ADVERTISEMENT

ಶಿಗ್ಗಾವಿ: ‘ನಮ್ಮ ಕ್ಲಿನಿಕ್‌’ಗೆ ಕಾಯಂ ವೈದ್ಯರಿಲ್ಲ!

​ಪ್ರಜಾವಾಣಿ ವಾರ್ತೆ
Published 8 ಜೂನ್ 2025, 7:16 IST
Last Updated 8 ಜೂನ್ 2025, 7:16 IST
ಶಿಗ್ಗಾವಿ ತಾಲ್ಲೂಕಿನ ಗಂಗೇಬಾವಿ ಕೆ.ಎಸ್.ಆರ್.ಪಿ 10ನೇ ಪಡೆ ಕಚೇರಿ ಆವರಣದಲ್ಲಿ ಆರಂಭವಾದ ನಮ್ಮ ಕ್ಲಿನಿಕ್ ಆಸ್ಪತ್ರೆ
ಶಿಗ್ಗಾವಿ ತಾಲ್ಲೂಕಿನ ಗಂಗೇಬಾವಿ ಕೆ.ಎಸ್.ಆರ್.ಪಿ 10ನೇ ಪಡೆ ಕಚೇರಿ ಆವರಣದಲ್ಲಿ ಆರಂಭವಾದ ನಮ್ಮ ಕ್ಲಿನಿಕ್ ಆಸ್ಪತ್ರೆ   

ಶಿಗ್ಗಾವಿ: ತಾಲ್ಲೂಕಿನ ಗಂಗೇಬಾವಿ ಬಳಿಯ ಕೆಎಸ್‌ಆರ್‌ಪಿ 10ನೇ ಪಡೆ ಕಚೇರಿ ಆವರಣದಲ್ಲಿ ಇತ್ತೀಚೆಗಷ್ಟೇ ‘ನಮ್ಮ ಕ್ಲಿನಿಕ್’ ಆರಂಭಿಸಲಾಗಿದ್ದು, ಸೇವೆಗೆ ಮುಕ್ತಗೊಳಿಸಿದ ದಿನದಿಂದಲೇ ಕಾಯಂ ವೈದ್ಯರ ಕೊರತೆ ಎದ್ದು ಕಾಣುತ್ತಿದೆ.

ಮೊದಲ ದಿನದಿಂದಲೇ ಕ್ಲಿನಿಕ್‌ನಲ್ಲಿ ವೈದ್ಯರಿಲ್ಲದಿದ್ದರಿಂದ, ರೋಗಿಗಳು ಬರುತ್ತಿಲ್ಲ. ವೈದ್ಯರಿಲ್ಲದ ಕ್ಲಿನಿಕ್ ಆರಂಭಿಸಿದ್ದಕ್ಕೆ ಸ್ಥಳೀಯ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.

ಕೆಎಸ್‌ಆರ್‌ಪಿ 10ನೇ ಪಡೆ ಆರಂಭವಾಗಿ 27 ವರ್ಷಗಳಾದರೂ ಈ ಭಾಗದಲ್ಲಿ ಆಸ್ಪತ್ರೆ ವ್ಯವಸ್ಥೆ ಇರಲಿಲ್ಲ. ಈಗ ನಮ್ಮ ಕ್ಲಿನಿಕ್ ಆರಂಭವಾಗುವ ಮೂಲಕ ಗಂಗೇನೂರ, ಹೊಸೂರು, ಯತ್ನಹಳ್ಳಿ ತಾಂಡಾ ಸೇರಿದಂತೆ ಸುತ್ತಲಿನ ಹಲವು ಗ್ರಾಮಗಳ ಜನರಲ್ಲಿ ಖುಷಿ ಮೂಡಿದೆ. ಆದರೆ, ವೈದ್ಯರಿಲ್ಲದಿದ್ದರಿಂದ ಮೊದಲ ದಿನದಿಂದಲೇ ಖುಷಿಯೂ ಮಾಯವಾಗಿದೆ.

ADVERTISEMENT

ಈ ಭಾಗದ ಜನರು ಸಣ್ಣ ಚಿಕಿತ್ಸೆಗಾಗಿ ಶಿಗ್ಗಾವಿ, ಹುಬ್ಬಳ್ಳಿ, ಹಾವೇರಿ ಸೇರಿದಂತೆ ಬೇರೆಡೆ ಹೋಗುತ್ತಿದ್ದಾರೆ. ಅಲೆದಾಟ ತಪ್ಪಿಸುವ ಉದ್ದೇಶದಿಂದ ವೈದ್ಯಕೀಯ ಅಧಿಕಾರಿ, ಪ್ರಯೋಗಾಲಯದ ಸಹಾಯಕ, ಶುಶ್ರೂಷಕಿ, ಸಹಾಯಕರನ್ನು ಒಳಗೊಂಡು ನಮ್ಮ ಕ್ಲಿನಿಕ್ ಆರಂಭಿಸುವುದಾಗಿ ಆರೋಗ್ಯ ಇಲಾಖೆ ಹೇಳಿತ್ತು.

ವೈದ್ಯರು ಹಾಗೂ ಸಿಬ್ಬಂದಿ ಕೊರತೆ ನಡುವೆಯೇ ತರಾತುರಿಯಲ್ಲಿ ನಮ್ಮ ಕ್ಲಿನಿಕ್ ಉದ್ಘಾಟನೆ ಮಾಡಲಾಗಿದೆ. ವೈದ್ಯರು, ಸಿಬ್ಬಂದಿ ಇಲ್ಲದ ಕಾರಣಕಕ್ಕೆ ರೋಗಿಗಳು ಪುನಃ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೆಲವರು ನಿತ್ಯವೂ ಕ್ಲಿನಿಕ್‌ಗೆ ಬಂದು, ವೈದ್ಯರಿಲ್ಲದಿದ್ದಕ್ಕೆ ವಾಪಸು ಹೋಗುತ್ತಿದ್ದಾರೆ.

ಕ್ಲಿನಿಕ್‌ನಲ್ಲಿ ತಾತ್ಕಾಲಿಕವಾಗಿ ಕೆಲಸ ಮಾಡುತ್ತಿರುವ ಡಾ. ಮಲ್ಲೇಶ ಎಸ್.ಟಿ., ತಮ್ಮ ಬಿಡುವಿನ ವೇಳೆ ಕ್ಲಿನಿಕ್‌ಗೆ ಬಂದು ಹೋಗುತ್ತಿದ್ದಾರೆ.  ಅದು ಸಹ ಯಾವಾಗ ಎಂಬುದು ಸ್ಥಳೀಯರಿಗೆ ಗೊತ್ತಾಗುವುದಿಲ್ಲ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಸಹಾಯಕರೇ, ಅಕ್ರಮವಾಗಿ ವೈದ್ಯರ ಕೆಲಸ ಮಾಡುತ್ತಿದ್ದಾರೆ. ಸಣ್ಣಪುಟ್ಟ ಸಮಸ್ಯೆಗಳಿಗೆ ಔಷಧ ಕೊಟ್ಟು ಕಳುಹಿಸುತ್ತಿರುವುದು ಆತಂಕದ ಸಂಗತಿಯಾಗಿದೆ.

‘ಸಣ್ಣಪುಟ್ಟ ನೆಗಡಿ, ತಲೆ ನೋವು, ಗಾಯಗಳಿಗೆ ಡ್ರೆಸ್ಸಿಂಗ್‌ ಮಾಡುತ್ತೇನೆ. ಯಾವ ರೋಗಕ್ಕೆ ಯಾವ ಔಷಧಿ ನೀಡಬೇಕು ಎಂಬ ಸಾಮಾನ್ಯ ಮಾಹಿತಿಯನ್ನು ವೈದ್ಯರು ತಿಳಿಸಿದ್ದಾರೆ’ ಎಂದು ಸಹಾಯಕ ಹೇಳುತ್ತಾರೆ.

ಕೆಎಸ್‌ಆರ್‌ಪಿ ಸಿಬ್ಬಂದಿಯೊ ಬ್ಬರು, ‘ನಮ್ಮ ಕ್ಲಿನಿಕ್ ಆರಂಭದಿಂದ ಉತ್ತಮ ಚಿಕಿತ್ಸೆ ದೊರೆಯುವ ಆಸೆಯಿತ್ತು. ಆದರೆ, ವೈದ್ಯರೇ ಕ್ಲಿನಿಕ್‌ಗೆ ಬರುತ್ತಿಲ್ಲ. ಹೀಗಾಗಿ, ಆಸ್ಪತ್ರೆಗೆ ದಿಕ್ಕಿಲ್ಲದಂತಾಗಿದೆ.  ಅನುಷ್ಠಾನದ ಹಂತದಲ್ಲಿಯೇ ಕ್ಲಿನಿಕ್ ನೆಲಕಚ್ಚುವಂತಾಗಿದೆ. ಇದಕ್ಕೆ ಹೊಣೆ ಯಾರು ಎಂಬ ಪ್ರಶ್ನೆ ಕಾಡುತ್ತಿದೆ’ ಎಂದರು.

ಹೊಸೂರು ಗ್ರಾಮದ ಫಕ್ಕೀರಪ್ಪ, ‘ಗ್ರಾಮೀಣ ಜನರು ಅನಾರೋಗ್ಯದಿಂದ ಬಳಲುವಂತಾಗುತ್ತಿದೆ. ನಮ್ಮ ಕ್ಲಿನಿಕ್‌ನಲ್ಲಿ ಎಲ್ಲ ಸೌಲಭ್ಯ ಕಲ್ಪಿಸಬೇಕು. ಗ್ರಾಮೀಣ ಜನರ ಆರೋಗ್ಯ ಕಾಪಾಡುವಲ್ಲಿ ಸಹಕರಿಸಬೇಕು’ ಎಂದು ಆಗ್ರಹಿಸಿದರು. 

ನಮ್ಮ ಕ್ಲಿನಿಕ್ ಒಳಗಡೆ ಎಲ್ಲ ಸೌಲಭ್ಯವಿದ್ದರೂ ವೈದ್ಯರೇ ಇಲ್ಲ 
ಗಂಗೇಬಾವಿ ಕೆ.ಎಸ್.ಆರ್.ಪಿ 10ನೇ ಪಡೆ ಕಚೇರಿ ಆವರಣದಲ್ಲಿ ಆರಂಭವಾದ ನಮ್ಮ ಕ್ಲಿನಿಕ್ ಆಸ್ಪತ್ರೆಗೆ ಇನ್ನೂ ಪೂರ್ಣಾವಧಿಗೆ ಯಾವ ವೈದ್ಯರು ನೇಮಕವಾಗಿಲ್ಲ. ಅಲ್ಲಿಯೂ ನಾವೇ ಹೋಗಬೇಕಾಗಿದೆ
ಡಾ.ಮಲ್ಲೇಶಪ್ಪ ಎಸ್.ಟಿ ನಮ್ಮಕ್ಲಿನಿಕ್‌ ಉಸ್ತುವಾರಿ ಶಿಗ್ಗಾವಿ
ಸರ್ಕಾರ ನಮ್ಮ ಕ್ಲಿನಿಕ್ ಆಸ್ಪತ್ರೆ ಆರಂಭ ಮಾಡುವ ಜತೆಗೆ ಸಿಬ್ಬಂದಿ ನೇಮಕಾತಿ ಮಾಡಬೇಕು. ಇಲ್ಲವಾದಲ್ಲಿ ಆಸ್ಪತ್ರೆ ತೆರೆಯಲು ಅನುಮತಿ ನೀಡಬಾರದು
ಫಕೀರಜ್ಜ ಗ್ರಾಮಸ್ಥ
‘ಪ್ರಚಾರಕ್ಕಾಗಿ ಶಾಸಕರಿಂದ ಉದ್ಘಾಟನೆ’
‘ನಮ್ಮ ಕ್ಲಿನಿಕ್‌’ ಮಾಡಬೇಕು ಎಂಬುದು ಸ್ಥಳೀಯರ ಹಲವು ವರ್ಷಗಳ ಬೇಡಿಕೆಯಾಗಿತ್ತು. ಕಟ್ಟಡ ನಿರ್ಮಿಸಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳು, ಪ್ರಚಾರಕ್ಕಾಗಿ ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ ಅವರಿಂದ ಕ್ಲಿನಿಕ್ ಉದ್ಘಾಟನೆ ಮಾಡಿಸಿ ಮೌನವಾಗಿದ್ದಾರೆ’ ಎಂದು ಜನರು ದೂರುತ್ತಿದ್ದಾರೆ. ‘ಕಾಯಂ ವೈದ್ಯರಿಲ್ಲವೆಂಬುದು ಗೊತ್ತಿದ್ದರೂ ಶಾಸಕ ಪಠಾಣ, ಕ್ಲಿನಿಕ್ ಉದ್ಘಾಟಿಸಿ ಭಾಷಣ ಮಾಡಿ ಹೋದರು. ಕ್ಲಿನಿಕ್ ಹೇಗೆ ನಡೆಯುತ್ತಿದೆ ? ಎಂಬುದನ್ನು ಪರಿಶೀಲಿಸಿಲ್ಲ. ಕೇವಲ ಪ್ರಚಾರಕ್ಕಾಗಿ ಈ ರೀತಿ ಮಾಡಿದರೆ ಏನು ಪ್ರಯೋಜನ. ಜನಪರ ಕಾಳಜಿ ಇದ್ದರೆ, ಕೂಡಲೇ ವೈದ್ಯರನ್ನು ನೇಮಿಸಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.