ADVERTISEMENT

ಕಸಾಪ ಅಧ್ಯಕ್ಷರಿಗೆ ಸ್ಥಳೀಯರ ಮನೆಯಲ್ಲಿ ವಾಸ್ತವ್ಯ ಹೂಡಲು ಸಿಗದ ಸೂಕ್ತ ನಿವಾಸ

ಸಾಕಾರವಾಗದ ಸ್ಥಳೀಯರ ಮನೆ ವಾಸ್ತವ್ಯ

​ಪ್ರಜಾವಾಣಿ ವಾರ್ತೆ
Published 6 ಜನವರಿ 2023, 20:43 IST
Last Updated 6 ಜನವರಿ 2023, 20:43 IST
ಮಹೇಶ ಜೋಶಿ
ಮಹೇಶ ಜೋಶಿ   

ಹಾವೇರಿ: ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಮಹೇಶ ಜೋಶಿ ಅವರಿಗೆ ಸ್ಥಳೀಯರ ಮನೆಯಲ್ಲಿ ವಾಸ್ತವ್ಯ ಹೂಡಲು ಸೂಕ್ತ ನಿವಾಸ ದೊರೆಯಲಿಲ್ಲ. ಅವರು ಲಾಡ್ಜ್‌ನಲ್ಲಿಯೇ ವಾಸ್ತವ್ಯ ಹೂಡಿದ್ದಾರೆ.

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಸ್ಥಳೀಯರ ಮನೆಯಲ್ಲಿ ವಾಸ್ತವ್ಯ ಮಾಡುವುದಾಗಿ ಈ ಹಿಂದೆ ಅವರು ಘೋಷಿಸಿದ್ದರು. ಅಷ್ಟೇ ಅಲ್ಲ, ಸಮ್ಮೇಳನ ನಡೆಯುವ ಸ್ಥಳದ ಹತ್ತಿರ ಇರುವ ಅಜ್ಜಯ್ಯನ ದೇವಸ್ಥಾನದ ಸುತ್ತಮುತ್ತಲಿನಲ್ಲಿ ಇರುವ ಯಾವುದಾದರೂ ಮನೆಯಲ್ಲಿ ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಡಲು ಇಚ್ಛಿಸುವವರು ಸಂಪರ್ಕಿಸುವಂತೆ ಕೇಳಿಕೊಂಡಿದ್ದರು. ಆದರೆ, ಸಮ್ಮೇಳನ ನಡೆಯುವ ಸ್ಥಳದ ಹತ್ತಿರ ಮನೆ ಸಿಗದಿದ್ದರಿಂದ, ಕೆಲಸದ ಒತ್ತಡದಿಂದ ಸ್ಥಳೀಯರ ಮನೆ ವಾಸ್ತವ್ಯ ನಿರ್ಧಾರದಿಂದ ಈಗ ಹಿಂದೆ ಸರಿದಿದ್ದಾರೆ.

ಹಾವೇರಿ ಜಿಲ್ಲೆಯವರೇ ಆದ ಅವರು, ಸ್ಥಳೀಯ ನಿವಾಸಿಗಳಿಗೆ ಹತ್ತಿರ ಆಗಲು ಈ ನಿರ್ಧಾರ ಕೈಗೊಂಡಿದ್ದರು. ವಾಸ್ತವ್ಯ ಉಳಿಯುವ ಮನೆಯಲ್ಲಿ ದಿನಂಪ್ರತಿ ತಯಾರಿಸುವ ಆಹಾರವನ್ನು ಸೇವಿಸುವುದಾಗಿ, ಯಾವುದೇ ರೀತಿಯ ವಿಶೇಷ ಭೋಜನ, ಸವಲತ್ತು ಇತ್ಯಾದಿಗಳನ್ನು ಅಪೇಕ್ಷಿಸುವುದಿಲ್ಲವೆಂದೂ, ಸಮ್ಮೇಳನ ನಡೆಯುವ ಸ್ಥಳಕ್ಕೆ ನಡೆದುಕೊಂಡೇ ಹೋಗುವ ವ್ಯವಸ್ಥೆ ನನ್ನ ಆದ್ಯತೆ ಎಂದೂ ಅವರು ಹೇಳಿದ್ದರು. ಆದರೆ, ಅವರು ಈಗ ನಿರ್ಧಾರ ಬದಲಿಸುವುದು ಚರ್ಚೆಗೆ ಗ್ರಾಸವಾಗಿದೆ.

ADVERTISEMENT

‘ಸಮ್ಮೇಳನದ ಬಿಡುವಿಲ್ಲದ ಕಾರ್ಯಚಟುವಟಿಕೆಯಿಂದ ವಾಸ್ತವ್ಯ ಸಾಧ್ಯವಾಗಲಿಲ್ಲ. ಆದರೂ ಕೆಲವರ ಮನೆಗೆ ಭೇಟಿ ನೀಡುತ್ತೇನೆ. ಸಮ್ಮೇಳನದ ಕೆಲಸ ಮುಗಿಸಿ, ತೆರಳುವುದು ತಡರಾತ್ರಿ ಆಗುತ್ತದೆ. ಆದ್ದರಿಂದ ವಾಸ್ತವ್ಯ ಮಾಡಲಿಲ್ಲ. ಮುಂದಿನ ದಿನಗಳಲ್ಲಿ ವಾಸ್ತವ್ಯ ಮಾಡುತ್ತೇನೆ. ಇದು ನನ್ನ ತವರು ಜಿಲ್ಲೆಯಾಗಿದ್ದು, ಇಲ್ಲಿಯವರ ಮೇಲೆ ವಿಶೇಷ ಪ್ರೀತಿಯಿದೆ. ಹಲವರು ಮನೆಗೆ ಬಂದು ವಾಸ್ತವ್ಯ ಮಾಡುವಂತೆ ಸಂಪರ್ಕಿಸಿದ್ದರು’ ಎಂದು ಮಹೇಶ ಜೋಶಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.