ADVERTISEMENT

ಬೀದರ್: ಮಹಾಶಿವರಾತ್ರಿ ಪ್ರಯುಕ್ತ ಸಾಮೂಹಿಕ ಇಷ್ಟಲಿಂಗ ಪೂಜೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2021, 15:29 IST
Last Updated 12 ಮಾರ್ಚ್ 2021, 15:29 IST
ಹಾವೇರಿ ನಗರದ ಹೊಸಮಠದಲ್ಲಿ ಮಹಾಶಿವರಾತ್ರಿ ಅಂಗವಾಗಿ ಗುರುವಾರ ಬಸವಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ‘ಸಾಮೂಹಿಕ ಇಷ್ಟಲಿಂಗ ಪೂಜೆ’ ನಡೆಯಿತು 
ಹಾವೇರಿ ನಗರದ ಹೊಸಮಠದಲ್ಲಿ ಮಹಾಶಿವರಾತ್ರಿ ಅಂಗವಾಗಿ ಗುರುವಾರ ಬಸವಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ‘ಸಾಮೂಹಿಕ ಇಷ್ಟಲಿಂಗ ಪೂಜೆ’ ನಡೆಯಿತು    

ಹಾವೇರಿ: ನಗರದ ಹೊಸಮಠದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ‘ಸಾಮೂಹಿಕ ಇಷ್ಟಲಿಂಗ ಪೂಜೆ’ ಕಾರ್ಯಕ್ರಮ ಗುರುವಾರ ನಡೆಯಿತು.

ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಮಾತನಾಡಿ, ‘ಶಿವರಾತ್ರಿ ಸಂದರ್ಭದಲ್ಲಿ ಜಾಗರಣೆ ಮಾಡುವ ಪದ್ಧತಿ ನಮ್ಮಲ್ಲಿದೆ. ಜಾಗರಣೆ ಎಂದರೆ ಜಾಗೃತನಾಗಿರುವುದು ಎಂದರ್ಥ. ನೈತಿಕತೆಯಿಂದ ತನ್ನ ಅಂತರಂಗ– ಬಹಿರಂಗಗಳನ್ನು ಶುದ್ಧವಾಗಿಟ್ಟುಕೊಂಡ ಮನುಷ್ಯ, ಸದಾಕಾಲ ಜಾಗೃತನಾಗಿರುತ್ತಾನೆ’ ಎಂದರು.

ಶರಣನ ವ್ಯಕ್ತಿತ್ವ ಸದಾ ಜಾಗೃತವಾದ್ದರಿಂದ ಅವನ ನಿದ್ದೆ ಎಚ್ಚರಗಳೆಲ್ಲವೂ ಶಿವನ ಸ್ಮರಣೆ, ನುಡಿಗಳೆಲ್ಲ ಶಿವತತ್ವ ಆಗಿರುತ್ತವೆ. ಜಾಗೃತ ಶರಣನ ಕಾಯ ಕೈಲಾಸವಾಗಿರುತ್ತದೆ. ಅವನೊಳಗೆ ಶಿವ ನೆಲೆಸಿರುತ್ತಾನೆ ಎಂದು ಬಸವಣ್ಣ ತಿಳಿಸಿದ್ದಾರೆ. ಶಿವರಾತ್ರಿಯ ಸಂದರ್ಭದಲ್ಲಿ ಶರಣನಂತೆ ನಮ್ಮಲ್ಲಿ ನಿರಂತರವಾಗಿ ಜಾಗೃತಿ ಮೂಡುವಂತೆ ಶಿವನ ಅನುಗ್ರಹ ಎಲ್ಲರಿಗಾಗಲಿ ಎಂದು ಶ್ರೀಗಳು ಹಾರೈಸಿದರು.

ADVERTISEMENT

ಬಸವಣ್ಣನವರು ಮೊದಲು ಇಷ್ಟಲಿಂಗದ ಕಲ್ಪನೆಯನ್ನು ಮತ್ತು ಯೋಗದ ವಿಧಾನವನ್ನು ತಂದರು. ಗುಡಿ ಗುಂಡಾರಗಳ ಹೆಸರಿನಲ್ಲಿ ಮುಗ್ಧ ಜನರ ಶೋಷನೆ ನಡೆಯುತ್ತಿತ್ತು. ಹೀಗೆ ಧರ್ಮದ ಹೆಸರಿನಲ್ಲಿ ಶೋಷಣೆ ಸಲ್ಲದೆಂದೂ, ಮೇಲು -ಕೀಳು ಭಾವನೆ ಸರಿಯಲ್ಲವೆಂದು, ಇಷ್ಟಲಿಂಗವನ್ನು ಅಂಗದ ಮೇಲೆ ಧರಿಸುವ ಪದ್ಧತಿಯನ್ನು ಜಾರಿಗೊಳಿಸಿದರು ಎಂದು ತಿಳಿಸಿದರು.

ಮಲ್ಲಿಕಾರ್ಜನ ಹಿಂಚಗೆರಿ, ಇಂದುಧರ ಯರೆಶಿಮಿ, ಮುರುಗೆಪ್ಪ ಕಡೆಕೊಪ್ಪ, ಶಿವಯೋಗಿ ಬೆನ್ನುರು, ಶಿವಬಸಪ್ಪ ಮುದ್ದಿ, ಜಯದೇವ ಕೆರೊಡಿ, ಶ್ರೀಮಠದ ಭಕ್ತರು ಲಿಂಗಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.