ADVERTISEMENT

ಮರಗಳ ಮಾರಣಹೋಮ: ಅಧಿಕಾರಿಗಳು ಮೌನ

ಸರ್ಕಾರಿ ಜಾಗ, ಸಾರ್ವಜನಿಕ ರಸ್ತೆಯ ಮರಗಳಿಗೆ ಕೊಡಲಿಯೇಟು | ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಜನರ ಆಗ್ರಹ

ಸಂತೋಷ ಜಿಗಳಿಕೊಪ್ಪ
Published 4 ಮಾರ್ಚ್ 2026, 5:36 IST
Last Updated 4 ಮಾರ್ಚ್ 2026, 5:36 IST
ಹಾವೇರಿಯ ಬಸವೇಶ್ವರನಗರದಲ್ಲಿರುವ ಸಜ್ಜನರ ಪ್ಯಾರಡೈಸ್ ಕಟ್ಟಡದ ಎದುರು ಬೃಹತ್ ಮರವನ್ನು ಕಡಿದಿರುವುದು
ಹಾವೇರಿಯ ಬಸವೇಶ್ವರನಗರದಲ್ಲಿರುವ ಸಜ್ಜನರ ಪ್ಯಾರಡೈಸ್ ಕಟ್ಟಡದ ಎದುರು ಬೃಹತ್ ಮರವನ್ನು ಕಡಿದಿರುವುದು   

ಹಾವೇರಿ: ಜಿಲ್ಲೆಯ ಸರ್ಕಾರಿ ಜಾಗ, ಸಾರ್ವಜನಿಕ ರಸ್ತೆ ಹಾಗೂ ಇತರೆ ಪ್ರದೇಶಗಳಲ್ಲಿರುವ ಮರಗಳನ್ನು ಯಾವುದೇ ಅನುಮತಿ ಇಲ್ಲದೇ ರಾಜಾರೋಷವಾಗಿ ಕಡಿದು ಹಾಕಲಾಗುತ್ತಿದೆ. ಇದರಿಂದಾಗಿ ಒಂದೊಂದೇ ಮರಗಳು ನೆಲಕಚ್ಚುತ್ತಿವೆ. ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲು, ಸ್ಥಳೀಯ ಆಡಳಿತ ಸಂಸ್ಥೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಹಿಂದೇಟು ಹಾಕುತ್ತಿರುವ ಆರೋಪ ವ್ಯಕ್ತವಾಗುತ್ತಿದೆ.

ಹಾವೇರಿ ಹಾಗೂ ರಾಣೆಬೆನ್ನೂರು ನಗರಸಭೆ ವ್ಯಾಪ್ತಿಯಲ್ಲಿ ಹಲವು ವರ್ಷಗಳ ಹಿಂದೆಯೇ ಮರಗಳನ್ನು ನೆಡಲಾಗಿದೆ. ರಸ್ತೆ, ಉದ್ಯಾನ, ಸಾರ್ವಜನಿಕ ಪ್ರದೇಶಗಳಲ್ಲಿ ಮರಗಳು ಬೆಳೆದು ನಿಂತಿವೆ. ಪಕ್ಷಿಗಳಿಗೆ ಆಶ್ರಯ ನೀಡುತ್ತಿವೆ. ಜನರಿಗೆ ನೆರಳು ಒದಗಿಸುತ್ತಿವೆ. ಇಂಥ ಮರಗಳನ್ನು ಕೆಲವರು ಏಕಾಏಕಿ ಕಡಿದು ಹಾಕುತ್ತಿದ್ದಾರೆ.

ಸರ್ಕಾರಿ ಜಾಗದಲ್ಲಿರುವ ಮರಗಳನ್ನು ಕಡಿಯಲು ಸಂಬಂಧಪಟ್ಟ ಸ್ಥಳೀಯ ಆಡಳಿತ ಸಂಸ್ಥೆ ಹಾಗೂ ಅರಣ್ಯ ಇಲಾಖೆ ಅನುಮತಿ ಕಡ್ಡಾಯಗೊಳಿಸಲಾಗಿದೆ. ಜೊತೆಗೆ, ಅರಣ್ಯ ಇಲಾಖೆ ಅಧಿಕಾರಿಗಳು ಖುದ್ದಾಗಿ ಸ್ಥಳದಲ್ಲಿ ಹಾಜರಿದ್ದು ಮರಗಳನ್ನು ಕಡಿಸಬೇಕು. ಹಲವು ಕಠಿಣ ನಿಯಮಗಳಿದ್ದರೂ ಅವುಗಳನ್ನು ಉಲ್ಲಂಘಿಸಿ ಮರಗಳ ಮಾರಣಹೋಮ ನಡೆಸಲಾಗುತ್ತಿದೆ.

ADVERTISEMENT

ಖಾಸಗಿ ಜಾಗದಲ್ಲಿರುವ ಮರಗಳನ್ನು ಕಡಿಸಲು ಕೆಲ ವಿನಾಯಿತಿಗಳಿವೆ. ಆದರೆ, ಸರ್ಕಾರಿ ಜಾಗದಲ್ಲಿರುವ ಮರಗಳನ್ನು ಕಡಿಯುವ ನಿಯಮಗಳು ಕಠಿಣವಾಗಿವೆ. ಆದರೆ, ನಿಯಮಗಳನ್ನು ಲೆಕ್ಕಿಸದೇ ಕೆಲವರು ತಮ್ಮಿಷ್ಟದಂತೆ ಮರಗಳನ್ನು ಕಡಿದು ಹಾಕುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ರಸ್ತೆ ಬದಿಯಲ್ಲಿ ಕಟ್ಟಡ ನಿರ್ಮಾಣ ಮಾಡುತ್ತಿರುವ ಜನರು, ಅದರ ಎದುರಿಗೆ ಇರುವ ಮರಗಳನ್ನು ಕಡಿದು ಹಾಕುತ್ತಿದ್ದಾರೆ. ‘ರಸ್ತೆ ಪಕ್ಕದಲ್ಲಿ ಮರವಿದ್ದರೆ, ನಮ್ಮ ಕಟ್ಟಡ ಜನರಿಗೆ ಕಾಣುವುದಿಲ್ಲ. ಅದಕ್ಕೆ ಮರವನ್ನು ಕತ್ತರಿಸಲಾಗುತ್ತಿದೆ’ ಎಂದು ಕಟ್ಟಡಗಳ ಮಾಲೀಕರು ಸಬೂಬು ನೀಡುತ್ತಿದ್ದಾರೆ. ಮರ ಕಡಿಯಲು ಅನುಮತಿ ಇದೆಯಾ? ಎಂದು ಪ್ರಶ್ನಿಸುವವರ ಮೇಲೆಯೇ, ಮಾಲೀಕರು ಜಗಳಕ್ಕೆ ಬರುತ್ತಿದ್ದಾರೆ. ಮರ ಕಡಿಯುವ ವಿಚಾರದಲ್ಲಿ ಹಲವು ಕಡೆಗಳಲ್ಲಿ ಸಾರ್ವಜನಿಕರು ಹಾಗೂ ಮಾಲೀಕರ ನಡುವೆ ಮಾತಿನ ಜಟಾಪಟಿ ನಡೆದಿದೆ.

ಕಟ್ಟಡಕ್ಕೆ ಅಡ್ಡಿಯೆಂದು ಮರಕ್ಕೆ ಕೊಡಲಿ: ಹಾವೇರಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬಸವೇಶ್ವರ ನಗರದ ಬಳಿ ‘ಸಜ್ಜನರ ಪ್ಯಾರಡೈಸ್’ ಬಹುಮಹಡಿ ಕಟ್ಟಡ ನಿರ್ಮಿಸಲಾಗಿದೆ. ಈ ಕಟ್ಟಡದ ಎದುರು ಸಾರ್ವಜನಿಕ ರಸ್ತೆಯ ಬದಿಯಲ್ಲಿ ಬೃಹತ್ ಮರವೊಂದಿತ್ತು. ಈ ಮರವಿದ್ದರೆ ಕಟ್ಟಡ ಕಾಣಿಸುವುದಿಲ್ಲವೆಂಬ ಕಾರಣಕ್ಕೆ, ಮರವನ್ನೇ ಕತ್ತರಿಸಲಾಗಿದೆ. ಇದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

‘ಕೆಲ ತಿಂಗಳ ಹಿಂದೆಯಷ್ಟೇ ಸಜ್ಜನರ ಪ್ಯಾರಡೈಸ್ ನಿರ್ಮಿಸಲಾಗಿದೆ. ಇದೇ ಕಟ್ಟಡದಲ್ಲಿ, ವೆಂಕಟೇಶ್ವರ ಕೋ ಆಪರೇಟಿವ್ ಪವರ್ ಆ್ಯಂಡ್ ಅಗ್ರೊ ಪ್ರೊಸೆಸಿಂಗ್ ಕಂಪನಿ ಕಚೇರಿಯಿದೆ. ಕಟ್ಟಡದ ಎದುರು ಮರವಿದ್ದರೆ, ಕಚೇರಿಯ ನಾಮಫಲಕ ಕಾಣಿಸುವುದಿಲ್ಲ ಎಂಬ ಕಾರಣಕ್ಕೆ ಇಡೀ ಮರವನ್ನೇ ನೆಲಸಮ ಮಾಡಲಾಗಿದೆ’ ಎಂದು ಸ್ಥಳೀಯರು ದೂರಿದರು.

‘ಕಟ್ಟಡ ಕತ್ತರಿಸಲು ಯಾವುದೇ ಅನುಮತಿ ಪಡೆದುಕೊಂಡಿಲ್ಲ. ಖಾಸಗಿ ವ್ಯಕ್ತಿಗಳ ಮೂಲಕ ಬೃಹತ್ ಮರವನ್ನು ಕಡಿದು ಹಾಕಲಾಗಿದೆ. ಜಿಲ್ಲಾಧಿಕಾರಿ ಕಚೇರಿಗೆ ಹೋಗುವ ರಸ್ತೆಯಲ್ಲಿ ನಿತ್ಯವೂ ಅಧಿಕಾರಿಗಳು ಓಡಾಡುತ್ತಾರೆ. ಅವರ ಎದುರೇ ಮರ ಕಡಿಯಲಾಗಿದೆ. ಸಮೀಪದಲ್ಲಿಯೇ ಸಾಮಾಜಿಕ ಅರಣ್ಯ ಇಲಾಖೆ ಕಚೇರಿ ಇದೆ. ಯಾರೊಬ್ಬರೂ ಮರ ಕಡಿಯುವುದನ್ನು ಪ್ರಶ್ನಿಸಿಲ್ಲ. ನಗರಸಭೆಯೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಆರೋಪಿಸಿದರು.

‘ಸಾರ್ವಜನಿಕ ಸ್ಥಳದಲ್ಲಿರುವ ಮರಗಳನ್ನು ರಾಜಾರೋಷವಾಗಿ ಕಡಿಯುತ್ತಿರುವುದು, ಆಡಳಿತ ವ್ಯವಸ್ಥೆಯನ್ನು ಅಣುಕಿಸುವಂತಿದೆ. ಮರ ಕಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇಂಥ ಕೃತ್ಯ ಎಸಗುವವರಿಗೆ ಎಚ್ಚರಿಕೆ ರವಾನಿಸಬೇಕು’ ಎಂದು ಆಗ್ರಹಿಸಿದರು.

ಸುಭಾಷ್ ರಸ್ತೆಯಲ್ಲಿ ಮರದ ಅವಶೇಷ: ನಗರದ ಸುಭಾಷ್ ರಸ್ತೆ ಸಮೀಪದಲ್ಲಿ ಇತ್ತೀಚೆಗೆ ಮರವೊಂದನ್ನು ಕಡಿದು ಹಾಕಲಾಗಿದೆ. ಇದರ ಅವಶೇಷಗಳನ್ನು ರಸ್ತೆಯಲ್ಲಿ ಹಾಕಲಾಗಿತ್ತು. ಮರ ಕಡಿದವರ ಬಗ್ಗೆ ಯಾವುದೇ ವಿಚಾರಣೆ ಆಗಿಲ್ಲ.

‘ನಗರದಲ್ಲಿ ಏನಾಗುತ್ತಿದೆ ? ಸಾರ್ವಜನಿಕ ಆಸ್ತಿಗೆ ಏನಾದರೂ ದಕ್ಕೆ ಆಗುತ್ತಿದೆಯಾ? ಎಂಬುದನ್ನು ನಗರಸಭೆಯವರು ಗಮನಿಸಬೇಕು. ಆದರೆ, ಅಧಿಕಾರಿಗಳು ಹಾಗೂ ಸಿಬ್ಬಂದಿ ರಸ್ತೆಯಲ್ಲಿ ಹೋದರೂ ಯಾವುದನ್ನೂ ಪ್ರಶ್ನಿಸುತ್ತಿಲ್ಲ. ತಮಗೆ ಸಂಬಂಧವಿಲ್ಲದಂತೆ ವರ್ತಿಸುತ್ತಿದ್ದಾರೆ’ ಎಂದು ಜನರು ದೂರಿದರು.

ಹಾವೇರಿಯ ಸುಭಾಷ್ ವೃತ್ತದ ಸಮೀಪದಲ್ಲಿ ಮರವನ್ನು ಕಡಿದು ರಸ್ತೆ ಮೇಲೆ ಇರಿಸಿರುವ  ಅವಶೇಷ
ಸಾರ್ವಜನಿಕ ಪ್ರದೇಶದಲ್ಲಿರುವ ಮರ ಕಡಿಯಲು ಅನುಮತಿ ಕಡ್ಡಾಯ. ಸಜ್ಜನರ ಪ್ಯಾರಡೈಸ್ ಬಳಿಯ ಮರವನ್ನು ಕಡಿದಿರುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
ಎಚ್. ಕಾಂತರಾಜು, ನಗರಸಭೆ ಪೌರಾಯುಕ್ತ
ಅನುಮತಿ ಇಲ್ಲದೇ ಮರ ಕಡಿಯಬಾರದು. ಹಾವೇರಿಯಲ್ಲಿ ಎಲ್ಲೆಲ್ಲಿ ಮರ ಕಡಿದಿದ್ದಾರೆ ? ಎಂಬ ಬಗ್ಗೆ ಮಾಹಿತಿ ಪಡೆದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೌರಾಯುಕ್ತರಿಗೆ ಸೂಚಿಸುತ್ತೇನೆ.
ಸಿ. ಚಂದ್ರಪ್ಪ ಯೋಜನಾ ನಿರ್ದೇಶಕ, ನಗರಾಭಿವೃದ್ಧಿ ಕೋಶ

‘ಜಿಲ್ಲಾಧಿಕಾರಿಯೇ ಆಡಳಿತಾಧಿಕಾರಿ’ ‘ಹಾವೇರಿ ನಗರಸಭೆಯ ಚುನಾಯಿತ ಸದಸ್ಯರ ಅಧಿಕಾರ ಅವಧಿ ಈಗಾಗಲೇ ಮುಕ್ತಾಯಗೊಂಡಿದ್ದು ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ ಅವರೇ ಆಡಳಿತಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಇವರ ಅವಧಿಯಲ್ಲಿಯೂ ತಪ್ಪಿತಸ್ಥರ ವಿರುದ್ಧ ಕ್ರಮವಾಗದಿರುವುದು ನೋವು ತರಿಸಿದೆ’ ಎಂದು ಬಸವೇಶ್ವರನಗರದ ನಿವಾಸಿ ಕುಮಾರ ಹೇಳಿದರು. ‘ಬಸವೇಶ್ವರನಗರದಲ್ಲಿ ರಸ್ತೆ ಬದಿಯ ಮರವನ್ನು ರಾಜಾರೋಷವಾಗಿ ಕಡಿಯಲಾಗಿದೆ. ಇವರ ವಿರುದ್ಧ ಆಡಳಿತಾಧಿಕಾರಿಯೇ ಕ್ರಮ ಕೈಗೊಳ್ಳಬೇಕು. ಆದರೆ ಅವರು ಸಹ ಮೌನವಾಗಿದ್ದಾರೆ’ ಎಂದು ದೂರಿದರು.