ADVERTISEMENT

ಹಾವೇರಿ: ಆಶಾ ಕಾರ್ಯಕರ್ತೆಯರಿಂದ ‘ಪತ್ರ ಚಳವಳಿ’

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 17:52 IST
Last Updated 15 ಜುಲೈ 2020, 17:52 IST
ವಿವಿಧ ಬೇಡಿಕೆ ಈಡೇರಿಸುವಂತೆ ಆಶಾ ಕಾರ್ಯಕರ್ತೆಯರು ಮುಖ್ಯಮಂತ್ರಿಗೆ ಪತ್ರ ಬರೆದು ಪೋಸ್ಟ್‌ ಮಾಡುವ ಮೂಲಕ ಹಾವೇರಿ ಜಿಲ್ಲೆಯಾದ್ಯಂತ ಬುಧವಾರ ‘ಪತ್ರ ಚಳವಳಿ’ ನಡೆಸಿದರು 
ವಿವಿಧ ಬೇಡಿಕೆ ಈಡೇರಿಸುವಂತೆ ಆಶಾ ಕಾರ್ಯಕರ್ತೆಯರು ಮುಖ್ಯಮಂತ್ರಿಗೆ ಪತ್ರ ಬರೆದು ಪೋಸ್ಟ್‌ ಮಾಡುವ ಮೂಲಕ ಹಾವೇರಿ ಜಿಲ್ಲೆಯಾದ್ಯಂತ ಬುಧವಾರ ‘ಪತ್ರ ಚಳವಳಿ’ ನಡೆಸಿದರು    

ಹಾವೇರಿ: ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ, ಮುಖ್ಯಮಂತ್ರಿಗೆ ಪತ್ರ ಬರೆದು ಪೋಸ್ಟ್‌ ಮಾಡುವ ಮೂಲಕ ಆಶಾ ಕಾರ್ಯಕರ್ತೆಯರು ಬುಧವಾರ ಜಿಲ್ಲೆಯಾದ್ಯಂತ ‘ಪತ್ರ ಚಳವಳಿ’ ನಡೆಸಿದರು.

ಆಶಾ ಕಾರ್ಯಕರ್ತೆಯರು ಆರೋಗ್ಯ ಸೇವೆ ಸ್ಥಗಿತಗೊಳಿಸಿ, ಅನಿರ್ದಿಷ್ಟ ಅವಧಿಯವರೆಗೆ ನಡೆಸುತ್ತಿರುವ ಹೋರಾಟದ ಭಾಗವಾಗಿ ಹಾವೇರಿ ನಗರದಲ್ಲಿ ಬುಧವಾರ ‘ಪತ್ರ ಚಳವಳಿ’ ಕೈಗೊಂಡು ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರ ಘೋಷಿಸಿದ ₹2 ಸಾವಿರ ಇನ್ನೂ ತನಕ ಬ್ಯಾಂಕ್ ಖಾತೆ ಸೇರಿಲ್ಲ. ಇದರಿಂದಾಗಿ ಆಶಾಗಳ ಬದುಕು ಬೀದಿಗೆ ಬಂದಿದೆ. ಕೊರೊನಾ ವಾರಿಯರ್ಸ್‌ ಆಗಿ ಕೆಲಸ ಮಾಡಿದ ಆಶಾಗಳಿಗೆ ಸರಿಯಾಗಿ ಸುರಕ್ಷತಾ ಉಪಕರಣಗಳು ಸಿಗದ ಕಾರಣ ಜಿಲ್ಲೆಯಲ್ಲಿ 17 ಆಶಾ ಕಾರ್ಯಕರ್ತರಿಗೆ ಕರೋನಾ ಸೋಂಕು ತಗುಲಿದೆ ಎಂದು ನೋವು ತೋಡಿಕೊಂಡರು. ಸರ್ಕಾರ ಬೇಡಿಕೆಗಳನ್ನು ಈಡೇರಿಸುವವರೆಗೂ ರಾಜಿ ರಹಿತ ಹೋರಾಟ ಮುಂದುವರಿಯಲಿದೆ ಎಂದು ಆಶಾ ಕಾರ್ಯಕರ್ತೆಯರು ಹೇಳಿದರು.

ADVERTISEMENT

ಜುಲೈ 16ರಂದು ರಾಜ್ಯದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮುಂಭಾಗ ಧರಣಿ ನಡೆಸುತ್ತೇವೆ. ರಾಜ್ಯ ಸರ್ಕಾರ ನಮ್ಮ ಮನವಿಗೆ ಸೂಕ್ತವಾಗಿ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.