ADVERTISEMENT

ಹಾವೇರಿ | ನೀರು ನುಗ್ಗುವ ಭೀತಿ: ಮನೆ ಖಾಲಿ ಮಾಡಲು ಸಲಹೆ

* ನಿರಂತರ ಮಳೆಯಿಂದ 962 ಮನೆ ಹಾನಿ * ವರದಾ– ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಯಥಾಸ್ಥಿತಿ

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 15:36 IST
Last Updated 26 ಜುಲೈ 2024, 15:36 IST
ಶಿಗ್ಗಾವಿ ತಾಲ್ಲೂಕಿನ ಚಂದಾಪುರದ ಕೆರೆ ಪ್ರದೇಶಕ್ಕೆ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ಶುಕ್ರವಾರ ಭೇಟಿ ನೀಡಿದರು
ಶಿಗ್ಗಾವಿ ತಾಲ್ಲೂಕಿನ ಚಂದಾಪುರದ ಕೆರೆ ಪ್ರದೇಶಕ್ಕೆ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ಶುಕ್ರವಾರ ಭೇಟಿ ನೀಡಿದರು   

ಹಾವೇರಿ: ತಾಲ್ಲೂಕಿನ ಕರ್ಜಗಿಯ ಕೆಲ ಮನೆಗಳಿಗೆ ನೀರು ನುಗ್ಗುವ ಭೀತಿ ಶುರುವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಮನೆಗಳನ್ನು ಖಾಲಿ ಮಾಡುವಂತೆ ಜಿಲ್ಲಾಡಳಿತ ಅಧಿಕಾರಿಗಳು ಸಲಹೆ ನೀಡಿದ್ದಾರೆ.

‘ಕರ್ಜಗಿಯ ಬ್ರಹ್ಮಲಿಂಗೇಶ್ವರ ದೇವಸ್ಥಾನ ಬಳಿಯ ಕೆಲ ಮನೆಗಳಿಗೆ ನೀರು ನುಗ್ಗುವ ಸಂಭವವಿದೆ. ಜೊತೆಗೆ ಕೆಲ ಹಳೇ ಮನೆಗಳು ಬೀಳುವ ಸ್ಥಿತಿಯಲ್ಲಿವೆ. ಹೀಗಾಗಿ, ಸದ್ಯಕ್ಕೆ ಮನೆ ಖಾಲಿ ಮಾಡುವಂತೆ ನಿವಾಸಿಗಳಿಗೆ ಹೇಳಿದ್ದೇವೆ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲೆಯಲ್ಲಿ ಹರಿಯುತ್ತಿರುವ ವರದಾ ನದಿಯ ನೀರಿನ ಮಟ್ಟ ಎರಡು ದಿನಗಳಿಂದ ಯಥಾಸ್ಥಿತಿಯಲ್ಲಿದೆ. ಕರ್ಜಗಿ ಸುತ್ತಮುತ್ತ ಸಹ ನಿರಂತರವಾಗಿ ಮಳೆಯಾಗುತ್ತಿದೆ. ಮಳೆಯ ನೀರು ಹಳ್ಳದ ಮೂಲಕ ವರದಾ ನದಿ ಸೇರುತ್ತಿದೆ. ವರದಾ ನದಿಯಲ್ಲಿ ಹೆಚ್ಚು ನೀರು ಇರುವುದರಿಂದ, ಹಳ್ಳದ ನೀರು ಸರಾಗವಾಗಿ ಮುಂದಕ್ಕೆ ಹೋಗುತ್ತಿಲ್ಲ. ಇದೇ ನೀರು ಕರ್ಜಗಿಯ ಮನೆಗಳಿಗೆ ನುಗ್ಗುವ ಭೀತಿ ಇರುವುದಾಗಿ ಗ್ರಾಮಸ್ಥರು ಹೇಳಿದರು.

ADVERTISEMENT

‘ಜಿಲ್ಲಾಡಳಿತ ಅಧಿಕಾರಿಗಳ ಸಲಹೆಯಂತೆ ಕೆಲವರು ಮನೆಗಳನ್ನು ಖಾಲಿ ಮಾಡಿ, ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಕೆಲವರು, ಮನೆಗೆ ನೀರು ಬಂದ ಮೇಲೆ ನೋಡಿದರಾಯಿತೆಂದು ಅಲ್ಲೇ ಉಳಿದುಕೊಂಡಿದ್ದಾರೆ’ ಎಂದು ಮಾಹಿತಿ ನೀಡಿದರು.

962 ಮನೆಗಳಿಗೆ ಹಾನಿ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯಲ್ಲಿ 962 ಮನೆಗಳಿಗೆ ಹಾನಿಯಾಗಿದೆ. ಈ ಮನೆಗಳ ನಿವಾಸಿಗಳು, ತಮ್ಮ ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

ಹಾವೇರಿ, ಹಾನಗಲ್, ರಾಣೆಬೆನ್ನೂರು, ಹಿರೇಕೆರೂರು, ರಟ್ಟೀಹಳ್ಳಿ, ಶಿಗ್ಗಾವಿ, ಸವಣೂರು ಹಾಗೂ ಬ್ಯಾಡಗಿ ತಾಲ್ಲೂಕಿನಲ್ಲಿ ಕೆಲ ದಿನಗಳಿಂದ ನಿರಂತರವಾಗಿ ಮಳೆ ಆಗುತ್ತಿದೆ. ಇದೇ ಸಂದರ್ಭದಲ್ಲಿ ಮನೆಗಳಿಗೆ ಹಾನಿ ಆಗುತ್ತಿದೆ.

‘946 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 11 ಮನೆಗಳು ತೀವ್ರ ಹಾಗೂ 5 ಮನೆಗಳು ಸಂಪೂರ್ಣ ಹಾನಿ ಆಗಿವೆ. 8 ದನದ ಕೊಟ್ಟಿಗೆಗಳು ಕುಸಿದಿವೆ’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ತಿಳಿಸಿದರು.

ಆಹಾರ ಕಿಟ್ ವಿತರಣೆ: ಮನೆಗಳಿಗೆ ಹಾನಿ ಸಂಭವಿಸಿದ್ದರಿಂದ ಸಂಕಷ್ಟದಲ್ಲಿರುವ ನಿವಾಸಿಗಳಿಗೆ ಚೈತನ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಆಹಾರ ಕಿಟ್ ವಿತರಿಸಲಾಯಿತು. ಜಿಲ್ಲಾಧಿಕಾರಿ ವಿಜಯ ಮಹಾಂತೇಶ ಅವರು ಸಂತ್ರಸ್ತರಿಗೆ ಶುಕ್ರವಾರ ಕಿಟ್‌ಗಳನ್ನು ಹಸ್ತಾಂತರಿಸಿದರು.

‘ಅಕ್ಕಿ, ಎಣ್ಣೆ, ಬೆಳೆ, ಗೋಧಿ ಹಿಟ್ಟು ಸೇರಿದಂತೆ 25 ಕೆ.ಜಿ ತೂಕದ ದಿನಸಿ ಕಿಟ್‌ನಲ್ಲಿದೆ. ಜೊತೆಗೆ, ಎರಡು ತಾಡಪತ್ರಿಗಳು ಇವೆ. ಜಿಲ್ಲೆಯ 200 ಸಂತ್ರಸ್ತರಿಗೆ ಕಿಟ್ ನೀಡಲಾಗುತ್ತಿದೆ’ ಎಂದು ಸಂಸ್ಥೆಯ ಸಂಸ್ಥಾಪಕ ಎಸ್‌.ಎಚ್. ಮಜೀದ್ ತಿಳಿಸಿದರು.

ಚಂದಾಪುರ ಕೆರೆಗೆ ಜಿಲ್ಲಾಧಿಕಾರಿ ಭೇಟಿ

ಶಿಗ್ಗಾವಿ ತಾಲ್ಲೂಕಿನ ಚಂದಾಪುರ ಗ್ರಾಮದ ಮಾನಿಕೆರೆಯ ಒಡ್ಡು ಒಡೆದಿದ್ದು ಈ ಸ್ಥಳಕ್ಕೆ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು. ಚಂದಾಪುರ ಗ್ರಾಮದ ಸರ್ವೆ ನಂಬರ್ 142 ಮತ್ತು 143ರಲ್ಲಿ 12 ಎಕರೆ 35 ಗುಂಟೆ ಜಾಗದಲ್ಲಿ ಕೆರೆ ಇದೆ. ಸತತ ಮಳೆಯಿಂದ ಕೆರೆಯ ಒಡ್ಡು ಒಡೆದು ಹೋಗಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು. ಜಿ.ಪಂ ಸಿಇಒ ಅಕ್ಷಯ್ ಶ್ರೀಧರ್ ಶಿಗ್ಗಾವಿ ತಹಶೀಲ್ದಾರ್‌ ಸಂತೋಷ ಹಿರೇಮಠ ಇದ್ದರು.

ಸಂತ್ರಸ್ತರ ನೆರವಿಗೆ ಮುಂದಾಗಲು ಸೂಚನೆ

ಬ್ಯಾಡಗಿ: ಜಿಲ್ಲೆಯಾದ್ಯಂತ ನಿರಂತರ ಮಳೆ ಸುರಿಯುತ್ತಿದ್ದು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಪಿಡಿಒಗಳು ಕೇಂದ್ರ ಸ್ಥಾನದಲ್ಲಿದ್ದು ಸಂತ್ರಸ್ತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಹೇಳಿದರು.

ಪಟ್ಟಣದ ತಹಶೀಲ್ದಾರ್‌ ಕಚೇರಿಗೆ ಶುಕ್ರವಾರ ಅನಿರೀಕ್ಷಿತ ಭೇಟಿ ನೀಡಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು. ಇದುವರೆಗೆ ತಾಲ್ಲೂಕಿನಲ್ಲಿ 75 ಮನೆಗಳು ಮತ್ತು 4 ದನದ ಕೊಟ್ಟಿಗೆಗಳಿಗೆ ಹಾನಿಯಾಗಿರುವ ಕುರಿತು ಮಾಹಿತಿ ಪಡೆದರು. ಪ್ರಕೃತಿ ವಿಕೋಪದ ಹೊತ್ತಿನಲ್ಲಿ ಪಿಇಒಗಳು ಕೇಂದ್ರ ಸ್ಥಾನದಲ್ಲಿದ್ದು ಪ್ರತಿದಿನ ಪರಿಸ್ಥಿತಿಯ ಅವಲೋಕನ ಮಾಡಬೇಕು. ಅಗತ್ಯ ಬಿದ್ದರೆ ಸಂತ್ರಸ್ತರಿಗೆ ಸೂಕ್ತ ವ್ಯವಸ್ಥೆ ಮಮಾಡಬೇಕು. ಕರ್ತವ್ಯ ಲೋಪವಾದರೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.

ರೈತರೊಂದಿಗೆ ಸಮಾಲೋಚನೆ: ಕಳೆದ ಗುರುವಾರ ಬೆಳೆ ವಿಮೆ ಪರಿಹಾರ ನೀಡುವ ದಿನಾಂಕವನ್ನು ಸರ್ಕಾರ ಪ್ರಕಟಿಸಬೇಕು ಎಂದು ಆಗ್ರಹಿಸಿ ಕೃಷಿ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿರುವ ಕುರಿತು ರೈತರು ಸಭೆಯಲ್ಲಿ ಪ್ರಸ್ತಾಪಿಸಿದರು. ಪರಿಹಾರ ಘೋಷಿಸುವ ದಿನಾಂಕ ಪ್ರಕಟಿಸುವುದು ಸರ್ಕಾರದ ಹಂತದಲ್ಲಿದೆ. ಈ ಕುರಿತು ರೈತರ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

ಮುಖ್ಯರಸ್ತೆ ವಿಸ್ತರಣೆಗೆ ಅಗತ್ಯವಾಗಿರುವ ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇದಕ್ಕೆ ಇನ್ನೂ ಕಾಲಾವಕಾಶ ಬೇಕಾಗಿದ್ದು ರೈತ ಮುಖಂಡರು ಇದಕ್ಕೆ ಅವಕಾಶ ನೀಡಬೇಕೆಂದು ಜಿಲ್ಲಾಧಿಕಾರಿ ಮನವಿ ಮಾಡಿಕೊಂಡರು.

ತಾಲ್ಲೂಕಿನ ಹಿರೇಹಳ್ಳಿ ಸರ್ಕಾರಿ ಪ್ರೌಢಶಾಲೆಯ ಕಟ್ಟಡ ನಿರ್ಮಿಸಿರುವ ಕುರಿತು ಮಾಹಿತಿ ಪಡೆದರು. ಉಪವಿಭಾಗಾಧಿಕಾರಿ ಚನ್ನಪ್ಪ ತಹಶೀಲ್ದಾರ್‌ ಫಿರೋಜಷಾ ಸೋಮನಕಟ್ಟಿ ತಾ.ಪಂ ಇಒ ಕೆ.ಎಂ.ಮಲ್ಲಿಕಾರ್ಜುನ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.