ಹಾವೇರಿ: ‘ಕಾಗಿನೆಲೆಯ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಬಗ್ಗೆ ಹೇಳಿಕೆ ನೀಡಿರುವ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರು ಸ್ವಾಮೀಜಿಯವರ ಕ್ಷಮೆ ಕೇಳಬೇಕು. ಇಲ್ಲದಿದ್ದರೆ, ರಾಜ್ಯಾದ್ಯಂತ ಕುರುಬ ಸಮಾಜದವರು ಹೋರಾಟ ನಡೆಸಬೇಕಾಗುತ್ತದೆ’ ಎಂದು ಸಮಾಜದ ಮುಖಂಡರೂ ಆಗಿರುವ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಎಚ್ಚರಿಕೆ ನೀಡಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ವಾಮೀಜಿಯವರನ್ನು ಪೀಠದಿಂದ ಕೆಳಗೆ ಇಳಿಸುವುದಾಗಿ ವಿಶ್ವನಾಥ್ ಹೇಳಿದ್ದಾರೆ. ಈ ರೀತಿ ಹೇಳುವ ಅಧಿಕಾರವನ್ನು ಅವರಿಗೆ ಕೊಟ್ಟವರು ಯಾರು. ಇದೊಂದು ಉಡಾಫೆ ಹಾಗೂ ಗರ್ವದ ಮಾತು’ ಎಂದು ಆಕ್ರೋಶ ಹೊರಹಾಕಿದರು.
‘ವಿಶ್ವನಾಥ್ ಅವರು ಸಮಾಜದ ಮುಖಂಡರು. ಮಠ ಕಟ್ಟುವಲ್ಲಿ ಅವರದ್ದೂ ಶ್ರಮವಿದೆ. ಆದರೆ, ಅವರೊಬ್ಬರೇ ಮಠ ಕಟ್ಟಿಲ್ಲ. ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಚ್.ಎಂ.ರೇವಣ್ಣ, ಡಿ.ಕೆ. ನಾಯ್ಕರ ಸೇರಿದಂತೆ ಸಮಾಜದ ಹಿರಿಯರಿಂದ ಹಿಡಿದು ಕಿರಿಯರವರೆಗೂ ಸೇರಿಕೊಂಡು ಮಠ ಕಟ್ಟಿದ್ದಾರೆ. ಸಮಾಜದ ಸಂಘಟನೆ, ಶಿಕ್ಷಣ, ಸಂಸ್ಕಾರದ ಉದ್ದೇಶದಿಂದ ಮಠ ಸ್ಥಾಪಿಸಲಾಗಿದೆ. ಮಠ ಕಟ್ಟಲು ಮಾತ್ರ ರಾಜಕೀಯ ಬೇಕು. ಮಠ ಕಟ್ಟಿದ ಮೇಲೆ ರಾಜಕೀಯ ನಡೆಯುವುದಿಲ್ಲ. ಸ್ವಾಮೀಜಿಯವರ ಮಾತುಗಳೇ ಅಂತಿಮ. ಸ್ವಾಮೀಜಿ ಸಹ ರಾಜಕೀಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿಲ್ಲ. ಸಮಾಜದ ಕಾರ್ಯಕ್ರಮಗಳಲ್ಲಿ ಮಾತ್ರ ಭಾಗವಹಿಸಿದ್ದಾರೆ. ವಿಶ್ವನಾಥ್ ನೀಡಿರುವ ಹೇಳಿಕೆ, ಸ್ವಾಮೀಜಿ ಮನಸ್ಸಿಗೂ ನೋವುಂಟು ಮಾಡಿದೆ’ ಎಂದು ಶಿವಣ್ಣನವರ ಹೇಳಿದರು.
‘ವಿಶ್ವನಾಥ್ ಅವರು ಹಿರಿಯರು. ಇಂಥ ಹೇಳಿಕೆ ಅವರಿಗೆ ಶೋಭೆಯಲ್ಲ. ತಮಗಿರುವ ಗೌರವವನ್ನು ಉಳಿಸಿಕೊಂಡು ಬದುಕಬೇಕು. ಪಕ್ಷಾತೀತ ನಾಯಕ ಸಿದ್ದರಾಮಯ್ಯ. ರಾಜಕೀಯ ಉದ್ದೇಶಕ್ಕಾಗಿ ಅವರ ವಿರುದ್ಧ ಮಾತನಾಡುವುದು ಸರಿಯಲ್ಲ. ಇದನ್ನು ಸಮಾಜದ ಜನರು ಸಹಿಸುವುದಿಲ್ಲ. ಸ್ವಾಮೀಜಿ ಬಗ್ಗೆ ನೀಡಿರುವ ಹೇಳಿಕೆಯನ್ನು ಹಿಂಪಡೆದು, ಬಹಿರಂಗವಾಗಿ ಅಥವಾ ಪತ್ರಿಕಾ ಹೇಳಿಕೆ ಮೂಲಕ ಕ್ಷಮೆ ಕೇಳಬೇಕು’ ಎಂದು ಅವರು ಒತ್ತಾಯಿಸಿದರು.
ಮಠದ ಆಡಳಿತಾಧಿಕಾರಿ ಎಸ್.ಎಫ್.ಎನ್. ಗಾಜೀಗೌಡ್ರ ಮಾತನಾಡಿ, ‘ನಮ್ಮದು ರಾಜಕೀಯ ಮಠವಲ್ಲ. ಸಮಾಜದ ಮಠ. ರಾಜಕೀಯಕ್ಕಾಗಿ ಸ್ವಾಮೀಜಿ ಬಗ್ಗೆ ಅಗೌರವದ ಹೇಳಿಕೆ ನೀಡುವುದು ಸರಿಯಲ್ಲ. ವಿಶ್ವನಾಥ್ ನೀಡಿರುವ ಹೇಳಿಗೆ ತಪ್ಪಾಗಿದೆ. ಅವರು ಕೂಡಲೇ ಸಮಾಜದ ಕ್ಷಮೆ ಕೋರಬೇಕು’ ಎಂದು ಆಗ್ರಹಿಸಿದರು.
‘ಸಮಾಜಕ್ಕೆ ಮಠ ಇರಲಿಲ್ಲ. ಸಮಾಜದ ಎಲ್ಲರೂ ಸೇರಿಕೊಂಡು 1992ರಲ್ಲಿ ಗುರುಪೀಠ ಸ್ಥಾಪಿಸಿದೆವು. ಬೀರೇಂದ್ರ ಕೇಶವ ತಾರಕಾನಂದ ಪುರಿ ಸ್ವಾಮೀಜಿ ಮೊದಲಿಗೆ ಪೀಠಾಧಿಪತಿಗಳಾಗಿದ್ದರು. ಈಗ, ನಿರಂಜನಾನಂದಪುರಿ ಸ್ವಾಮೀಜಿ ಮಠ ಹಾಗೂ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಮಠಕ್ಕೆ ಟ್ರಸ್ ಇದೆ. ವಿಶ್ವನಾಥ್ ನೀಡಿರುವ ಹೇಳಿಕೆಯನ್ನು ನಾವೆಲ್ಲರೂ ಖಂಡಿಸುತ್ತೇವೆ’ ಎಂದು ಹೇಳಿದರು.
ಸಮಾಜದ ಮುಖಂಡರಾದ ಸಿದ್ದಣ್ಣ ಲಿಂಗಮ್ಮನವರ, ಮೃತ್ಯುಂಜಯ ಗುದಿಗೇರ, ಶಂಕ್ರಣ್ಣ ಮಾತನವರ, ಮಾದೇವಗೌಡ್ರ ಗಾಜೀಗೌಡ್ರ, ಚಿಕ್ಕಪ್ಪ ಹಾದಿಮನಿ, ಯಶವಂತ ಯಡಗೋಡಿ, ಹನುಮಂತಗೌಡ ಗಾಜೀಗೌಡ್ರ, ಸುರೇಶ ದೊಡ್ಡಕುರುಬರ, ಫಕ್ಕಿರಪ್ಪ ಕುಂದೂರ, ರವಿ ಕರಿಗಾರ, ಷಣ್ಮುಖಪ್ಪ ಕಂಬಳಿ ಪತ್ರಿಕಾಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.