ADVERTISEMENT

ಹಿರೇಕೆರೂರು |100 ಬೆಡ್ ಆಸ್ಪತ್ರೆ; ವೈದ್ಯರದ್ದೇ ಕೊರತೆ

ಶಂಕರ ಕೊಪ್ಪದ
Published 15 ಜುಲೈ 2024, 5:31 IST
Last Updated 15 ಜುಲೈ 2024, 5:31 IST
ಹಿರೇಕೆರೂರು ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಸರದಿಯಲ್ಲಿ ನಿಂತಿರುವ ಜನರು
ಹಿರೇಕೆರೂರು ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಸರದಿಯಲ್ಲಿ ನಿಂತಿರುವ ಜನರು   

ಹಿರೇಕೆರೂರು: ಇಲ್ಲಿಯ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ನಿತ್ಯವೂ 300ಕ್ಕೂ ಹೆಚ್ಚು ಜನರು ಚಿಕಿತ್ಸೆಗೆಂದು ಬಂದು ಹೋಗುತ್ತಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿದ್ದು, ಇದರಿಂದಾಗಿ ಜನರ ಚಿಕಿತ್ಸೆಯಲ್ಲಿ ತೊಂದರೆ ಉಂಟಾಗುತ್ತಿದೆ.

100 ಬೆಡ್ ಸಾಮರ್ಥ್ಯ‌ದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಒಟ್ಟು 13 ತಜ್ಞ ವೈದ್ಯರ ಹುದ್ದೆಗಳು ಮಂಜೂರಾಗಿವೆ. ಆದರೆ, ಸದ್ಯ 7 ವೈದ್ಯರು ಮಾತ್ರೆ ಕೆಲಸ ಮಾಡುತ್ತಿದ್ದಾರೆ. 6 ವೈದ್ಯರ ಹುದ್ದೆಗಳು ಖಾಲಿ ಇದ್ದು, ಇರುವ ವೈದ್ಯರ ಮೇಲೆಯೇ ಕೆಲಸದ ಒತ್ತಡ ಹೆಚ್ಚಿದೆ.

ತಲಾ ಒಬ್ಬೊಬ್ಬ ಮಕ್ಕಳ ತಜ್ಞ, ಫಿಜಿಷಿಯನ್, ಜನರಲ್‌ ಸರ್ಜನ್, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ, ಕೀಲು, ಮೂಳೆ ತಜ್ಞ, ದಂತ ವೈದ್ಯರು ಮಾತ್ರ ಆಸ್ಪತ್ರೆಯಲ್ಲಿ ಲಭ್ಯವಿದ್ದಾರೆ. ಅರವಳಿಕೆ ತಜ್ಞ, ಮುಖ್ಯ ವೈದ್ಯಾಧಿಕಾರಿ, ನೇತ್ರ ತಜ್ಞ, ಚರ್ಮರೋಗ, ಜನರಲ್ ಮೆಡಿಸಿನ್ ಸರ್ಜನ್, ಜನರಲ್ ಸರ್ಜನ್ ಹೆಚ್ಚುವರಿ ಹುದ್ದೆಗಳು ಹಲವು ದಿನಗಳಿಂದ ಖಾಲಿ ಇವೆ. ಇವುಗಳ ಭರ್ತಿಗೆ ಆರೋಗ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂಬ ಆರೋಪವಿದೆ.

ADVERTISEMENT

ಹಿರಿಯ ಔಷಧ ವಿತರಕ, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ, ರೇಡಿಯೋಲಜಿಸ್ಟ್, ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳೂ ಖಾಲಿ ಇವೆ. ಪ್ರಥಮ ದರ್ಜೆ ಸಹಾಯಕ–2 ಹಾಗೂ ಶುಶ್ರೂಷಕಿಯರು 6 ಹುದ್ದೆಗಳಿಗೆ ಹಲವು ದಿನಗಳಿಂದ ನೇಮಕಾತಿ ಆಗಿಲ್ಲ.

ವೈದ್ಯರ ಕೊರತೆ ಇರುವುದರಿಂದ ಲಭ್ಯವಿರುವ ವೈದ್ಯರು ಮಾತ್ರ ನಿಗದಿತ ಅವಧಿಯಲ್ಲಿ ಜನರ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ. ಹೆಚ್ಚು ಜನರು ಆಸ್ಪತ್ರೆಗೆ ಬರುವುದರಿಂದ, ಅವರೆಲ್ಲರೂ ಸರದಿಯಲ್ಲಿ ಗಂಟೆಗಟ್ಟಲೇ ನಿಂತು ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ. ಜನರ ಸಾಲು ಹೆಚ್ಚಿದ್ದರೂ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಲು ವೈದ್ಯರಿಂದ ಆಗುತ್ತಿಲ್ಲ.

ಹಿರೇಕೆರೂರು ಸುತ್ತಮುತ್ತಲಿನ ಗ್ರಾಮಗಳ ಜನರು ಹಾಗೂ ಅಕ್ಕ–ಪಕ್ಕದ ತಾಲ್ಲೂಕುಗಳ ಜನರು ಚಿಕಿತ್ಸೆ ಬಯಸಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಬರುತ್ತಿದ್ದಾರೆ. ಸದ್ಯ ಡೆಂಗಿ, ಜ್ವರ ಹಾಗೂ ಇತರೆ ಪ್ರಕರಣಗಳು ಹೆಚ್ಚಿರುವ ಇಂದಿನ ದಿನಗಳಲ್ಲಿ ನಿತ್ಯವೂ 20 ರಿಂದ 30 ರೋಗಿಗಳು ಒಳರೋಗಿಗಳಾಗಿ ಸೇರ್ಪಡೆಯಾಗುತ್ತಿದ್ದಾರೆ.

ಆಸ್ಪತ್ರೆಯಲ್ಲಿ ಸುಸಜ್ಜಿತ ಐಸಿಯು ಘಟಕವಿದೆ. ಆದರೆ, ಇಲ್ಲಿಯೂ ವೈದ್ಯರ ಕೊರತೆ ಎದ್ದು ಕಾಣುತ್ತಿದೆ. ಶಸ್ತ್ರಚಿಕಿತ್ಸೆ ಕಟ್ಟಡವೂ ಇದ್ದು, ಸಣ್ಣಪುಟ್ಟ ಶಸ್ತ್ರಚಿಕಿತ್ಸೆಗಳಿಗೆ ಮಾತ್ರ ಸೀಮಿತವಾಗಿದೆ. ಅಗತ್ಯ ಹಾಗೂ ತುರ್ತು ಶಸ್ತ್ರಚಿಕಿತ್ಸೆ ನಡೆಸಲು ಅರವಳಿಕೆ ತಜ್ಞರ ಕೊರತೆಯೂ ಇದೆ.

ರೋಗಿಗಳಿಗೆ ತುರ್ತು ಶಸ್ತ್ರ ಚಿಕಿತ್ಸೆ ಅವಶ್ಯಕತೆ ಇದ್ದಲ್ಲಿ, ಪಕ್ಕದ ಮಾಸೂರಿನಿಂದ ಅರವಳಿಕೆ ತಜ್ಞರನ್ನು ಕರೆಸಲಾಗುತ್ತಿದೆ. ಆದರೆ, ಆಸ್ಪತ್ರೆಗೆ ಬರುತ್ತಿರುವವರಲ್ಲಿ ಬಡ ಮತ್ತು ಮಧ್ಯಮ ವರ್ಗದವರು ಹೆಚ್ಚಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇರುವುದರಿಂದ, ಬಹುತೇಕ ಜನರು ಹೆಚ್ಚಿನ ಚಿಕಿತ್ಸೆಗಾಗಿ ಅಕ್ಕ–ಪಕ್ಕದ ತಾಲ್ಲೂಕು ಹಾಗೂ ಅಕ್ಕ–ಪಕ್ಕದ ಜಿಲ್ಲೆಗಳ ಆಸ್ಪತ್ರೆಗೆ ಹೋಗುತ್ತಿದ್ದಾರೆ.

ಜನರ ಸರದಿ ಸಾಲು ಸಾಮಾನ್ಯ: ನೆಲ ಹಾಗೂ ಮೊದಲ ಮಹಡಿ ಕಟ್ಟಡದಲ್ಲಿ ಆಸ್ಪತ್ರೆ ಇದೆ. ಇದೇ ಕಟ್ಟಡದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿಯೂ ಇದೆ. ಡೆಂಗಿ, ಜ್ವರ ಹಾಗೂ ಡಯಾಲಿಸಿಸ್ ಚಿಕಿತ್ಸೆ ನೀಡುವ ಕೊಠಡಿಗಳು ಇಲ್ಲಿವೆ. ಆಸ್ಪತ್ರೆಯ ಒಳಭಾಗದಲ್ಲಿ ರೋಗಿಗಳ ನೋಂದಣಿ ಕೇಂದ್ರವಿದೆ. ಚೀಟಿ ಮಾಡಿಸಲು ಜನರು ನಿತ್ಯವೂ ಗಂಟೆಗಟ್ಟಲೇ ಸರದಿಯಲ್ಲಿ ನಿಲ್ಲಬೇಕಾದ ಸ್ಥಿತಿಯೂ ಇದೆ. ಆಸ್ಪತ್ರೆಯ ಎದುರು ನಿತ್ಯವೂ ಜನರ ಸರದಿ ಸಾಲು ಸಾಮಾನ್ಯವಾಗಿದೆ.

ಆಸ್ಪತ್ರೆಯ ಒಳಭಾಗದ ಕೆಲ ಕಡೆಗಳಲ್ಲಿ ರೋಗಿಗಳ ಸಂಬಂಧಿಕರು, ಎಲೆ-ಅಡಿಕೆ,ಗುಟ್ಕಾ ತಿಂದು ಉಗುಳುತ್ತಿದ್ದಾರೆ. ಇದು ಆಸ್ಪತ್ರೆ ಸಿಬ್ಬಂದಿಗೆ ತಲೆನೋವು ತಂದಿದೆ. ಆಸ್ಪತ್ರೆ ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಉತ್ತಮವಾಗಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರಗಳು: ತಾಲ್ಲೂಕಿನಲ್ಲಿ 6 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಅಲ್ಲಿಯೂ ಸಿಬ್ಬಂದಿ ಕೊರತೆ ಹೆಚ್ಚಿದೆ.

ಹಂಸಭಾವಿ, ಚಿಕ್ಕೆರೂರು, ಹೋಸ ವೀರಾಪುರ, ಮಡ್ಲೂರು ಹಾಗೂ ಆಲದಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಕೆಲಸ ಮಾಡುತ್ತಿದ್ದಾರೆ. ಕೋಡ ಗ್ರಾಮದ ಕೇಂದ್ರದಲ್ಲಿ 2 ವೈದ್ಯರ ಹುದ್ದೆ ಖಾಲಿ ಇದೆ.

ಹಿರೇಕೆರೂರು ತಾಲ್ಲೂಕು ಆಸ್ಪತ್ರೆಯ ವಾಣಿಜ್ಯ ಸಂಕೀರ್ಣದ ಮಳಿಗೆಯೊಂದರಲ್ಲಿ ಚಾಲಕ ವಾಸವಿರುವುದು
13 ವೈದ್ಯರ ಹುದ್ದೆ ಮಂಜೂರು 7 ಮಂದಿ ಮಾತ್ರ ಕಾರ್ಯನಿರತ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಸಮಸ್ಯೆ
ನಮ್ಮೂರಿನ ಸರ್ಕಾರಿ ಆಸ್ಪತ್ರೆಯಿಂದ ಹಿರೇಕೆರೂರು ತಾಲ್ಲೂಕು ಆಸ್ಪತ್ರೆಗೆ ಬಂದಿದ್ದೇನೆ. ಇಲ್ಲಿ ಚರ್ಮರೋಗದ ವೈದ್ಯರಿಲ್ಲ. ಹೀಗಾಗಿ ಖಾಸಗಿ ಆಸ್ಪತ್ರೆಗೆ ಹೋಗಲೇ ಬೇಕಾದ ಸ್ಥಿತಿ ಇದೆ
ವಿಜಯ ಮಲ್ನಾಡದ ಹಿರೇಕೆರೂರು ತಾಲ್ಲೂಕಿನ ನಿವಾಸಿ
‘ಚಾಲಕನಿಗೆ ಮನೆಯಾದ ಕ್ಯಾಂಟೀನ್’
ಹಿರೇಕೆರೂರು ತಾಲ್ಲೂಕು ಆಸ್ಪತ್ರೆಯ ಹಿಂಭಾಗದಲ್ಲಿ ಕ್ಯಾಂಟೀನ್‌ ಮತ್ತು ಹಾಪ್‌ ಕಾಮ್ಸ್‌ ಮಳಿಗೆ ತೆರೆಯಲು ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗಿದೆ. ಆದರೆ ಇದುವರೆಗೂ ಮಳಿಗೆಗಳು ಆರಂಭವಾಗಿಲ್ಲ. ಆಸ್ಪತ್ರೆಯ ಆಂಬುಲೆನ್ಸ್ ಚಾಲಕರೊಬ್ಬರು ಕ್ಯಾಂಟೀನ್ ಮಳಿಗೆಯನ್ನು ಮನೆಯನ್ನಾಗಿ ಮಾಡಿಕೊಂಡು ಅಲ್ಲಿಯೇ ಉಳಿದುಕೊಂಡಿದ್ದಾರೆ. ‘ಕ್ಯಾಂಟೀನ್ ಹಾಗೂ ಹಾಪ್‌ಕಾಮ್ಸ್ ಮಳಿಗೆ ಆರಂಭಿಸುವುದಾಗಿ ಆಸ್ಪತ್ರೆಯವರು ಹೇಳಿದ್ದರು. ಆದರೆ ಇದುವರೆಗೂ ಆರಂಭಿಸಿಲ್ಲ. ಇದರಿಂದ ರೋಗಿಗಳು ಅವರ ಸಂಬಂಧಿಕರು ಆಹಾರ ಹಾಗೂ ಹಣ್ಣುಗಳನ್ನು ತರಲು ಹೊರಗಡೆ ಹೋಗುತ್ತಿದ್ದಾರೆ. ವಾಣಿಜ್ಯ ಸಂಕೀರ್ಣದ ಮಳಿಗೆಗಳನ್ನು ತೆರೆದರೆ ರೋರಿಗಳಿಗೆ ಅನುಕೂಲವಾಗಲಿದೆ’ ಎಂದು ಜನರು ಒತ್ತಾಯಿಸಿದರು.
‘ವೈದ್ಯರ ಕೊರತೆ: ಪ್ರತಿ ತಿಂಗಳು ಪತ್ರ’
‘ವೈದ್ಯರ ಕೊರತೆ ಬಗ್ಗೆ ಪ್ರತಿ ತಿಂಗಳು ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗುತ್ತಿದೆ. ಈಗಿರುವ ವೈದ್ಯರು ಮತ್ತು ಸಿಬ್ಬಂದಿ ರೋಗಿಗಳಿಗೆ ಯಾವುದೇ ತೊಂದರೆಯಾಗಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ನಮ್ಮ ಆಸ್ಪತ್ರೆಯಲ್ಲಿ ಅರವಳಿಕೆ ತಜ್ಞ ಇಲ್ಲದಿರುವುದರಿಂದ ತುರ್ತು ಚಿಕಿತ್ಸೆ ಇದ್ದಲ್ಲಿ ಬೇರೆ ಕಡೆಯಿಂದ ಕರೆಸಿಕೊಳ್ಳುತ್ತಿದ್ದೇವೆ’ ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಹೊನ್ನಪ್ಪ ಜೆ.ಎಂ. ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.