ADVERTISEMENT

SSLC Result 2022: ಕಾವಲುಗಾರನ ಮಗಳು ರಾಜ್ಯಕ್ಕೆ ಪ್ರಥಮ

​ಪ್ರಜಾವಾಣಿ ವಾರ್ತೆ
Published 19 ಮೇ 2022, 10:34 IST
Last Updated 19 ಮೇ 2022, 10:34 IST
ಮಧು ಶೇತಸನದಿ
ಮಧು ಶೇತಸನದಿ   

ಹಾವೇರಿ: ನಗರದ ಜಿಲ್ಲಾ ಗುರುಭವನದಲ್ಲಿ ಕಾವಲುಗಾರನಾಗಿ ಕೆಲಸ ಮಾಡುವ ಬಸವರಾಜ ಶೇತಸನದಿ ಅವರ ಮಗಳು ಮಧು ಶೇತಸನದಿ, ಕನ್ನಡ ಮಾಧ್ಯಮದಲ್ಲಿ 625ಕ್ಕೆ 625 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಮೊದಲನೇ ಸ್ಥಾನ ಪಡೆದಿದ್ದಾಳೆ.

‘ನನ್ನ ಮಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ ಎಂಬುದನ್ನು ಕೇಳಿ ತುಂಬಾ ಸಂತೋಷವಾಗಿದೆ. ಹಗಲು–ರಾತ್ರಿ ಕಷ್ಟಪಟ್ಟು ಓದಿ ನಮಗೆ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾಳೆ. ಮಗ ಪ್ರಶಾಂತ 7ನೇ ತರಗತಿ ಓದುತ್ತಿದ್ದಾನೆ’ ಎಂದು ಮಧು ಅವರ ತಂದೆ ಬಸವರಾಜ ಸಂತಸ ವ್ಯಕ್ತಪಡಿಸಿದರು.

‘ಕಳೆದ 20 ವರ್ಷಗಳಿಂದ ಕಾವಲುಗಾರನಾಗಿ ಗುರುಭವನದಲ್ಲಿ ಕೆಲಸ ಮಾಡುತ್ತಾ, ತಿಂಗಳಿಗೆ ₹15 ಸಾವಿರ ಗಳಿಸುತ್ತಿದ್ದೇನೆ. ಇದರಲ್ಲೇ ಮನೆ ಬಾಡಿಗೆ, ಮಕ್ಕಳ ಓದು ಮತ್ತು ಜೀವನ ನಡೆಯಬೇಕಿದೆ. ಮಗಳು ಡಾಕ್ಟರ್‌ ಆಗಬೇಕು ಎಂದು ಕನಸು ಕಾಣುತ್ತಿದ್ದಾಳೆ. ಅವಳನ್ನು ಓದಿಸುವಷ್ಟು ಆರ್ಥಿಕ ಶಕ್ತಿ ನಮಗಿಲ್ಲ’ ಎಂದು ನೋವು ತೋಡಿಕೊಂಡರು.

ADVERTISEMENT

‘ನಗರದ ಕಾಳಿದಾಸ ಪ್ರೌಢಶಾಲೆಯಲ್ಲಿ ನಮ್ಮ ಶಿಕ್ಷಕರು ಚೆನ್ನಾಗಿ ಪಾಠ ಮಾಡುತ್ತಿದ್ದರು. ಜತೆಗೆ ಟ್ಯೂಶನ್‌ಗೂ ಹೋಗುತ್ತಿದ್ದೆ. ನಿತ್ಯ 6 ತಾಸು ಓದುತ್ತಿದ್ದೆ. 2–3 ಅಂಕಗಳು ಕೈತಪ್ಪಬಹುದು ಎಂದುಕೊಂಡಿದ್ದೆ. ಆದರೆ 625ಕ್ಕೆ 625 ಅಂಕ ಬಂದಿರುವುದು ತುಂಬಾ ಸಂತೋಷ ಕೊಟ್ಟಿದೆ. ನನ್ನ ಸಾಧನೆಯಲ್ಲಿ ಅಪ್ಪ–ಅಮ್ಮ (ಕವಿತಾ) ಪಾತ್ರ ದೊಡ್ಡದಿದೆ. ವೈದ್ಯೆಯಾಗಿ ಸಮಾಜಸೇವೆ ಮಾಡಬೇಕು ಹಾಗೂ ಹೆತ್ತವರ ಕಣ್ಣೀರು ಒರೆಸಬೇಕು’ ಎಂದು ಗುರಿ ಇಟ್ಟುಕೊಂಡಿರುವುದಾಗಿಮಧು ಶೇತಸನದಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.