ADVERTISEMENT

ಹಾವೇರಿ| 1.55 ಲಕ್ಷ ಖಾತೆಗಳಲ್ಲಿ ₹ 29.65 ಕೋಟಿ: ಜಿಲ್ಲಾಧಿಕಾರಿ ವಿಜಯ ಮಹಾಂತೇಶ

ವಹಿವಾಟು ನಡೆಸದೇ ಖಾತೆ ನಿಷ್ಕ್ರಿಯ; ಹಣ ಪಡೆಯಲು ಅವಕಾಶ ನೀಡಿದ ಜಿಲ್ಲಾಡಳಿತ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 2:13 IST
Last Updated 20 ಅಕ್ಟೋಬರ್ 2025, 2:13 IST
   

ಹಾವೇರಿ: ‘ಜಿಲ್ಲೆಯಲ್ಲಿ ವಹಿವಾಟು ನಡೆಸದೇ 1.55 ಲಕ್ಷ ಬ್ಯಾಂಕ್ ಖಾತೆಗಳು ನಿಷ್ಕ್ರಿಯಗೊಂಡಿದ್ದು, ಇಂಥ ಖಾತೆಗಳಲ್ಲಿ ₹ 29.65 ಕೋಟಿ ಠೇವಣಿ ಹಣವಿದೆ’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ತಿಳಿಸಿದರು.

ನಗರದ ಹೊರವಲಯದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಭಿಯಾನದ ಸಭೆಯಲ್ಲಿ ಮಾತನಾಡಿದ ಅವರು, ‘ನಿಷ್ಕ್ರಿಯಗೊಂಡ ಖಾತೆಯಲ್ಲಿರುವ ಹಣವನ್ನು ಖಾತೆದಾರರಿಗೆ ವಾಪಸು ನೀಡಲು ‘ನಿಮ್ಮ ಹಣ, ನಿಮ್ಮ ಹಕ್ಕು’ ಅಭಿಯಾನ ಆರಂಭಿಸಲಾಗುತ್ತಿದ್ದು, ಅರ್ಹರು ಅಭಿಯಾನದ ಸದುಪಯೋಗಪಡೆದುಕೊಳ್ಳಬೇಕು’ ಎಂದರು.

‘ಭಾರತ ಸರ್ಕಾರವು ನಿಮ್ಮ ಹಣ ನಿಮ್ಮ ಹಕ್ಕು ಶೀರ್ಷಿಕೆಯಡಿ ಅಭಿಯಾನವನ್ನು ಪ್ರಾರಂಭಿಸಿದೆ. ಖಾತೆಯಲ್ಲಿರುವ ಹಣವನ್ನು ಮಾಲೀಕರಿಗೆ ಹಿಂದಿರುಗಿಸುವ ಉದ್ದೇಶ ಹೊಂದಿದೆ’ ಎಂದರು.

ADVERTISEMENT

‘ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯಿಂದ ಅಕ್ಟೋಬರ್ 1ರಿಂದ ಈ ಅಭಿಯಾನ ಆರಂಭವಾಗಿದ್ದು, ಡಿಸೆಂಬರ್ 31ರವರೆಗೂ ಅಭಿಯಾನ ಇರಲಿದೆ. ಖಾತೆದಾರರು, ತಮ್ಮ ಹಕ್ಕಿನ ಠೇವಣಿಗಳು ಮತ್ತು ಬ್ಯಾಂಕ್‌–ವಿಮಾ ಕಂಪನಿಗಳು–ಪಿಂಚಣಿ ನಿಧಿಗಳು–ಮಾರುಕಟ್ಟೆ ಮಧ್ಯವರ್ತಿಗಳಲ್ಲಿರುವ ನಿಷ್ಕ್ರಿಯ ಖಾತೆಯಿಂದ ಹಣ ಹಿಂಪಡೆಯಬಹುದು’ ಎಂದು ಹೇಳಿದರು.

‘ಅಭಿಯಾನದ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಸಮನ್ವಯ ಸಾಧಿಸಲು ಮತ್ತು ಶಿಬಿರಗಳನ್ನು ನಡೆಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಹಾವೇರಿ ಜಿಲ್ಲೆಯಾದ್ಯಂತ ಬ್ಯಾಂಕ್‌ಗಳು ಹಾಗೂ ಹಣಕಾಸು ಸಂಸ್ಥೆಗಳು, ಅಭಿಯಾನವನ್ನು ಹೆಚ್ಚು ಜನರಿಗೆ ತಲುಪಿಸಬೇಕು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ (ಲೀಡ್ ಬ್ಯಾಂಕ್) ಪ್ರಧಾನ ವ್ಯವಸ್ಥಾಪಕ ಪ್ರಭುದೇವ ಎನ್.ಜಿ. ಸಭೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.