ADVERTISEMENT

ಎಂಇಎಸ್‌ ಪುಂಡಾಟಿಕೆ: ಕರವೇ ಖಂಡನೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2019, 14:35 IST
Last Updated 31 ಡಿಸೆಂಬರ್ 2019, 14:35 IST
ಹಾವೇರಿ ನಗರದಲ್ಲಿ ಮಂಗಳವಾರ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು 
ಹಾವೇರಿ ನಗರದಲ್ಲಿ ಮಂಗಳವಾರ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು    

ಹಾವೇರಿ: ಕರ್ನಾಟಕದ ಗಡಿ ಭಾಗದಲ್ಲಿ ಎಂ.ಇ.ಎಸ್.ನವರ ಪುಂಡಾಟಿಕೆಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಕುಮಾರ ಶೆಟ್ಟಿ ಬಣ) ಹಾವೇರಿ ಜಿಲ್ಲಾ ಘಟಕ ಕಾರ್ಯಕರ್ತರು ನಗರದ ಕಾಗಿನಲೆ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಅಕ್ರೋಶ ವ್ಯಕ್ತಪಡಿಸಿದರು.

ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಓಲೇಕಾರ ಮಾತನಾಡಿ, ‘ನಿನ್ನೆ ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜವನ್ನು ಸುಟ್ಟು ಕನ್ನಡಿಗರ ಪ್ರತಿನಿಧಿಯಾದ ಕರ್ನಾಟಕದ ಮುಖ್ಯಮಂತ್ರಿಗಳ ಪ್ರತಿಕೃತಿ ದಹಿಸಿದ್ದಲ್ಲದೆ ಗಡಿ ಭಾಗಗಳಲ್ಲಿ ಕನ್ನಡ ಚಲನಚಿತ್ರ ಪ್ರದರ್ಶನ ನಿಲ್ಲಿಸಿ ನಾಮಫಲಕಗಳಿಗೆ ಮಸಿ ಬಳಿದು ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಶಾಂತಿ ಸುವ್ಯವಸ್ಥೆ ಕದಡುತ್ತಿರುವ ಕಿಡಿಗೇಡಿ ಸಂಘಟನೆಯಾದ ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ನಿಷೇಧಿಸಿ ದೇಶದಲ್ಲಿ ಶಾಂತಿ ನೆಲೆಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ADVERTISEMENT

ಗೋಕಾಕ ಕ್ಷೇತ್ರದ ಶಾಸಕ ರಮೇಶ ಜಾರಕಿಹೊಳಿ ಕನ್ನಡದ ನೆಲದಲ್ಲಿ ನಿಂತು ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ಮರಾಠಿಗರ ಸ್ವತ್ತು. ಮುಂದಿನ ದಿನಗಳಲ್ಲಿ ಮರಾಠಿಗರನ್ನೇ ಚುನಾವಣೆಯಲ್ಲಿ ನಿಲ್ಲಿಸಿ ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಹೇಳಿರುವುದು ನಾಚಿಕೆಗೇಡಿನ ಸಂಗತಿ. ಕೂಡಲೇ ರಮೇಶ ಜಾರಕಿಹೊಳಿ ಕನ್ನಡಿಗರಿಗೆ ಕ್ಷಮೆ ಯಾಚಿಸಬೇಕು ಇಲ್ಲವಾದರೆ ಕರವೇ ಮಾಡುವ ಶಾಸ್ತಿಯನ್ನು ಎದುರಿಸಲು ಸಿದ್ಧವಾಗಬೇಕು ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಕಾರ್ಯಾಧ್ಯಕ್ಷ ನೂರ್‌ ಅಹ್ಮದ ಲಕ್ಷ್ಮೇಶ್ವರ, ಕರವೇ ಮುಖಂಡ ಈರಣ್ಣ ಪಟ್ಟಣಶೆಟ್ಟಿ, ಜಿಲ್ಲಾ ಘಟಕದ ಉಪಾಧ್ಯಕ್ಷ ಪರಶುರಾಮ ದುರಗಣ್ಣನವರ, ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಸಿ.ಬಿ ದೊಡ್ಡಗೌಡರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾರುತಿ ಹಾಲಗಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಾದೇವಣ್ಣ ಹೆಡಿಗ್ಗೊಂಡ, ಜಿಲ್ಲಾ ಸಂಚಾಲಕ ನಿಂಗರಾಜ ಕರಡೆಮ್ಮನವರ, ಜಿಲ್ಲಾ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಸಂತೋಷಿ ಮಾತಾ, ಜಿಲ್ಲಾ ಮಹಿಳಾ ಸಂಚಾಲಕಿ ರಿತಿಕಾ, ಹಾವೇರಿ ತಾಲ್ಲೂಕು ಘಟಕದ ಅಧ್ಯಕ್ಷ ಫಕ್ಕೀರೇಶ ಕಟ್ಟಿಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.