ADVERTISEMENT

‘ವಾಕರಸಾಸಂ’ನಿಂದ ಬಸ್‌ ಬಾಡಿಗೆ ಪಡೆದಿದ್ದ ಜಿಲ್ಲಾಡಳಿತ: ₹ 1.14 ಕೋಟಿ ಬಾಕಿ

ಸಂತೋಷ ಜಿಗಳಿಕೊಪ್ಪ
Published 14 ಸೆಪ್ಟೆಂಬರ್ 2025, 4:06 IST
Last Updated 14 ಸೆಪ್ಟೆಂಬರ್ 2025, 4:06 IST
ಹಾವೇರಿ ಕೇಂದ್ರ ಬಸ್ ನಿಲ್ದಾಣ 
ಹಾವೇರಿ ಕೇಂದ್ರ ಬಸ್ ನಿಲ್ದಾಣ    

ಹಾವೇರಿ: ಕಾಂಗ್ರೆಸ್ ಹಾಗೂ ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ರಾಜ್ಯ ಸರ್ಕಾರದ ವಿವಿಧ ಕಾರ್ಯಕ್ರಮಗಳಿಗೆ ಬಳಸಿದ್ದ ವಾಕರಸಾಸಂ (ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ) ಬಸ್‌ಗಳ ₹1.14 ಕೋಟಿ ಬಾಡಿಗೆ ಹಣವನ್ನು ಬಾಕಿ ಉಳಿಸಿಕೊಳ್ಳಲಾಗಿದ್ದು, ಅದರ ಪಾವತಿಗಾಗಿ ಇಂದಿನ ಸರ್ಕಾರದ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ.

2013ರಲ್ಲಿ ಸಿದ್ದರಾಮಯ್ಯ ಹಾಗೂ 2021ರಲ್ಲಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಾವೇರಿ ಜಿಲ್ಲೆಯಲ್ಲಿ ಸರ್ಕಾರದ ಹಲವು ಕಾರ್ಯಕ್ರಮಗಳನ್ನು ಸಂಘಟಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಜನರನ್ನು ಕರೆತರಲು ವಾಕರಸಾಸಂ ಕಡೆಯಿಂದ ಬಸ್‌ಗಳನ್ನು ಪ್ರಾಸಂಗಿಕ ಕರಾರಿನ ಮೇರೆಗೆ ಬಾಡಿಗೆ ಪಡೆಯಲಾಗಿತ್ತು.

ಅಂದಿನ ಜಿಲ್ಲಾಧಿಕಾರಿಗಳ ಮನವಿ ಮೇರೆಗೆ ಕಾರ್ಯಕ್ರಮಕ್ಕೆ ಅಗತ್ಯವಿರುವ ಬಸ್‌ಗಳನ್ನು ಅಧಿಕಾರಿಗಳು ಕಳುಹಿಸಿಕೊಟ್ಟಿದ್ದರು. ಆದರೆ, ಬಸ್‌ಗಳ ಬಾಡಿಗೆ ಹಣ ಇದುವರೆಗೂ ಪಾವತಿ ಮಾಡದಿರುವುದು ವಾಕರಸಾಸಂ ಅಧಿಕಾರಿಗಳ ಚಿಂತೆಗೆ ಕಾರಣವಾಗಿದೆ. ಬಾಕಿ ಹಣ ಪಾವತಿ ಮಾಡುವಂತೆ ವಾಕರಸಾಸಂ ಅಧಿಕಾರಿಗಳು, ಜಿಲ್ಲಾಧಿಕಾರಿಗೆ ಮೇಲಿಂದ ಮೇಲೆ ಪತ್ರ ಬರೆಯುತ್ತಿದ್ದಾರೆ.

ಅದೇ ಪತ್ರವನ್ನು ಉಲ್ಲೇಖಿಸಿ ಸರ್ಕಾರಕ್ಕೆ ಜಿಲ್ಲಾಧಿಕಾರಿಯವರು ಸಹ ಪತ್ರ ಬರೆಯುತ್ತಿದ್ದಾರೆ. ‘ಸದ್ಯಕ್ಕೆ ಅನುದಾನವಿಲ್ಲ. ಅನುದಾನ ಲಭ್ಯವಾದ ನಂತರ, ಬಾಕಿ ಹಣ ಪಾವತಿಸಲಾಗುವುದು’ ಎಂದು ಸರ್ಕಾರದಿಂದ ಉತ್ತರ ಬರುತ್ತಿದೆ. ಇದರಿಂದಾಗಿ, ಇಂದು ಅಥವಾ ನಾಳೆ ಬಾಕಿ ಹಣ ಬರಬಹುದೆಂದು ವಾಕರಸಾಸಂ ಅಧಿಕಾರಿಗಳು ಕಾಯುತ್ತಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ವಾಕರಸಾಸಂ ಬಸ್‌ಗಳು ಬಲ ತುಂಬಿವೆ. ಇದರ ನಡುವೆಯೇ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಬಸ್‌ ನಿಲ್ದಾಣ, ತಂಗುದಾಣ, ಬಸ್‌ಗಳ ದುರಸ್ತಿ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳಿಗೆ ಅನುದಾನದ ಅಗತ್ಯವಿದೆ. ಇದೇ ಕಾರಣಕ್ಕೆ ಬಾಡಿಗೆ ಬಾಕಿ ಹಣ ವಸೂಲಿ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.

ಸರ್ಕಾರದ ಕಾರ್ಯಕ್ರಮಕ್ಕಾಗಿ ಬಳಸಿದ್ದ ಬಸ್‌ಗಳ ಬಾಡಿಗೆ ಹಣವನ್ನು ಪಾವತಿ ಮಾಡಿದರೆ, ಸಂಸ್ಥೆಯ ಹಲವು ಕೆಲಸಗಳಿಗೆ ಬಳಸಿಕೊಳ್ಳಬಹುದೆಂಬುದು ಅಧಿಕಾರಿಗಳ ಲೆಕ್ಕಾಚಾರವಾಗಿದೆ.

‘ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 2023ರ ಮಾರ್ಚ್ 10ರಂದು ಹಾವೇರಿಯಲ್ಲಿ ಕರ್ನಾಟಕ ಸರ್ಕಾರದ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಜನರನ್ನು ಕರೆತರಲು ಬಸ್‌ಗಳನ್ನು ಬಾಡಿಗೆ ಕಳುಹಿಸಲಾಗಿತ್ತು. ಇದರ ₹ 25 ಲಕ್ಷ ಬಾಡಿಗೆ ಮೊತ್ತ ಬಾಕಿಯಿದೆ’ ಎಂದು ವಾಕರಸಾಸಂ ಅಧಿಕಾರಿಯೊಬ್ಬರು ತಿಳಿಸಿದರು.

‘2022ರ ಡಿಸೆಂಬರ್ 17ರಂದು ಕಂದಾಯ ಸಚಿವರ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ 294 ಬಸ್‌ಗಳನ್ನು ನೀಡಲಾಗಿತ್ತು. ಇದರ ₹ 47.48 ಲಕ್ಷ ಬಾಡಿಗೆ ಬಾಕಿಯಿದೆ’ ಎಂದು ಹೇಳಿದರು.

‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 2017ರ ಜೂನ್ 11ರಂದು ವಿಜಯಪುರದಲ್ಲಿ ಜರುಗಿದ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ನಾಮಕರಣ ಕಾರ್ಯಕ್ರಮಕ್ಕೆ ಬಸ್‌ಗಳನ್ನು ಕಳುಹಿಸಲಾಗಿತ್ತು. ಇದರ ₹ 2.28 ಲಕ್ಷ ಬಾಡಿಗೆ ಸಹ ಬಾಕಿ ಉಳಿದಿದೆ. ಕಾರ್ಯಕ್ರಮ ನಡೆದು 8 ವರ್ಷವಾದರೂ ಬಾಡಿಗೆ ಹಣ ಪಾವತಿಯಾಗಿಲ್ಲ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ವಿಧಾನಸಭೆ ಚುನಾವಣೆ ಹಾಗೂ ಕೋವಿಡ್–19 ಸಂದರ್ಭದಲ್ಲಿಯೂ ಹಲವು ಕೆಲಸಕ್ಕೆ ಬಸ್‌ ಬಾಡಿಗೆ ಕಳುಹಿಸಲಾಗಿತ್ತು. ಅದರ ಬಾಡಿಗೆ ಸಹ ಬಾಕಿಯಿದೆ’ ಎಂದರು ತಿಳಿಸಿದರು.

‘ಜಿಲ್ಲಾಧಿಕಾರಿಯವರ ಮನವಿ ಮೇರೆಗೆ ಬಸ್‌ಗಳನ್ನು ಕಳುಹಿಸಲಾಗಿರುತ್ತದೆ. ಬಾಡಿಗೆ ಪಾವತಿ ಜವಾಬ್ದಾರಿಯೂ ಅವರದ್ದಾಗಿದೆ. ಹೀಗಾಗಿ, ಬಾಡಿಗೆ ಪಾವತಿಗಾಗಿ ಜಿಲ್ಲಾಧಿಕಾರಿಗಳಿಗೆ ಮೇಲಿಂದ ಮೇಲೆ ಪತ್ರ ಬರೆಯಲಾಗುತ್ತಿದೆ. ಸರ್ಕಾರದಿಂದ ಅನುದಾನ ಬಂದಿಲ್ಲವೆಂದು ಜಿಲ್ಲಾಧಿಕಾರಿಯವರು ಉತ್ತರ ನೀಡುತ್ತಿದ್ದಾರೆ. ಹಣ ಬಾಕಿ ಇರುವುದರಿಂದ, ಸಂಸ್ಥೆಯ ಅಭಿವೃದ್ಧಿ ಕೆಲಸಕ್ಕೆ ಹಿನ್ನೆಡೆಯಾಗುತ್ತಿದೆ’ ಎಂದು ಹೇಳಿದರು.

ಸರ್ಕಾರದ ವಿವಿಧ ಕಾರ್ಯಕ್ರಮಗಳಿಗೆ ಕಳುಹಿಸಿದ್ದ ಬಸ್‌ಗಳ ₹ 1.14 ಕೋಟಿ ಬಾಡಿಗೆ ಮೊತ್ತ ಬಾಕಿಯಿದೆ. ಅದರ ಪಾವತಿಗಾಗಿ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ. ಇದುವರೆಗೂ ಹಣ ಪಾವತಿಯಾಗಿಲ್ಲ
ವಿಜಯಕುಮಾರ ಹಾವರಿ ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ ವಾಕರಸಾಸಂ

ಬಸ್‌ ಬಾಡಿಗೆ ಬಾಕಿ ಮೊತ್ತದ ವಿವರ:

* 2017ರ ಜೂನ್ 11ರಂದು ವಿಜಯಪುರದಲ್ಲಿ ಜರುಗಿದ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ನಾಮಕರಣ ಕಾರ್ಯಕ್ರಮ – ₹ 2.28 ಲಕ್ಷ

* 2018ರ ವಿಧಾನಸಭಾ ಚುನಾವಣೆ ಕಾರ್ಯ – ₹ 1.30 ಲಕ್ಷ

* ಕೋವಿಡ್–19 ಸಮಯದಲ್ಲಿ ನೀಡಿದ್ದ ಮೊಬೈಲ್ ಫೀವರ್ ಕ್ಲಿನಿಕ್‌ – ₹ 4 ಲಕ್ಷ

* ಕೋವಿಡ್–19 ಸಮಯದಲ್ಲಿ ನೀಡದ್ದ ರೆಕ್ಕರ್ – ₹ 34.19 ಲಕ್ಷ

* 2022ರ ಡಿಸೆಂಬರ್ 17ರಂದು ಕಂದಾಯ ಸಚಿವರ ಗ್ರಾಮ ವಾಸ್ತವ್ಯ ಕಾರ್ಯಕ್ರಮ – ₹ 47.48 ಲಕ್ಷ

* 2023ರ ಮಾರ್ಚ್ 10ರಂದು ಹಾವೇರಿಯಲ್ಲಿ ಅಂದಿನ ಮುಖ್ಯಮಂತ್ರಿ ಸಮ್ಮುಖದಲ್ಲಿ ನಡೆದಿದ್ದ ರಾಜ್ಯ ಸರ್ಕಾರದ ಸಮಾವೇಶ – ₹ 25 ಲಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.