆ.
ಹಾವನೂರು ಬಳಿಯ ನದಿ ಪಾತ್ರದಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಬಗ್ಗೆ ಮಾಹಿತಿ ಪಡೆದಿದ್ದ ಅಧಿಕಾರಿಗಳು, ಸೆ. 18ರಂದು 10 ಗಂಟೆಗೆ ಕಾರ್ಯಾಚರಣೆ ನಡೆಸಿದ್ದರು.
‘ಹಾವನೂರು ಗ್ರಾಮದ ಚಾಂದಸಾಬ್ ಖಾಜಾಸಾಬ್ ಫಾಟೀನ್ ಹಾಗೂ ಇತರರು ಸೇರಿಕೊಂಡು ಅಕ್ರಮವಾಗಿ ₹ 1.80 ಲಕ್ಷ ಮೌಲ್ಯದ ಮರಳು ತೆಗೆದಿದ್ದರು. ದಾಳಿ ಮಾಡುತ್ತಿದ್ದಂತೆ ಎಲ್ಲರೂ ಸ್ಥಳದಿಂದ ಓಡಿ ಹೋದರು’ ಎಂದು ಭೂ ವಿಜ್ಞಾನಿ ಶಬ್ಬೀರ್ ಅಹ್ಮದ್ ದಿಡಗೂರ ಅವರು ಗುತ್ತಲ ಠಾಣೆಗೆ ದೂರು ನೀಡಿದ್ದಾರೆ.
‘ಹಾವೇರಿಯಿಂದ ಶಿಗ್ಗಾವಿ ಹಾಗೂ ಸವಣೂರು ರಸ್ತೆಯಲ್ಲಿ ವಾಹನಗಳ ತಪಾಸಣೆ ನಡೆಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಅಕ್ರಮ ಮರಳು ಸಾಗಾಣಿಕೆ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಅದೇ ಮಾಹಿತಿ ಆಧರಿಸಿ ದಾಳಿ ನಡೆಸಿದಾಗ, ಅಕ್ರಮ ಮರಳು ಸಿಕ್ಕಿದೆ. ಆರೋಪಿಗಳು, ಮರಳು ಕಳ್ಳತನ ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡುತ್ತಿದ್ದರೆಂಬುದು ಪರಿಶೀಲನೆಯಿಂದ ಗೊತ್ತಾಗಿದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳನ್ನು ಪತ್ತೆ ಮಾಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.