
ಹಾವೇರಿ: ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಶನಿವಾರ ಆಯೋಜಿಸಿದ್ದ ‘ಜಿಲ್ಲಾ ಮಟ್ಟದ ಉದ್ಯೋಗ ಮೇಳ’ಕ್ಕೆ ಗ್ರಾಮೀಣ ಭಾಗದ ಅಭ್ಯರ್ಥಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, 759 ಅಭ್ಯರ್ಥಿಗಳಿಗೆ ಸ್ಥಳದಲ್ಲೇ ನೇಮಕಾತಿ ಆದೇಶ ವಿತರಿಸಲಾಗಿದೆ.
ಕುಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಜಿಲ್ಲಾಡಳಿತ ಹಾಗೂ ಶಾಸಕ ಪ್ರಕಾಶ ಕೋಳಿವಾಡ ಪಿಕೆಕೆ ಸಂಸ್ಥೆಯ ಸಹಯೋಗದಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿತ್ತು.
ಮೇಡ್ಲೇರಿ ರಸ್ತೆಯಲ್ಲಿರುವ ಆಂಗ್ಲೊ ಉರ್ದು ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಮೇಳವನ್ನು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು.
ರಾಣೆಬೆನ್ನೂರು, ಹಾವೇರಿ, ಬ್ಯಾಡಗಿ, ಹಿರೇಕೆರೂರು, ರಟ್ಟೀಹಳ್ಳಿ, ಹಾನಗಲ್, ಶಿಗ್ಗಾವಿ, ಸವಣೂರು ತಾಲ್ಲೂಕಿನ ಅಭ್ಯರ್ಥಿಗಳು ಮೇಳದಲ್ಲಿ ಭಾಗವಹಿಸಿದ್ದರು. ನೆರೆಯ ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಯ ಅಭ್ಯರ್ಥಿಗಳು ಸಹ ಮೇಳಕ್ಕೆ ಬಂದಿದ್ದರು.
ಟಿವಿಎಸ್, ಶ್ರೀರಾಮ್ ಫೈನಾನ್ಸ್, ಶಾಹಿ ಎಕ್ಸ್‌ಫೋರ್ಟ್ ಗಾರ್ಮೆಂಟ್ಸ್ ಕಾರ್ಖಾನೆ, ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಅಪೋಲೊ ಫಾರ್ಮಸಿ, ಲೆನ್ಸ್ ಕಾರ್ಟ್, ಡಿಎಚ್‌ಎಲ್, ಶಬ್ರಿ ಗ್ರೂಪ್ಸ್, ಬೆಲ್ಲದ್ ಆ್ಯಂಡ್ ಕಂಪನಿ, ಜೆಎಸ್‌ಡಬ್ಲ್ಯು ಸ್ಟೀಲ್, ಎಲ್ ಆ್ಯಂಡ್ ಟಿ ಫೈನಾನ್ಸ್ ಕಂಪನಿ, ಟಾಟಾ ಎಲೆಕ್ಟ್ರಾನಿಕ್ಸ್ ಸಿಸ್ಟಮ್ಸ್, ಎಲ್‌ಐಸಿ ಸೇರಿದಂತೆ ರಾಜ್ಯದ 110 ಕಂಪನಿಗಳು ಮೇಳದಲ್ಲಿ ಭಾಗವಹಿಸಿದ್ದವು.
ಶಾಲೆಯ ಪ್ರತಿಯೊಂದು ಕೊಠಡಿಯಲ್ಲಿ ಎರಡು ಕಂಪನಿಗಳ ಸಂದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಸಂದರ್ಶನದಲ್ಲಿ ಉತ್ತಮ ಅಂಕಗಳನ್ನು ಪಡೆದ 759 ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ನೇಮಕಾತಿ ಆದೇಶ ನೀಡಿ, ಕೆಲಸಕ್ಕೆ ಹಾಜರಾಗಲು ದಿನಾಂಕ ನಿಗದಿಪಡಿಸಿ ಕಳುಹಿಸಲಾಯಿತು.
3,924 ಅಭ್ಯರ್ಥಿಗಳು ಭಾಗಿ: ಮೇಳದಲ್ಲಿ ಒಟ್ಟು 3,924 ಅಭ್ಯರ್ಥಿಗಳು ಭಾಗವಹಿಸಿದ್ದರು. ಈ ಪೈಕಿ 759 ಅಭ್ಯರ್ಥಿಗಳಿಗೆ ಮಾತ್ರ ನೇಮಕಾತಿ ಆದೇಶ ನೀಡಲಾಗಿದೆ. 1,427 ಅಭ್ಯರ್ಥಿಗಳನ್ನು ಮೊದಲ ಸುತ್ತಿನ ಸಂದರ್ಶನದಲ್ಲಿ ಆಯ್ಕೆ ಮಾಡಿಕೊಂಡು, ಎರಡನೇ ಸುತ್ತಿನ ಸಂದರ್ಶನಕ್ಕೆ ಆಹ್ವಾನ ನೀಡಲಾಗಿದೆ.
ಎಸ್‌ಎಸ್‌ಎಲ್‌ಸಿಯಿಂದ ಸ್ನಾತಕೋತ್ತರ ಅಭ್ಯರ್ಥಿಗಳು: ಎಂ.ಕಾಮ್, ಎಂ.ಎಸ್ಸಿ, ಎಂ.ಟೆಕ್, ಪಿ.ಎಚ್‌ಡಿ ಆದವರು ಸಹ ಉದ್ಯೋಗ ಮೇಳಕ್ಕೆ ಬಂದು ಸಂದರ್ಶನ ನೀಡಿದರು.
ಮೇಳದಲ್ಲಿದ್ದ ಬಹುತೇಕ ಕಂಪನಿಗಳಲ್ಲಿ ಸೇಲ್ಸ್ ಮ್ಯಾನೇಜರ್, ಫೀಲ್ಡ್ ಆಫೀಸರ್, ಕ್ರೆಡಿಟ್ ಟ್ರೈನಿ ಮ್ಯಾನೇಜರ್, ಡಾಟಾ ಎಂಟ್ರಿ, ಗ್ರಾಹಕ ಸೇವಾ ಅಧಿಕಾರಿ ಸೇರಿದಂತೆ ಮಾರುಕಟ್ಟೆ ವಿಭಾಗದಲ್ಲಿಯೇ ಹೆಚ್ಚು ಉದ್ಯೋಗಗಳಿದ್ದವು. ತಮ್ಮ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ಅಲ್ಲದಿದ್ದರೂ ಸ್ನಾತಕೋತ್ತರ ಪದವೀಧರರು, ಹೇಗಾದರೂ ಮಾಡಿ ಉದ್ಯೋಗ ಮಾಡಬೇಕೆಂದು ಹಲವು ಕಂಪನಿಗಳ ಸಂದರ್ಶನಕ್ಕೆ ಹಾಜರಾದರು. ಇದರಲ್ಲಿ ಹಲವರು ಹುದ್ದೆಗೂ ಆಯ್ಕೆಯಾಗಿದ್ದಾರೆ.
ನೋಂದಣಿ ಸಮಸ್ಯೆ: ಉದ್ಯೋಗ ಮೇಳದಲ್ಲಿ ಭಾಗವಹಿಸಲು ಕ್ಯೂಆರ್ ಕೋಡ್ ಮೂಲಕ ಮುಂಚಿತವಾಗಿ ನೋಂದಣಿ ಮಾಡಿಸಲು ಅವಕಾಶ ನೀಡಲಾಗಿತ್ತು. ಆದರೆಮ, ಕ್ಯೂಆರ್ ಕೋಡ್‌ನಲ್ಲಿ ಸಮಸ್ಯೆಯಾಗಿದ್ದರಿಂದ ನೋಂದಣಿಗೆ ಅಡ್ಡಿ ಉಂಟಾಯಿತು. ಮೇಳದ ಸ್ಥಳದಲ್ಲಿಯೂ ನೋಂದಣಿ ಮಾಡಿಕೊಳ್ಳಲು ಅಭ್ಯರ್ಥಿಗಳು ಪರದಾಡಿದರು. ನಂತರ, ಜಾಲತಾಣದ ಲಿಂಕ್ ಬಳಸಿ ನೋಂದಣಿ ಮಾಡಿಕೊಂಡು ಸಂದರ್ಶನಕ್ಕೆ ಹಾಜರಾದರು.
‘ಅಭ್ಯರ್ಥಿಗಳ ದಿಕ್ಕು ತಪ್ಪಿಸಿದ ಮಧ್ಯವರ್ತಿಗಳು’
ಜಿಲ್ಲೆಯ ಯುವಜನತೆಗೆ ಅನುಕೂಲವಾಗಲೆಂದು ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿತ್ತು. ಕಂಪನಿಯವರು ನೇರವಾಗಿ ನೇಮಕಾತಿ ಸಂದರ್ಶನ ನಡೆಸುವುದಾಗಿ ಆಯೋಜಕರು ತಿಳಿಸಿದ್ದರು. ಆದರೆ ಮೇಳದಲ್ಲಿ 10 ಮಧ್ಯವರ್ತಿ ಕಂಪನಿಗಳಿಗೂ (ಮ್ಯಾನ್ ಪವರ್ ಕಂಪನಿಗಳು) ಅವಕಾಶ ನೀಡಿದ್ದು ಅಭ್ಯರ್ಥಿಗಳ ಅಸಮಾಧಾನಕ್ಕೆ ಕಾರಣವಾಯಿತು. ‘ಪ್ರತಿಷ್ಠಿತ ಕಂಪನಿಗಳನ್ನು ಕೆಲಸ ಕೊಡಿಸುವುದಾಗಿ ಹೇಳಿದ ಮಧ್ಯವರ್ತಿ ಕಂಪನಿಯವರು ಬೆಂಗಳೂರಿಗೆ ಬಂದು ನೋಂದಣಿ ಶುಲ್ಕ ಪಾವತಿಸಿ ತರಬೇತಿ ಪಡೆಯುವಂತೆ ಹೇಳಿದರು. ಅಷ್ಟು ಹಣ ಇದ್ದಿದ್ದರೆ ನಾನೇಕೆ ಇಲ್ಲಿ ಬರುತ್ತಿದ್ದೆ ಎಂದು ಅವರಿಗೆ ಉತ್ತರ ನೀಡಿ ಸಂದರ್ಶನದಿಂದ ಹೊರಬಂದೆ’ ಎಂದು ರಾಣೆಬೆನ್ನೂರು ನಿವಾಸಿ ಪ್ರವೀಣ ಹೇಳಿದರು. ‘ಉದ್ಯೋಗಕ್ಕಾಗಿ ಹುಡುಕುವ ಅಭ್ಯರ್ಥಿಗಳಿಂದ ನೋಂದಣಿ ಹೆಸರಿನಲ್ಲಿ ಹಣ ಪಡೆದು ವಂಚಿಸಿರುವ ಕಂಪನಿಗಳಿವೆ. ಇಂಥ ಕಂಪನಿಗಳಿಗೆ ಮೇಳದಲ್ಲಿ ಅವಕಾಶ ನೀಡಬಾರದಿತ್ತು. ಇದು ಆಯೋಜಕರಿಂದ ಆಗಿರುವ ಪ್ರಮಾದ. ಇಂಥ ಕಂಪನಿಗಳಿಂದ ಯಾರಿಗಾದರೂ ವಂಚನೆಯಾದರೆ ಆಯೋಜಕರೇ ಹೊಣೆಯಾಗುತ್ತಾರೆ’ ಎಂದು ಆರೋಪಿಸಿದರು.
‘ನಿರುದ್ಯೋಗ ತಗ್ಗಿಸಲು ಮೇಳ ಸಹಕಾರಿ’
‘ಇಂದಿನ ಆಧುನಿಕ ಯುಗದಲ್ಲಿ ಉನ್ನತ ಶಿಕ್ಷಣ ಪಡೆದರೂ ಉದ್ಯೋಗದ ಕೊರತೆ ಕಾಡುತ್ತಿದೆ. ನಿರುದ್ಯೋಗ ಪ್ರಮಾಣವನ್ನು ಕಡಿಮೆ ಮಾಡಲು ಉದ್ಯೋಗ ಮೇಳಗಳು ಸಹಕಾರಿಯಾಗಿವೆ’ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು. ಮೇಳ ಉದ್ಘಾಟಿಸಿ ಮಾತನಾಡಿದ ಅವರು ‘ಗ್ರಾಮೀಣ ಭಾಗದ ಅಭ್ಯರ್ಥಿಗಳು ಉದ್ಯೋಗದ ಕಂಪನಿಗಳಿಗೆ ಸಂದರ್ಶನ ನೀಡಲು ಶಹರಕ್ಕೆ ಹೋಗಲು ಭಯಪಡುತ್ತಿದ್ದಾರೆ. ಅಂಥ ಅಭ್ಯರ್ಥಿಗಳಿಗೆ ಉದ್ಯೋಗ ಕೊಡಿಸಲು ನನ್ನ ಕ್ಷೇತ್ರ ಸೊರಬದಲ್ಲೂ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗುವುದು’ ಎಂದರು. 'ಮುಂದಿನ ವರ್ಷದಿಂದ ಶಾಲಾ ಮಕ್ಕಳಿಗೂ ಉಚಿತವಾಗಿ ನೋಟ್‌ಬುಕ್ ನೀಡಲಾಗುವುದು. ಪಿಯುಸಿ ವಿದ್ಯಾರ್ಥಿಗಳಿಗೂ ಉಚಿತವಾಗಿ ಪಠ್ಯಪುಸ್ತಕ ಹಾಗೂ ನೋಟ್‌ಬುಕ್ ನೀಡಲಾಗುವುದು. ರಾಜ್ಯ ಸರ್ಕಾರ ಶಿಕ್ಷಣಕ್ಕೆ ಸಾಕಷ್ಟು ಅನುದಾನ ನೀಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅನುದಾನ ನೀಡಲಿದೆ’ ಎಂದರು. ಉದ್ಘಾಟನೆ ಕಾರ್ಯಕ್ರಮದಲ್ಲಿ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರ ನಿಧನದ ಹಿನ್ನೆಲೆಯಲ್ಲಿ ಅವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಶಾಸಕರಾದ ಪ್ರಕಾಶ ಕೋಳಿವಾಡ ರುದ್ರಪ್ಪ ಲಮಾಣಿ ರಾಜ್ಯ ಕುಶಲಾಭಿವೃದ್ಧಿ ನಿಗಮದ ಅಧ್ಯಕ್ಷರಾದ ಕಾಂತಾ ನಾಯಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.