ರಾಣೆಬೆನ್ನೂರು: ಮನುಷ್ಯ ಬಾಯಿಂದ ತಿನ್ನುವುದು, ಕುಡಿಯುವುದು ಆಹಾರವಲ್ಲ. ಕಣ್ಣು, ಕಿವಿ, ಮೂಗು, ನಾಲಿಗೆ, ತ್ವಚೆ ಈ ಪಂಚೇಂದ್ರಿಯಗಳಿಂದ ಸೇವಿಸುವುದು ಕೂಡ ಆಹಾರವಾಗಿದೆ ಎಂದು ಮಹಾರಾಷ್ಟ್ರದ ಕೊಲ್ಲಾಪುರದ ಸಿದ್ಧಗಿರಿ ಮಹಾಸಂಸ್ಥಾನ ಮಠದ ಕನ್ನೇರಿ ಕಾಡಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆಯಿಂದ ರಾಣೆಬೆನ್ನೂರು ಕಾ ರಾಜಾ ಮಹಾಗಣಪತಿ ಶತಮಾನದ ಸಂಘ ಸೂರ್ಯ 17 ನೇ ಗಣೇಶೋತ್ಸವದ ಅಂಗವಾಗಿ ಕೃಷಿ ಮತ್ತು ಆರೋಗ್ಯ ಹಾಗೂ ರಾಷ್ಟ್ರ ಧರ್ಮ ಮತ್ತು ಸಂಘ ಕುರಿತು ಬುಧವಾರ ಏರ್ಪಡಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇತ್ತೀಚೆಗೆ ಶ್ರಮ ಸಂಸ್ಕೃತಿ ಮರೆಯಾಗುತ್ತಿದೆ. ಇಂದು ಕೃಷಿಯನ್ನು ನಂಬಿ ರೈತರು ಜೀವನ ನಡೆಸಲಾಗುತ್ತಿಲ್ಲ. ಜಮೀನಿಗೆ ರಾಸಾಯನಿಕ ಬಳುಸುವುದರಿಂದ ಭೂಮಿಯ ಫಲವತ್ತತೆ ಹಾಳಾಗುತ್ತಿದೆ ಎಂದರು.
ದೇಶದ ಆರೋಗ್ಯವು ರೈತರು ಬೆಳೆಯುವ ಬೆಳೆಗಳನ್ನು ಅವಲಂಬಿಸಿದೆ. ಹೆಚ್ಚು ಉತ್ಪನ್ನ, ಲಾಭ, ವಾಣಿಜ್ಯ ಬೆಳೆ, ಶ್ರೀಮಂತಿಕೆ ಮಾರ್ಗ ಮುಂತಾದ ಭ್ರಮೆಗಳಿಂದ ರೈತರು ಸಾಲದ ಬಲೆಗೆ ಬೀಳುತ್ತಿದ್ದಾರೆ. ಆಧುನಿಕ ವ್ಯವಸ್ಥೆ ನಮ್ಮ ರೈತರ ಬದುಕನ್ನು ಹದಗೆಡಿಸುತ್ತಿದೆ. ಅವರಲ್ಲಿ ಹೊಸ ಭ್ರಮೆಗಳನ್ನು ಹುಟ್ಟಿಸುತ್ತಿದೆ. ಕೃಷಿ ಸಂಸ್ಕೃತಿಯೇ ಎಲ್ಲ ಸಂಸ್ಕೃತಿ ಮತ್ತು ನಾಗರಿಕತೆಗಳ ಮೂಲವಾಗಿದೆ. ನಮ್ಮ ಆರೋಗ್ಯ ಅಡುಗೆ ಮನೆಯಲ್ಲಿದೆ. ಆಹಾರ ಔಷಧ ಆಗಬೇಕು. ಔಷಧ ಆಹಾರವಾಗಬಾರದು ಎಂದರು.
ಆಧುನಿಕ ವ್ಯವಸ್ಥೆ ರೈತರ ಬದುಕು ಕೆಡಿಸುತ್ತಿದೆ. ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ಹಾಲು-ಮಜ್ಜಿಗೆ ಅಂಗಡಿಗಳು ಇರಬೇಕಾದ ಜಾಗದಲ್ಲಿ ಮೆಡಿಕಲ್ ಶಾಪ್, ಬಾರ್‌ಗಳು ಹೆಚ್ಚಾಗುತ್ತಿವೆ. ಕೇವಲ ಕೃಷಿ ಸಾವಯವ ಆದರೆ ಸಾಲದು. ರೈತರ ಬದುಕು ಸಾವಯವ ಆಗಬೇಕು. ದೇಶದ ಎಲ್ಲ ರೈತರು ಸ್ವಾವಲಂಬಿ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡರೆ ಉತ್ತಮ ಎಂದು ಹೇಳಿದರು.
ಧಾರವಾಡದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಘ ಸಂಚಾಲಕ ಗೋವಿಂಧಪ್ಪ ಗೌಡಪ್ಪಗೋಳ ಮಾತನಾಡಿ, ಆರ್‌ಎಸ್‌ಎಸ್ ಸಂಘ ಪರಿವಾರದ ಪ್ರಮುಖ ಸಂಘಟನೆಗಳ ಮಾತೃ ಸಂಸ್ಥೆಯಾಗಿದೆ. ದೇಶದ ಸಂಸ್ಕೃತಿ ಬಗ್ಗೆ ತಿಳಿಸುವ ಏಕೈಕ ಸಂಘಟನೆಯಾಗಿದೆ ಎಂದರು.
‘ಸ್ವಾತಂತ್ರ್ಯ ಬಂದು 78 ವರ್ಷದ ಕಳೆದರೂ ದೇಶದಲ್ಲಿ ಇನ್ನೂ ಜಾತಿ, ಪಂಥದಿಂದ ಹಿಂದೂ ಸಮಾಜ ನರಳುತ್ತಿದೆ. ಈ ರೋಗ ವಾಸಿ ಮಾಡಬೇಕು. ಹಿಂದೂ ಸಮಾಜ ಶ್ರೇಷ್ಠ ಸಮಾಜ ಆಗಬೇಕು ಸಂಘ ಸ್ಥಾಪಿಸಿದರು. ಸಂಘ ಆಲದ ಮರದ ಹಾಗೆ ಬೆಳೆಯುತ್ತಿದೆ ಎಂದು ಹೇಳಿದರು.
ವಂದೇ ಮಾತರಂ ಸ್ವಯಂಸೇವಾ ಸಂಸ್ಥೆಯ ಸಂಸ್ಥಾಪಕ ಪ್ರಕಾಶ ಬುರಡೀಕಟ್ಟಿ, ವರ್ತಕ ಮಲ್ಲೇಶಣ್ಣ ಅರಕೇರಿ, ವೈದ್ಯ ಡಾ.ಬಸವರಾಜ ಕೇಲಗಾರ, ಭಾರತಿ ಜಂಬಿಗಿ, ಜೆಟ್ಟೆಪ್ಪ ಕರೇಗೌಡ್ರ, ಬಸವರಾಜ ಕೊಪ್ಪದ, ಪ್ರಭುಲಿಂಗ ಕೋಡದ, ಪ್ರಮೋದ ನಲವಾಗಲ ಸೇರಿದಂತೆ ಆರ್‌ಎಸ್‌ಎಸ್ ಹಾಗೂ ಬಿಜೆಪಿ ಕಾರ್ಯಕರ್ತರು, ನಗರಸಭೆ ಸದಸ್ಯರು, ಯುವಕರು, ಅಭಿಮಾನಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.