ADVERTISEMENT

ಹಾವೇರಿ ನಗರಸಭೆಯಲ್ಲಿ ಅನುದಾನದ ಕೊರತೆ: ರಸ್ತೆ ದುರವಸ್ಥೆ, ಸಂಚಾರ ಹೈರಾಣ

₹25 ಕೋಟಿ ವಿಶೇಷ ಅನುದಾನಕ್ಕೆ ಸಿಎಂಗೆ ಮನವಿ

ಸಿದ್ದು ಆರ್.ಜಿ.ಹಳ್ಳಿ
Published 9 ಡಿಸೆಂಬರ್ 2021, 19:30 IST
Last Updated 9 ಡಿಸೆಂಬರ್ 2021, 19:30 IST
ಹಾವೇರಿ ನಗರದ ಕಲ್ಲುಮಂಟಪ ಓಣಿ ರಸ್ತೆಯಲ್ಲಿರುವ ತಗ್ಗು–ಗುಂಡಿಗಳು  –ಪ್ರಜಾವಾಣಿ ಚಿತ್ರಗಳು: ಮಾಲತೇಶ ಇಚ್ಚಂಗಿ 
ಹಾವೇರಿ ನಗರದ ಕಲ್ಲುಮಂಟಪ ಓಣಿ ರಸ್ತೆಯಲ್ಲಿರುವ ತಗ್ಗು–ಗುಂಡಿಗಳು  –ಪ್ರಜಾವಾಣಿ ಚಿತ್ರಗಳು: ಮಾಲತೇಶ ಇಚ್ಚಂಗಿ    

ಹಾವೇರಿ: ಜಿಲ್ಲಾ ಕೇಂದ್ರವಾದ ಹಾವೇರಿ ನಗರದ ರಸ್ತೆಗಳಲ್ಲಿ ತಗ್ಗು–ಗುಂಡಿಗಳದ್ದೇ ಕಾರುಬಾರು. ಈ ಹದಗೆಟ್ಟ ರಸ್ತೆಗಳಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಜನರು ಸಂಚರಿಸುವಂತಾಗಿದೆ.

ಅಕ್ಟೋಬರ್‌– ನವೆಂಬರ್‌ ತಿಂಗಳಲ್ಲಿ ಸುರಿದ ಭಾರಿ ಮಳೆಗೆ ಡಾಂಬರು ಕಿತ್ತುಹೋದ ಪರಿಣಾಮ ರಸ್ತೆಗಳು ಮೈತುಂಬ ಗಾಯ ಮಾಡಿಕೊಂಡಂತೆ ಗೋಚರಿಸುತ್ತವೆ. ಕಂಬಳ ಸ್ಪರ್ಧೆಗೆ ಸಿದ್ಧಪಡಿಸಿದಂತೆ ಕಾಣುವ ಕೆಸರುಗದ್ದೆಯಂಥ ರಸ್ತೆಗಳಲ್ಲಿ ಜನರು ಎದ್ದುಬಿದ್ದು ಓಡಾಡುವಂತಾಗಿದೆ. ಮೈ–ಕೈ ಮೂಳೆಗಳನ್ನು ಉಳುಕಿಸಿಕೊಂಡ ಜನರು ನಗರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಇದು‘ಸಿಎಂ ತವರು ಜಿಲ್ಲೆ’ಯ ಜಿಲ್ಲಾ ಕೇಂದ್ರದ ರಸ್ತೆಗಳ ದುಸ್ಥಿತಿ.

ನಗರದ ಎಂ.ಜಿ.ರಸ್ತೆ, ಡಿ.ಸಿ.ಕಚೇರಿ ರಸ್ತೆ, ಸ್ಟೇಷನ್‌ ರಸ್ತೆ, ಕಲ್ಲುಮಂಟಪ ರಸ್ತೆ, ಪುರದ ಓಣಿ ರಸ್ತೆ, ಯಾಲಕ್ಕಿ ಓಣಿ ರಸ್ತೆ, ಹೆಗ್ಗೇರಿ ಕೆರೆ ರಸ್ತೆ, ವಿದ್ಯಾನಗರ, ನಾಗೇಂದ್ರನಮಟ್ಟಿ ಮತ್ತು ಶಿವಾಜಿನಗರದ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಸಂಚಾರಕ್ಕೆ ಸಂಚಕಾರ ತರುತ್ತಿವೆ. ಗುಂಡಿ ತಪ್ಪಿಸಲು ಹೋಗುವ ಬೈಕ್‌ ಸವಾರರು ಸಾವು–ನೋವುಗಳಿಗೆ ತುತ್ತಾಗುತ್ತಿದ್ದಾರೆ. ಚರಂಡಿಯ ಕೊಳಚೆ ನೀರು ಮತ್ತು ಮಳೆಯ ನೀರು ಮಿಶ್ರಣವಾಗಿ ರಸ್ತೆಗಳ ಗುಂಡಿಗಳಲ್ಲಿ ತುಂಬಿಕೊಂಡು ದುರ್ನಾತ ಬೀರುತ್ತಿವೆ.

ADVERTISEMENT

₹5.80 ಕೋಟಿ ನೀರಿನ ತೆರಿಗೆ ಬಾಕಿ: ನಗರಸಭೆಗೆ ಪ್ರಮುಖ ಆದಾಯ ಮೂಲವೆಂದರೆ, ನೀರಿನ ತೆರಿಗೆ, ಆಸ್ತಿ ತೆರಿಗೆ ಹಾಗೂ ವಾಣಿಜ್ಯ ಮಳಿಗೆಗಳ ಬಾಡಿಗೆ. ಆಸ್ತಿ ತೆರಿಗೆ ವಸೂಲಾತಿಯಲ್ಲಿ ಉತ್ತಮ ಪ್ರಗತಿ ಸಾಧಿಸಿದ್ದರೂ, ಮಳಿಗೆ ಬಾಡಿಗೆ ವಸೂಲಾಗುವುದು ಅಷ್ಟಕ್ಕಷ್ಟೆ. ಇನ್ನು ನೀರಿನ ತೆರಿಗೆ ವಸೂಲಾತಿಯಲ್ಲಿ ಶೇ 10ರಷ್ಟು ಮಾತ್ರ ಪ್ರಗತಿಯಾಗಿದೆ. ಬರೋಬ್ಬರಿ ₹5.80 ಕೋಟಿ ನೀರಿನ ತೆರಿಗೆ ಬರುವುದು ಬಾಕಿ ಇದೆ. ಈ ಎಲ್ಲ ಕಾರಣಗಳಿಂದರಸ್ತೆ ಮತ್ತು ಚರಂಡಿಗಳ ರಿಪೇರಿಗೂ ನಗರಸಭೆ ಬಳಿ ಹಣವಿಲ್ಲದಂತಾಗಿದೆ.

ಶುಲ್ಕ ವಸೂಲಾತಿಗಾಗಿ ದಾಳಿ: ‘ನಗರಸಭೆಗೆ ಬರುವ ತೆರಿಗೆ ಮತ್ತು ಸ್ಥಳೀಯ ಅನುದಾನವು ಗುತ್ತಿಗೆ ಆಧಾರಿತ ಸಿಬ್ಬಂದಿಯ ವೇತನ, ಬೀದಿದೀಪ ನಿರ್ವಹಣೆ, ಕೊಳವೆಬಾವಿಗಳ ನಿರ್ವಹಣೆ, ನಗರಸಭೆ ಕಾರ್ಯಾಲಯದ ಖರ್ಚು–ವೆಚ್ಚ ಮತ್ತು ತುರ್ತು ಕಾಮಗಾರಿಗೆ ಸರಿ ಹೋಗುತ್ತಿದೆ. ಉದ್ದಿಮೆ ಪರವಾನಗಿ (ಟ್ರೇಡ್‌ ಲೈಸೆನ್ಸ್‌) ಪಡೆಯದೇ ಅಥವಾ ನವೀಕರಿಸದೇ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಅಂಗಡಿಗಳ ಮೇಲೆ ನಗರಸಭೆ ತಂಡ ಇತ್ತೀಚೆಗೆ ದಾಳಿ ನಡೆಸಿ, ಸ್ಥಳದಲ್ಲೇ ಶುಲ್ಕ ವಸೂಲಿ ಮಾಡುವ ಅಭಿಯಾನ ಕೈಗೊಂಡು 2 ತಿಂಗಳಲ್ಲಿ ₹50 ಲಕ್ಷ ಸಂಗ್ರಹಿಸಿದೆವು’ ಎಂದು ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ತಿಳಿಸಿದರು.

₹10 ಕೋಟಿಗೆ ಸಿಎಂಗೆ ಮನವಿ: ‘ಅನುದಾನದ ತೀವ್ರ ಕೊರತೆ ಇರುವುದರಿಂದ, ರಸ್ತೆಗಳ ದುರಸ್ತಿಗೆ ಮತ್ತು ಗಟಾರಗಳನ್ನು ನಿರ್ಮಾಣ ಮಾಡಲು ಕೂಡಲೇ ಸರ್ಕಾರ ₹10 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಬೇಕು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹಾಗೂಪ್ರಕೃತಿ ವಿಕೋಪದ ಅನುದಾನದಲ್ಲಿ ₹2 ಕೋಟಿ ಬಿಡುಗಡೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರಿಗೆ ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಈಚೆಗೆ ಮನವಿ ಸಲ್ಲಿಸಿದ್ದಾರೆ.

ಇದುವರೆಗೂ ಹಾವೇರಿ ನಗರಸಭೆಗೆ ಸರ್ಕಾರ ಮತ್ತು ಜಿಲ್ಲಾಡಳಿತದಿಂದ ಯಾವುದೇ ವಿಶೇಷ ಅನುದಾನ ಮಂಜೂರಾಗಿಲ್ಲ. ಹೀಗಾಗಿ ರಸ್ತೆ ರಿಪೇರಿ ಹಾಗೂ ಚರಂಡಿಗಳ ಸ್ವಚ್ಛತೆ, ರಾಜಕಾಲುವೆಗಳ ಒತ್ತುವರಿ ತೆರವು ಕಾರ್ಯ ನನೆಗುದಿಗೆ ಬಿದ್ದಿದೆ ಎನ್ನಲಾಗುತ್ತಿದೆ.

*
40 ಕಿ.ಮೀ.ರಸ್ತೆಗಳಲ್ಲಿರುವ ತಗ್ಗು–ಗುಂಡಿಗಳನ್ನು ಮುಚ್ಚಲು ನಗರಸಭೆಯಿಂದ ₹25 ಲಕ್ಷ ವೆಚ್ಚದಲ್ಲಿ ಕಾಮಗಾರಿಯನ್ನು ಕೂಡಲೇ ಕೈಗೊಳ್ಳುತ್ತೇವೆ
– ಸಂಜೀವಕುಮಾರ ನೀರಲಗಿ, ಅಧ್ಯಕ್ಷ, ಹಾವೇರಿ ನಗರಸಭೆ

*
ನಗರಸಭೆ ಆಡಳಿತ ಮತ್ತು ಜನಪ್ರತಿನಿಧಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಜನಸಾಮಾನ್ಯರ ಬವಣೆಗೆ ಬೆಲೆಯೇ ಇಲ್ಲದಂತಾಗಿದೆ
– ಬಸವರಾಜ ಪೂಜಾರ, ರಾಜ್ಯ ಕಾರ್ಯದರ್ಶಿ, ಡಿವೈಎಫ್‌ಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.