ADVERTISEMENT

ಒಳ ಮೀಸಲಾತಿ | ಆಗಸ್ಟ್ 15ರೊಳಗೆ ಬೇಡಿಕೆ ಈಡೇರದಿದ್ದರೆ ಹೋರಾಟ: ಮಾಳಗಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 2:06 IST
Last Updated 27 ಜುಲೈ 2025, 2:06 IST
ಡಿ.ಎಸ್‌.ಮಾಳಗಿ 
ಡಿ.ಎಸ್‌.ಮಾಳಗಿ    

ಹಾವೇರಿ: ‘ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯಂತೆ ಆಗಸ್ಟ್ 15ರೊಳಗಾಗಿ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿಗೊಳಿಸಬೇಕು. ಇಲ್ಲದಿದ್ದರೆ, ರಾಜ್ಯವ್ಯಾಪಿ ಗಂಭೀರ ಸ್ವರೂಪದ ಹೋರಾಟ ಆರಂಭಿಸಲಾಗುವುದು’ ಎಂದು ಲಿಡ್ಕರ್ ನಿಗಮದ ಮಾಜಿ ಉಪಾಧ್ಯಕ್ಷ ಡಿ.ಎಸ್. ಮಾಳಗಿ ಎಚ್ಚರಿಕೆ ನೀಡಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒಳ ಮೀಸಲಾತಿ ಜಾರಿಗೊಳಿಸುವಂತೆ ಸುಪ್ರೀಂಕೋರ್ಟ್ ಸಹ ನಿರ್ದೇಶನ ನೀಡಿದೆ. ಅಷ್ಟಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸುತ್ತಿಲ್ಲ. ಮಾದಿಗ ಜನಾಂಗಕ್ಕೆ ಘೋರ ಅನ್ಯಾಯ ಮಾಡುತ್ತಿದೆ’ ಎಂದು ದೂರಿದರು.

‘ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಇರುವ ಶೇ 15ರಷ್ಟು ಮೀಸಲಾತಿಯಲ್ಲಿ ಮಾದಾರ, ಸಮಗಾರ, ಡೋಹರ, ಮಚಗಾರ ಸಮುದಾಯದವರಿಗೆ ಶೇ 6ರಷ್ಟು (ಎಡಗೈ ಸಮಾಜಕ್ಕೆ) ಒಳ ಮೀಸಲಾತಿ ನೀಡುವಂತೆ ಆಯೋಗ ಶಿಫಾರಸು ಮಾಡಿದೆ. ಆದರೆ, ಸದ್ಯದ ಸರ್ಕಾರದಲ್ಲಿರುವ ಕೆಲವರು ಒಳಮೀಸಲಾತಿ ಜಾರಿಗೆ ಅಡ್ಡಗಾಲು ಹಾಕುತ್ತಿದ್ದಾರೆ. ಇಂಥವರ ಮಾತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿಗೂಡಬಾರದು’ ಎಂದರು.

ADVERTISEMENT

‘ಒಳ ಮೀಸಲಾತಿಗಾಗಿ ಸುಮಾರು 40 ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಕಳೆದ ಬಾರಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು ಒಳ ಮೀಸಲಾತಿಗೆ ಜಾರಿಗಾಗಿ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದರು. ಆದರೆ, ಇಂದಿನ ಸರ್ಕಾರ ಸಮೀಕ್ಷೆ ಹೆಸರಿನಲ್ಲಿ ಕಾಲಹರಣ ಮಾಡುತ್ತಿದೆ. ಒಳ ಮೀಸಲಾತಿ ಜಾರಿ ಮಾಡುವುದಾಗಿ ಹೇಳಿದ್ದ ಸಿದ್ದರಾಮಯ್ಯ ಸಹ ಸಮಾಜಕ್ಕೆ ಅನ್ಯಾಯ ಮಾಡುತ್ತಿದ್ದಾರೆ’ ಎಂದು ಆಕ್ರೋಶ ಹೊರಹಾಕಿದರು.

‘ಸಮಾಜದ ಜನರು ಗಟಾರ ಬಳಿಯುವುದು, ನಗರ–ಗ್ರಾಮದ ಕಸಗೂಡಿಸುವುದು, ಜಾನುವಾರು ಸಾಗಿಸುವುದು, ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಹಲಗೆ ಬಡಿಯುವುದು ಸೇರಿದಂತೆ ಹಲವು ಕಡೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಸಮಾಜದ ಕೊಳಕು ತೊಳೆಯುತ್ತಿದ್ದಾರೆ. ಇಂಥ ಸಮಾಜವನ್ನು ಬಸವಾದಿ ಶರಣರು ಹೊಗಳಿದ್ದಾರೆ. ಆದರೆ, ಇಂದಿನ ಸರ್ಕಾರದಿಂದ ನಮ್ಮ ಸಮಾಜಕ್ಕೆ ನ್ಯಾಯ ಸಿಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ 10 ಸಾವಿರದಿಂದ 30 ಸಾವಿರದವರೆಗೂ ಮತದಾರರಿದ್ದಾರೆ. ಆಗಸ್ಟ್ 15ರೊಳಗೆ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ, ಮುಂಬರುವ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಚುನಾವಣೆಯಲ್ಲಿ ರಾಜ್ಯ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಾಗುವುದು’ ಎಂದರು.

ಅಖಿಲ ಕರ್ನಾಟಕ ಆದಿಜಾಂಬವ ಸಂಘದ ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜ ಮಾಳಗಿ ಮಾತನಾಡಿ, ‘ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ನಿರಂತರವಾಗಿ ಹೋರಾಟ ನಡೆಸಲಾಗುತ್ತಿದೆ. ಆಗಸ್ಟ್ 1ರಂದು ಹಾವೇರಿ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಕಚೇರಿ ಎದುರು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗುವುದು’ ಎಂದರು.

‘ರಾಜ್ಯ ಸರ್ಕಾರ ನಮ್ಮ ಕೂಗಿಗೆ ಸ್ಪಂದಿಸಬೇಕು. ಒಳ ಮೀಸಲಾತಿ ಸಿಕ್ಕರೆ, ಸಮಾಜದ ಜನರಿಗೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ನ್ಯಾಯ ಸಿಗಲಿದೆ. ತೀರಾ ಹಿಂದುಳಿದಿರುವ ಸಮಾಜದ ಕುಟುಂಬಗಳು ಆರ್ಥಿಕವಾಗಿ ಸದೃಢವಾಗಲಿದ್ದು, ಡಾ. ಬಿ.ಆರ್. ಅಂಬೇಡ್ಕರ್ ಅವರು ಕಂಡಿರುವ ಕನಸು ನನಸಾಗಲಿದೆ’ ಎಂದು ಹೇಳಿದರು.

ಸಮಾಜದ ಮುಖಂಡರಾದ ಉಡಚಪ್ಪ ಮಾಳಗಿ, ಹೊನ್ನೇಶ್ವರ ತಗಡಿನಮನಿ, ಅಶೋಕ ಮರೆಣ್ಣನವರ, ಮಾಲತೇಶ ಯಲ್ಲಾಪುರ, ಸುಭಾಷ ಬೆಂಗಳೂರು, ಮಲ್ಲೇಶ ಕಡಕೋಳ, ಮಾರುತಿ ಬಣಕಾರ ಇದ್ದರು.

‘ಶಾಸಕರೇ ರಾಜೀನಾಮೆ ನೀಡಿ ಹೋರಾಡಿ’

‘ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದಲ್ಲಿ ನಮ್ಮ ಸಮಾಜದ ಐವರು ಶಾಸಕರಿದ್ದಾರೆ. ಇಬ್ಬರು ಸಚಿವರಿದ್ದಾರೆ. ಇವರಿಗೆ ಸಮಾಜದ ಮೇಲೆ ಪ್ರೀತಿ ಹಾಗೂ ಗೌರವ ಇದ್ದರೆ ಒಳ ಮೀಸಲಾತಿ ಜಾರಿಗೊಳಿಸಬೇಕು. ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಇಲ್ಲದಿದ್ದರೆ ರಾಜೀನಾಮೆ ನೀಡಿ ಒಳ ಮೀಸಲಾತಿ ಹೋರಾಟದಲ್ಲಿ ಪಾಲ್ಗೊಳ್ಳಬೇಕು’ ಎಂದು ಡಿ.ಎಸ್. ಮಾಳಗಿ ಖಡಕ್ ಸಂದೇಶ ರವಾನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.