ADVERTISEMENT

ಹಾವೇರಿ | ತರಕಾರಿ ಮಾರಾಟಕ್ಕಿಳಿದ ಐಟಿ–ಬಿಟಿ ಯುವಕರು!

ಲಾಕ್‌ಡೌನ್‌ ಅವಧಿಯಲ್ಲಿ ಆನ್‌ಲೈನ್‌ ವ್ಯವಹಾರಕ್ಕೆ ವೆಬ್‌ಸೈಟ್‌ ಆರಂಭ: ಮನೆ ಬಾಗಿಲಿಗೆ ದಿನಸಿ ಪೂರೈಕೆ

ಸಿದ್ದು ಆರ್.ಜಿ.ಹಳ್ಳಿ
Published 20 ಏಪ್ರಿಲ್ 2020, 19:38 IST
Last Updated 20 ಏಪ್ರಿಲ್ 2020, 19:38 IST
ಹಾವೇರಿಯ ವಿದ್ಯಾನಗರದ ಗೋದಾಮಿನಲ್ಲಿ ತರಕಾರಿ ಮಾರಾಟ ಮಾಡುತ್ತಿರುವ ಐಟಿ–ಬಿಟಿ ಯುವಕರು  
ಹಾವೇರಿಯ ವಿದ್ಯಾನಗರದ ಗೋದಾಮಿನಲ್ಲಿ ತರಕಾರಿ ಮಾರಾಟ ಮಾಡುತ್ತಿರುವ ಐಟಿ–ಬಿಟಿ ಯುವಕರು     

ಹಾವೇರಿ: ಬೆಂಗಳೂರಿನ ಪ್ರತಿಷ್ಠಿತ ಐಟಿ–ಬಿಟಿ ಕಂಪನಿಗಳಲ್ಲಿ ಕೆಲಸ ಮಾಡುತ್ತಾ ಕೈತುಂಬ ಸಂಬಳ ಎಣಿಸುತ್ತಿದ್ದ ಯುವಕರು ಲಾಕ್‌ಡೌನ್‌ ಅವಧಿಯಲ್ಲಿ ಹಾವೇರಿ ನಗರದಲ್ಲಿ ಮನೆ–ಮನೆಗೂ ತರಕಾರಿ ಮತ್ತು ದಿನಸಿ ಪೂರೈಕೆ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ.

ಕೋವಿಡ್‌–19 ತುರ್ತು ಪರಿಸ್ಥಿತಿಯಲ್ಲಿ ನಗರದ ಜನತೆ ಮನೆಯಿಂದ ಹೊರಗಡೆ ಅನಗತ್ಯವಾಗಿ ಓಡಾಡದೆ ಮನೆಯಲ್ಲೇ ಸುರಕ್ಷಿತವಾಗಿ ಇದ್ದು, ಅಗತ್ಯ ವಸ್ತುಗಳನ್ನು ಆನ್‌ಲೈನ್‌ ಮೂಲಕ ಖರೀದಿಸಿ ಎಂದು ಜಾಗೃತಿ ಮೂಡಿಸುತ್ತಿದ್ದಾರೆ.

ಹಾವೇರಿ ನಗರದ ಸುಶೀಲೇಂದ್ರ ಕುಲಕರ್ಣಿ, ರಘುವೀರ ಕಟ್ಟಿ, ಸುಜಯ್‌ ಹುಬ್ಳೀಕರ್‌, ಪವನ್‌ ಕುಲಕರ್ಣಿ, ರಾಘವೇಂದ್ರ ದೇಸಾಯಿ, ಪ್ರಭಂಜನ್‌ ದೇಸಾಯಿ, ಗಂಗಾಧರ ಕುಲಕರ್ಣಿ ಮತ್ತು ರತನ್‌ ಕಾಶಪ್ಪನವರ ಈ ಎಂಟು ಸ್ನೇಹಿತರು ಬೆಂಗಳೂರಿನ ಲಿನೊವಾ, ಟಾರೆಂಟೊ ಟೆಕ್ನಾಲಜಿಸ್‌, ರಿಲೆಯನ್ಸ್‌ ಮಾರ್ಕೆಟಿಂಗ್‌, ವೇದಾಂತು ಆನ್‌ಲೈನ್‌ ಎಜುಕೇಷನ್‌ ಮುಂತಾದ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ADVERTISEMENT

ವೆಬ್‌ಸೈಟ್‌ ಆರಂಭ:ಲಾಕ್‌ಡೌನ್‌ ಘೋಷಣೆಯಾದ ನಂತರ ಬೆಂಗಳೂರಿನಿಂದ ಹಾವೇರಿಗೆ ಬಂದ ಈ ಯುವಕರ ತಂಡ, ತರಕಾರಿ ಮತ್ತು ದಿನಸಿಗಾಗಿ ಜನರು ಪರದಾಡುತ್ತಿರುವುದನ್ನು ನೋಡಿದರು. ಇದಕ್ಕೆ ಪರಿಹಾರ ಹುಡುಕಬೇಕು ಎಂದು ಯೋಚಿಸಿದಾಗ ಹೊಳೆದದ್ದೇ ಆನ್‌ಲೈನ್‌ ಮಾರ್ಕೆಟಿಂಗ್‌. ನಂತರ ಹಾವೇರಿಯಲ್ಲಿ ಎಷ್ಟು ಮಂದಿ ಫ್ಲಿಫ್‌ಕಾರ್ಟ್‌, ಅಮೆಜಾನ್‌ ಮುಂತಾದ ವೆಬ್‌ಸೈಟ್‌ಗಳ ಮೂಲಕ ಆನ್‌ಲೈನ್‌ ವ್ಯವಹಾರ ಮಾಡುತ್ತಿದ್ದಾರೆ ಎಂಬುದನ್ನು ಸರ್ವೆ ಮಾಡಿದರು. ನಂತರstaysafehaveri.in ಹೆಸರಿನ ವೆಬ್‌ಸೈಟ್‌ ತೆರೆದು ಆನ್‌ಲೈನ್‌ ವ್ಯವಹಾರ ಶುರು ಮಾಡಿದರು.

ತಾಜಾ ತರಕಾರಿ, ನಿಖರ ಬೆಲೆ:‘ವಾರ್ಡ್‌ಗಳಿಗೆ ತರಕಾರಿ ಮಾರುವವರು ಸರಿಯಾಗಿ ಬರುತ್ತಿರಲಿಲ್ಲ. ಕೆಲವರು ದುಬಾರಿ ದರ ಹೇಳುತ್ತಿದ್ದುದರಿಂದ, ಮೊದಲೇ ಸಂಕಷ್ಟದಲ್ಲಿರುವ ಬಡವರು, ಮಧ್ಯಮ ವರ್ಗದವರಿಗೆ ಮತ್ತಷ್ಟು ಹೊರೆ ಆಗುತ್ತಿತ್ತು. ಪೊಲೀಸರು ಒಳರಸ್ತೆಗಳಿಗೆ ಅಡ್ಡಲಾಗಿ ಬ್ಯಾರಿಕೇಡ್‌ ಹಾಕಿ, ಸಂಚಾರ ನಿರ್ಬಂಧಿಸಿದ ಕಾರಣ ಜನರು ಹೊರಗಡೆ ಓಡಾಡುವುದೇ ಕಷ್ಟವಾಗಿತ್ತು.ಈ ಎಲ್ಲ ಕಾರಣಗಳಿಂದ ತಾಜಾ ತರಕಾರಿ ಮತ್ತು ನಿಖರ ಬೆಲೆಯಲ್ಲಿ ದಿನಸಿ ಸಾಮಗ್ರಿ ಪೂರೈಕೆ ಮಾಡಲು ಮುಂದಾದೆವು. ಲಾಭಕ್ಕಿಂತ ಜನರಿಗೆ ಸಹಾಯ ಮಾಡಬೇಕು ಎಂಬ ಉದ್ದೇಶದಿಂದ ಆನ್‌ಲೈನ್‌ ವ್ಯಾಪಾರ ಆರಂಭಿಸಿದೆವು’ ಎನ್ನುತ್ತಾರೆ ಸ್ಟೇ ಸೇಫ್‌ ಹಾವೇರಿ ತಂಡದ ಸುಶೀಲೇಂದ್ರ ಕುಲಕರ್ಣಿ.

‘ನಾವೆಲ್ಲರೂ ವರ್ಕ್ ಫ್ರಮ್‌ ಹೋಂ ಮಾಡುವ ಜತೆಗೆ ಆನ್‌ಲೈನ್ ವ್ಯವಹಾರದ ಮೂಲಕ ಬೆಳಿಗ್ಗೆ 6ರಿಂದ 10ರವರೆಗೆ ಮನೆ–ಮನೆಗೆ ತರಕಾರಿ ಮತ್ತು ದಿನಸಿ ಪೂರೈಸುತ್ತಿದ್ದೇವೆ. ವೆಬ್‌ಸೈಟ್‌ನಲ್ಲಿ ತರಕಾರಿ, ದಿನಸಿ, ಗೃಹೋಪಯೋಗಿ ವಸ್ತುಗಳು ಎಂದು ವರ್ಗೀಕರಿಸಿ ಪಟ್ಟಿ ಮಾಡಲಾಗಿದೆ. ಸಾಮಗ್ರಿಯ ಚಿತ್ರ, ಪ್ರಮಾಣ, ದರವನ್ನು ನಮೂದಿಸಲಾಗಿದೆ’ ಎಂದು ರಘುವೀರ ಕಟ್ಟಿ ಹೇಳಿದರು.

ರೈತರಿಂದ ತರಕಾರಿ ಖರೀದಿ:‘ಕೆರೆಮತ್ತಿಹಳ್ಳಿ, ಗಣಜೂರು, ಕರಜಗಿ, ದೇವಗಿರಿ ಯಲ್ಲಾಪುರ ಮುಂತಾದ ಗ್ರಾಮಗಳಿಗೆ ಹೋಗಿ ರೈತರಿಂದ ತರಕಾರಿ ಖರೀದಿಸಿ, ಬೈಕ್‌ ಮೂಲಕ ನಗರಕ್ಕೆ ತಂದು ಗೋದಾಮಿನಲ್ಲಿ ದಾಸ್ತಾನು ಮಾಡುತ್ತೇವೆ. ಹೋಲ್‌ಸೇಲ್‌ ವ್ಯಾಪಾರಿಗಳಿಂದ ದಿನಸಿ ಸಾಮಗ್ರಿ ಖರೀದಿ ಮಾಡುತ್ತೇವೆ.ನಂತರ ಗ್ರಾಹಕರ ಬೇಡಿಕೆಗನುಗುಣವಾಗಿ ಮನೆ–ಮನೆಗೆ ತರಕಾರಿ ಮತ್ತು ದಿನಸಿ ತಲುಪಿಸುತ್ತೇವೆ. ಈ ಕಾರ್ಯಕ್ಕೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರಿಂದ ಮೆಚ್ಚುಗೆ ವ್ಯಕ್ತವಾಗಿದೆ’ ಎಂದು ಸುಜಯ್‌ ಹುಬ್ಳೀಕರ್‌ ಸಂತಸ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.