ADVERTISEMENT

ಸಮಾಜದ ಅಂಕು–ಡೊಂಕು ತಿದ್ದುವುದೇ ಸಾಹಿತ್ಯ

ವಿಶ್ವ ಮಾನವ ದಿನಾಚರಣೆ : ಹೆಚ್ಚುವರಿ ಜಿಲ್ಲಾಧಿಕಾರಿ ಎಲ್‌. ನಾಗರಾಜ ಅಭಿಮತ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 2:45 IST
Last Updated 30 ಡಿಸೆಂಬರ್ 2025, 2:45 IST
ಹಾವೇರಿ ಗಾಂಧಿಭವನದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ‘ವಿಶ್ವ ಮಾನವ ದಿನಾಚರಣೆ– 2025’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು 
ಹಾವೇರಿ ಗಾಂಧಿಭವನದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ‘ವಿಶ್ವ ಮಾನವ ದಿನಾಚರಣೆ– 2025’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು    

ಹಾವೇರಿ: ‘ಇದೇ ಧರ್ಮದಲ್ಲಿ ಹುಟ್ಟಬೇಕೆಂದು ಯಾರೂ ಕೇಳಿಕೊಂಡು ಬರುವುದಿಲ್ಲ. ಹುಟ್ಟಿದ ನಂತರ ನಾವೆಲ್ಲರೂ ವಿಶ್ವಮಾನವರಾಗಿ ಬದುಕಬೇಕು. ವಚನ ಸಾಹಿತ್ಯ, ದಾಸ ಸಾಹಿತ್ಯ, ನವ್ಯ, ಇತರೆ ಕಾಲಘಟ್ಟದ ಎಲ್ಲ ಸಾಹಿತ್ಯವು ಸಮಾಜದ ಅಂಕು–ಡೊಂಕು ತಿದ್ದುವುದನ್ನು ಹೇಳಿದೆ. ರಾಷ್ಟ್ರಕವಿ ಕುವೆಂಪು ಸಹ ಅದನ್ನೇ ಹೇಳಿದ್ದಾರೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಲ್. ನಾಗರಾಜ ಅಭಿಪ್ರಾಯಪಟ್ಟರು.

ನಗರದ ಗಾಂಧಿಭವನದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ‘ವಿಶ್ವ ಮಾನವ ದಿನಾಚರಣೆ– 2025’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ನಾವು ಹುಟ್ಟಿದ ಮೇಲೆ, ಸಮಾಜದ ನೀತಿ–ರೀತಿ, ಕಟ್ಟು ಪಾಡುಗಳನ್ನು ನಮ್ಮ ಸುತ್ತಲೂ ಸುತ್ತುತ್ತಾರೆ. ಕಂದಾಚಾರ, ಮೌಢ್ಯ ತುಂಬುತ್ತಾರೆ. ಜಾತಿ ವ್ಯವಸ್ಥೆ ತರುತ್ತಾರೆ. ಆದರೆ, ಕುವೆಂಪು ಅವರು ನಾವೆಲ್ಲರೂ ಒಂದೇ ಎಂದರು. ಹುಟ್ಟಿನಿಂದ ಗುರುತಿಸಿಕೊಳ್ಳುವುದಕ್ಕಿಂತ, ಕಾಯಕ ಹಾಗೂ ತಮ್ಮ ತನದಿಂದ ಗುರುತಿಸಿಕೊಳ್ಳಬೇಕು. ಇಡೀ ವಿಶ್ವವೇ ಒಂದು ಕುಟುಂಬವಾಗಿರಬೇಕು. ಇದುವೇ ಕುವೆಂಪು ಆಶಯ’ ಎಂದರು.

ADVERTISEMENT

‘ನಾನು ಸಹ ಶಿವಮೊಗ್ಗದವ. ಬಾಲ್ಯದಲ್ಲಿ ನಾನೂ ಕಥೆ, ಕಾವ್ಯ ಬರೆಯುತ್ತಿದ್ದೆ. ಆದರೆ, ಪ್ರೋತ್ಸಾಹ ಸಿಗಲಿಲ್ಲ. ಶಾಲೆ–ಕಾಲೇಜಿನಲ್ಲಿ ಬರೆದ ಕಥೆಗಳನ್ನು ಅಲ್ಲಿಯೇ ಬಿಟ್ಟು ಬಂದೆ. ನಂತರ, ವೈದ್ಯ ಶಿಕ್ಷಣ ಪಡೆದು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಈಗ ಹೆಚ್ಚುವರಿ ಜಿಲ್ಲಾಧಿಕಾರಿ ಆಗಿದ್ದೇನೆ. ಇಂದಿನ ವಿದ್ಯಾರ್ಥಿಗಳು ಸಾಹಿತ್ಯದಲ್ಲಿ ತೊಡಗಿಸಿಕೊಳ್ಳಬೇಕು. ಕುವೆಂಪು ಅವರಂಥ ಮಹಾನ್ ಸಾಹಿತಿಗಳ ಸಾಹಿತ್ಯವನ್ನು ಓದಬೇಕು’ ಎಂದರು.

ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಉಪ ಪ್ರಾಂಶುಪಾಲ ಜೀವರಾಜ ಛತ್ರದ ಮಾತನಾಡಿ, ‘ಕುವೆಂಪು ಅವರು ಮಗುವಿನಿಂದ ಹಿಡಿದು ವೃದ್ಧರವರೆಗೂ ಸಾಹಿತ್ಯ ಬರೆದಿದ್ದಾರೆ. ಹೊಟ್ಟೆಯಲ್ಲಿರುವ ಮದ, ಮತ್ಸರವನ್ನು ಬಿಟ್ಟು ವಿಶ್ವಮಾನವರಾಗಿ ಎಂಬ ಸಂದೇಶ ನೀಡಿದ್ದಾರೆ’ ಎಂದರು.

‘ಇಂದಿನ ದಿನಮಾನಗಳಲ್ಲಿ ಜ್ಞಾನಕ್ಕಿಂತಲೂ ಜಾತಿಯಿಂದ ಅಳೆಯುವ ವ್ಯವಸ್ಥೆಯಿದೆ. ರಾಜಕೀಯದಲ್ಲೂ ಟಿಕೆಟ್ ನೀಡುವಾಗ ಪ್ರಭಾವಿ ಜಾತಿ ಯಾವುದೆಂಬ ಲೆಕ್ಕಾಚಾರ ಹಾಕಲಾಗುತ್ತಿದೆ. ಇಂಥ ವರ್ತನೆಯಿಂದ ಮೌಲ್ಯಾಧಾರಿತ ರಾಜಕೀಯ ಮುಂದುವರಿಯುತ್ತಿಲ್ಲ. ಶಿಕ್ಷಣ ವ್ಯವಸ್ಥೆಯು ಅಧೋಗತಿಗೆ ಹೊರಟಿದೆ. ಇದಕ್ಕೆ ಏನು ಕಾರಣ ? ಪರಿಹಾರವೇನು ? ಎಂಬ ಬಗ್ಗೆ ಚಿಂತನೆ ನಡೆಯಬೇಕಿದೆ. ಇಂದಿನ ಸಮಾಜದಲ್ಲಿ ಕಾಯಕ ಮರೆತು ಬೆದರಿಸಿ ತಿನ್ನುವವರು ಹೆಚ್ಚಾಗುತ್ತಿದ್ದಾರೆ. ಬಸವಣ್ಣನವರ ಕಾಯಕವೇ ಕೈಲಾಸ ತತ್ವವನ್ನು ನಾವು ಪಾಲಿಸಬೇಕಿದೆ’ ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಂ. ಹಿರೇಮಠ, ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಂ. ಮೈದೂರು, ನಗರಸಭೆ ಮಾಜಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ ಹಾಗೂ ಟಿಎಂಎಇಎಸ್ ಬಿ.ಎಡ್ ಕಾಲೇಜು ವಿದ್ಯಾರ್ಥಿಗಳು ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.