
ಹಾವೇರಿ: ‘ಸಮಾಜ ಹಾಗೂ ಜಗತ್ತು ಬದಲಿಸುವ ಅಸ್ತ್ರ ಶಿಕ್ಷಣ. ಆದರೆ, ಶಿಕ್ಷಣ ಕ್ಷೇತ್ರಕ್ಕೆ ಇಂದಿನ ಸರ್ಕಾರಗಳು ಹೆಚ್ಚಿನ ಅನುದಾನ ಮೀಸಲಿಡುತ್ತಿಲ್ಲ. ಹಿಂದುಳಿದ ವರ್ಗದ ಹಾಗೂ ಬಡವರಾದ 2 ಲಕ್ಷ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ಗಳಲ್ಲಿ ಸೀಟು ಸಿಗುತ್ತಿಲ್ಲ’ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ರಾಷ್ಟೀಯ ಅಧ್ಯಕ್ಷ ಆದರ್ಶ ಸಾಜಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಗುರುಭವನದಲ್ಲಿ ಬುಧವಾರ ನಡೆದ ‘ಹಾಸ್ಟೆಲ್ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಸಮಾವೇಶ’ದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ಗ್ರಾಮೀಣ ಪ್ರದೇಶದ ಹಲವು ವಿದ್ಯಾರ್ಥಿಗಳು, ಹಾಸ್ಟೆಲ್ ಇಲ್ಲವೆಂಬ ಕಾರಣಕ್ಕೆ ಶಿಕ್ಷಣದಿಂದ ವಂಚಿತವಾಗುತ್ತಿದ್ದಾರೆ. ರಾಜ್ಯದಲ್ಲಿ ಇದೇ ವರ್ಷ 3 ಲಕ್ಷ ವಿದ್ಯಾರ್ಥಿಗಳು ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಸಲ್ಲಿಸಿದ್ದರು. ಅವರಲ್ಲಿ ಕೇವಲ 1 ಲಕ್ಷ ವಿದ್ಯಾರ್ಥಿಗಳಿಗೆ ಮಾತ್ರ ಸೀಟು ಸಿಕ್ಕಿದೆ. ಉಳಿದ 2 ಲಕ್ಷ ವಿದ್ಯಾರ್ಥಿಗಳಿಗೆ ಸೀಟು ಸಿಕ್ಕಿಲ್ಲ. ಎಲ್ಲ ವಿದ್ಯಾರ್ಥಿಗಳಿಗೆ ಸೀಟು ನೀಡುವಲ್ಲಿ ಸರ್ಕಾರ ವಿಫಲವಾಗಿದೆ’ ಎಂದು ಕಿಡಿಕಾರಿದರು.
‘ಸರ್ಕಾರಗಳು ಶಿಕ್ಷಣ ಕ್ಷೇತ್ರಕ್ಕೆ ಬಜೆಟ್‌ಗಳಲ್ಲಿ ಹೆಚ್ಚಿನ ಅನುದಾನ ಮೀಸಲಿಡಬೇಕು. ಅರ್ಜಿ ಸಲ್ಲಿಸಿದ ಎಲ್ಲ ವಿದ್ಯಾರ್ಥಿಗಳಿಗೂ ಹಾಸ್ಟೆಲ್‌ಗಳಲ್ಲಿ ಸೀಟು ನೀಡಬೇಕು. ಅಗತ್ಯವಿರುವ ಕಡೆಗಳಲ್ಲಿ ಹೊಸ ಹಾಸ್ಟೆಲ್‌ಗಳನ್ನು ಆರಂಭಿಸಬೇಕು. ಒಬ್ಬ ವಿದ್ಯಾರ್ಥಿಯೂ ಹಾಸ್ಟೆಲ್ ಇಲ್ಲವೆಂಬ ಕಾರಣಕ್ಕೆ ಶಿಕ್ಷಣದಿಂದ ವಂಚಿತವಾಗಬಾರದು’ ಎಂದು ಆಗ್ರಹಿಸಿದರು.
‘ಕರ್ನಾಟಕ ಹಾಸ್ಟೆಲ್‌ಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಹೆಚ್ಚಿದೆ. ಗ್ರಂಥಾಲಯ, ಓದುವ ಕೊಠಡಿಗಳಿಲ್ಲ. ಗುಣಮಟ್ಟದ ಆಹಾರ ನೀಡುತ್ತಿಲ್ಲ. ಹಿಂದುಳಿದ ಹಾಗೂ ಬಡವರ ಮಕ್ಕಳು ಇರುವ ಹಾಸ್ಟೆಲ್‌ಗಳಲ್ಲಿ ಮೂಲ ಸೌಕರ್ಯ ಕಲ್ಪಿಸುವುದ ಸರ್ಕಾರದ ಕರ್ತವ್ಯ’ ಎಂದರು.
4,000 ಸರ್ಕಾರಿ ಶಾಲೆಗಳು ಬಂದ್: ‘ಕರ್ನಾಟಕದಲ್ಲಿ 4,000 ಸರ್ಕಾರಿ ಶಾಲೆಗಳು ಈಗಾಗಲೇ ಬಂದ್ ಆಗಿದೆ’ ಎಂದು ಸಾಜಿ ಹೇಳಿದರು.
‘ದೇಶದಲ್ಲಿ 80,000 ಸರ್ಕಾರಿ ಶಾಲೆಗಳು ಹಂತ ಹಂತವಾಗಿ ಬಂದ್ ಆಗಿವೆ. ಹಿಂದುಳಿದ ವರ್ಗ ಹಾಗೂ ಬಡವರು ಓದುವ 6 ಲಕ್ಷ ಶಾಲೆಗಳಿಗೆ ಇಂದಿಗೂ ಅಂತರ್ಜಾಲ ಸಂಪರ್ಕವಿಲ್ಲ. 4 ಲಕ್ಷ ಶಾಲೆಗಳಿಗೆ ಒಂದೂ ಕಂಪ್ಯೂಟರ್ ಇಲ್ಲ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಕೇಂದ್ರ ಸರ್ಕಾರ ಮಾತ್ರ, ಕೋಮುವಾದಿ ಧೋರಣೆ ಮೂಲಕ ಜನರನ್ನು ಇಬ್ಬಾಗಿಸಿ ತನ್ನ ಬೇಳೆ ಬೇಯಿಸಿಕೊಳ್ಳುತ್ತಿದೆ’ ಎಂದು ಅವರು ಆಕ್ರೋಶ ಹೊರಹಾಕಿದರು.
ಸಮಾವೇಶ ಉದ್ಘಾಟಿಸಿದ ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಕಿರಣ ಗಾಜನೂರು ಮಾತನಾಡಿ, ‘ದೇಶಕ್ಕೆ ಸ್ವಾತಂತ್ರ್ಯ ಬಂದರೂ ಪ್ರಜಾಪ್ರಭುತ್ವ ಇನ್ನೂ ಸಮರ್ಪಕವಾಗಿ ಜಾರಿಯಾಗದಿರುವುದು ಆತಂಕದ ಸಂಗತಿ. ಶಿಕ್ಷಣ ಇಲ್ಲದ ಪ್ರಜಾಪ್ರಭುತ್ವದಿಂದ ಸಮಾನತೆ ಸಾಧ್ಯವಿಲ್ಲ. ಶೇ 63ರಷ್ಟು ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ’ ಎಂದರು.
ಎಸ್ಎಫ್ಐ ರಾಜ್ಯ ಘಟಕದ ಅಧ್ಯಕ್ಷ ಶಿವಪ್ಪ ಅಂಬ್ಲೀಕಲ್ ಅಧ್ಯಕ್ಷತೆ ವಹಿಸಿದ್ದರು. ಎಸ್ಎಫ್ಐ ಕೇಂದ್ರ ಸಮಿತಿ ಸದಸ್ಯರಾದ ಸುಜಾತ ವೈ, ದೊಡ್ಡ ಬಸವರಾಜ, ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಸಾಹಿತಿ ಸತೀಶ ಕುಲಕರ್ಣಿ, ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ ವಿಜಯಕುಮಾರ್ ಟಿ.ಎಸ್., ರಾಜ್ಯ ಉಪಾಧ್ಯಕ್ಷ ಬಸವರಾಜ ಎಸ್., ಸಮಾವೇಶದ ಸ್ವಾಗತ ಸಮಿತಿ ಅಧ್ಯಕ್ಷರಾದ ವಿಜಯಕುಮಾರ ಮುದುಕಣ್ಣವರ, ಪರಿಮಳಾ ಜೈನ್, ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ, ಮಲ್ಲಿಕಾರ್ಜುನ ಹಾವೇರಿ, ಉಡಚಪ್ಪ ಮಾಳಗಿ, ನಾರಾಯಣ ಕಾಳೆ ಇದ್ದರು.
ಸಮಾವೇಶ ನಿಮಿತ್ತ ಮೈಲಾರ ಮಹದೇವಪ್ಪ ವೃತ್ತದಿಂದ ಗುರುಭವನದವರೆಗೆ ಎಸ್‌ಎಫ್‌ಐ ಪದಾಧಿಕಾರಿಗಳ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು. ‘ಸಾರ್ವಜನಿಕ ಶಿಕ್ಷಣ ಉಳಿವಿಗಾಗಿ, ಹಾಸ್ಟೆಲ್ ಬಲವರ್ಧನೆಗಾಗಿ’ ರಾಜ್ಯವ್ಯಾಪಿ ಹಮ್ಮಿಕೊಂಡಿರುವ ಜಾಥಾವನ್ನು ಇದೇ ಸಂದರ್ಭದಲ್ಲಿ ಬರಮಾಡಿಕೊಳ್ಳಲಾಯಿತು. ಎರಡು ದಿನಗಳ ಸಮಾವೇಶದಲ್ಲಿ ಗುರುವಾರವೂ ವಿಚಾರಗೋಷ್ಠಿ ಹಾಗೂ ಸಮಾರೋಪ ಸಮಾರಂಭ ಜರುಗಲಿದೆ.
‘ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಬೆದರಿಕೆ ಆರೋಪ’
‘ಹಾವೇರಿಯಲ್ಲಿ ಸರ್ಕಾರದ 14 ಹಾಸ್ಟೆಲ್‌ಗಳಿವೆ. ಸುಮಾರು 700 ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದಾರೆ. ಈ ಪೈಕಿ ಕೇವಲ 50 ವಿದ್ಯಾರ್ಥಿಗಳು ಮಾತ್ರ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಉಳಿದ ವಿದ್ಯಾರ್ಥಿಗಳಿಗೆ ಬೆದರಿಕೆಯೊಡ್ಡಿರುವ ಅಧಿಕಾರಿಗಳು ಸಮಾವೇಶದಲ್ಲಿ ಪಾಲ್ಗೊಳ್ಳದಂತೆ ತಡೆದಿದ್ದಾರೆ’ ಎಂದು ಆಯೋಜಕರು ದೂರಿದರು. ‘ಹಾಸ್ಟೆಲ್ ಸಮಸ್ಯೆ ಬಿಚ್ಚಿಡಲು ಸಮಾವೇಶ ಮಾಡಲಾಗಿದೆ. ಆದರೆ ವಿದ್ಯಾರ್ಥಿಗಳು ಭಾಗಿಯಾಗದಂತೆ ಅಡ್ಡಿಪಡಿಸಲಾಗಿದೆ. ಇದು ಅಧಿಕಾರಿಗಳ ದರ್ಪದ ವರ್ತನೆ. ಇದರ ವಿರುದ್ಧ ನಮ್ಮ ಹೋರಾಟ ನಡೆಯಲಿದೆ’ ಎಂದು ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.