ADVERTISEMENT

ಸರ್ಕಾರ ನಿಗದಿಪಡಿಸಿದ 66 ಅಡಿ ಹೊರತು ಬೇರೆ ಜಾಗ ಬಳಕೆ ಇಲ್ಲ: ಶಿವಣ್ಣನವರ ಭರವಸೆ 

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 3:27 IST
Last Updated 18 ಜನವರಿ 2026, 3:27 IST
ಬ್ಯಾಡಗಿ ಪುರಸಭೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪರಿಹಾರದ ಚೆಕ್‌ ವಿತರಣಾ ಸಭೆಯಲ್ಲಿ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿದರು.
ಬ್ಯಾಡಗಿ ಪುರಸಭೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪರಿಹಾರದ ಚೆಕ್‌ ವಿತರಣಾ ಸಭೆಯಲ್ಲಿ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿದರು.   

ಬ್ಯಾಡಗಿ: ಪಟ್ಟಣದ ಮುಖ್ಯರಸ್ತೆಯ ಮೂಲಕ ಹಾಯ್ದು ಹೋಗಿರುವ ಸೊರಬ–ಗಜೇಂದ್ರಗಡ ರಾಜ್ಯ ಹೆದ್ದಾರಿ–136 ಪಟ್ಟಣದ ಪರಿಮಿತಿಯಲ್ಲಿ ಒಟ್ಟು 5,695.01 ಚ.ಮೀ ಜಾಗೆಯ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪರಿಹಾರದ ಹಣವನ್ನು ಶಾಸಕ ಬಸವರಾಜ ಶಿವಣ್ಣನವರ ಶುಕ್ರವಾರ ಸಾಂಕೇತಿಕವಾಗಿ ವಿತರಿಸಿದರು.

ಬಳಿಕ ಮಾತನಾಡಿದ ಅವರು ಈಗಾಗಲೆ ನಿಗದಿಪಡಿಸಿದಂತೆ ಮುಖ್ಯ ರಸ್ತೆಯಲ್ಲಿ ರಸ್ತೆ ಮಧ್ಯದಿಂದ 33 ಅಡಿಗಳಷ್ಟು ಅಗಲದ ಚತುಷ್ಪಥ ರಸ್ತೆ ನಿರ್ಮಿಸುವ ಉದ್ದೇಶದಿಂದ ರಾಜ್ಯದಲ್ಲಿ ಮೊದಲ ಬಾರಿಗೆ ನಿವೇಶನ ಭೂಸ್ವಾಧೀನಕ್ಕೂ ಮೊದಲು ಪರಿಹಾರದ ಹಣವನ್ನು ವಿತರಿಸಲಾಗುತ್ತಿದೆ. ಈಗಾಗಲೆ ನೂರಕ್ಕೂ ಹೆಚ್ಚು ಜನರು ಯಾವುದೇ ತಕರಾರಿಲ್ಲದೇ ಪರಿಹಾರದ ಮೊತ್ತವನ್ನು ಪಡೆದುಕೊಳ್ಳಲು ಮುಂದೆ ಬಂದಿದ್ದಾರೆ ಎಂದರು.

ಮುಖ್ಯರಸ್ತೆಯ ಭೂಮಾಲಿಕರ ಸಹಕಾರ ಅಗತ್ಯವಾಗಿದ್ದು, ಕಳೆದ ಜೂನನಲ್ಲಿ ನಡೆದ ಪ್ರತಿಭಟನೆ ವೇಳೆ ತಮ್ಮೆಲ್ಲರ ಒಪ್ಪಿಗೆಯನ್ನು ಪಡೆದುಕೊಂಡೇ ರಸ್ತೆ ವಿಸ್ತರಣೆಯ ಕೆಲಸಕ್ಕೆ ಕೈ ಹಾಕಿದ್ದೇವೆ. ಈಗ ಪರಿಹಾರದ ಹಣ ವಿತರಿಸುವ ಹಂತಕ್ಕೆ ಬಂದಿದ್ದು, ಕೆಲ ಭೂಮಾಲಿಕರು ಮತ್ತೆ ಕೋರ್ಟ್‌ ಮೆಟ್ಟಿಲೇರಿರುವುದು ನೋವಿನ ಸಂಗತಿಯಾಗಿದೆ.ಮುಖ್ಯರಸ್ತೆ ವಿಸ್ತರಣೆ ದಾರಿ ತಪ್ಪಿಸಲು ಕೆಲವರು ಸಾರ್ವಜನಿಕರಲ್ಲಿ ತಪ್ಪು ಸಂದೇಶವನ್ನು ನೀಡುತ್ತಿದ್ದಾರೆ, ರಸ್ತೆ ವಿಸ್ತರಣೆಗೆ ಹಣದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು 6ಮೀ ಸೆಟ್ ಬ್ಯಾಕ್ ಬಿಡಲೇಬೇಕೆಂಬ ಸುಳ್ಳು ವದಂತಿ ಹಬ್ಬಿಸಲಾಗುತ್ತಿದೆ.ಸರ್ಕಾರ ನಿಗದಿಪಡಿಸಿದ ಒಟ್ಟು 66 ಅಡಿ ಹೊರತುಪಡಿಸಿ ಇನ್ನಿತರ ಜಾಗಕ್ಕೆ ನಾವು ಕೈಹಾಕುವುದಿಲ್ಲ ನಮ್ಮ ಮೇಲೆ ವಿಶ್ವಾಸವಿಡುವಂತೆ ಭೂಮಾಲಿಕರಲ್ಲಿ ಮನವಿ ಮಾಡಿಕೊಂಡರು.

ADVERTISEMENT

ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ಮಾತನಾಡಿ ಪಟ್ಟಣಕ್ಕೆ ಮುಖ್ಯರಸ್ತೆ ಎಷ್ಟು ಮುಖ್ಯ ಎಂಬುದು ಈಗ ಎಲ್ಲರಿಗೂ ಅರಿವಾಗಿದೆ. ಅಲ್ಲಿಯ ಭೂಮಾಲಿಕರು ಜನರ ಸಮಸ್ಯೆ ಅರಿತು ಪರಿಹಾರದ ಹಣ ಪಡೆಯಲು ತಾವೇ ಮುಂದೆ ಬಂದಿರುವುದು ಸ್ವಾಗತಾರ್ಹವಾಗಿದೆ ಎಂದರು.

ಈ ವೇಳೆ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ, ತಹಶೀಲ್ದಾರ ಚಂದ್ರಶೇಖರ ನಾಯಕ, ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಮತ್ತು ಇನ್ನಿತರ ಅಧಿಕಾರಿಗಳು ಹಾಗೂ ಪರಿಹಾರದ ಚೆಕ್‌ ಪಡೆಯುವ ಭೂಮಾಲಿಕರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.